
ಸಿದ್ಧಾಪುರ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ಧೇಶಕ ನರೊನ್ಹಾರಿಗೆ ಸಾರ್ವಜನಿಕ ರೊಬ್ಬರಿಗೆ ಅಗತ್ಯ ಮಾಹಿತಿ ನೀಡದ ಪ್ರಕರಣವೊಂದರಲ್ಲಿ 25 ಸಾವಿರ ರೂ. ದಂಡ ವಿಧಿಸುವ ಕಾರಣ ಕೇಳಿ ಮಾಹಿತಿ ಆಯೋಗ ನೋಟೀಸ್ ಜಾರಿ ಮಾಡಿದೆ.
ಅವರಗುಪ್ಪಾದ ದೇವಪ್ಪ ಕೆರಿಯಾ ಶಿರಗಳ್ಳೆ ತಮ್ಮ ಜಮೀನಿನ ಜಿ.ಪಿ.ಎಸ್. ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯೊಂದನ್ನು ಸಮಾಜಕಲ್ಯಾಣ ಇಲಾಖೆಗೆ ಕೇಳಿದ್ದರು. ಮಾಹಿತಿ ಹಕ್ಕಿನ ಕಾಯಿದೆ ಅನ್ವಯ ಸಮರ್ಪಕ ಮಾಹಿತಿ ನೀಡದ ಬಗ್ಗೆ ಇದೇ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು. ಹೀಗೆ ಎರಡು ಹಂತಗಳಲ್ಲಿ ದಾಖಲೆ ಕೇಳಿದ್ದರೂ ಸಮರ್ಪಕ ಮಾಹಿತಿ ನೀಡದ ಬಗ್ಗೆ ದೇವಪ್ಪ ಶಿರಗಳ್ಳೆ ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರಿದ್ದರು.
ಈ ದೂರಿನನ್ವಯ ವಿಚಾರಣೆ ನಡೆಸಿದ ಮಾಹಿತಿ ಆಯೋಗದ ವಿಭಾಗೀಯ ಕಛೇರಿ ಅರ್ಜಿದಾರ ದೇವಪ್ಪ ಶಿರಗಳ್ಳೆಯವರ ಮಾಹಿತಿ ಹಕ್ಕು ಅರ್ಜಿಗೆ ಸಮರ್ಪಕ ಮಾಹಿತಿ ನೀಡದ ಸಿದ್ಧಾಪುರ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ಧೇಶಕ ನರೋನ್ಹಾ ಅವರಿಗೆ ಈ ತಪ್ಪಿಗಾಗಿ ಅವರ ಮೇಲೆ 25 ಸಾವಿರ ದಂಡ ಯಾಕೆ ವಿಧಿಸಬಾರದು ಎಂದು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದೆ. ಮಾಹಿತಿಹಕ್ಕು ಅಧಿನಿಯಮ ಕಾನೂನಿನ ಪ್ರಕಾರ ಮಾಹಿತಿ ಕೊಡದೆ ನುಣುಚಿಕೊಳ್ಳುವ ಅಧಿಕಾರಿಗಳಿಗೆ ಈ ಪ್ರಕರಣ ಚುರುಕು ಮುಟ್ಟಿಸಿದೆ ಎನ್ನಲಾಗಿದೆ.
