ಮೂಖಾಮುಖಿ – ದೇವನೂರು ಮಹಾದೇವ ಸಂದರ್ಶನ

[ ದೇವನೂರ ಮಹಾದೇವ ಅವರ ಸಂದರ್ಶನ:
-ರಹಮತ್ ತರಿಕೆರೆ ಅವರಿಂದ, ಹಂಪಿ ವಿಶ್ವವಿದ್ಯಾಲಯದ 23.3.1999 ರ, ”ಕನ್ನಡ ಅಧ್ಯಯನ” ನಿಯತಕಾಲಿಕದಲ್ಲಿ ಪ್ರಕಟಿತ]

(ಕನ್ನಡದ ದೊಡ್ಡ ಲೇಖಕರ ವಿಶಿಷ್ಟತೆ ಎಂದರೆ, ಅವರು ಎಷ್ಟು ದೊಡ್ಡ ಕಲಾವಿದರೋ ಅಷ್ಟೇ ದೊಡ್ಡ ರಾಜಕೀಯ ಸಾಮಾಜಿಕ ಚಿಂತಕರು ಕೂಡ. ಇದಕ್ಕೆ ಕಾರಣ ಕರ್ನಾಟಕದ ಸಾಮಾಜಿಕ ಸನ್ನಿವೇಶಗಳೂ ಬಸವಣ್ಣ ಕುವೆಂಪು ಕಾರಂತ ಮುಂತಾದ ಚಿಂತಕ ಲೇಖಕರ ಪರಂಪರೆಯೋ ನಮ್ಮ ಲೇಖಕರ ಸಾಮಾಜಿಕ ಹಿನ್ನೆಲೆಯೊ ಗೊತ್ತಿಲ್ಲ. ‘ನನಗೆ ಏನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ಎಂಬಂತೆ ಚಿಂತಿಸುವವರು ನಮ್ಮ ಸಂಸ್ಕೃತಿಯಲ್ಲಿ ದೊಡ್ಡ ಚಿಂತಕರು’ ಎಂದು ಪುಣೇಕರ್ ಹೇಳುವುದುಂಟು. ಈ ಮಾತು ದೇವನೂರರಿಗೆ ಅನ್ವಯವಾಗುತ್ತದೆ. ಇಲ್ಲಿರುವ ಅರೆಬರೆ ವಾಕ್ಯಗಳು, ಒಗಟಿನಂತಹ ಹೇಳಿಕೆಗಳು ಅವರ ಚಿಂತನೆಯ ಗೊಂದಲ ಅಥವಾ ಕೊರತೆಯನ್ನು ಸೂಚಿಸುವುದಿಲ್ಲ. ಬದಲಿಗೆ ಈ ಬಗ್ಗೆ ಇನ್ನೂ ಚಿಂತಿಸಬೇಕಾದ್ದಿದೆ; ಅದನ್ನು ಸರಳವಾಗಿ ಹೇಳಲು ಆಗುವುದಿಲ್ಲ ಎಂಬ ಸಂಕೀರ್ಣತೆಯನ್ನೆ ಸೂಚಿಸುತ್ತಿವೆ. ಇದನ್ನು ಸೃಜನಶೀಲತೆಯ ಬಗೆಗಿನ ವ್ಯಾಖ್ಯೆಯಲ್ಲಿ ನೋಡಬಹುದು. ಆದರೆ ಎಲ್ಲೆಲ್ಲಿ ರಾಜಕೀಯವಾಗಿ ಸ್ಪಷ್ಟ ನಿಲುವನ್ನು ತಾಳಬಹುದೊ ಅಲ್ಲೆಲ್ಲ ದೇವನೂರರು ತಾಳುತ್ತಾರೆ. ಉದಾಹರಣೆಗೆ ಜಾಗತೀಕರಣ ಕುರಿತ ವಿಚಾರದಲ್ಲಿ ಕನ್ನಡದಲ್ಲಿ ಶಿಕ್ಷಣ ಕೊಡುವ ವಿಚಾರದಲ್ಲಿ ವಚನ ಚಳವಳಿಯ ಬಗೆಗಿನ ಅವರ ವಿವರಣೆಯು ನೋಡಲು ಸರಳವಾಗಿದೆ. ಆದರೆ ಅದು ಸೃಜನಶೀಲ ಲೇಖಕನೊಬ್ಬ ಸಮಾಜವಾದಿ ಚಿಂತಕನೂ ಆಗಿ ಮಾಡಿದ ಅಪೂರ್ವ ವಿಶ್ಲೇಷಣೆಯಾಗಿದೆ. ಇಲ್ಲಿನ ಚರ್ಚೆಗಳಲ್ಲಿ ಗತದ ಬಗ್ಗೆ ಕಟುವಿಮರ್ಶೆಯಿದೆ. ವರ್ತಮಾನದ ಬಗ್ಗೆ ಜಾಗೃತ ತಿಳಿವಿದೆ. ಭವಿಷ್ಯದ ಬಗ್ಗೆ ಕನಸಿದೆ. ಈ ಕನಸುಗಳು ವೈಜ್ಞಾನಿಕವಾಗಿ ಚಿಂತನೆ ಮಾಡುವವರ ಕಣ್ಣಲ್ಲಿ ದ್ವಂದ್ವ ಅಥವಾ ಗೊಂದಲ ಅನಿಸಬಹುದು. ಆದರೆ ಇಂತಹ ಕನಸುಗಳನ್ನು ಎಲ್ಲ ಸಮಾಜಗಳಲ್ಲಿ ಲೇಖಕರು ಕಾಣುತ್ತಾರೆ. ಹಾಗೆ ಶುದ್ಧವಾಗಿ ಅವರು ರಾಜಕೀಯ ಜೀವಿಗಳಲ್ಲ. ಯಾಕೆಂದರೆ ಸಮಸ್ಯೆಗಳನ್ನು ಲೇಖಕರು ಕೆಲವೊಮ್ಮೆ ಒಟ್ಟು ಮಾನವ ಜನಾಂಗದ ನೈತಿಕತೆಯ ಪ್ರಶ್ನೆಯನ್ನಾಗಿ ಕೂಡ ನೋಡಬಯಸುತ್ತಾರೆ. ಇದನ್ನು ದೇವನೂರರೂ ಮಾಡುತ್ತಾರೆ. ಇಲ್ಲಿ ಪ್ರಧಾನವಾಗಿ ಕಾಣುವುದು ಸಾಮಾಜಿಕ ಚಳವಳಿಗಳ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವ ಪ್ರಾಮಾಣಿಕತೆ ಪರ್‍ಯಾಯಗಳ ಹುಡುಕಾಟ ಇನ್ನೂ ನಿಂತಿಲ್ಲ ಎಂಬ ಭರವಸೆ.)

‘ದ್ಯಾವನೂರು’ ಸಂಕಲನದ ಕತೆಗಳನ್ನು ಬರೆವಾಗ ಇದ್ದ ಕನ್ನಡ ಸಾಹಿತ್ಯದ ವಾತಾವರಣ ನೆನಪು ಮಾಡಿಕೊಳ್ತೀರಾ?

ನವ್ಯದ ವಾತಾವರಣ ತೀವ್ರವಾಗಿತ್ತು. ಅನಂತಮೂರ್ತಿ ಲಂಕೇಶ್ ತೇಜಸ್ವಿ ಕಂಬಾರ ಮತ್ತು ಅಡಿಗ ಮುಂತಾದವರು, ಸಾಹಿತ್ಯಾನೇ ಜೀವ ಅದೇ ಸರ್ವಸ್ವ ಅಂತ್ಹೇಳಿ ತೊಡಗಿಸಿಕೊಂಡಿದ್ದವರು, ಇದ್ರು. ಈಗ ನಾವು ಸೋಶಿಯಲ್ ಮೂಮೆಂಟ್ಸ್ ಜತೆಗೆ ಇದೂ ಅದೂ ಎರಡೂ ಮಿಕ್ಸ್ ಮಾಡ್ಕೊಳ್ತಾ ಇರ್ತೀವಿ, ಹೌದಲ್ಲ? ಆವಾಗ ಅದೇ ವಿಶ್ವ, ಅದೇ ರಾಜಕೀಯ, ಅದೇ ಬದುಕು, ಅನ್ನೊ ತರದವರು ಸುಮಾರು ಜನ ಇದ್ರು.

