

ಜಾರಕಂಡ ರಾಜ್ಯದ ಹಜಾರಿಭಾಗ್ ಬರಿ ಸಿ.ಆರ್.ಪಿ.ಫ್ ಕೋಬ್ರಾ ಕಮಾಂಡೋ ಪಡೆಯ ಯೋಧ ಸಿದ್ಧಾಪುರ ಹಂಗಾರಖಂಡದ ಸಂದೀಪ್ ನಾರಾಯಣ ನಾಯ್ಕ ಸಾವು ಉತ್ತರ ಕನ್ನಡ ಜಿಲ್ಲೆಯ ಜನರ ಮನಸ್ಸನ್ನು ಘಾಸಿ ಮಾಡಿದೆ. ಈ ಆಕಸ್ಮಿಕ ಸಾವಿನ ಹಿನ್ನೆಲೆಯಲ್ಲಿ ಜಿಲ್ಲೆ, ಪರಜಿಲ್ಲೆಗಳ ಜನರು ಸಾಂತ್ವನ ಹೇಳಿದ್ದಾರೆ. ಆದರೆ ಶಿರಸಿ-ಸಿದ್ದಾಪುರದ ಶಾಸಕ ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕೇಂದ್ರದ ಮಾಜಿ ಸಚಿವ ಸಂಸದ ಅನಂತಕುಮಾರ ಹೆಗಡೆ ಯೋಧನ ಸಾವನ್ನು ಉಪೇಕ್ಷಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಗುರುವಾರ ಮುಂಜಾನೆ ಜಾರಕಂಡ ಹಜಾರಿಭಾಗನಿಂದ ಹೊರಟ ಯೋಧನ ಶವ ಇಂದು ಮುಂಜಾನೆ ಗೋವಾ ಮೂಲಕ ಕಾರವಾರ ಮಾರ್ಗವಾಗಿ ಶಿರಸಿ ತಲುಪಿ ನಂತರ ಪಾರ್ಥಿವ ಶರೀರದ ಅಂತಿಮ ಮೆರವಣಿಗೆಯೊಂದಿಗೆ ಸ್ವಗ್ರಾಮ ತಲುಪಿತು. ಈ ಅವಧಿಯಲ್ಲಿ ತ್ಯಾಗಲಿ, ಕಾನಸೂರು ಗ್ರಾಮ ಪಂಚಾಯತ್ ಗಳ ಜನಪ್ರತಿನಿಧಿಗಳು ಭೇಟಿ ನೀಡಿದ್ದು ಬಿಟ್ಟರೆ ಈ ಭಾಗದ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರು, ಅಧ್ಯಕ್ಷರು ಬರಲೇ ಇಲ್ಲ. ಕೆಲವು ಮುಖಂಡರು, ರಾಜಕೀಯ ನಾಯಕರು ಸೌಜನ್ಯದ ಭೇಟಿ ಮಾಡಿ ಯೋಧನ ಶವದ ಅಂತಿಮ ದರ್ಶನ ಮಾಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಇಂದು ಮುಂಜಾನೆ ಎರಡ್ಮೂರು ಘಂಟೆಗಳ ಕಾಲ ಯೋಧನ ಶವದ ಅಂತಿಮ ದರ್ಶನ ನಡೆದರೂ ಸ್ವ ಕ್ಷೇತ್ರ, ಊರಿನಲ್ಲಿದ್ದ ಶಾಸಕ, ಸಂಸದರು ಯೋಧನ ಪಾರ್ಥಿವ ಶರೀರ ದರ್ಶನ ಮಾಡದ ಬಗ್ಗೆ ಸಾರ್ವಜನಿಕ ವಲಯ, ಸಾಮಾಜಿಕ ಜಾಲತಾಣಗಳಲ್ಲಿ ತೀವೃ ವಿರೋಧ ವ್ಯಕ್ತವಾಗಿದೆ. ಶಿರಸಿ ಮೂಲದ ಸಂಸದ ಅನಂತಕುಮಾರ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಇಂದು ಸ್ವ ಕ್ಷೇತ್ರದಲ್ಲೇ ಇದ್ದು ಸಿದ್ಧಾಪುರದ ಕೊಂಡ್ಲಿ ಜಾತ್ರೆ, ಹಬ್ಬಗಳ ಮೋಜು ಮಸ್ತಿಯಲ್ಲಿ ತೊಡಗಿ ಸೈನಿಕನನ್ನು ಉಪೇಕ್ಷಿಸಿರುವ ಈ ಜನಪ್ರತಿನಿಧಿಗಳ ಉಡಾಫೆ, ಬೇಜವಾಬ್ಧಾರಿತನ ಟೀಕಿಸಿರುವ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.
ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಶಿರಸಿ ಅಜ್ಜೀಬಳದ ದಿನೇಶ್ ನಾಯ್ಕ ಶಾಸಕ, ಸಂಸದರು ಹಿಂದತ್ವ, ಕೋಮುವಾದದ ಅಮಲಲ್ಲಿ ತೇಲುತಿದ್ದಾರೆ. ಚುನಾವಣಾ ವೇಳೆ ಕ್ಷೇತ್ರ, ಸೈನಿಕರು, ಹಿಂದುತ್ವದ ಬೂಟಾಟಿಕೆಯ ಬೊಗಳೆ ಬಿಡುವ ನಮ್ಮ ಪ್ರತಿನಿಧಿಗಳು ಸೈನಿಕನ ಸಾವನ್ನು ಉಪೇಕ್ಷಿಸಿ ನಮಗೆ ದ್ರೋಹ ಬಗೆದಿದ್ದಾರೆ ಇವರು ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದರೆ ಅವರ ವಿರುದ್ಧ ಸಾರ್ವಜನಿಕ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಈ ಬಗ್ಗೆ ಆಕ್ರೋಶದ ಮಾತುಗಳನ್ನಾಡಿರುವ ಜಿಲ್ಲಾ ಜನಪರ ವೇದಿಕೆಯ ಸದಸ್ಯ ಕೆ.ಟಿ. ನಾಯ್ಕ ಹೆಗ್ಗೇರಿ 25 ವರ್ಷಗಳಿಂದ ದೇವರು, ಧರ್ಮದ ಕ್ಷುಲ್ಲಕ ರಾಜಕೀಯ ಮಾಡುತ್ತಿರುವ ಈ ಕ್ಷೇತ್ರದ ಶಾಸಕ, ಸಂಸದರು ಜಾತ್ರೆ, ಹಬ್ಬ, ಧರ್ಮದ ನಾಟಕ ಮಾಡುತ್ತಾ ದೇವರ ಪೂಜೆ ಮಾಡುವ ಪುರೋಹಿತರಾಗಲು ಲಾಯಕ್ಕೇ ಹೊರತು ಇವರು ಜನಪ್ರತಿನಿಧಿಗಳಾಗಲು ಅಯೋಗ್ಯರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.







