

ರಂಗಕರ್ಮಿ ದಿ.ಕೆ.ಆರ್.ಪ್ರಕಾಶ ನೆನಪಿನ ರಾಜ್ಯಮಟ್ಟದ ನಾಟಕೋತ್ಸವ ಸಿದ್ಧಾಪುರ ಶಂಕರಮಠ ಸಭಾಂಗಣದಲ್ಲಿ ಮಾರ್ಚ್ 23 ರಿಂದ ನಡೆಯಲಿದೆ. ಈ ಬಗ್ಗೆ ಇಂದು ಮಾಹಿತಿ ನೀಡಿದ ಒಡ್ಡೋಲಗದ ಅಧ್ಯಕ್ಷ ಗಣಪತಿ ಹೆಗಡೆ ಹಿತ್ತಲಕೈ ಮತ್ತು ಸಂಸ್ಕೃತಿ ಸಂಪದದ ವಿಜಯ ಹೆಗಡೆ ದೊಡ್ಮನೆ ಈ ವಿಚಾರ ಪ್ರಕಟಿಸಿದರು.
ಕನ್ನಡ ಮತ್ತು ಸಂಸ್ಕೃತಿ ನಿರ್ಧೇಶನಾಲಯ ಬೆಂಗಳೂರು ಸಹಕಾರದಿಂದ ಮಾರ್ಚ್ 23 ರಿಂದ ಮೂರು ದಿವಸ ನಡೆಯಲಿರುವ ಈ ನಾಟಕೋತ್ಸವದಲ್ಲಿ ನಾಲ್ಕು ವಿಭಿನ್ನ ನಾಟಕಗಳ ಪ್ರದರ್ಶನ ನಡೆಯಲಿದೆ ಎಂದರು.
ಮಾರ್ಚ್ 28 ರಂದು ಶಂಕರಮಠದಲ್ಲಿ ಸಪ್ತಕ ಮತ್ತು ಶಂಕರಮಠಗಳಿಂದ ಸ್ವರಧಾರಾ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ವಿಜಯಹೆಗಡೆ ದೊಡ್ಮನೆ ತಿಳಿಸಿದರು.
ಇಟಗಿ ಗಜಾನನ ಭಟ್ಟ ನಿಧನ
ಸಿದ್ದಾಪುರ-20 : ಇಟಗಿ ಗಜಾನನ ರಾಮಚಂದ್ರ ಭಟ್ಟ (86) ಹೊನ್ನಮ್ಮ ದೇವಸ್ಥಾನ ಅವರು ಶುಕ್ರವಾರ ರಾತ್ರಿ ನಿಧನ ಹೊಂದಿದರು. ಅವರು ಪತ್ನಿ ಹಾಗೂ ಮಗಳು ಮತ್ತು ಮೊಮ್ಮಕ್ಕಳನ್ನು, ಸಹೋದರರನ್ನು ಅಗಲಿದ್ದಾರೆ.
ದಿವಂಗತರು ಶ್ರೀ ಕ್ಷೇತ್ರ ಇಟಗಿ ರಾಮೇಶ್ವರ ದೇವಾಲಯದ ಅರ್ಚಕ ವರ್ಗದಲ್ಲಿ ಓರ್ವರಾಗಿದ್ದು, ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೇತೃತ್ವ ವಹಿಸಿದ್ದರು. ಸಾಮಾಜಿಕ ಕ್ಷೇತ್ರದಲ್ಲಿ ಸಹ ತೊಡಗಿಸಿಕೊಂಡಿದ್ದರು. ಅವರು ಕೆಲ ದಶಕಗಳ ಹಿಂದೆ ಕಾಂಗ್ರೆಸ್ ಪಕ್ಷದ ತಾಲೂಕಾ ವರಿಷ್ಠರಾಗಿ ಕೆಲಸ ಮಾಡಿದ್ದರು.
