ಕಾರವಾರ ಶಾಸಕರಾಗಿದ್ದ ವಸಂತ ಅಸ್ನೋಟಿಕರ್ ಕೊಲೆಯ ಆರೋಪಿ ಮಂಬೈನ ಸಂಜಯ ಕಿಶನ್ ಮೋಹಿತೆಗೆ ಕಾರವಾರ ಜಿಲ್ಲಾ ನ್ಯಾಯಾಲಯದ ಶಿರಸಿ ವಿಭಾಗೀಯ ಪೀಠ ಇಂದು ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
19-02-2000 ನೇ ಇಸ್ವಿಯ ದಿನ ರಾತ್ರಿ 8-10 ವೇಳೆ ಕಾರವಾರ ದೈವಜ್ಞ ಸಭಾಭವನದಲ್ಲಿ ನಡೆಯಬೇಕಿದ್ದ ತಮ್ಮ ಮಗಳ ನಿಶ್ಚಿತಾರ್ಥ ಕಾರ್ಯಕ್ರಮದ ತಯಾರಿ ನೋಡಿ ಸ್ನೇಹಿತರೊಂದಿಗೆ ಮಾತನಾಡುತಿದ್ದಾಗ ಬೈಕ್ ನಲ್ಲಿ ಬಂದ ಮೋಹಿತೆ ಮತ್ತು ಆತನ ಸಹಚರರು ಅಂದಿನಶಾಸಕ ವಸಂತ ಅಸ್ನೋಟಿಕರ್ ಮೇಲೆ ನಾಲ್ಕು ಬಾರಿ ಗುಂಡು ಹಾರಿಸಿ ಕೊಲೆಗೆ ಪ್ರಯತ್ನಿಸಿದ್ದರು. ತೀವೃ ಗುಂಡೇಟಿನಿಂದ ಅಸ್ವಸ್ಥರಾಗಿದ್ದ ವಸಂತ ಮಣಿಪಾಲಕ್ಕೆ ಸಾಗಿಸುವ ಮಾರ್ಗ ಮಧ್ಯೆ ಮೃತರಾಗಿದ್ದರು.
ಈ ಪ್ರಕರಣದಲ್ಲಿ ವಸಂತ ಅಸ್ನೋಟಿಕರ್ ಕೊಲೆಗೆ ಹಂತಕರಿಗೆ ಸುಪಾರಿ ನೀಡಿದ್ದ ಪ್ರಮುಖ ಆರೋಪಿ ದಿಲೀಪ್ ನಾಯ್ಕ ಕೆಲವು ವರ್ಷಗಳ ಹಿಂದೆ ಕೊಲೆಯಾಗಿದ್ದರು. ಈ ಪ್ರಮುಖ ಆರೋಪಿ ಸಂಜಯ ಮೋಹಿತೆಗೆ ಕೊಲೆಗೆ ನೆರವು ನೀಡಿದ್ದ ಓಂ ಪ್ರಕಾಶ್ ಮತ್ತು ಅಂತೋನಿ ಮುಂಬೈ ಪೊಲೀಸರ ಎನ್ಕೌಂಟರ್ ಗೆ ಬಲಿಯಾಗಿದ್ದರು.
ಈ ಪ್ರಕರಣದ ಒಟ್ಟೂ 6 ಜನ ಆರೋಪಿಗಳಲ್ಲಿ ದಿಲೀಪ್ ನಾಯ್ಕ ಮತ್ತು ಓಂಪ್ರಕಾಶ್ ಹಾಗೂ ಅಂತೋನಿ ಮೃತರಾಗಿದ್ದರೆ ಇನ್ನಿಬ್ಬರು ದೋಷಮುಕ್ತರಾಗಿದ್ದಾರೆ. 2000 ನೇ ಇಸ್ವಿಯಿಂದ ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಸಂಜಯ ಮೋಹಿತೆಗೆ ಜೀವಾವಧಿ ಶಿಕ್ಷೆ ಮತ್ತು 68 ಸಾವಿರ ದಂಡ ವಿಧಿಸಿದೆ. ಕಾರವಾರ ಜಿಲ್ಲಾ ನ್ಯಾಯಾಲಯದ ಶಿರಸಿ ವಿಭಾಗೀಯ ಪೀಠದ ನ್ಯಾಯಾಧೀಶ ಶಾಂತವೀರ ಶಿವಪ್ಪ ಈ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಅಭಿಯೋಜಕಿ ಸುನಂದಾ ಈಶ್ವರಪ್ಪ ಮಡಿವಾಳ ವಾದಿಸಿದ್ದರು. ಈ ಕೊಲೆ ಪ್ರಕರಣದಲ್ಲಿ ಬೆಂಗಳೂರು ಸಿ.ಓ.ಡಿ. ಪೊಲೀಸರು ಎರಡುಬಾರಿ ನ್ಯಾಯಾಲಯಕ್ಕೆ ದೋಷಾರೋಪಣೆಯ ವರದಿ ಸಲ್ಲಿಸಿದ್ದರು.