ugadi spl-ನಮ್ಮೂರಿನ ಉಗಾದಿ ಚಿತ್ರಗಳು..& ವಿಡಿಯೋಗಳು!

ಕೆರೆಕೋಡಿಯ ಪಕ್ಕದಲ್ಲಿದ್ದ ಬೀದಿಯೊಂದರಲ್ಲಿ ನನ್ನ ಬಾಲ್ಯ ಕಳೆಯಿತು. ಅಲ್ಲಿ ಬೆಸ್ತರು, ಈಡಿಗರು, ಬಡಗಿಗೆಲಸದ ಆಚಾರಿಗಳು, ಕಮ್ಮಾರರು, ಮಂಡಕ್ಕಿಭಟ್ಟಿಯವರು, ಮೇದಾರರು ಇದ್ದರು. ವಚನವೊಂದರಲ್ಲಿ ಬರುವಂತೆ ಎಲ್ಲರೂ `ಅಂದಂದೆ ಹುಟ್ಟಿತ್ತು ಅಂದಂದೆ ಹೊಂದಿತ್ತು’ ಎಂಬಂತೆ ಹಗಲ ದುಡಿಮೆ ರಾತ್ರಿಯ ಊಟದ ಅವಸ್ಥೆಯವರು. ಒಬ್ಬರ ಮನೆಯ ಹಬ್ಬ ಇಡೀ ಬೀದಿಯ ಉತ್ಸವವಾಾಗುತ್ತಿತ್ತು. ರಂಜಾನ್ ದಿನ ಶೀರ್‌ಕುರುಮಾ ಬಟ್ಟಲನ್ನು ಬೀದಿಯ ಎಲ್ಲರ ಮನೆಗೆ ತಲುಪಿಸುವುದು ನಮಗೆ ಮಹತ್ವದ ಕಾಯಕವಾಗಿತ್ತು. ಉಗಾದಿಯ ದಿನ ಬೇರೆಯವರ ಮನೆಗಳಿಂದ ಬರುತ್ತಿದ್ದ ಹೋಳಿಗೆ, ಕೋಸಂಬರಿ, ಹೋಳಿಗೆಸಾರು, ಚಿತ್ರಾನ್ನ, ಮಜ್ಜಿಗೆ ಮೆಣಸಿನಕಾಯಿ, ಸಂಡಿಗೆಗಳಿಂದ ಅಲಂಕೃತವಾದ ತಾಟನ್ನು ಬಾಗಿಲಲ್ಲಿ ನಿಂತು ಬರಮಾಡಿಕೊಳ್ಳವ ಕಾರ್ಯವನ್ನು ಮುತುವರ್ಜಿಯಿಂದ ನೆರವೇರಿಸುತ್ತಿದ್ದೆವು. ಮಕ್ಕಳು ಅವರಿವರ ಮನೆಯ ಅಡಿಗೆಗೆ ಕಾಯಬಾರದೆಂದು ಅಮ್ಮ ಹೋಳಿಗೆ ಮಾಡುತ್ತಿದ್ದಳು. ಆದರೂ ನೆರೆಮನೆಯ ಹೋಳಿಗೆಯ ಸ್ವಾದವೇ ಬೇರೆ.