ಸಿದ್ದಾಪುರ-20 : ವೈದಿಕ ವಿದ್ವಾಂಸರು, ಇಟಗಿ ಕ್ಷೇತ್ರದ ಶ್ರೀ ರಾಮೇಶ್ವರ ದೇವಾಲಯದ ಪುರೋಹಿತ ವರ್ಗದಲ್ಲಿ ಓರ್ವರಾದ ವಿದ್ವಾಂಸರಾಗಿದ್ದ ಇಟಗಿ ಗಜಾನನ ಭಟ್ಟ ಹೊನ್ನಮ್ಮ ದೇವಸ್ಥಾನ ಅವರ ನಿಧನದಿಂದ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಸ್ಥಳೀಯ ಟಿ.ಎಂ.ಎಸ್. ಅಧ್ಯಕ್ಷರು, ಕೆ.ಡಿ.ಸಿ.ಸಿ. ಬ್ಯಾಂಕ್ ಲಿ. ಶಿರಸಿ ನಿರ್ದೆಶಕರ ಆರ್.ಎಮ್. ಹೆಗಡೆ ಬಾಳೇಸರ ಅವರು ತಮ್ಮ ಶೋಕವನ್ನು ಪತ್ರಿಕಾ ಪ್ರಕಟಣೆಯಲ್ಲಿ ವ್ಯಕ್ತಪಡಿಸಿದ್ದು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಸಿದ್ದಾಪುರ; ಆರ್ಯ, ಈಡಿಗ, ನಾಮಧಾರಿ ಬಿಲ್ಲವ ,ನೌಕರರ ಕ್ಷೇಮಾಭಿವೃದ್ಧಿ ಸಂಘ. ಸಿದ್ದಾಪುರ (ಉತ್ತರ,ಕನ್ನಡ)ಇವರ ವತಿಯಿಂದ
2019- 20ನೇ ಶೈಕ್ಷಣಿಕ ಅವಧಿಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದೇ 27 /3 /2021ರ ಶನಿವಾರ ಸಿದ್ದಾಪುರದ ಶ್ರೀ ರಾಘವೇಂದ್ರ ಮಠದ “ಪೂರ್ಣಪ್ರಜ್ಞ” ಸಭಾಭವನದಲ್ಲಿ ಏರ್ಪಡಿಸಲು ನಿರ್ಧರಿಸಲಾಗಿದ್ದು,
ಈಗಾಗಲೇ ಕಳೆದ ವರ್ಷದ ಎಸ್ ,ಎಸ್, ಎಲ್,ಸಿ ಮತ್ತು ಪಿಯುಸಿ ಟಾಪರ್ ಗಳ ಮತ್ತು ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳ ಮಾಹಿತಿಯನ್ನು ಕ್ರೋಢೀಕರಿಸಲಾಗಿದೆ. ಇನ್ನುವರೆಗೂ ಮಾಹಿತಿ
ನೀಡಿರದ ಶಾಲಾ ಕಾಲೇಜು ವಿದ್ಯಾರ್ಥಿಗಳ ಮಾಹಿತಿಯನ್ನು 22/3/2021ರ ಸಾಯಂಕಾಲ 5 :೦೦ ಘಂಟೆ ಒಳಗೆ ತಲುಪಿಸಲು ಕೋರಲಾಗಿದೆ. ಮೂಲತಃ ಸಿದ್ದಾಪುರ ತಾಲೂಕಿನವರಾಗಿದ್ದು ಕಳೆದ ಶೈಕ್ಷಣಿಕ ಅವಧಿಯಲ್ಲಿ ಬೇರೆ ತಾಲೂಕು/ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿರುವ ಈಡಿಗ, ನಾಮಧಾರಿ, ಸಮಾಜದ ಎಸ್,ಎಸ್, ಎಲ್,ಸಿ/ದ್ವಿತೀಯ ವರ್ಷದ ಪಿ,ಯು,ಸಿ(ಕಲಾ/ವಾಣಿಜ್ಯ/ವಿಜ್ಞಾನ ವಿಭಾಗ)ದಲ್ಲಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಅಂಕಪಟ್ಟಿ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಮಾಹಿತಿಯನ್ನು ತಕ್ಷಣವೇ ನೀಡಲು ವಿನಂತಿಸಲಾಗಿದೆ. 22 /3/ 2021ರ ನಂತರ ನೀಡುವ ಮಾಹಿತಿಗಳನ್ನು ಪರಿಗಣಿಸಲಾಗುವುದಿಲ್ಲ. ಸಂಘದ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಿ ಐ ನಾಯ್ಕ, Mob:9449454664, ಆರ್ ಆರ್ ನಾಯ್ಕ mob:7483782096 ಸಂಪರ್ಕಿಸಬಹುದಾಗಿದೆ.