ನಿಮಗೆ ‘ಲೋಹಿಯಾವಾದಿ’ ಅಂತ ಗುರುತಿಸ್ತಾರೆ. ಅದನ್ನು ಕೇಳಿದಾಗ ಏನನ್ಸುತ್ತೆ?

ಬರೆವಾಗಂತೂ ವಾದಗೀದ ಇರಲ್ಲ ನನ್ಹತ್ರ. ಉದಾಹರಣೆಗೆ ಹೇಳ್ತೀನಿ. ಕಮ್ಯುನಿಸ್ಟರ ಬಗ್ಗೆ ಸ್ವಲ್ಪ ರಿಸರ್ವೇಶನ್ ಇತ್ತು ನನಗೆ. ಆ ಟೈಮಲ್ಲಿ ಬರೆದದ್ದು ‘ಅಮಾಸ’ ಕತೆ. ಅಲ್ಲಿ ಒಂದು ಕ್ಯಾರಕ್ಟರ್ ಬರ್ತದೆ. ಅವನು ಗ್ಯಾಂಗ್‌ಮನ್ ಸಿದ್ದಪ್ಪ. ‘ಲೋಹಿಯಾ ಸಮಾಜವಾದ ಬರಬೇಕು’ ಅಂತ ಅವನ ಬಾಯಲ್ಲಿ ಬರೋಕೆ ಸಾಧ್ಯವಿಲ್ಲ. ಅಲ್ಲಿ ‘ಕಮ್ಯುನಿಸಂ ಬರಬೇಕು’ ಅಂತಾ ಹೇಳ್ತಾನೆ ಅವನು. ಅಂದ್ರೆ ಆ ತರಹದ ಪ್ರಾಮಾಣಿಕತೆ ನನಗೆ ಇದೆ.

‘ಒಂದು ದಹನದ ಕತೆ’ ‘ದತ್ತ’ ಕತೆಗಳಲ್ಲಿ ಒಂಥರಾ ಅಂತರ್ಮುಖೀ ವಿಕ್ಷಿಪ್ತ ನಾಯಕರ ಲೋಕ ಬರುತ್ತೆ. ಆಮೇಲೆ ‘ಡಾಂಬರು ಬಂದುದು’ ಕತೆಗಳಲ್ಲಿ ಈ ಲೋಕಗಳು ನಾಟಕೀಯ ಅನ್ನೋ ಹಾಗೆ ಬದಲಾಗ್ತವೆ. ಈ ಬದಲಾವಣೆ ಹ್ಯಾಗಾಯ್ತು?

‘ಡಾಂಬರು ಬಂದದು’ ಬರೆಯೊ ಮುನ್ನ ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಬಂದಿತ್ತು. ಅದು ಬಹಳ ಭಿನ್ನವಾಗಿದ್ದ ಕತೆ. ಅದು ಸ್ವಲ್ಪ ಮಟ್ಟಿಗೆ ಕಾರಣವಾಗಿರಬಹುದು ಅನ್ಸುತ್ತೆ. ಮತ್ತೆ ಈಗ್ಲೂನೂ ನನ್ನ ಆ ಎರಡು ಕತೆಗಳ ಬಗ್ಗೆ ಭಾಳ ಬೇಜಾರು ಇದೆ (ನಗು). ಅದೇನು ಮಾಡಕಾಗಲ್ಲ. ಒಂಥರಾ ಪ್ಲಾಟ್ ಮಾಡ್ಕೊಂಡು ಬರೆದ ಕತೆಗಳವು.

ಈಗ ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿ ಸರಿಯಾಗಿ ೨೦ ವರ್ಷ. ಇದನ್ನು ಶುರು ಮಾಡುವಾಗ ನಿಮಗೆ ಯಾವ ಹಂಬಲಗಳಿದ್ದವು?

ವಾಲೀಕಾರ ಅಲ್ಲಿ ನೆಪ ಆದ್ರು. ಆದ್ರೆ ಇದಕ್ಕೆ ಹೆಚ್ಗೆ ರೂಪ ಕೊಟ್ಟೋರು ಡಿ ಆರ್ ನಾಗರಾಜು ಮತ್ತು ಕಾಳೇಗೌಡ ನಾಗವಾರ, ಸಿದ್ಧಲಿಂಗಯ್ಯ ಈಥರದ ಗೆಳೆಯರು. ಅವರ್ದೇನು ಆಸೆ, ನೋವು ಅಸಹಾಯಕತೆ ಈ ತರಹದವಕ್ಕೆಲ್ಲ ಧ್ವನಿಯಾಗಬೇಕು ಅಂತ. ಇದಕ್ಕೆ ನಂದೇನು ಆಕ್ಷೇಪಣೆ ಇರಲಿಲ್ಲ. ಭಾಗವಹಿಸಿದೆ ಅಷ್ಟೆ. ನಾನು ಚಾಲೂ ಮಾಡಿದೋನಲ್ಲ.

ಬಂಡಾಯ ಚಳುವಳಿ ಈಗ ಪಡೆದುಕೊಂಡಿರೊ ರೂಪಕ್ಕೆ ಕಾರಣ ಏನು ಹೇಳಬಹುದು? ಚಳುವಳಿಯ ಒಳಗಿನ ಕಾರಣಗಳೋ ಹೊರಗಿನ ಒತ್ತಡಗಳೊ?

ಹಂಗೆ ತೂಕ ಮಾಡಕ್ಕೆ ಆಗಲ್ಲ ಅನ್ಸುತ್ತೆ. ಸಮಾಜ ಭಾಳ ಮುಖ್ಯ. ಆ ಕಡೇನೂ ನೋಡ್ಬೇಕು ಅನ್ನೊ ಧೋರಣೆ ಕಡೆ ಇದು ಗಮನ ಕೊಡ್ತು. ಅದೇನಾಗುತ್ತೆ ಅಂತಂದ್ರೆ, ಇನ್ನೊಂದ್ ಕಡೆಗೆ ಇಲ್ಲಿ ಬರೀತಾ ಇದ್ರಲ್ಲ ನಮ್ಮಲ್ಲೆ, ಅವರಿಗೆ ಬರವಣಿಗೆ ಎರಡ್ನೇದಾಯ್ತು. ನವ್ಯ ಮೂಮೆಂಟಲ್ಲೆಲ್ಲ ತಾನೂ ತನ್ನ ಬರವಣಿಗೇನೇ ಮೊದಲ್ನೇದು ಉಳಿದಿದ್ದೆಲ್ಲ ಎರಡ್ನೇದು ಅನ್ನೋದಿತ್ತಲ್ಲ. ಅದು ಸ್ವಲ್ಪ ಉಲ್ಟಾ ಆಯ್ತು. ಇಲ್ಲಿ ಸುಮಾರ್ ಜನ ಬರೀಬಹುದಾದೋರು ಹುಟ್ಕಂಡ್ರು. ಆದ್ರೆ ಭಾಳ ದೊಡ್ಡ ಲೇಖಕರು ಬರಲಿಲ್ಲ ಅನ್ಸುತ್ತೆ. ಮತ್ತೆ ಜತೆಗೆ ಬಂಡಾಯ-ದಲಿತ ಚಳವಳಿ, ದೊಡ್ಡ ಲೇಖಕರ ಮೇಲೇನೂ ಪರಿಣಾಮ ಮಾಡಿದೆ. ಹಿಂಗೆ ಯೋಚ್ನೆ ಮಾಡ್ಬೇಕು ಅಷ್ಟೇನೆ.

ಕನ್ನಡ ಸಾಹಿತ್ಯ ಪರಂಪರೇಲಿ ನಿಮ್ಮ ಮೇಲೆ ಪ್ರಭಾವ ಬೀರಿದ ಲೇಖಕರು…

ಬೇಂದ್ರೆ, ಕುವೆಂಪು.

ಯಾಕೆ ಅಂತ ವಿವರಿಸಬಹುದಾ?

ವಿಮರ್ಶೆ ಮಾಡಕ್ಕೆ ನಂಗೆ ಆಗಲ್ಲ. ‘ಮಲೆಗಳಲ್ಲಿ ಮದುಮಗಳು’ ಅದರ ಬಗ್ಗೆ ಸುಮಾರು ಆಕ್ಷೇಪಣೆಗಳು ಬಂದ್ವು. ಅದಕ್ಕೆ ಕೇಂದ್ರ ಇಲ್ಲ, ಮಣ್ಣು ಮಸಿ ಇಲ್ಲ ಅಂತ. ಆದ್ರೆ ಇವತ್ತಿಗೂ ಈಗ ತಾನೇ ಹುಟ್ಟಿದ ಥರ ಇದೆ ಆ ನಾವೆಲ್ಲು. ಆಮ್ಯಾಲೆ, ಈ ನವ್ಯ ಕಾಲದಲ್ಲಿ ಬಂದ್ವಲ್ಲ, ದಿ ಬೆಸ್ಟ್ ಅನ್ನೋ ಹತ್ತು ಕಾದಂಬರಿಗಳನ್ನ ಒಂದು ತಕ್ಕಡೀಲಿಟ್ರೂ, ಇದಕ್ಕೆ ತಡ್ಕಳೋ ಸಾಮರ್ಥ್ಯ ಇದೆ. ಜೊತೆಗೆ ಕುವೆಂಪು ಅವರ ದೃಷ್ಟಿಕೋನ-ದರ್ಶನ ಇದೆಯಲ್ಲ, ಅದು ಜೀವಸಂಕುಲವೇ ಒಂದು ಅನ್ನೊ ಥರದ್ದು… ಮತ್ತು ಬೇಂದ್ರೆ ಪದ್ಯಗಳು… ಪದ್ಯ ಅಂತಂದ್ರೆ ಹೇಳಕ್ಕೆ ಕಷ್ಟ ಅಲ್ವ? ಪದ್ಯ ಅಂದ್ರೆ ಬೇಂದ್ರೆ ಅನ್ನಿಸುತ್ತೆ.

ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ‘ಶೂನ್ಯ ಸಂಪಾದನೆ’ ಬಗ್ಗೆ ನೀವು ತಲೆ ಹಚ್ಚಿಕೊಂಡಿದ್ರಿ? ಯಾಕೆ ಅದು ಮುಖ್ಯ ಅನಿಸ್ತು?

ವಚನ ಆಂದೋಲನ ಇದೆಯಲ್ಲ, ಇಡೀ ಜಗತ್ತಲ್ಲೇ ಹುಡುಕುದ್ರೂ ಸಿಗಲ್ವೇನೋ? ಆ ಥರದ ಒಂದು ಪ್ರಯೋಗ ಕರ್ನಾಟಕದಲ್ಲಿ ಆಗಿದೆ. ಉದಾಹರಣೆಗೆ ಹೇಳ್ತೀನಿ. ಮೊದಲ್ನೇದಾಗಿ ವರ್ಣಕ್ಕೆ ದೊಡ್ಡೇಟು ಕೊಟ್ರು ಅವರು. ಮತ್ತು ಎಲ್ರಿಗೂ ಪ್ರವೇಶ ಇಲ್ದೇ ಇರತಕ್ಕಂಥ ದೇವಸ್ಥಾನ ನಿರಾಕರಿಸಿದ್ರು. ಮತ್ತೆ ಗಂಡು ಹೆಣ್ಣು ಉಂಟಲ್ಲ, ಒಂಥರ ನೋಡಿದ್ರು. ಮತ್ತೆ ಜಾತಿ ಅಂತೂ ಬರಲೇ ಇಲ್ಲ ಅಲ್ಲಿ. ಆಮೇಲೆ ಮೋಕ್ಷಕ್ಕೆ ಕಾಡಿಗೆ ಹೋಗ್ಬೇಕು ತಪಸ್ ಮಾಡ್ಬೇಕು ಆ ಪರಿಕಲ್ಪನೇನೇ ಅವರಲ್ಲಿಲ್ಲ. ಮತ್ತು ಕಾಲ್ದಲ್ಲಿ ಒಳ್ಳೇದೊ ಕೆಟ್ಟದ್ದೊ ಅದಿಲ್ಲ; ಪವಿತ್ರ ಅಪವಿತ್ರ ಅದಿಲ್ಲ; ಸಂಸಾರ ಬಿಡಬೇಕು ಅಂತಿಲ್ಲ. ಸಂಸಾರ ಮಾಡ್ಕಂಡೇ- ಅಥವಾ ಇಬ್ಬರು ಹೆಂಡೀರ ಇಟ್ಕಂಡೇ ಮೋಕ್ಷ ಸಾಧ್ಯ. ಇವೆಲ್ಲ ಸಾಮಾನ್ಯ ಅಲ್ಲ. ಜತೆಗೆ ಕಲೆ ಬಗ್ಗೆ. ಬೇರೆಬೇರೆ ಧರ್ಮಗಳು ಕಲೆ ಒಂಥರ ದಾರಿ ತಪ್ಸದು ಅಂತಿರ್ತವೆ. ವಚನಕಾರರ ಚಿಂತನೆ ಕಾವ್ಯದಲ್ಲಿ ಆಗ್ತದೆ. ಬೌದ್ಧರಲ್ಲೊ ಇಸ್ಲಾಂನಲ್ಲೊ ಈಥರ ಬರೆಯೋದು ಧರ್ಮಕ್ಕೆ ಪೂರಕ ಅಲ್ಲ ಅನ್ನೋ ಭಾವನೆ ಇದೆ. ಇವರಲ್ಲಿಲ್ಲ. ಒಂದಾ ಎರಡಾ? ಈಥರದ್ದು ಹುಡುಗಾಟಾನ? ಸಾಮಾನ್ಯವಾಗಿ ಬೇರೆಬೇರೆ ಧರ್ಮಗಳಲ್ಲಿ ಒಬ್ಬ ಪ್ರವಾದಿ ಇರ್ತಾನೆ. ಅನುಯಾಯಿಗಳಿರ್ತಾರೆ. ಇಲ್ಲಿ ಎಲ್ರೂ ಸಮಾನರು.

ಆದ್ರೂ ಇಡೀ ಚಳುವಳಿಯ ಒಳಗೇನೇ ಅನೇಕ ತಾತ್ವಿಕ ಭಿನ್ನಮತಗಳು ಸಂಘರ್ಷಗಳು ಇದ್ದವು ಅನ್ನೋದು ಮರೆಯೋಕಾಗಲ್ಲ. ಉದಾಹರಣೆಗೆ ಚೆನ್ನಬಸವಣ್ಣ.

ಚೆನ್ನಬಸವಣ್ಣ ಚಿಕ್ಕೋನು ಅವನು. ಕೊನೇಲಿ ಬಂದು ಅದುಕ್ಕೆ ಒಂದು ರೂಪ ಕೊಡಕೆ ಪ್ರಯತ್ನಪಟ್ಟೋನು. ‘ಜಾತಿ ಮದುವೆ ಅನಾಚಾರ’ ಅಂತಾನಲ್ಲ. ಇದೊಂದು ಸಾಕಲ್ವ? ಇರಲಿ, ಅಂಥ ಚಳುವಳೀನ ಈವತ್ಗೂ ನೆನಸ್ಕಳಕೆ ಅಗಲ್ವಲ್ಲ ನಮಗೆ.

