

ದೈನಂದಿನ ಜಂಜಾಟದಿಂದ ಹೊರಬಂದು ಒಂದೆರಡು ದಿನ ಹಾಯಾಗಿ ಕಾಲ ಕಳೆಯಬೇಕು ಜೊತೆಗೆ ಒಂದಿಷ್ಟು ಮನಸೋಲ್ಲಾಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಅಂದುಕೊಳ್ಳುವವರಿಗೆ ಶಿವಮೊಗ್ಗ ಜಿಲ್ಲೆಯ ಹೊನ್ನೇಮರಡು ಸುಂದರ ವಾರಾಂತ್ಯದ ರಜೆಯ ತಾಣವಾಗಿದೆ.

ಶಿವಮೊಗ್ಗ: ದೈನಂದಿನ ಜಂಜಾಟದಿಂದ ಹೊರಬಂದು ಒಂದೆರಡು ದಿನ ಹಾಯಾಗಿ ಕಾಲ ಕಳೆಯಬೇಕು ಜೊತೆಗೆ ಒಂದಿಷ್ಟು ಮನಸೋಲ್ಲಾಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಅಂದುಕೊಳ್ಳುವವರಿಗೆ ಜಿಲ್ಲೆಯ ಹೊನ್ನೇಮರಡು ವಾರಾಂತ್ಯದ ರಜೆಯ ತಾಣವಾಗಿದೆ.
ಇಲ್ಲಿ ನೀವು ತಂಪಾದ ಕೊಳದಲ್ಲಿ ಈಜಾಡಬಹುದು ಅಥವಾ ದೋಣಿಯಲ್ಲಿ ಸಂಚರಿಸಬಹುದು ಅಥವಾ ನಿಸರ್ಗದ ಸೌಂದರ್ಯ ಸವಿಯುತ್ತ ಚಾರಣ ಮಾಡಬಹುದು. ಸಾಗರದಿಂದ 22 ಕಿಲೋ ಮೀಟರ್ ದೂರದಲ್ಲಿರುವ ಹೊನ್ನೇಮರಡು, ಶರಾವತಿ ಹಿನ್ನೀರಿನ ಪ್ರದೇಶವಾಗಿದೆ. ಸಾಹಸಮಯ ಕ್ರೀಡೆಗೂ ಇದು ಅತ್ಯುತ್ತಮ ಸ್ಥಳವಾಗಿದೆ.
ಹೊನ್ನೇಮರಡುವಿನ ಅಡ್ವೆಂಚರ್ ಗಳು ಕಾಲೇಜ್ ವಿದ್ಯಾರ್ಥಿಗಳು ಮತ್ತು ಕಾರ್ಪೋರೇಟ್ ಎಕ್ಸಿಕ್ಯೂಟಿವ್ ಗಳಿಗೆ ತರಬೇತಿ ಅಲ್ಲದೇ, ವಿಶೇಷ ಚೇತನ ಮಕ್ಕಳಿಗೆ ಸೇವಾ ಆಧಾರಿತ ಕ್ಯಾಂಪ್ ಗಳನ್ನು ನಡೆಸಲಾಗುತ್ತದೆ. ಇಲ್ಲಿಗೆ ಭೇಟಿ ನೀಡುವ ವಿದ್ಯಾರ್ಥಿಗಳು, ಪ್ರವಾಸಿಗರು ಜಲಕ್ರೀಡೆಗಳು, ಟ್ರೆಕ್ಕಿಂಗ್ ಮತ್ತಿತರ ಸಾಹಸ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಆನಂದಪಡುತ್ತಾರೆ.