ಬಿ. ವಿ. ನಾಯಕ ವಿಚಾರ ವೇದಿಕೆ,
ದಿ. ಎಸ್. ಆರ್. ನಾರಾಯಣ ರಾವ್ ವಿದ್ಯಾರ್ಥಿಗಳ ಮತ್ತು ಅಭಿಮಾನಿಗಳ ಬಳಗ, ಕುಮಟಾ
ಕಾರವಾರ/ಕುಮಟಾ- ದಿವಂಗತ ಪ್ರಾಧ್ಯಾಪಕ – ಪ್ರಾಂಶುಪಾಲ ಎಸ್. ಆರ್. ನಾರಾಯಣ ರಾವ್ ಅವರ ನೆನಪುಗಳನ್ನು ಮತ್ತು ಪ್ರಮುಖವಾಗಿ ಅವರ ಲೇಖನಗಳನ್ನು ಒಳಗೊಂಡಿರುವ ಪುಸ್ತಕ, ‘ಚೈತನ್ಯ ಜ್ಯೋತಿ’ ಯನ್ನು ಇದೆ ರವಿವಾರ ತಾರೀಖು 21ರಂದು ಮುಂಜಾನೆ 10.30 ಗಂಟೆಗೆ ಕುಮಟಾದ ಹೊಸ ಬಸ್‍ಸ್ಟ್ಯಾಂಡ್‍ನ ಎದುರಿಗೆ ಇರುವ ಹೊಟೆಲ್ ವರದಾ ಇಂಟರ್‍ನ್ಯಾಶನಲ್ ಸಭಾ ಭವನದಲ್ಲಿ ಬಿ. ವಿ. ನಾಯಕ ವಿಚಾರ ವೇದಿಕೆ, ಎಸ್. ಆರ್. ನಾರಾಯಣ ರಾವ್ ವಿದ್ಯಾರ್ಥಿಗಳ ಮತ್ತು ಅಭಿಮಾನಿಗಳ ಬಳಗ, ಕುಮಟಾ ಗಳಿಂದ ಏರ್ಪಡಿಸಿದ್ದಾರೆಂದು ಪುಸ್ತಕದ ಸಂಪಾದಕ ಎಂ. ಎಚ್. ನಾಯ್ಕ ಕೂಜಳ್ಳಿ ತಿಳಿಸಿದ್ದಾರೆ.

ಬೆಂಗಳೂರು, ಮೈಸೂರು ಮಹಾನಗರಗಳಲ್ಲಿ ಓದಿ ಇಂಗ್ಲೀಷ್ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದು, 1961 ರಿಂದ ಸುಮಾರು ಮೂರುವರೆ ದಶಕಗಳವರೆಗೆ ಕುಮಟಾದ ಡಾ. ಏ. ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದವರು ಎಸ್. ಆರ್. ನಾರಾಯಣ ರಾವ್ . ಹಳ್ಳಿಗಾಡಿನ ಬಡ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ, ಶೈಕ್ಷಣಿಕ, ಕ್ರೀಡೆ, ಸಾಂಸ್ಕೃ ತಿಕ ಮತ್ತು ಇತರ ಕ್ಷೇತ್ರಗಳಲ್ಲಿ ಸಾಧಕರಾಗುವಂತೆ ಪ್ರೇರಣೆ ನೀಡುತ್ತಿದ್ದರು. ಸದಾ ಚೈತನ್ಯ ಜ್ಯೋತಿಯಾಗಿದ್ದ ಅವರು ವಿದ್ಯಾರ್ಥಿಗಳ ಚೈತನ್ಯವನ್ನು ಬಡಿದೆಬ್ಬಿಸುತ್ತಿದ್ದರು.