ಬೀದಿಯ ಜನ, ಉಗಾದಿಯಂದು ಹೊತ್ತು ಕಂತುವ ಸಮಯಕ್ಕೆ ಅಂಗಳದಲ್ಲಿ ಜಮಾಯಿಸುತ್ತಿತ್ತು. ಕೆರೆ ಕೆಳಗಿನ ಅಡಿಕೆ ತೋಟಗಳ ತಲೆಯ ಮೇಲೆ, ಬಣ್ಣಬಣ್ಣದ ಮೋಡಗಳು ವಿವಿಧ ಆಕೃತಿಗಳಲ್ಲಿ ಲಾಸ್ಯವಾಡುವ ಪಡುವಣದಾಗಸದಲ್ಲಿ, ಯಾರೋ ಎಸೆದುಹೋದ ಬೆಳ್ಳಿ ಕುಡುಗೋಲಿನಂತಹ ಉಗಾದಿ ಚಂದ್ರನನ್ನು ಹುಡುಕುವ ಕಾರ್ಯ ನಡೆಸುತ್ತಿತ್ತು. ನಾವು ವಯಸ್ಸಾಗಿ ಕಣ್ಣು ಮಂಜಾದವರಿಗೆ ಚಂದ್ರನನ್ನು ತೋರಿಸುವ ಕೆಲಸ ಮಾಡುತ್ತಿದ್ದೆವು. ಅವರ ಬೆನ್ನಹಿಂದೆ ನಿಂತು, ಅವರ ಎಡಹೆಗಲ ಮೇಲೆ ಕೈಯಿಟ್ಟು, ಅವರ ಕಿವಿಯ ಪಕ್ಕ ನಮ್ಮ ಕೆನ್ನೆ ತಂದು, ತೋರುಬೆರಳನ್ನು ನಿಮಿರಿಸಿ ಚಂದ್ರನಿಗೆ ಅವರ ದಿಟ್ಟಿಯನೊಯ್ದು ಮುಟ್ಟಿಸಲು ಯತ್ನಿಸುತ್ತಿದ್ದೆವು. `ಅಗೋ ಆ ಕರೇ ಮಾಡ ಐತಲ್ಲಜ್ಜಿ, ಅದರ ಪಕ್ಕ ಮೊಸಳೆ ತರಹ ಒಂದು ಮಾಡ ಎದ್ದೀತಲ್ಲ, ಅದರ ಬಲಗಡೀಕ್ ನೋಡು, ಸಣ್ಣಗೆ ಬೆಳ್ಳಗೆ ಗೆರೆ ಥರ’ ಎಂದು ವೀಕ್ಷಕ ವಿವರಣೆ ಕೊಡುತ್ತಿದ್ದೆವು. ರಂಜಾನ್ ತಿಂಗಳಲ್ಲೂ ಚಂದ್ರನನ್ನು ಹೀಗೇ ಹುಡುಕುತ್ತಿದ್ದೆವು.

ಉಗಾದಿ ಚಂದ್ರನನ್ನು ತೋರಿಸುವಾಗ ಈಡಿಗರ ವೆಂಕಮ್ಮಜ್ಜಿಗೆ ಕಾಣದಿದ್ದರೂ ಚದುರಿದ ಮೋಡದ ಚೂರನ್ನು ಕಂಡು `ಹ್ಞೂ ಕಣಪ್ಪಾ, ಕಾಣ್ತುಕಾಣ್ತು. ಸ್ವಾಮೀ ನಮಪ್ಪಾ. ಈಸಲ ಒಳ್ಳೆ ಮಳೆಬೆಳೆ ಕೊಡಪ್ಪಾ” ಎಂದು ಕಣ್ಮುಚ್ಚಿ ಮುಗಿಲಿಗೆ ಕೈಮುಗಿಯುತ್ತಿತ್ತು. ಅದೇ ಹೊತ್ತಲ್ಲಿ ಅಪ್ಪ, ಬೀದಿಯಲ್ಲಿ ಹಿರೀಕನಾಗಿ ಅಂಗಳದಲ್ಲಿ ಕುರ್ಚಿ ಹಾಕಿಕೊಂಡು ಮಠದ ಗುರುವಿನಂತೆ ಪಾದಗಳನ್ನು ನೀಟಾಗಿ ಜೋಡಿಸಿಕೊಂಡು ಕೂರುತ್ತಿದ್ದ. ಚಿಕ್ಕವರೆಲ್ಲರೂ ಅಪ್ಪನಿಗೆ `ಸಾಬರೇ ಚಂದ್ರ ಕಾಣ್ತು, ಆಶ್ರಿವಾದ ಮಾಡ್ರಿ’ ಎಂದು ಕಾಲುಮುಟ್ಟಿ ಹಾರೈಕೆ ಪಡೆಯುತ್ತಿದ್ದರು. ಯುಗಾದಿಯ ದಿನ ಬೆಳಿಗ್ಗೆ ಭದ್ರಾವತಿ ಆಕಾಶವಾಣಿಯವರು ವಾರ್ತೆಗಳ ಬಳಿಕ `ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಹಾಡನ್ನು ತಪ್ಪದೆ ಹಾಕುತ್ತಿದ್ದರು. ಜಾನಕಿಯವರ ದನಿಯಲ್ಲಿ ಮೂಡಿಬಂದಿರುವ ಬೇಂದ್ರೆ ವಿರಚಿತ ಈ ಹಾಡು, ನೆನಪಲ್ಲಿ ಭದ್ರವಾಗಿ ಕೂತಿದೆ. ಬೀದಿಯಲ್ಲಿ ಹೊಂಗೆಗಿಡಗಳಿದ್ದ ಕಾರಣ `ಹೊಂಗೆಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಬರುತಿದೆ’ ಸಾಲು ನಮಗೆ ಅನುಭವ ವೇದ್ಯವಾಗಿತ್ತು. ಈ ಸಾಲನ್ನು ಮೈಸೂರಿನಲ್ಲಿ ನಮ್ಮ ಹಾಸ್ಟೆಲಿನ ಪಕ್ಕದಲ್ಲಿದ್ದ ಕುಕ್ಕರಹಳ್ಳಿ ಕೆರೆದಂಡೆಯ ಮೇಲೆ ಅಡ್ಡಾಡುತ್ತ ಮತ್ತೂ ದಿವಿನಾಗಿ ಅನುಭವಿಸಿದೆ.

ಸಾಹಿತ್ಯದ ವಿದ್ಯಾರ್ಥಿಯಾಗಿ `ಯುಗಾದಿ’ ಕವನ ಓದುವಾಗ ಗೊತ್ತಾಯಿತು- ಇದು ನಿಸರ್ಗದ ಸಂಭ್ರಮಾಚರಣೆಯ ಹಾಡು ಮಾತ್ರವಲ್ಲ, ವಿಷಾದಗೀತೆ ಕೂಡ ಎಂದು. `ವರುಷಕೊಂದು ಹೊಸ ಜನುಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವ ಜಾತಕೆ; ಒಂದೇ ಜನ್ಮದಲಿ ಒಂದೇ ಬಾಲ್ಯ ಒಂದೇ ಹರೆಯ ನಮಗದಷ್ಟೇ ಏತಕೆ?’ ಎಂಬ ಪ್ರಶ್ನೆ ಕಂಪನದಾಯಕ ಅಸಹಾಯಕತೆ ಹುಟ್ಟಿಸಿತು. ಯಾಕೀ ಅನ್ಯಾಯ ಎಂದು ಆಕ್ರೋಶವನ್ನೂ ಬರಿಸಿತು. ಯುಗದ ಆದಿಯನ್ನು ಸೂಚಿಸುವ ಈ ಹಬ್ಬ, ಕಾಲನ ಕಠೋರತೆಯನ್ನೂ ಸೂಚಿಸುತ್ತ ತಲ್ಲಣವನ್ನು ನನ್ನೊಳಗೆ ಖಾಯಮ್ಮಾಗಿ ಸ್ಥಾಪಿಸಿಬಿಟ್ಟಿತು. ಇದನ್ನೆಲ್ಲ ಧೇನಿಸುತ್ತ್ತ ಉಗಾದಿಯಂದು ಹೊಸಪೇಟೆಯ ನಮ್ಮ ಮನೆಯ ಮುಂದೆ ನಾವೇ ಬೆಳೆಸಿರುವ ಹೊಂಗೆಗಿಡಗಳನ್ನು ನೋಡುತ್ತೇನೆ. ನಮ್ಮ ತಾಪತ್ರಯಗಳಲ್ಲಿ ಅವಕ್ಕೆ ವಾರದಿಂದ ನೀರುಣಿಸುವುದಕ್ಕೂ ಆಗಿರಲಿಲ್ಲ. ಎಮ್ಮೆಗಳು ಕೋಡಿನ ತುರಿಕೆ ಕಳೆಯಲು ತಿಕ್ಕಾಡಿದ್ದರಿಂದ ಲಾಠಿಜಾರ್ಜಿಗೆ ಒಳಗಾದ ಭಿಕ್ಷರಂತಾಗಿದ್ದವು ಅವು. ಆದರೀಗ ಗಾಯಗೊಂಡ ಅವುಗಳ ಕೊಂಬೆಗಳಿಂದ ಜೀವರಸ ಹೊಮ್ಮಿದಂತೆ ತೆಳುಕೆಂಬಣ್ಣದ ತಳಿರು ಮೂಡಿವೆ-ಯಾರ ಹಂಗೂ ಇಲ್ಲದೆ ದೇಹದೊಳಗಿನ ಜವ್ವನವು ಉಕ್ಕಿ ಮುಖದಲ್ಲಿ ಕಾಂತಿ ಹೊಮ್ಮಿಸುವಂತೆ. ಕಳೆದೆರಡು ವಾರಗಳಿಂದ ನಮ್ಮ ಹಿತ್ತಲ ಮರಗಿಡಗಳು ಎಲೆಯುದುರಿಸುತ್ತಿವೆ.

ಬಾನು ಗೊಣಗಿಕೊಂಡು ಅವನ್ನು ಗುಡಿಸುತ್ತ ಮರದ ಬುಡಕ್ಕೇ ಸುರಿಯುತ್ತಿದ್ದಾಳೆ. ಒಣಗಿದೆಲೆ ಕೊಳೆತು ಗೊಬ್ಬರವಾಗಿ ಹೊಸೆಯೆಲೆಗೆ ತನ್ನ ಕಸುವನ್ನು ಎರೆಯುತ್ತದೆ. ಹೊಂಗೆ- ಬೇವು ಎಲೆಯುದುರಿಸುವ ಸದ್ದು ಸಾಮಾನ್ಯವಾಗಿ ಕೇಳುವುದೇ ಇಲ್ಲ. ಆದರೆ ದಿವಿಹಲಸಿನ ಗಿಡದ ದಪ್ಪನೆಯ ಎಲೆ ಖಳಕ್ಕೆಂದು ಕಳಚಿ ಬೀಳುವ ಖಟ್ ಸದ್ದು ಮಾತ್ರ ಶ್ರವಣೀಯೆ. ತನ್ನ ಮೈಯ ತೊಗಲೊಡೆದು ಹುಟ್ಟಿದ ಎಲೆಯನ್ನು ವರ್ಷವಿಡೀ ಇರಿಸಿಕೊಂಡಿದ್ದ ಮರ, ಅದು ಹಣ್ಣಾದ ಬಳಿಕ ಎಷ್ಟು ನಿರಾಳವಾಗಿ ಕೈಬಿಡುತ್ತಿದೆ! ಚಿಕ್ಕಂದಿನಲ್ಲಿ ಅಮ್ಮ ಹೇಳುತ್ತಿದ್ದಳು. ಸ್ವರ್ಗದಲ್ಲಿ ಒಂದು ಮರವಿದೆಯಂತೆ. ಅದರಲ್ಲಿ ನಮ್ಮ ಹೆಸರಿನ ಎಲೆಗಳಿವೆಯಂತೆ. ಅದು ಉದುರಿದ ದಿನ ನಮ್ಮ ಪ್ರಾಣ ಹೋಗುತ್ತದಂತೆ. ಅಲ್ಲಿ ಸಲ್ಲದವರು ಇಲ್ಲೂ ಸಲ್ಲರು. ಉದುರಿದ ಎಲೆಯ ಜಾಗದಲ್ಲಿ ಹೊಸ ಚಿಗುರು ಬರಬಹುದು. ಆದರೂ ಉದುರಿದ ಎಲೆಯ ತಬ್ಬಲಿತನ ಇನ್ನಿಲ್ಲದಂತೆ ಕಾಡುತ್ತದೆ. ಮನೆಯೆದುರಿನ ಎಲೆಯುದುರಿಸಿದ ಮರಗಳೀಗ ಮುಂದಿನ ಉಗಾದಿ ತನಕ ಅಭಯ ಕೊಡುವಂತೆ ಚಿಗುರಿವೆ. ಬೇವು ಮುತ್ತಿನ ಮೂಗುಬೊಟ್ಟಿನಂತಹ ಹೂಗಳನ್ನು ಗೊಂಚಲಾಗಿ ಬಿಟ್ಟಿದೆ. ಇಂತಹ ಋತುಚಕ್ರದ ಯಾವ ಕರಾರಿಗೂ ಸಹಿಹಾಕದ ಬಾಳೆಗೆ ಎಲೆಬದಲಿಸುವ ಗರಜಿಲ್ಲ. ಕೆಂಡಸಂಪಿಗೆ ಗಿಡದಲ್ಲಿ ಉಳಿದಿರುವ ಕೊನೆಯ ಮೊಗ್ಗುಗಳು, ಮನೆಗೆಲಸಕ್ಕೆ ಹೋಗಿಬರುವ ಬಡ ಹುಡುಗಿಯರಂತೆ ಸೊರಗಿ ಸಣ್ಣಗೆ ಅರಳುತ್ತಿವೆ. `ಇದು ಗೊಡ್ಡು ಬಿದ್ದಿದೆ ಕಂಡ್ರಿ, ಕಡಿದು ಎಸೀರಿ ಅತ್ಲಾಗೆ’ ಎಂಬ ಸಾರ್ವಜನಿಕ ಒತ್ತಾಯವಿದ್ದರೂ, ನನ್ನ ವೀಟೊ ಕಾರಣದಿಂದ ನಿಂತಿರುವ ಕಾಡುನೆಲ್ಲಿ, ರೆಂಬೆಗಳಲ್ಲಿ ಗಿಣಿಹಸುರಿನ ಸಣ್ಣಚಿಗುರು ತಳೆದು ಇನ್ನೊಂದು ಅವಕಾಶಕ್ಕಾಗಿ ಅರ್ಜಿ ಸಲ್ಲಿಸುತ್ತಿದೆ. ನುಗ್ಗೆಯೋ, ಜೋಗಮ್ಮನ ಜಡೆಗಳಂತೆ ಕಾಯನ್ನು ಇಳಿಬಿಟ್ಟು ತೃಪ್ತಿಯಿಂದ ನಿಂತಿದೆ. ಅಂಜೂರ ಮಾತ್ರ ಎಮ್ಮೆಕಿವಿಯಂತಹ ಎಲೆಗಳ ಮೇಲೆ ಧೂಳನ್ನು ಹೊತ್ತು ತಾಪ ಕೆರಳಿಸುತ್ತಿದೆ. ಜಂಬುನಾಥನ ಬೆಟ್ಟದಲ್ಲಿ ನಿಶ್ಯಬ್ದವಾಗಿ ಮಲಗಿದ್ದ ಅದಿರನ್ನು ಬಲಾತ್ಕಾರವಾಗಿ ಮೇಲೆಬ್ಬಿಸಿ ವಿದೇಶಗಳಿಗೆ ಹಡಗುಗಳಲ್ಲಿ ಕಳಿಸಿ ರೊಕ್ಕ ಬಾಚುತ್ತಿರುವ ಧಣಿಗಳು ಎಲ್ಲಿದ್ದಾರೊ ಏನೊ? ಆದರೆ ಅವರು ಹಬ್ಬಿಸಿದ ಧೂಳು ಅಂಜೂರದೆಲೆಗಳ ಮೇಲೆ ತಬ್ಬಲಿಯಂತೆ ಬಂದು ಪವಡಿಸಿದೆ. ಗಣಿಯೂರಲ್ಲಿ ನೆಲೆಸಿರ್ದ ಬಳಿಕ ಕೆಂಧೂಳಿಗೆ ಅಂಜಿದೊಡೆಂತಯ್ಯಾ ಎಂದುಕೊಂಡ ವಾಸ್ತವವಾದಿ ಅಂಜೂರ, ನೀಳತೊಟ್ಟಿನ ಚಪ್ಪಟೆಮುಖದ ಹಸಿರುಕಾಯನ್ನು ಮೈತುಂಬ ಕಚ್ಚಿಕೊಂಡಿದೆ. ಆದರೆ ಇಷ್ಟಪಟ್ಟು ನೆಟ್ಟ ಬದಾಮಿ ಮಾವು ಮಾತ್ರ ಚಿಗುರಿ ನಿರಾಶೆ ತಂದಿದೆ. ಅದರ ಕೆಂದಳಿರೇನೊ ಮೋಹಕವಾಗಿದೆ. ಅದು ಈ ಸಲ ಫಲವಿಲ್ಲ ಎಂದು ಕೊಟ್ಟಿರುವ ನೋಟಿಸಾಗಿದ್ದು ಅದರ ಸೌಂದರ್ಯ ಅಹಿತವಾಗಿ ಕಾಣುತ್ತಿದೆ. ವಸಂತದಲ್ಲಿ ಮಾವಿನ ಚಿಗುರು ತಿನ್ನಲು ಕೋಗಿಲೆಗಳು ಬಂದು ಕೂಗುತ್ತವೆ ಎಂಬುದು ಕವಿಸಮಯ. ನಮ್ಮ ಮಾವಿನ ಮರ ಕಂಡಂತೆ ಸದಾ ಮೆರೂನ್ ಬಣ್ಣದ ಕೆಂಬೂತಗಳು ಬಂದು ಕುಳಿತು, ಗಂಟಲನ್ನು ಕ್ಯಾಕರಿಸಿ ಸರಿಪಡಿಸಿಕೊಳ್ಳುವವರಂತೆ ಖ್‌ಖ್‌ಖ್ ನಾದ ಹೊರಡಿಸುತ್ತ ಸುರತಕೇಳಿ ಮಾಡುತ್ತವೆ. ಇಷ್ಟಾಗಿಯೂ ಮೂರು ಕೊಂಬೆಗಳು ಚಿಗರದೆ ಕಪ್ಪುಹಸಿರಿನ ಹಳೇ ಎಲೆಗಳನ್ನು ಇಟ್ಟುಕೊಂಡು, ಹೂತು ಮಾವು ಬಿಡುವ ಭರವಸೆ ನೀಡುತ್ತಿವೆ. ಒಂದಷ್ಟು ಬಲಿತ ಕಾಯಿ, ಒಂದಷ್ಟು ಮಿಡಿ, ಒಂದಷ್ಟು ಹೂವು ಎಲ್ಲವೂ ಒಟ್ಟೊಟ್ಟಿಗೆ ಇವೆ. ಅರೆಹುಚ್ಚನಂತಿರುವ ಮಾವಿನ ಮರವನ್ನೂ, ಬೀದಿ ಮಣ್ಣಲ್ಲಿ ಆಡಿಬಂದ ಮಗುವಿನಂತಹ ಅಂಜೂರ ಗಿಡವನ್ನೂ ನೋಡುತ್ತಿರುವಂತೆ, ಉಗಾದಿ ವಿಚಿತ್ರ ಭಾವವನ್ನು ಸ್ಫುರಿಸುತ್ತಿದೆ.