ಹೊನ್ನೇಮರಡುವಿನ ಕೈಗೊಳ್ಳಬಹುದಾದ ಚಟುವಟಿಕೆಗಳು:
ಫೈರ್ ಕ್ಯಾಂಪಿಂಗ್: ಇಲ್ಲಿ ಫೈರ್ ಕ್ಯಾಂಪಿಂಗ್ ಗೆ ಅವಕಾಶ ನೀಡಲಾಗುತ್ತದೆ. ನಿಸರ್ಗಕ್ಕೆ ತೊಂದರೆಯಾಗದ ರೀತಿಯಲ್ಲಿ ಫೈರ್ ಕ್ಯಾಂಪ್ ಮಾಡಲಾಗುತ್ತದೆ. ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ಇದರ ಕೌಶಲ್ಯದ ಬಗ್ಗೆ ತಿಳಿಸಿಕೊಡಲಾಗುತ್ತದೆ.
ಸ್ವಿಮ್ಮಿಂಗ್: ಶರಾವತಿ ಹಿನ್ನೀರಿನಲ್ಲಿ ಈಜಾಡಬಹುದು. ಇಲ್ಲಿ 60 ರಿಂದ 140 ಅಡಿ ಅಳದವರೆಗೂ ನೀರು ಇರುತ್ತದೆ. ಲೈಫ್ ಜಾಕೆಟ್ ಕಡ್ಡಾಯವಾಗಿದೆ.
ಕೋರಾಕ್ಲಿಂಗ್: ಇದು ಸ್ಥಳಿಯ ಸಾಂಪ್ರದಾಯಿಕ ತೆಪ್ಪಾದ ರೀತಿಯ ದೋಣಿಯಾಗಿದೆ. 4 ರಿಂದ 6 ಜನರು ಇದರಲ್ಲಿ ತೆರಳಿ ಎಂಜಾಯ್ ಮಾಡಬಹುದು.
ಕ್ಯಾನೋಯಿಂಗ್: ಉದ್ದನೆಯ ಬೋಟ್ ನಲ್ಲಿ ಇಬ್ಬರಿಗೆ ಅವಕಾಶ ನೀಡಲಾಗುತ್ತದೆ. ಮುಂಭಾಗ ಕುಳಿತವರು ರೋಯಿಂಗ್ ಮಾಡಿದರೆ ವೇಗ ಹೆಚ್ಚಾಗುತ್ತದೆ.
ಕಾಯಕಿಂಗ್: ಒಬ್ಬನೇ ವ್ಯಕ್ತಿ ದೋಣಿಯನ್ನು ಚಲಿಸುತ್ತಾ ನೀರಿನಲ್ಲಿ ಸಂತೋಪಡಬಹುದು ಆದರೆ, ಗಮನ, ತಾಂತ್ರಿಕ ಕೌಶಲ್ಯ ಅಗತ್ಯವಿದೆ.
ಟ್ರೆಕ್ಕಿಂಗ್: ಬೆಟ್ಟ ಪ್ರದೇಶ ಹತ್ತಿರದಲ್ಲಿರುವುದರಿಂದ ಚಾರಣದ ಮಜಾ ಅನುಭವಿಸಬಹುದು.
ಹೊನ್ನೇಮರಡುವಿನಲ್ಲಿ ಏನನ್ನು ಮಾಡಬಹುದು, ಮಾಡಬಾರದು
ಧೂಮಪಾನ, ಮದ್ಯಪಾನ, ಮಾಂಸಾಹಾರಿ ಆಹಾರ, ಎಲೆಕ್ಟ್ರಾನಿಕ್ ಮ್ಯೂಸಿಕ್ ಬಳಸಬಾರದು, ನಿಮ್ಮ ತ್ಯಾಜ್ಯಕ್ಕೆ ನೀವೆ ಹೊಣೆ. ಆದಾಗ್ಯೂ, ನಿಮ್ಮ ಕುಟುಂಬದವರೊಂದಿಗೆ ಮಾತನಾಡಲು ಮೊಬೈಲ್ ಬಳಸಬಹುದು. ಆದರೆ, ಸಂಗೀತ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ನಿಮ್ಮ ಸ್ವಂತ ತಟ್ಟೆ, ಸ್ಫೂನ್ ಮತ್ತು ಮಗ್ಗುಗಳನ್ನು ತರಬೇಕು. (kpc)