ವಚನ ಪರಂಪರೆಯಲ್ಲಿ ಬಸವಣ್ಣನ ಧಾರೆ, ಅಲ್ಲಮನ ಧಾರೆ ಅಂತ ವಿಂಗಡಿಸಿ ನೋಡೋದಾದ್ರೆ, ನಿಮಗೆ ಯಾವ ಧಾರೆಯ ಜತೆ ಗುರ್ತಿಸಿಕೊಬೇಕು ಅನಿಸುತ್ತೆ?

ಇದು ಬಲೇ ಕಷ್ಟ ಆಗುತ್ತೆ. ಮೊದಲ್ನೇದಾಗಿ ಎರಡೂ ಒಟ್ಟಿಗೆ ಹೋಗಬೇಕು ಅಂತ ಆಸೆಪಡಬೇಕು. ನನ್ನ ಆಸೆ ಈವಾಗ ಅಲ್ಲಮ, ಆಯ್ತಾ? ಆದ್ರೆ ಅಲ್ಲಮ ಒಂದು ಸ್ಪಿರಿಟ್ ಥರ. ಗಾಳಿ ಥರ. ಸಮಾಜದ ಮೇಲೆ ಅವನು ಯಾವ ಪರಿಣಾಮ ಮಾಡ್ತಾನೆ? ಯಾರು ಎನ್‌ಲೈಟನ್ಸೊ, ಅವರ ಮೇಲೆ ಪರಿಣಾಮ ಮಾಡ್ತಾನೆ. ಅವನೇನೂ ಕಟ್ಟಲ್ಲ. ಇಲ್ಲಿ ಸಮಾಜದ ಮೇಲೇನೇ ಅಲ್ಲೋಲ ಕಲ್ಲೋಲ ಆಗಬೇಕಲ್ಲ, ಬದಲಾವಣೆಗಳು ಆಗಬೇಕಲ್ಲ, ಅದಕ್ಕೆ ಯಾರ್ ಕಾರಣ? ಇವತ್ತು ನಮಗೆ ಸಂತರ ಜತೆಗೆ ಒಳ್ಳೇ ರಾಜಕಾರಣೀನೂ ಬೇಕು. ಗಾಂಧಿಯಷ್ಟೇ ಅಬ್ರಾಹಿಂ ಲಿಂಕನ್ ಕೂಡ ಬೇಕು. ಗಾಂಧಿಗೆ ಅಬ್ರಾಹಿಂ ಲಿಂಕನ್ ಸಿಕ್ಕಿದ್ರೆ ಬಾಳ ದೊಡ್ಡ ಸಂಗತಿಗಳು ಆಗ್ತಿದ್ವೇನೋ, ಅಲ್ವಾ?

‘ಶೂನ್ಯಸಂಪಾದನೆ’ ಮೇಲೆ ಚರ್ಚೆ ಮಾಡ್ತಾ ಇದ್ದಿರಿ…

ಶೂನ್ಯಸಂಪಾದನೇನ ಮೊದಲು ಸರಳವಾಗ್ ತಗೊಂಡೆ. ಸಾಹಿತ್ಯದ ದೃಷ್ಟಿಯಿಂದ ನೋಡ್‌ಬಿಟ್ಟಿದ್ದೆ. ಏನೋ ಮಾಡಬಹುದು ಅಂತ ಮಾಡ್ದೆ. ಆಮೇಲೆ ಹಂಗಲ್ಲ ಅನಸ್ತು. ಬೇರೆ ಬೇರೆ ಕೆಲ್ಸದಲ್ಲಿ ಸಿಗಹಾಕ್ಕಂಡು ಓದಕ್ಕಾಗ್ಲಿಲ್ಲ.

ಮಂಟೇಸ್ವಾಮಿ ಮಾದೇಶ್ವರ ಕಾವ್ಯಗಳ ಚರ್ಚೆ ಈಗ ಹೆಚ್ಚಾಗಿ ಆಗ್ತಿದೆ. ಈ ಪರಂಪರೆಗಳ ಜತೆ, ಆಧುನಿಕ ಲೇಖಕರ ಸಂಬಂಧ ಯಾವ ತರಹ ಇರಬೇಕು ಅಂತ?

ಇವನ್ನ ವಸ್ತು ಥರ ಬಳಸಬಾರ್ದು. ಸುಮಾರ್ ಜನ ಏನ್ಮಾಡ್ ಬಿಡ್ತಾರೆ, ಒಂದು ಮೆಟೀರಿಯಲ್ ಅಂತ ಭಾವಿಸ್ ಬಿಡ್ತಾರೆ. ಜಾನಪದಾನ ಎಷ್ಟ್ ಜೀರ್ಣಿಸಿಕೊಳ್ಳಕೆ ಸಾಧ್ಯಾನೋ ಅಷ್ಟು ತಗೋಬೇಕು. ತಿಂದ ಆಹಾರ ಆಹಾರವಾಗೇ ಹೋಗಬಾರ್ದು. ರಕ್ತಗತ ಎಷ್ಟು ಸಾಧ್ಯವೊ ಅಷ್ಟನ್ನು ತಗಾಬೇಕು. ಇದೇ ಒಬ್ಬ ರೈಟರ್ ಮಾಡಬಹುದಾದ್ದು.

ಇದೇ ಸೀಮೆಯಲ್ಲಿದ್ದ ಕುವೆಂಪು ಅವರಿಗೆ ಯಾವುದೊ ಚಾರಿತ್ರಿಕ ಕಾರಣಗಳಿಂದಾಗಿ ಈ ಪರಂಪರೆಗಳ ಜತೆ ಸಂಪರ್ಕ ಏರ್ಪಡಲಿಲ್ಲ.

ಅವರಿಗೆ ಕಾದಂಬರಿ ಬರೆಯೊ ಬಗ್ಗೇನೆ ಹೀನ ಭಾವನೆಯಿತ್ತಂತೆ. ‘ಏನಪ್ಪ ಕವಿಗಳೆಲ್ಲ ಇದ್ನ ಮಾಡೋದಾ’ ಅಂತ. ಯಾಕ್ ಟಾಲ್‌ಸ್ಟಾಯ್ ಕಾದಂಬರಿ ಬರದಾ ಅಂತ ಆಮೇಲೆ ಸ್ವಲ್ಪ ಇದಾಗಿ, ಪುಣ್ಯಕ್ಕೆ ತಾವೂ ಬರೆದ್ರು.

ಪಶ್ಚಿಮದಲ್ಲಿ ಯಾವ ಲೇಖಕರು ನಿಮಗೆ ಮುಖ್ಯ ಆದ್ರು?

ಹಾಂ! ಮೊದಲು ಶೇಕ್ಸ್‌ಪಿಯರ್, ಟಾಲ್‌ಸ್ಟಾಯ್. ಅದರ ಬಗ್ಗೆ ಸಂಶಯ ಇಲ್ಲ. ಇತ್ತೀಚೆಗೆ ನಾನು ಮಾರ್ಕ್ವೆಜ್‌ನ ಓದಿದೆ. ಬಹಳ ಗ್ರೇಟ್ ರೈಟರ್ ಅವನು. ಸಿಕ್ಕಾಪಟ್ಟೆ ದೊಡ್ಡ ಲೇಖಕ.

ಭಾರತೀಯ ಲೇಖಕರಲ್ಲಿ..?

ವೈಕಂ ಓದಿದೀನಿ. ಈಗ ‘ಪಾತುಮ್ಮಳ ಆಡು’. ‘ಒಡಲಾಳ’ದಲ್ಲಿ ಅದರ ಇನ್‌ಫುಯೆನ್ಸ್ ಇರಬಹುದು ನನಗೆ. ಪ್ರೇಮಚಂದ್ ಇನ್‌ಫುಯೆನ್ಸ್ ಇರಬಹುದು. ಇನ್‌ಫುಯೆನ್ಸ್ ಹೆಂಗೆ ಅಂತಂದ್ರೆ, ಇನ್‌ಫುಯೆನ್ಸ್ ಅಂತ ಗೊತ್ತಾದ್ರೆ ತಪ್ಪುಸ್ತೀನಿ. ಗೊತ್ತಿಲ್ಲದಲೆ ಬಂದಿರೊ ಸಾಧ್ಯತೆ ಇರ್ತದೆ.

ಮಾರ್ಕ್ವೆಜ್ ಯಾಕೆ ಗ್ರೇಟ್ ಅನಿಸಿದ?

ಹ್ಞೂಂ! (ತುಂಬಾ ಯೋಚಿಸಿ…) ಮೊದಲ್ನೇದಾಗಿ ಸಮುದಾಯದ ಮನಸ್ಸು ಅವನದು. ಆಮೇಲೆ ಅವನಿಗೆ ಪ್ರಸ್ತುತಾನೆ ಕತೆ ಮಾಡೋ ಅಸಾಮಾನ್ಯವಾದ ಕಲೆ ಇದೆ. ಈಗ ಯಾರೋ ಬಂದ್ರು. ನಾವಿಲ್ಲಿ ಭೇಟಿಯಾದೊ. ಈಥರದ್ದು ಒಂದಿದೆ ಅಂತ ಇಟ್ಕೊಳಿ. ಅದನ್ನೇ ಅದ್ಭುತವಾದ ಕತೆ ಮಾಡಿಬಿಡ್ತಾನೆ. ಅಸಾಮಾನ್ಯವಾದ ಗುಣ ಅದು. ಇನ್ನೊಂದು ಪುಸ್ತಕ ಓದಿದೆ ಅವಂದು. ಯಾವ್ದು? ‘ಕ್ರಾನಿಕಲ್ ಆಫ್ ಎ ಡೆತ್ ಪೋರ್ ಟೋಲ್ಡ್’ ಅಂತ. ಅಲ್ಲಿ ಒಬ್ಬ ಯಾವದೊ ಒಂದು ಸಂದರ್ಭದಲ್ಲಿ ಒಬ್ಬನ್ನ ಕೊಲೆ ಮಾಡ್ತೀನಿ ಅಂತ ಡಿಕ್ಲೇರ್ ಮಾಡ್‌ಬಿಡ್ತಾನೆ. ಆದ್ರೆ ಒಳಗಡೇನೇ ಯಾರಾದ್ರೂ ಕೊಲೆ ಮಾಡದನ್ನ ತಪ್ಪಿಸಲಿ ಅಂತ ಬಯಸ್ತಾನೆ. ಎಂಥ ಆಸೆ ಇದು! ಆದ್ರೆ ಯಾರೂ ತಪ್ಪಿಸಲ್ಲ. ಕೊಂದ್‌ಬಿಡ್ತಾನೆ. ಅವನ್ನ ಈ ಥರದವೆಲ್ಲ ಕಾಡೋವಂಥ ಸಂಗತಿಗಳು. ಅಮೇಲೆ ಒಂದೆಲ್ಲೊ ಕೊಲೆ ಆಗುತ್ತೆ. ಅವನ ರಕ್ತ ಹರ್‍ಕಂಡು ಆ ಬೀದಿ ಸುತ್ತಿ ಈ ಬೀದಿ ಸುತ್ತಿ, ಅವನ ತಾಯಿ ಇರ್ತಾಳೆ, ಅಲ್ಹೋಗ್ ನಿಂತ್ ಬಿಡ್ತದೆ. ಆಕ್ಚುವಲಿ ನಾನು ‘ಕುಸುಮಬಾಲೆ’ ಬರೀವಾಗ ಇದನ್ನ ಓದಿರ್ಲಿಲ್ಲ. ನನಗೂ ಈ ಥರದ್ದು ಕಾಡಿದೆ.

‘ಕುಸುಮಬಾಲೆ’ ಬರೀವಾಗ ನಿಮಗೆ ಒಂದು ರಕ್ತದ ಕಲೇನೇ ಪ್ರೇರಣೆ ಕೊಡ್ತು ಅಂತ ಕೇಳಿದೇನೆ..

‘ಕುಸುಮಬಾಲೆ’ ಬರಿಯಕ್ಕೆ ಸ್ವಲ್ಪ ಕಾರಣವಾದ್ದು ಅದೊಂದು. ಕೆಆರ್ ನಗರದ ಹತ್ರ, ಒಂದು ಕೊಲೆ ಆಗ್ಬಿಟ್ಟಿತ್ತು. ಹೋದೊ. ಯಾರೋ ಹೇಳಿದ್ರು: “ಏ, ನಿನ್ನೆ ಬಂದಿದ್ರೆ ರಕ್ತದ ಕಲೆ ಇತ್ತು. ಇವತ್ತು ಅಳ್ಸಿಬಿಟ್ಟಿದೆ” ಅಂತ. ಗೋಡೆಯಿಂದ ಅಳಿಸಿದರೆ ಮನಸ್ಸಲ್ಲಿ ಅಳಿಸಿ ಹೋಗುತ್ತಾ ಅಂತ ಪ್ರಶ್ನೆ ನಿಂತಿತು. ಆಮೇಲೆ ಒಂದು ರಿಚ್ಯುವಲ್ ಇದೆಯಲ್ಲ, ಗೊತ್ತಿತ್ತು. ನೋಡಿರ್ಲಿಲ್ಲ. ಮತ್ತೆ ಈ ಜಾನಪದ ಕತೇದು, ಜೋತಮ್ಮದಿರದು. ಸತ್ಯ ಹೇಳೋದಕ್ಕೆ ಎಂಥಾ ಉಪಾಯ ಅನಿಸ್ತು. ಜಾನಪದ ಕತೆಯಿಂದ್ಲೇ ನೇರ ಉಪಯೋಗಿಸಿಕೊಳ್ಳೋ ಥರ ತಗೊಂಬಿಟ್ಟಿದ್ರೆ, ನನ್ನದು ಜಾನಪದ ಮನಸ್ಸು ಅಲ್ದೇ ಇದ್ರೆ, ಬೇರೆ ಥರ ಆಗ್ತಿತ್ತು ಅದು. ನಾನು ಅದನ್ನ ಸತ್ಯ ಮತ್ತು ಹೇಳೋದಕ್ಕಾಗಿ ಇರೋ ಮಾರ್ಗ ಅಂತ ಭಾವಿಸಿದೆ. ಇವೆಲ್ಲ ಕೂಡ್ಕಂಡಿದ್ದು ಬರೆಯೋಕೆ ಕಾರಣವಾದ್ವು.

ಈಗ ಬರೀತೀರೋ ಕನ್ನಡ ಲೇಖಕರಲ್ಲಿ ಯಾರು ನಿಮ್ಮ ಗಮನ ಸೆಳೀತಿದ್ದಾರೆ…?

ರಶೀದು, ಮೊಗಳ್ಳಿ…

ಲೇಖಕರಾಗಿ ನೀವು ವಿಮರ್ಶೇನ ಹ್ಯಾಗೆ ರಿಸೀವ್ ಮಾಡ್ತೀರಿ?

ವಿಮರ್ಶೆಯ ಪರಿಣಾಮಗಳು ಸುಪ್ತಪ್ರಜ್ಞೆಲಿ ವರ್ಕ್ ಮಾಡಬಹುದೇನೋ? ನನಗೆ ಗೊತ್ತಿಲ್ಲ ಅದು. ಪ್ರಜ್ಞೆಲಂತೂ ಇರೋಲ್ಲ. ಆದ್ರೆ ಒಂದಾಯ್ತು. ‘ಒಡಲಾಳ’ ಓದ್ಬುಟ್ಟು ಡಿಆರ್ ನಾಗರಾಜು ‘ಅರೇಬಿಯದಲ್ಲಿ ಒಂಟೇ ಜೀವನ ಸಿಕ್ಕಾಬಟ್ಟೆ ಇರ್ತದೆ. ಆದ್ರೆ ಒಂಟೆ ವರ್ಣನೆ ಬರಲ್ಲ’ ಅಂತ ಹೇಳ್ದ. ಅಂದ್ರೆ ವರ್ಣನೆ ಮಾಡ್ತಾ ಇದೀಯ, ಅದರರ್ಥ ದೂರ, ಅನ್ನೋ ಥರದಲ್ಲಿ ಆಗೋಯ್ತು. ನನಗೆ ಯಾಕೋ ಸ್ವಲ್ಪ ಹಾಂಟ್ ಮಾಡ್ತು ಅದು. ಈಗ ನಾನು ದಲಿತ್ರು ಕೇರೀನ- ‘ದಲಿತ್ರಕೇರೀನ’ ಅಂತ ಯಾಕ್ ಹೇಳಲಿ. ನಮ್ಮನೇನ- ವರ್ಣನೆ ಮಾಡ್ತಿದ್ರೆ, ದೂರ ಆಗ್ತೀನಿ. ಇದು ಸ್ವಲ್ಪ ಡೈಲಮಾದೊಳಗೆ ಬಿದ್ದೆ. ಅದು ಕುಸುಮಬಾಲೇಲಿ ಕೆಲ್ಸ ಮಾಡಿರಬೌದು.

ಸಾಹಿತ್ಯ ವಿಮರ್ಶೆ ಸೃಜನಶೀಲತೆಯನ್ನು ಬೆಳೆಸೋದಿಲ್ಲ, ಅದಕ್ಕೆ ವಿರೋಧಿ ಅನ್ನೊ ಭಾವನೆ ಕನ್ನಡದಲ್ಲಿದೆ…

ಸಾಹಿತ್ಯ ವಿಮರ್ಶೆ ಅಂತಲ್ಲ, ನಾನು ಹೆಚ್ಗೆ ಸಾಹಿತ್ಯದ ಚಟುವಟಿಕೆಗಳಿಂದಾನೇ ದೂರ ಇರ್ತೀನಿ. ಈ ಸಾಹಿತ್ಯ ಸಮ್ಮೇಳನ ಆಗಿದಾವಲಪ್ಪ, ಒಂದುಕ್ಕೂ ಹೋಗಿಲ್ಲ ನಾನು. ಸಾಮಾನ್ಯವಾಗಿ ಸಾಮಾಜಿಕ ಅಥವಾ ರಾಜಕೀಯ ಅಂದೋಲನಗಳಲ್ಲೇ ಹೆಚ್ಚಾಗಿ ಭಾಗವಹಿಸ್ತಾ ಬಂದೋನು ನಾನು. ಮಧ್ಯ ಮಧ್ಯ ಬರದೋನು. ಮತ್ತೆ ಬೇಕಂತಂದ್ರೆ ಓದ್ಕಳೋ ಸ್ವಭಾವದೋನು.

ನೀವು ಸಾಹಿತ್ಯದ ಆಚೆ ಇರೋ ಚಟುವಟಿಕೆಗಳಲ್ಲೆ ಹೆಚ್ಚಾಗಿ ಭಾಗವಹಿಸ್ತೀನಿ ಅಂತಿದೀರಿ. ಸಾಮಾಜಿಕ-ರಾಜಕೀಯ ಅಂದೋಲನಗಳಲ್ಲಿ ಲೇಖಕರು ಭಾಗವಹಿಸೋದೇನೇ ಸಾಹಿತ್ಯ ಸೃಷ್ಟಿಗೆ ಮಾರಕ ಅನ್ನೋಥರ ಕೆಲವು ಲೇಖಕರು ಮಾತಾಡ್ತಿದ್ದಾರೆ…(ಈ ಪ್ರಶ್ನೆ ಕೇಳುವಾಗ ಕನಕಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಸ್ ಎಲ್ ಭೈರಪ್ಪನವರು ಮಾಡಿದ ಭಾಷಣ ಮನಸ್ಸಿನಲ್ಲಿತ್ತು-ಸಂ)

ತೇಜಸ್ವಿ ಇದಕ್ಕೆ ಚೆನ್ನಾಗಿ ಉತ್ತರ ಕೊಟ್ಟಿದ್ದಾರೆ. ಅದಕ್ಕಿಂತ ಸಮರ್ಥವಾಗಿ ಉತ್ತರ ಕೊಡಕೆ ಆಗಲ್ಲ ನನಗೆ. ಯಜ್ಞ ಯಾಗಾದಿ ತಪಸ್ಸು ಮಾಡ್ಕಂಡಿದ್ರೂ ಬರಿಯಕ್ಕೆ ಆಗ್ದೆ ಇರಬಹುದು. ಪೋಲಿ ತಿರಕ್ಕಂಡು ಇದ್ದವನೇ ದೊಡ್ಡದು ಬರದು ಬಿಡಬಹುದು.

ಇದು ಸೃಷ್ಟಿಕ್ರಿಯೆ ಹೇಗಾಗುತ್ತೆ ಅನ್ನೋ ಚರ್ಚೆಗೆ ಎಳ್ಕಂಡು ಹೋಗುತ್ತೆ.

ಸೃಜನಶೀಲತೆ ಸೃಷ್ಟಿ ಹುಟ್ಟು ಅನ್ನೋದು ಹುಟ್ಸೋನಿಗೇ ಗೊತ್ತಿಲ್ವಲ್ಲ

ಅಲ್ಲ, ಇಂಥ ವಾದಗಳು ಯಾಕಾಗಿ ಹುಟ್ತವೆ ಅಂತ?

ನಿಮಗೇ ಉತ್ತರ ಗೊತ್ತಿದೆ…(ನಗು)

ನೀವೇ ಹೇಳ್ದಂಗೆ ಸಾಮಾಜಿಕ ಆಂದೋಲನಗಳಲ್ಲಿ ನೀವು ಹೆಚ್ಚಾಗಿ ಭಾಗವಹಿಸ್ತಾ ಬಂದಿರೋರು. ದಲಿತರ ಬಗ್ಗೆ ಸಮಾಜದಲ್ಲಿ ಈಚೆಗೆ ಕಾಣ್ತಾ ಇರೋ ಒಂದು ಬಗೆಯ ಅಸಹನೆ ಮನೋಭಾವಕ್ಕೆ ಏನು ಕಾರಣ?

