

ಒಳ್ಳೆಯತನ ಮೆರೆಸಿ
ಘನ ಗುರಿ ಸಾಧನೆಯ
ಕಾವ್ಯ ಪುರಾಣಗಳೊಳಗೆ
ಮೌಲ್ಯಗಳ ತಿಕ್ಕಾಟ
ಮನುಷ್ಯ ಜಗತ್ತಿನ ಸಣ್ಣತನ
ಕ್ಲೀಷೆ ವಿಕ್ಷಿಪ್ತತೆಯ ಜತೆ
ಕ್ಷಮಿಸಲಾಗದ ಕುತಂತ್ರ ಮತ್ತು
ಶ್ರೇಷ್ಠತೆಯ ಸಿಕ್ಕುಗಳು
ಬೆರೆತುಹೋಗಿವೆ
ದೊಡ್ಡವರ ಮನೆ ಚಾಕರಿ ಮಾಡಿ
ಸಂಜೆಗೆ ಊಟ ಹೊತ್ತು
ಹಾಡುತ್ತಾ ಬರುವ
ಕೇರಿಯ ಕಲ್ಲಪ್ಪನ ನೋಡಿದಾಗಲೆಲ್ಲಾ
ಪುರಂದರದಾಸರು ನೆನಪಾಗಲು
ಸಕಾರಣ ಇರಬಹುದೇ…?
ಕವಿತೆ ಮತ್ತು ಕಾಲಕ್ಕೆ
ಸಮಾನ ಗುಣ
ನಿನ್ನೆಯ ಶ್ರೇಷ್ಠ ಪದ್ಯ
ಇಂದು ತಿದ್ದುಪಡಿಗಿದೆ
ಕೆಂದಳಿಲಿನ ಮೋಹಕ ಬಣ್ಣ
ವಿನ್ಯಾಸದ ಪಟ್ಟೆಗಳ
ಕಂಡು ಪುಳಕಗೊಳ್ಳುತ್ತಲೇ
ಅದರ ಮಾಂಸದ ರುಚಿಗೆ
ಹಲ್ಲು ನಾಲಿಗೆಗಳು
ಸಂಚಲನವಾಗುವ ಬಗೆ
ನನ್ನಲ್ಲಿ ಜಿಜ್ಞಾಸೆ ಉಳಿಸಿದೆ
ಅವಳ ಮುನಿಸಿನ ಕೋಪ ತಾಪ
ರಣರಂಪ ಜಗಳಗಳನ್ನ
ಮೌನವಾಗಿ ಸ್ವೀಕರಿಸಿದ ಆತ
ಜೋರು ಮಾತುಗಳಾಳದ
ಪ್ರೀತಿಯ ದರ್ಶನ ಪಡೆದು
ಬೀಗಿದ ಹುಚ್ಚು ಪ್ರೇಮಿ
- ಜಿ. ಟಿ ಸತ್ಯನಾರಾಯಣ ಕರೂರು.
ಚಿತ್ರ ಕೃಪೆ: ಗೂಗಲ್. ಛಾಯಾಗ್ರಹಕ ರಿಗೆ ಋಣಿ.