ಬಾಲ್ಯದ ಮಧುರ ನೆನಪುಗಳೂ, ಬೇಂದ್ರೆ ಕವನ ಹುಟ್ಟಿಸಿದ ಕಂಪನಗಳೂ, ಸದ್ಯದ ಕೆಂಧೂಳಿನ ವಾಸ್ತವತೆಗಳೂ ಮಿಶ್ರಗೊಂಡು ನುಗ್ಗುತ್ತಿವೆ. ತಮ್ಮೆಲ್ಲ ದುಗುಡಗಳೊಳಗೆ ಬದುಕುವ ಯಾವುದೊ ತ್ರಾಣ ಜನರಲ್ಲಿದೆ. ಹಬ್ಬ ಬರುವುದೇ ದಣಿದ ಜೀವಗಳಿಗೆ ಚೈತನ್ಯ ತುಂಬಲು. ಬೀದಿಯಲ್ಲಿ ಕಟ್ಟುತ್ತಿರುವ ಕಟ್ಟಡಗಳನ್ನು ಕಾಯಲೆಂದು ಊರುಬಿಟ್ಟು ಬಂದಿರುವ ವಾಚ್‌ಮನ್ ಶೆಡ್ಡುಗಳತ್ತ ನೋಡಿದೆ. ಕವನದ ಮೊದಲ ಭಾಗದಲ್ಲಿರುವ `ಭೃಂಗದ ಕೇಳಿ’ ಮರದ ನೆರಳಲ್ಲಿ ಆಡುತ್ತಿರುವ ಮಕ್ಕಳಿಂದ ಹೊಮ್ಮಿ ಬರುತ್ತ, ಬೇಂದ್ರೆ ಕವನದ ಕೊನೆಯ ಭಾಗವನ್ನೇ ಧೇನಿಸುತ್ತ ವಿಷಾದಮುಖಿಯಾಗಿರುವ ನನ್ನನ್ನು ಛೇಡಿಸುತ್ತಿದೆ. ಯುಗಕ್ಕೆ ಆದಿ ಯಾವುದೊ ಏನೊ ತಿಳಿಯದು? ಹಾಗಿರುವಾಗ ಅದರ ಅಂತ್ಯವನ್ನೇ ಕುರಿತು ಯಾಕೆ ಚಿಂತಿಸಬೇಕು? ಮನುಷ್ಯರಿಗೆ ಅಂತ್ಯವಿರುವುದು ನಿಜ. ಆದರೆ ಪಯಣದ ಹಾದಿಯಲ್ಲಿ ದೊರಕುವ ನೋಟಗಳು ಅನಂತವಾಗಿವೆ. ಇದು ಬೇಂದ್ರೆಯವರಿಗೂ ಅರಿವಿತ್ತು. ಎಂತಲೇ ತಾವೇ ಬರೆದ `ಯುಗಾದಿ’ ಕವನಕ್ಕೆ ಡಿಕ್ಕಿಹೊಡೆಯುವಂತೆ `ಈ ತುಂಬಿಬಾಳು ತುಂಬಿರುವ ತನಕ ತುಂತುಂಬಿ ಕುಡಿಬೇಕು’ ಎಂಬ ಸಾಲನ್ನೂ ಅವರು ಬರೆದರು. ಉಮರ್ ಖಯಾಮನನ್ನು ಕನ್ನಡಿಸುತ್ತ ಹುಟ್ಟಿದ ಸಾಲುಗಳಿವು. ಸಾವು ಹತಾಶೆಯನ್ನು ಮಾತ್ರವಲ್ಲ, ತೀವ್ರವಾಗಿ ಬದುಕುವ ಉತ್ಕಟತೆಯನ್ನೂ ಹುಟ್ಟಿಸುತ್ತದೆ. ….ರಹಮತ್ ತರಿಕೆರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜಾಗೃತೆ ವಾಹನ ಓಡಾಟ ಹೆಚ್ಚಿದೆ, ಮಂಗಗಳು ಸಾಯುತ್ತಿವೆ! ಸಾ. ಸಮ್ಮೇಳನ ಮುಗಿದು ಹೋದ ಮೇಲೆ……

ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ- ಸಂಸ್ಕೃತಿ ಅಭಿವೃದ್ಧಿ ಬಗ್ಗೆ ಕ್ಷಕಿರಣ ಬೀರುವ ಉತ್ತರ ಕನ್ನಡ ಜಿಲ್ಲೆಯ ೨೪ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ....

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *