
ಜಗಳ, ವಿಘಟನೆಗೆ ಹೆಸರಾಗಿರುವ ಜನತಾದಳ ಮತ್ತೆ ಒಡೆಯಲಿರುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ ಸೇರ್ಪಡೆಯಾಗಲಿರುವ ಮಧು ಬಂಗಾರಪ್ಪ ಮಲೆನಾಡು, ಕರಾವಳಿಯ ಕೆಲವು ಮಾಜಿ ಶಾಸಕರು,ಸಚಿವರು ಹಾಲಿ ಶಾಸಕರನ್ನೆಲ್ಲಾ ಕಾಂಗ್ರೆಸ್ ಸೇರಿಸಲಿದ್ದಾರೆ ಎನ್ನುವ ವರ್ತಮಾನವಿದೆ. ಈ ಬೆಳವಣಿಗೆಗಳ ಮಧ್ಯೆ ಇಂದು ಉತ್ತರ ಕನ್ನಡ ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷರಾಗಿ ಕೆಲಸಮಾಡುತಿದ್ದ ಮಧುಬಂಗಾರಪ್ಪನವರ ಆಪ್ತ ಬಿ.ಆರ್. ನಾಯ್ಕ ಹೆಗ್ಗಾರಕೈ ಜನತಾದಳ ಜಾತ್ಯಾತೀತ ಪಕ್ಷದ ಜಿಲ್ಲಾಧ್ಯಕ್ಷತೆ ಮತ್ತು ಜೆ.ಡಿ.ಎಸ್. ಪ್ರಾಥಮಿಕ ಸದಸಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಇವರೊಂದಿಗೆ ಉತ್ತರ ಕನ್ನಡ ಶಿವಮೊಗ್ಗ ಜಿಲ್ಲೆಗಳ ಕೆಲವು ತಾಲೂಕಾಧ್ಯಕ್ಷರು, ಪ್ರಮುಖರು ಜೆ.ಡಿ.ಎಸ್. ಗೆ ರಾಜೀನಾಮೆ ನೀಡುವವರಿದ್ದಾರೆ. ಮೊದಲ ಹಂತವಾಗಿ ಉತ್ತರ ಕನ್ನಡ ಜಿಲ್ಲಾ ಜೆ.ಡಿ.ಎಸ್. ಘಟಕದ ಸಿದ್ಧಾಪುರ ತಾಲೂಕಾಧ್ಯಕ್ಷರಾಗಿ ಕೆಲಸ ಮಾಡುತಿದ್ದ ಸುರೇಶ್ ಕೆ. ನಾಯ್ಕ ಕಡಕೇರಿ ಕೂಡಾ ರಾಜೀನಾಮೆ ನೀಡಿದ್ದಾರೆ. ಸಿದ್ಧಾಪುರ ಜೆ.ಡಿ.ಎಸ್. ತಾಲೂಕಾಧ್ಯಕ್ಷರಾಗಿ ಎಸ್.ಕೆ.ನಾಯ್ಕ,ಜೆ.ಡಿ.ಎಸ್. ಜಿಲ್ಲಾಧ್ಯಕ್ಷರಾಗಿ ಬಿ.ಆರ್. ನಾಯ್ಕ ನಿರಂತರ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸಿದ್ದರು.
ಜೆ.ಡಿ.ಎಸ್. ಉಸ್ತುವಾರಿಗಳ ಆಯ್ಕೆ….. ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆಯಲ್ಲಿ ಕರಾವಳಿ, ಮಲೆನಾಡುಗಳ ಮುಖಂಡರು ಕಾಂಗ್ರೆಸ್ ನತ್ತ ಎದುರು ನೋಡುತ್ತಿರುವ ವಿದ್ಯಮಾನದ ನಡುವೆ ಉತ್ತರ ಕನ್ನಡ ಜಿಲ್ಲಾ ಜೆ.ಡಿ.ಎಸ್. ವೀಕ್ಷಕರು, ಉಸ್ತುವಾರಿಗಳನ್ನಾಗಿ ಗಂಗಣ್ಣ,ಶಶಿಭೂಷಣ ಹೆಗಡೆ, ಗಣಪಯ್ಯ ಗೌಡ, ರಾಜೇಶ್ವರಿ ಹೆಗಡೆ ಸೇರಿದ ಕೆಲವರನ್ನು ಪಕ್ಷ ನೇಮಕ ಮಾಡಿದೆ ಎಂದು ಜಿಲ್ಲಾ ಜೆ.ಡಿ.ಎಸ್. ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಲಿಯಾಸ್ ಸಾಬ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
