

ಸಿದ್ದಾಪುರ : ಅಂತಃಕರಣ ಶುದ್ಧವಾದಾಗ ಬದುಕಿನಲ್ಲಿ ಸುಖ,ನೆಮ್ಮದಿ, ಶಾಂತಿ ದೊರೆಯುತ್ತದೆ. ಪೂಜೆ-ಪುನಸ್ಕಾರ, ಧ್ಯಾನ ಮನಸ್ಸನ್ನು ಶುದ್ಧ ಮಾಡುವ ವಿಧಾನಗಳಾಗಿವೆ ಎಂದು ಶಿರಳಗಿಯ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಯುಗಾದಿಯ ಅಂಗವಾಗಿ ತಾಲ್ಲೂಕಿನ ಸುಷಿರ ಸಂಗೀತ ಪರಿವಾರದ ಆಶ್ರಯದಲ್ಲಿ, ಮಗೆಗಾರಿನ ಮಹಾಗಣಪತಿ ದೇವಾಲಯದ ಸಹಯೋಗದಲ್ಲಿ, ಮಗೇಗಾರಿನ ಮಹಾಗಣಪತಿ ದೇವಾಲಯದಲ್ಲಿ ಮಂಗಳವಾರ ನಡೆದ ʼಸಂಗೀತ-ಸಂಗತʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂತಃಕರಣ ಶುದ್ಧಿಯ ಮೂಲಕ ನಮ್ಮನ್ನು ನಾವೇ ಮೇಲ್ಮಟ್ಟಕ್ಕೆ ಏರಿಸಿಕೊಳ್ಳಬೇಕು. ಕಷ್ಟ ಅಥವಾ ತಾಪತ್ರದ ನಡುವೆಯೇ ನಮ್ಮ ಬದುಕು ಹಣ್ಣಾಗಬೇಕು. ಮನಸ್ಸಿನ ಕೊಳೆ ತೊಳೆದು,ಅಂತಃಕರಣ ಶುದ್ಧವಾಗಬೇಕುʼ ಎಂದರು.
ನಾವು ನಮ್ಮ ಬುದ್ಧಿ ಮತ್ತು ಅಹಂಕಾರವನ್ನು ದಾಟಿದರೆ ಸತ್ಯವನ್ನು ನೋಡಬಹುದು. ಎಲ್ಲವೂ ಈಶ್ವರನ ಲೀಲೆ ಎಂಬುದು ಅರಿವಿಗೆ ಬರುತ್ತದೆ. ಕಷ್ಟ ಮತ್ತು ನೋವು ಪ್ರತಿದಿನವೂ ಬರುತ್ತವೆ.ಇವುಗಳನ್ನು ಎದುರಿಸಲು ಅಧ್ಯಾತ್ಮ ಅಗತ್ಯ. ಆಧ್ಯಾತ್ಮಿಕತೆ ಮನಸ್ಸನ್ನು ಗಟ್ಟಿ ಮಾಡುತ್ತದೆ ಎಂದರು.
ಜಯರಾಮ ಭಟ್ಟ ಹೆಗ್ಗಾರಳ್ಳಿ(ಹಾರ್ಮೋನಿಯಂ),ಶಶಾಂಕ ಹೆಗಡೆ ( ತಬಲಾ)ಅವರ ಸಹಕಾರದೊಂದಿಗೆ, ಸುಧೀರ ಬೇಂಗ್ರೆ ಭಕ್ತಿ ಸಂಗೀತ ಪ್ರಸ್ತುತ ಪಡಿಸಿದರು. ಸುಷಿರ ಸಂಗೀತ ಪರಿವಾರದ ಸಂಚಾಲಕ ನಾರಾಯಣ ಹೆಗಡೆ ಕಲ್ಲಾರೆಮನೆ ಇದ್ದರು. ರವೀಂದ್ರ ಭಟ್ ಬಳಗುಳಿ ಸ್ವಾಗತಿಸಿದರು. ಎಂ.ಎಂ.ಹೆಗಡೆ ಮಗೇಗಾರ ವಂದಿಸಿದರು.
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಾಲಿಕೊಪ್ಪದಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಧ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಅಚರಿಸಲಾಯಿತು.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು. ನಂತರ ಅಂಬೇಡ್ಕರ್ ವಿಚಾರಧಾರೆಯ ಕುರಿತು ಶಿಕ್ಷಕರು ತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.ಅಧ್ಯಕ್ಷ ಸತೀಶ ಹೆಗಡೆ ಕಾರ್ಯದರ್ಶಿ ಗುರುರಾಜ ನಾಯ್ಕ,ಗೌರವಾಧ್ಯಕ್ಷರಾದ ಧರ್ಮ ನಾಯ್ಕ,ಮಂಜುಳಾ ಪಟಗಾರ,ನಮೃತಾ ಪೈ,ಬಸವರಾಜ ಕಡಪಟ್ಟಿ,ಅರ್ಜುನ ಚವ್ಹಾಣ,ಧರ್ಮಣ್ಣ,ಜೆ.ಎನ್.ಗೌಡ,ಮಾರುತಿ ಆಚಾರಿ,ಭಾಸ್ಕರ ಮಡಿವಾಳ,ಕೆ.ಎನ್.ಹೆಗಡೆ ಹಾಗೂ ಅನೇಕ ಶಿಕ್ಷಕರು ಉಪಸ್ಥಿತರಿದ್ದರು.