ಪ್ರೊ. ಎಸ್. ಆರ್. ನಾರಾಯಣ ರಾವ್ ಕುಮಟಾವನ್ನೊಳಗೊಂಡು ಉತ್ತರ ಕನ್ನಡ ಜಿಲ್ಲಿಯಲ್ಲಿ ಬಹಿರಂಗ ಸಭೆ, ಸಮಾರಂಭಗಳಲ್ಲಿ ಭಾಷಣಗಳನ್ನು ಮಾಡಿ ವಿಚಾರಗಳನ್ನು ಹಂಚಿಕೊಂಡವರು. ವಿಚಾರ ಸಂಕಿರಣಗಳಲ್ಲಿ, ಇಂಗ್ಲೀಷ ಸಾಹಿತ್ಯ, ಭಾಷೆ, ವ್ಯಾಕರಣ ಕಲಿಕಾ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದವರು. ಹಂಸ ಮಂಟಪ, ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಸಾಹಿತ್ಯಕ ಸಂಘಟನೆಗಳನ್ನು, ಗಿಬ್ಬ ಗುಂಪು, ಬಿ. ವಿ. ನಾಯಕ ವಿಚಾರ ವೇದಿಕೆಗಳನ್ನು ಸಂಸ್ಥಾಪಿಸಿದವರು. ಈ ರೀತಿ ಕುಮಟಾದ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜ್ಞಾನ ಮತ್ತು ವೈಚಾರಿಕ ಸಂಪತ್ತನ್ನು ಹೆಚ್ಚಿಸಿದವರು.
ಅತ್ಯಂತ ಜನಪ್ರಿಯ ಇಂಗ್ಲೀಷ್ ಬೋಧಕರಾಗಿದ್ದ ಜೀನಿಯಸ್ ಗುರು ನಾರಾಯಣ ರಾವ್ ಮೌಖಿಕ ಸಂವಹನ ಸಂಪ್ರದಾಯದವರು. ವಿಸ್ತೃತ ಹಾಗೂ ಆಳ ಓದಿನಿಂದ, ಸತತ ಚಿಂತನೆಯಿಂದ ಪ್ರಖರ ವಿಚಾರಗಳನ್ನು ಹೊಂದಿದ್ದರೂ, ಅವರು ಲಿಖಿತ ಸಂವಹನವನ್ನು ತೀವ್ರ ಕೃಷಿ ಮಾಡಿದವರಲ್ಲ. ಅವರ ಬರಹಗಳು ಮಿತವಾಗಿವೆ, ಆದರೆ ಅತ್ಯಂತ ಪ್ರಭಾವಶಾಲಿಯಾಗಿವೆ.
ಕುಮಟಾದ ಖ್ಯಾತ ರಫ್ತು ಉದ್ಯಮಿ ಹಾಗೂ ಲೋಕೋಪಕಾರಿಯಾಗಿರುವ ಮುರಲೀಧರ ಪ್ರಭು ‘ಚೈತನ್ಯ ಜ್ಯೋತಿ’ ಬಿಡುಗಡೆ ಮಾಡಲಿದ್ದಾರೆ. “ಕರಾವಳಿ ಮುಂಜಾವು” ವ್ಯವಸ್ಥಾಪಕ ಸಂಪಾದಕ ಗಂಗಾಧರ ಹಿರೇಗುತ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. “ನಾಗರಿಕ” ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ ಮುಖ್ಯ ಅತಿಥಿಯಾಗಿದ್ದು, ಡಾ. ಆರ್. ಜಿ. ಹೆಗಡೆ, ದಾಂಡೇಲಿ, ಪುಸ್ತಕ ಪರಿಚಯಿಸಲಿದ್ದಾರೆ. ನಾರಾಯಣ ರಾವ್ ವಿದ್ಯಾರ್ಥಿಗಳು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.
