ಸಿದ್ಧಾಪುರ ತಾಲೂಕಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಾಲಿಕೊಪ್ಪ ಗ್ರಾಮದ ರವೀಂದ್ರನಗರದ ಸಿ.ಆರ್.ಹಾಲ್ ಅಥವಾ ಸಮಾಜಮಂದಿರ ಜಾಗದ ಪ್ರಕರಣ ಈ ಗ ವಿಭಿನ್ನ ತಿರುವುಗಳನ್ನು ಪಡೆದುಕೊಂಡಿದೆ. ಮೊದಮೊದಲು ತಾಲೂಕಾ ಬ್ಲಾಕ್ ಕಾಂಗ್ರೆಸ್ ಘಟಕ ಸಮಾಜಮಂದಿರದ ಜಾಗವನ್ನು ಬಿ.ಜೆ.ಪಿ. ಅಧಿಕಾರ ಬಳಸಿ ಕಬಳಿಸಿದೆ ಎನ್ನುವ ಆರೋಪಗಳಿದ್ದವು. ನಂತರ ಕಾಂಗ್ರೆಸ್ ಬಿ.ಜೆ.ಪಿ.ಜನಪ್ರತಿನಿಧಿಗಳು ತಮ್ಮ ಅಧಿಕಾರ ಬಳಸಿ ಕಾಂಗ್ರೆಸ್ ಜಾಗ ವಶಪಡಿಸಿಕೊಂಡಿದ್ದಾರೆ ಎಂದು ದೂರಿತ್ತು. ಈ ಜಾಗದ ವಿಚಾರದಲ್ಲಿ ಹಿಂದೆ ಪರಸ್ಪರ ಕೆಸರು ಎರಚಿಕೊಂಡಿರುವ ಈ ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಯ ಬಣಗಳು ಅಧಿಕಾರಸ್ಥರು ಈ ಜಾಗವನ್ನು ಕಾನೂನು ಬಾಹೀರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಿದ್ದರು. ಈಗ ಈ ಸ್ಥಳದ ಯಜಮಾನಿಕೆ ಪಟ್ಟಣ ಪಂಚಾಯತ್ ಗೆ ಸೇರಿದೆ ಎಂದು ಈ ಜಾಗದ ಹಕ್ಕನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಬಾರದು ಎಂದು ಪಟ್ಟಣ ಪಂಚಾಯತ್ ಆಡಳಿತ ತಡೆಯಾಜ್ಞೆ ತಂದಿದೆ. ಹೀಗೆ ಸಿ.ಆರ್. ಹಾಲ್ ಜಾಗದ ಮಾಲಿಕತ್ವ ಯಾರದು ಎನ್ನುವ ಸ್ಫಷ್ಟತೆ ಸಿಗುವ ಮೊದಲು ಇದೇ ವಿಚಾರದಲ್ಲಿ ಹೊಸದೊಂದು ಬಿಕ್ಕಟ್ಟು ಪ್ರಾರಂಭವಾಗಿದೆ. ಅದೇನೆಂದರೆ.. ಈ ಪ್ರದೇಶದ ದಾಖಲೆಗಳ ಮಹತ್ವದ ಕಡತಗಳೇ ನಾಪತ್ತೆ ಆಗಿರುವುದು. ಹೌದು ಸಿದ್ಧಾಪುರ ಪಟ್ಟಣ ಪಂಚಾಯತ್ ಸಮೂದಾಯ ಭವನದ ಜಾಗದ ಕುರಿತ ಮಹತ್ವದ ದಾಖಲೆಗಳೇ ನಾಪತ್ತೆಯಾಗಿವೆ!.
ಈ ವಿಷಯವನ್ನು ಬಹಿರಂಗಪಡಿಸಿದ ಪಟ್ಟಣ ಪಂಚಾಯತ್ ಆಡಳಿತ ಈ ಬಗ್ಗೆ ಸೂಕ್ತ ತನಿಖೆಯಾಗಿ ಶೀಘ್ರ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದೆ. ಇಂದು ಪ.ಪಂ. ಸಭಾಂಗಣದಲ್ಲೇ ಮಾಧ್ಯಮಗೋಷ್ಠಿ ನಡೆಸಿದ ಪಟ್ಟಣ ಪಂಚಾಯತ್ ಸದಸ್ಯರು ಸಿ.ಆರ್. ಹಾಲ್ ಇರುವ ಜಾಗವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಿರುವ ಆದೇಶ ಅಸಿಂಧು ಮತ್ತು ಆ ಜಾಗ ಪಟ್ಟಣ ಪಂಚಾಯತ್ ಆಸ್ತಿ ಇರುವುದರಿಂದ ಅಲ್ಲಿ ಸ್ವಾತಂತ್ರ್ಯ ಸ್ಮಾರಕ ಭವನ ಕಟ್ಟಲು ಅವಕಾಶವಿಲ್ಲ ಎಂದು ಹೈಕೋರ್ಟ್ ನೀಡಿರುವ ತಡೆಯಾಜ್ಞೆಯ ಬಗ್ಗೆ ಮಾಧ್ಯಮದವರಿಗೆ ತಿಳಿಸಿದರು.
ಈ ಸಿ.ಆರ್. ಹಾಲ್ ಪ್ರದೇಶದ ಮಾಲಿಕತ್ವ, ನಿರ್ವಹಣೆ, ಅಭಿವೃದ್ಧಿ ಇತ್ಯಾದಿ ವಿಚಾರಗಳಲ್ಲಿ ಮೊದಲು ಬ್ಲಾಕ್ ಕಾಂಗ್ರೆಸ್ ಸಮೀತಿ ಈ ಜಾಗ ಕಾಂಗ್ರೆಸ್ ಆಸ್ತಿ ಇರುವುದರಿಂದ ಇದನ್ನು ಪಟ್ಟಣ ಪಂಚಾಯತ್ ಗೆ ಹಿಂದಿರುಗಿಸಬಾರದು ಎಂದು ನ್ಯಾಯಾಲಯದ ಮೊರೆ ಹೋಗಿತ್ತು. ಈ ವಿವಾದ ಬಗೆಹರಿಯುವ ಮೊದಲು ಪಟ್ಟಣ ಪಂಚಾಯತ್ ಸಮೂದಾಯ ಭವನದ ಜಾಗ ಪ.ಪಂ. ಆಸ್ತಿ ಹಾಗಾಗಿ ಅದನ್ನು ಕಾಂಗ್ರೆಸ್ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ತಡೆಯಾಜ್ಞೆ ತಂದಿದೆ. ಹೀಗೆ ಪಟ್ಟಣ ಪಂಚಾಯತ್ ,ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಪ್ರೇರಿತ ಕೆಲವರು ತಮ್ಮ ಹಕ್ಕು ಪ್ರತಿಪಾದನೆ ಮಾಡತ್ತಿರುವಾಗಲೇ ಇದಕ್ಕೆ ಸಂಬಂಧಿಸಿದ ಮಾಹಿತಿ ಕೇಳಿದರೆ ಇದಕ್ಕೆ ಸಂಬಂಧಿಸಿದ ಮಾಹಿತಿಗಳು ಲಭ್ಯವಿಲ್ಲ ಎಂದು ಅಧಿಕಾರಿಗಳು ಉತ್ತರ ನೀಡಿದ್ದಾರೆ.
ರವೀಂದ್ರನಗರದಲ್ಲಿ ಪಟ್ಟಣ ಪಂಚಾಯತ್ ನಿರ್ವಹಣೆಯ ಸಮೂದಾಯ ಭವನ ಅದಕ್ಕೆ ತಾಕಿಕೊಂಡಿರುವ ಪ್ರದೇಶ ಇರುವುದು ಸತ್ಯ. ಇದೇ ಜಾಗದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ. ನಡುವೆ ವಿವಾದ, ನ್ಯಾಯಾಲಯದ ಪ್ರಕರಣಗಳಿರುವುದೂ ಸತ್ಯ. ಈಗ ಬಿ.ಜೆ.ಪಿ.ಯ ಕೆ.ಬಣ ತಮ್ಮ ಶಾಸಕರ ಹಿತಾಸಕ್ತಿಯ ಸ್ವಾತಂತ್ರ್ಯ ಸ್ಮಾರಕ ಭವನದ ವಿಚಾರದಲ್ಲಿ ಪಟ್ಟಣ ಪಂಚಾಯತ್ ಮತ್ತು ಅದರ ಆಡಳಿತದಿಂದ ವಿರೋಧ ಮಾಡಿಸುತ್ತಿರುವುದೂ ಸತ್ಯ. ಇಂಥ ಮೇಲಾಟದ ನಡುವೆ ಸಿ.ಆರ್. ಹಾಲ್ ನ ಜಾಗದ ಮಾಲಿಕತ್ವ, ಯಜಮಾನಿಕೆಗೆ ಸಂಬಂಧಿಸಿದ ದಾಖಲೆಗಳ ಪೈಲ್ ಕಾಣೆಯಾಗಿರುವುದು ಯಾರ ಹಿತಾಸಕ್ತಿಗಾಗಿ? ಈ ಫೈಲ್ ಕಣ್ಮರೆ ಹಿಂದೆ ಇರುವ ಕಾಣದ ಕೈ ಯಾರು? ಅಧಿಕಾರಿಗಳು ಈ ಸರ್ಕಾರಿ ಜಾಗದ ವಿಚಾರದಲ್ಲಿ ರಾಜಕೀಯ ಹಿತಾಸಕ್ತಿಯ ಪರ ವಾಲಿ ಕಡತಗಳನ್ನೇ ನಾಪತ್ತೆ ಮಾಡಿದರೆ ಎನ್ನುವ ವಿಚಾರ ಈಗ ಮಹತ್ವ ಮತ್ತು ವಿವಾದಾತ್ಮಕ ವಿಚಾರವಾಗಿದೆ. ಸರ್ಕಾರಿ ಆಸ್ತಿಯ ದಾಖಲೆಗಳ ಕಡತವನ್ನೇ ನಾಪತ್ತೆಮಾಡುವ ಅಧಿಕಾರಿ ವರ್ಗ ಸಾರ್ವಜನಿಕ, ವ್ಯಕ್ತಿಯ, ಪ್ರಜೆಗಳ ಖಾಸಗಿ ಹಕ್ಕು,ಬಾಧ್ಯತೆಗಳ ಹಿತ ಕಾಪಾಡುವರೆ….? ಅಷ್ಟಕ್ಕೂ ಈ ಪ್ರಕರಣದಲ್ಲಿ ತಹಸಿಲ್ಧಾರ್, ಉಪವಿಭಾಗೀಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕೈವಾಡ ಇರುವುದರಿಂದ ಈ ಪ್ರಕರಣ ಎಷ್ಟು ಜನ ಕೆಳಹಂತದ ನೌಕರರ ತಲೆಗೆ ತೂಗುಗತ್ತಿಯಾಗಬಹುದು ಎನ್ನುವುದೂ ಕುತೂಹಲದ ವಿಷಯವಾಗಿದೆ.