
ಶಿರಸಿ ಪ್ರತ್ಯೇಕ ಜಿಲ್ಲೆಯ ಕನಸು ಇಂದು ನಿನ್ನೆಯದಲ್ಲ. ಕಳೆದ ನಾಲ್ಕು ದಶಕಗಳಿಂದ ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ಜನರ ಹಕ್ಕೊತ್ತಾಯ ನಡೆಯುತ್ತಿದೆ. ಅಖಂಡ ಉತ್ತರ ಕನ್ನಡ ಜಿಲ್ಲೆ 12 ತಾಲೂಕುಗಳ ವಿಶಾಲ ಭೌಗೋಳಿಕ ವ್ಯಾಪ್ತಿ ಹೊಂದಿದೆ. ಹಳಿಯಾಳ ಕಾರವಾರ ಜಿಲ್ಲಾ ಕೇಂದ್ರಕ್ಕೆ ಅತಿ ದೂರದಲ್ಲಿರುವುದರಿಂದ ಹಳಿಯಾಳ ತಾಲೂಕಿನ ಜನರು ಹಳಿಯಾಳ ಕೇಂದ್ರವನ್ನಾಗಿ ಮಾಡಿ ಉತ್ತರ ಕನ್ನಡ ಜಿಲ್ಲೆಯನ್ನು ಪ್ರತ್ಯೇಕಿಸಿ ಎಂದು ಕೂಗು ಹಾಕಿದ್ದಾರೆ. ಯಲ್ಲಾಪುರದ ಜನತೆ ಕೂಡಾ ಘಟ್ಟದ ಮೇಲಿನ ತಾಲೂಕುಗಳಿಗೆ ಯಲ್ಲಾಪುರ ಮಧ್ಯವರ್ತಿ ಸ್ಥಳವಿದ್ದು ಯಲ್ಲಾಪುರವನ್ನೇ ಜಿಲ್ಲಾ ಕೇಂದ್ರ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಘಟ್ಟದ ಮೇಲಿನ ಜೊಯಡಾ ಹೊರತುಪಡಿಸಿ ಉತ್ತರಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಿಗೆ ಶಿರಸಿಯೇ ಪ್ರಮುಖ ಕೇಂದ್ರ, ವಾಣಿಜ್ಯಕೇಂದ್ರ ಕೂಡಾ.
ಶಿರಸಿ ಅಥವಾ ಉತ್ತರ ಕನ್ನಡ ವಿಭಾಗಿಸಿ ಮತ್ತೊಂದು ಜಿಲ್ಲೆ ಮಾಡುವುದು ಬೇಡ ಎನ್ನುವ ಅಖಂಡ ಉತ್ತರ ಕನ್ನಡ ಎನ್ನುವ ಜನ ಸಿದ್ಧಾಪುರ, ಹಳಿಯಾಳ, ಮುಂಡಗೋಡು ಸೇರಿದಂತೆ ಕೆಲವು ತಾಲೂಕುಗಳ ಜನರ ಬೇಡಿಕೆ, ಸಮಸ್ಯೆಗಳಿಗೆ ಉತ್ತರ ನೀಡಲಾರರು. ಜಿಲ್ಲೆಯಲ್ಲೇ ಆಡಳಿತ ವಿಕೇಂದ್ರೀಕರಣದ ಪರ ವಾದಿಸುವ ಜನರು ಕಳೆದ 25 ವರ್ಷಗಳಿಂದ ಇದೇ ವಾದದಲ್ಲಿ ಕಾಲ ಕಳೆಯುತ್ತಿರುವುದು ಬಿಟ್ಟರೆ ಆಡಳಿತ ವಿಕೇಂದ್ರೀಕರಣ ಕೇವಲ ಬಾಯ್ಮಾತಿನ ಸರಕಾಗಿದೆ. ಜಿಲ್ಲೆಗಳಿಗೆ ಬರುವ ಅನುದಾನಗಳು ಹಳಿಯಾಳ, ಯಲ್ಲಾಪುರ, ಶಿರಸಿಗಳಿಗೆ ಸೀಮಿತವಾಗುತ್ತಿರುವುದರಿಂದ ಶಿರಸಿ ಪ್ರತ್ಯೇಕ ಜಿಲ್ಲೆಯಾದರೆ ಕರಾವಳಿ ತಾಲೂಕುಗಳಿಗೇ ಲಾಭ. ಹೀಗೆ ಜನರ ಅನುಕೂಲ, ತಾಲೂಕುಗಳ ಅಭಿವೃದ್ಧಿ ಶಾಸಕರು, ಸಂಸದರ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಕನಿಷ್ಟ ಎರಡು ಜಿಲ್ಲೆಗಳಾಗಿ ವಿಭಾಗವಾದೆ ಅಭಿವೃದ್ಧಿಗೂ ಅನುಕೂಲ, ಜನಸಾಮಾನ್ಯರಿಗೂ ಉಪಯುಕ್ತ ಎನ್ನುವ ವಾದಗಳಿವೆ, ಹಾಗಾಗಿ ಶಿರಸಿ ಪ್ರತ್ಯೇಕ ಜಿಲ್ಲೆಯ ಹೋರಾಟ ಕಳೆದ ಕೆಲವು ದಶಕಗಳಿಂದ ಜೀವಂತವಾಗಿದೆ. ಇಲ್ಲಿ ಶಿರಸಿ,ಶಿಕಾರಿಪುರ ಪ್ರತ್ಯೇಕ ಜಿಲ್ಲೆಯ ಬಗೆಗಿನ ಪರ ವಿರೋಧದ ಧ್ವನಿಗಳಿವೆ.
