

ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ಸ್ವಚ್ಛತೆ ಸೇರಿದಂತೆ ಕೊರೋನಾ ನಿಯಮ ಪಾಲನೆ ಮಾಡದೆ ಜನರು ನಿರ್ಲಕ್ಷ್ಯ ವಹಿಸಿದರೆ, ಇದೇ ರೀತಿ ಹೆಚ್ಚೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದರೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಬೆಂಗಳೂರು: ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ಸ್ವಚ್ಛತೆ ಸೇರಿದಂತೆ ಕೊರೋನಾ ನಿಯಮ ಪಾಲನೆ ಮಾಡದೆ ಜನರು ನಿರ್ಲಕ್ಷ್ಯ ವಹಿಸಿದರೆ, ಇದೇ ರೀತಿ ಹೆಚ್ಚೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದರೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ರಾಜ್ಯ ಕೊರೋನಾ ಪರಿಸ್ಥಿತಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಸುಧಾಕರ್ ಅವರು, ಬೆಂಗಳೂರು ನಗರದಲ್ಲಿ ಪ್ರತೀ ನಿತ್ಯ 1,500ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾದರೆ ನೈಟ್ ಕರ್ಫ್ಯೂ ಜಾರಿ ಮಾಡುವಂತೆ ತಜ್ಞರು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದರೆ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

https://imasdk.googleapis.com/js/core/bridge3.447.1_en.html#goog_892289355
ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದೆ. 2ನೇ ಅಲೆ ಪ್ರಾರಂಭವಾಗುತ್ತಿದೆ. ನಮ್ಮ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ನಾವಿದನ್ನು ನಿರೀಕ್ಷಿಸಿದ್ದೆವು. ಸೋಂಕು ಹಬ್ಬುವುದನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಜನರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಲಸಿಕೆ ಪಡೆಯಲು ಮುಂದೆ ಬರಬೇಕು. ಕೊರೋನಾ ತಡೆಯುವುದು ಸಾಮೂಹಿಕ ಜವಾಬ್ದಾರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಜನರು ನಿರ್ಲಕ್ಷ್ಯ ವಹಿಸಿದ್ದೇ ಆದರೆ, ನಮಗೆ ಬೇರೆ ದಾರಿಯಿಲ್ಲ. ನೈಟ್ ಕರ್ಫ್ಯೂ ಜಾರಿ ಮಾಡಲೇಬೇಕಾಗುತ್ತದೆ. ಇದರಿಂದ ಸೋಂಕು ನಿಯಂತ್ರಣಕ್ಕೆ ಬರುವ ಸಾಧ್ಯತೆಗಳಿವೆ. ನೈಟ್ ಕರ್ಫ್ಯೂ ಬಗ್ಗೆ ಈ ವರೆಗೂ ಯಾವುದೇ ನಿರ್ಧಾರಗಳನ್ನು ಕೈಗೊಂಡಿಲ್ಲ. ಆದರೆ, ಅದರಿಂದ ನಾವು ಅತ್ಯಂತ ದೂರವೇನೂ ಇಲ್ಲ. ಬೆಂಗಳೂರು ಹಾಗೂ ರಾಜ್ಯದ ಕೆಲವು ಭಾಗಗಳಲ್ಲಿ ಕೊರೋನಾ ಸೋಂಕು ವೇಗವಾಗಿ ಹರಡುತ್ತಿದೆ.
ಯಾವುದೇ ಕಠಿಣ ಕ್ರಮಗಳೂ ಇಲ್ಲದೆ, ಕೊರೋನಾವನ್ನು ನಿಯಂತ್ರಿಸಬಹುದು ಎಂಬುದುನ್ನು ನಾನು ಆರೋಗ್ಯ ಸಚಿವನಾಗಿ ಹೇಳಬಲ್ಲೆ. ಆದರೆ, ಜನರು ನಾಗರೀಕ ಜವಾಬ್ದಾರಿಯನ್ನು ಪ್ರದರ್ಶಿಸಬೇಕು. ಸಾಕಷ್ಟು ಜನರು ಕೊರೋನಾ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಇದೇ ರೀತಿ ನಿರ್ಲಕ್ಷ್ಯ ಮುಂದುವರೆಸಿದರೆ ನಮಗೆ ಬೇರೆ ದಾರಿಯಲ್ಲ ಕ್ರಮಗಳನ್ನು ಕೈಗೊಳ್ಳಲೇಬೇಕಾಗುತ್ತದೆ. ಕೊರೋನಾ ನಿಯಂತ್ರಿಸಲು ಕೆಲವು ಕ್ಷೇತ್ರಗಳ ಮೇಲೆ ನಿರ್ಬಂಧ ಹೇರಲೇಬೇಕಾಗುತ್ತದೆ. ಎರಡನೇ ಅಲೆ ಹಿನ್ನೆಲೆಯಲ್ಲಿ ಬೇರೆ ರಾಜ್ಯ ಹಾಗೂ ರಾಷ್ಟ್ರಗಳು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. (kpc)
