

ಇಂದು ಬೆಳಿಗ್ಗೆ ಜಾರ್ಕಂಡ್ ಹಜಾರಿಭಾಗ ಬರಿ ಸೇನಾ ವಸತಿಗೃಹದಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಸಿದ್ಧಾಪುರ ತಾಲೂಕಿನ ಹಂಗಾರಕಂಟದ ಸಂದೀಪ ನಾರಾಯಣ ನಾಯ್ಕ ತನ್ನ ಜೀವನದ ಕೊನೆಯ ಮಾತುಗಳನ್ನು ಇದೇ 29 ರಂದು ವಿವಾಹವಾಗಲಿದ್ದ ತನ್ನ ಭಾವಿ ಪತ್ನಿಯೊಂದಿಗೆ ಆಡಿದ್ದ ಎನ್ನುವ ಅಂಶ ಈಗ ಬಹಿರಂಗವಾಗಿದೆ.
ಸಂದೀಪ್ ಬೆಳಗಾವಿ, ರಾಂಚಿಗಳ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಈ ವೈದ್ಯಕೀಯ ಕಾರಣದ ಮೇಲೆ 41 ದಿವಸಗಳ ರಜೆ ಪಡೆದಿದ್ದ ಸಂದೀಪ ನಾಯ್ಕ ಈ ಅವಧಿಯಲ್ಲಿ ಏಫ್ರಿಲ್ 29 ರಂದು ವಿವಾಹವಾಗುವ ತಯಾರಿ ಮಾಡಿಕೊಂಡಿದ್ದ. ಶಿರಸಿ-ಸಿದ್ಧಾಪುರ ಗಡಿಯ ಹೆಗ್ಗರಣಿ ಗೋಳಗೋಡಿನ ಯುವತಿಯೊಂದಿಗೆ ನಿಶ್ಚಿತಾರ್ಥಮಾಡಿಕೊಂಡಿದ್ದ ಈ ಯೋಧ ಏಫ್ರಿಲ್ 5 ರಿಂದ ಮೇ13 ರ ಅವಧಿಯ ರಜಾ ಅವಧಿ ಪೂರೈಸಿ 14 ರಿಂದ ಸೇವೆ ಮುಂದುವರಿಸಲಿದ್ದ.
ಈ ಮಧ್ಯೆ ತಾನು ವಿವಾಹವಾಗಲಿರುವ ಹುಡುಗಿಯೊಂದಿಗೆ ಮಾತನಾಡುತಿದ್ದ ಸಂದೀಪ ಇಂದು ಕೂಡಾ ಮುಂಜಾನೆ 8.30 ಅವಧಿಯಲ್ಲಿ ಮೊಬೈಲ್ ಮೂಲಕ ಮಾತನಾಡಿ ನಾನು ರಜೆಗೆ ಬರುತಿದ್ದೇನಿ. ನನ್ನ ಆರೋಗ್ಯವೂ ಚೆನ್ನಾಗಿದೆ. ನೀನು ಕೂಡಾ ಆರೋಗ್ಯದಿಂದಿದ್ದು ಬದುಕಿನುದ್ದಕ್ಕೂ ಸಂತೋಷದಿಂದಿರಬೇಕು! ಎಂದು ಶುಭಕೋರಿ, ಉಭಯ ಕುಶಲೋಪರಿಯ ನಂತರ ಮಾತು ಮುಗಿಸಿದ್ದ ಎನ್ನುವ ಮಾಹಿತಿ ಬಹಿರಂಗವಾಗಿದೆ.