ಡಿಎಸ್‌ಎಸ್ ಅಟ್ರಾಸಿಟೀಸ್‌ಗೆ ಪ್ರತಿಕ್ರಿಯೆ ಮಾಡ್ತಾ ಸಾಂಸ್ಕೃತಿಕವಾದ ಸಂಘಟನೆ ಆಗಿತ್ತಲ್ಲ, ಆವಾಗ ಬೇರೆ ವಾತಾವರಣ ಇತ್ತು. ಇದು ಬೆಳೀತಾ ಬೆಳೀತ ಆಥರದ ಕೆಲ್ಸಗಳಿಂದ ಸ್ವಲ್ಪ ದೂರ ಆಯ್ತು. ಅದೊಂದು ಕಾರಣ ಇರಬಹುದು. ಮತ್ತೆ ಪ್ರತಿಭಟನೆ ಯಾಂತ್ರಿಕ ಆಯ್ತು. ಚಟುವಟಿಕೇನ ರೂಢಿಗಾಗಿ ಮಾಡೋ ಥರ ಆಯ್ತು. ಒಂದು ಸಂಸ್ಥೆ ಥರ ಆಗೋಯ್ದು. ಮತ್ತೆ ಒಡಕುಗಳಾಯ್ತು. ರಾಜಕೀಯ ನಿರ್ಧಾರ ದಕ್ಕಿಸಿಕೊಳ್ಳುವ ಸ್ಥಿತಿ ಬರಲಿಲ್ಲ. ಅವೆಲ್ಲ ಕಾರಣ ಇರಬಹುದೇನೋ. ಮತ್ತೆ ಯಾವುದೇ ಒಂದು ಸಂಘಟನೇನೂ, ಬೆಳೀತಾ ಬೆಳೀತಾ ಅದರದ್ದೇ ಆದ ಪೊರೆ ಕಟ್ಕಳೋದು, ಇವೆಲ್ಲ ಇದ್ದೆ ಇರುತ್ತೆ ಅನ್ಸುತ್ತೆ.

‘ದಲಿತರಿಗೆ ಚಾರಿತ್ರಿಕ ಅನ್ಯಾಯ ಆಗಿದೆ’ ಅನ್ನೋ ಭಾವನೆಯಿಂದ ಮೀಸಲಾತಿಗೆ ಸಮಾಜದಲ್ಲಿ ನೈತಿಕ ಸಮ್ಮತಿ ವ್ಯಾಪಕವಾಗಿ ಇತ್ತು, ೨೦ ವರ್ಷದ ಹಿಂದೆ. ಈಗ ಅದು ಹೊರಟೋಗ್ತಾ ಇರೋ ವಾತಾವರಣ ಕರ್ನಾಟಕದಲ್ಲಿದೆ. ಈ ಇಂಜಿನಿಯರುಗಳ ಬಡ್ತಿ ವಿಷಯ… (ದೇವನೂರರು ಕಳೆದ ವಾರವಷ್ಟೆ, ಇಂಜಿನಿಯರುಗಳಿಗೆ ಬಡ್ತಿ ವಿಷಯದಲ್ಲಿ ಮೀಸಲಾತಿ ಹಿಂತೆಗೆದುಕೊಂಡ ಸರ್ಕಾರದ ಕ್ರಮದ ವಿರುದ್ಧ ರ್‍ಯಾಲಿಯೊಂದರಲ್ಲಿ ಮಾತಾಡಿ ಬಂದಿದ್ದರು-ಸಂ)

ಆವಾಗ ಮೀಸಲಾತಿಗೆ ಅಭ್ಯರ್ಥಿಗಳೇ ಕಮ್ಮಿ ಇದ್ರು. ಮತ್ತು ಹೆಚ್ಚಿಗೆ ಅಸರ್ಟ್ ಮಾಡ್ಕೊಳ್ತಾ ಇರಲಿಲ್ಲ. ಈಗ ಹೋಲಿಸಿದರೆ ಜಾಸ್ತಿ ಇದಾರೆ. ಮೊದಲೇ ಅಸಹನೆ ಇತ್ತಲ್ವ?

ಮೊದಲಾದರೆ ದಲಿತರ ಶತ್ರುಗಳು ಈ ಸಮಾಜದಲ್ಲೇ ಇದಾರೆ ಅನ್ನೊ ತಿಳಿವಳಿಕೆ ಇತ್ತು. ಈಗ ಕಣ್ಣಿಗೆ ಕಾಣಿಸಿಕೊಳ್ಳದ ಶತ್ರುವಾಗಿ ಗ್ಲೋಬಲೈಜೇಶನ್ ಬರ್ತಾ ಇದೆ. ದಲಿತ ಚಳುವಳಿಯ ನಾಯಕರಾಗಿ ನೀವು ಇದನ್ನು ಹೆಂಗೆ ಅರ್ಥ ಮಾಡ್ತೀರಿ?

ನಾವು ಬಯಸೋದೇ ‘ಇಡೀ ಜಗತ್ತು ಒಂದು ಊರಾಗ್ಲಿ. ಇಡೀ ಮನುಷ್ಯರೆಲ್ಲ ಒಬ್ಬನಾಗ್ಲಿ’ ಅಂತ ಆಳದಲ್ಲಿ. ವಿಚಿತ್ರ ಅಂತಂದ್ರೆ, ನಮಗೆ ಬ್ಯಾಡದೇ ಇದ್ದ ಥರದಲ್ಲಿ ಇದು ಬರ್ತಾ ಇದೆ. ‘ಗ್ಲೋಬಲ್ ವಿಲೇಜ್’ ಅಂತೀರಲ್ಲ, ಅದು ಆಗಬೇಕು ಅಂತ್ಲೇ ನಮ್ಮ ಆಸೆ ಇದ್ದದ್ದು. ಆದ್ರೆ ಅದು ಆಗ್ತಾ ಇರೋ ರೀತಿ ಹೆಚ್ಚುಕಮ್ಮಿ ಇದೆಯಲ್ಲ? ‘ಇಡೀ ಜಗತ್ತಿನ ಕಾರ್ಮಿಕರೇ ಒಂದಾಗಿ’ ಅಂದ್ರೆ ಏನರ್ಥ? ದೇಶಾನ ಜಾತೀನ ಧರ್ಮಾನ ಇವೆಲ್ಲ ಬಿಟ್‌ಬಿಡೋಣ ಅಂತಲ್ವ? ಆ ಥರಾದ್ದು ಆಗ್ತಾ ಇದೆ. ಆದ್ರೆ ನಮಗೆ ಬೇಕಾದ ಥರ ಆಗ್ತಿಲ್ಲ. ಅಂದ್ರೆ ಸಮಾನತೆ ಮೌಲ್ಯ ಇಟ್ಕೊಂಡು ಆಗ್ತಾ ಇಲ್ಲ ಅನ್ಸುತ್ತೆ. ಎಕ್ಸ್‌ಪ್ಲಾಯ್‌ಟೇಶನ್‌ಗಾಗಿ ಆಗ್ತಾ ಇದೆ ಅದು. ವಿಚಿತ್ರ ಅಂತಂದ್ರೆ ಶೋಷಣೇನೇ ನಮಗೆ ಬೇಕಾದನ್ನ ಮಾಡ್ತಾ ಇದೆ. ಎಕ್ಸ್‌ಪ್ಲಾಯ್‌ಟೇಶನ್ ಒಂದ್ ಇಲ್ದಿದ್ರೆ, ಇಡೀ ಜಗತ್ತು ಒಂದು ಊರಾಗೋದನ್ನ ನಾವು ಒಪ್ಕತಿದ್ವೊ.

‘ಕುಸುಮಬಾಲೆ’ಯ ಚೆನ್ನನ್ನ ಯಾರು ಕೊಲೆ ಮಾಡಿದ್ರು ಅನ್ನೋದಾದ್ರು ಗೊತ್ತಾಗುತ್ತೆ. ಇದು ಮಾಡೋ ಕೊಲೇನೇ ಗೊತ್ತಾಗಲ್ಲ ಅನ್ನೋ ತರಹ ಇದೆ. ಪ್ರತಿರೋಧ ಹ್ಯಾಗೆ ಮಾಡಬಹುದು?

ಬಹಳ ಕಷ್ಟ ಇದು. (ನಿಡಿದಾದ ಉಸಿರು ಬಿಟ್ಟು) ನಮ್ಮ ಹಳ್ಳಿಗಳ ಸ್ಥಿತಿ ಏನಾಗುತ್ತೆ ಅನ್ನೋದರ ಮೇಲೆ ನಿರ್ಧಾರ ಮಾಡ್ಬೇಕು. ಜತೆಗೆ ಬುದ್ಧ ಗಾಂಧಿ ಈ ಥರದವರು ಈಗ ಉತ್ತರ ಆಗಬಹುದು. ನಮಗೆ ಬ್ಯಾಡಾದದ್ದನ್ನ ನಿರಾಕರಿಸೋದೇ ಉಳಿದ ದಾರಿಯಾಗಬಹುದು. ಈಗ ಅಣ್ಣಾಹಜಾರೆ ಊರು. ಇಷ್ಟೆಲ್ಲ ಇದ್ದು, ಕನಿಷ್ಠ ಒಂದೂರು ತನ್ನಷ್ಟಕ್ಕೆ ತಾನೇ ಅದ್ಭುತವಾಗಿ ಸ್ವರ್ಗ ಆಯ್ತಾ?

ಈ ಥರದ ಬದಲಾವಣೇನ ಈಗ ಪರ್ಯಾಯ ಅಂತ ಫೀಲ್ ಮಾಡಬಹುದಾ? ಅಂದ್ರೆ ಪ್ರತಿಯೊಂದು ಊರಲ್ಲೂ ಒಬ್ಬೊಬ್ಬ ಅಣ್ಣಾಹಜಾರೆ…

ಬೇಕು.

ಅಂದ್ರೆ ಇದು, ಒಬ್ಬ ನಾಯಕ ಬಂದಾಗ ಮಾತ್ರ ಸಮುದಾಯಗಳಿಗೆ ಮುಕ್ತಿ ಅನ್ನೋಥರ ಆಗಲ್ವ? ಇದು ಸಾಧ್ಯಾನಾ?

ಸಾಧ್ಯಾನೋ ಅಸಾಧ್ಯಾನೋ ಅದುನ್ನ ಹೇಳ್ತಾಯಿಲ್ಲ. ಯಾವುದನ್ನ ಬರತಾ ಇರೋ ದೊಡ್ಡ ಅಪಾಯ ಅಂತ ಹೇಳಿದ್ರಿ, ಅದುನ್ನ ಎದುರಿಸೋದಕ್ಕೆ ಇಂತವರಿಂದ ಸಾಧ್ಯ ಅಂತ ಹೇಳ್ತಾ ಇರೋದು. ಇನ್ನೂ ಬೇರೆ ಉಪಾಯಗಳಿರಬೌದು. ನನಗೆ ಗೊತ್ತಿಲ್ಲ.

ನಾವು ಈಗ ಎದುರಿಸ್ತಿರೋ ಎರಡನೇ ದೊಡ್ಡ ಆತಂಕ ಕೋಮುವಾದದ್ದು.

ಇಂಡಿಯಾದಲ್ಲಿ ಧರ್ಮಕ್ಕಿಂತಲೂನೂ ಬಲಿಷ್ಠವಾದ ಕಟ್ಟುಕಟ್ಟಳೆ ಇರೋದು ಜಾತೀಗೆ. ಮುಸ್ಲಿಮರಲ್ಲಿ ಕ್ರಿಶ್ಚಿಯನ್ನರಲ್ಲಿ ಇದು ಬೇರೆ ತರಹ ಇರಬಹುದು. ಅವರನ್ನ ಬಿಟ್ರೆ ಉಳಿದವರಲ್ಲಿ ಬಿಗಿಭದ್ರತೆ ಇರೋದು ಜಾತಿಗೇನೇ. ಕೆಲವು ಸಂದರ್ಭಗಳಲ್ಲಿ ಅದು ಒಟ್ಟಾಗಬಹುದೇ ಹೊರತು ಮತ್ತೆ ಯಾವ ಕಾರಣಕ್ಕೂ ಒಟ್ಟಾಗಕೆ ಸಾಧ್ಯವಿಲ್ಲ. ಈಗ ಪ್ರತಿ ಜಾತೀನೂ ಒಂದೊಂದ್ ಮಠ ಮಾಡ್ಕಂಡ್ ಬೇರೆ ಆಗ್ತಾ ಇದಾವೆ. ಈಗ ಕಮ್ಯುನಲಿಸಂ ಹರಡ್ತಾ ಇರೋದು. ಏನ್ಮಾಡ್ತಾ ಇದಾರೆ? ಧರ್ಮವನ್ನ ಶಿವಾಜಿ ಕಾಲಕ್ಕೆ ತಗಂಡ್ಹೋಗಿ ನಿಲಿಸ್ತಾ ಇದಾರೆ. ಹಂಗ್ ನೋಡಕೆ ಹೋದ್ರೆ ಧರ್ಮಗಳ ಪ್ರಯೋಗಶಾಲೆ ಇಂಡಿಯಾ. ಎಲ್ಲಾ ಒಂದೇ ಅನ್ನೋ ಥರದ ಧರ್ಮ ಇಲ್ಲ. ಅದಕ್ಕೆ ಈ ಜಾತಿಗಳಿಗೇನೇ ಧರ್ಮದ ಸ್ವೇಚರ್ ಕೊಟ್ಟು ವರ್ಕ್‌ಔಟ್ ಮಾಡಿದ್ರೆ, ಬಹುಸಂಖ್ಯಾತ ‘ಹಿಂದೂ’ ಅಂತಂದ್‌ಬುಟ್ಟು ಮೈಮೇಲೆ ಬೀಳ್ತಾ ಇದೆಯಲ್ಲ, ಅದು ತಪ್ಪಬೌದಾ? ಜಾತಿ ಅನ್ನೋದು ಶ್ರೇಣೀನೇ. ಹೌದಾ? ಆದ್ರೆ ಒಂದು ಜಾತಿ ‘ನಂದೇ ಬೇರೆ ಧರ್ಮಾನಪ್ಪ’ ಅಂತಂದಾಗ, ‘ಏ ನಿನ್ನ ಧರ್ಮ ನೀನಟ್ಕಳಯ್ಯ. ನನ್ ಧರ್ಮ ನಾನಿಟ್ಕಳ್ತೀನಿ. ನಿನ್ ಕಾಲ ಈಗಿದೆಯಪ್ಪ ನಡಸು. ನನ್ ಕಾಲ ಒಂದಿದೆ, ಆದೂ ಬರುತ್ತೆ ಅಂತ ತಿಳ್ಕೋ’ – ಇದೇನಾದ್ರೂ ಕೆಲ್ಸ ಮಾಡಬಹುದಾ ಅಂತ ಯೋಚ್ನೆ ಮಾಡ್ತಾ ಇದೀನಿ. ಇನ್ನೊಂದ್ ವಿಷಯ ಅಂದ್ರೆ, ಯಾರೋ ಹಿಂದು ಧರ್ಮದ ಸೆಕ್ಟಿಗೆ ಸೇರದವರು, ಶೆಡ್ಯೂಲ್ ಕ್ಯಾಸ್ಟಿನ ಲಿಸ್ಟಿಗೆ ಬರೋದು, ಅವರೇನೋ ಮಠ ಮಾಡ್ಬೇಕು ಅಂತಿದ್ರಂತೆ. ಸೋ, ಈಗ ಕೇರಳದಲ್ಲಿ ನಾರಾಯಣಗುರು ತರಹದವರು ಇಲ್ದೇ ಇದ್ರೆ, ಇಡೀ ಎಳವ ಜನಾಂಗ ತನ್ನಷ್ಟಕ್ಕೆ ತಾನೇ ಏನಾಗ್ತಾ ಇರ್ಲಿಲ್ಲ. ಈ ಥರದ್ದು ಆದಾಗ ಹಿಂದೂ ವರ್ಸಸ್ ಮುಸ್ಲಿಂ ಅನ್ನೋದು ಇದೆಯಲ್ಲ, ಅದನ್ನು ತಪ್ಪಿಸೋಕೆ ಸಾಧ್ಯ ಆಗಬಹುದಾ ಅಂತ ಯೋಚ್ನೆ ಮಾಡ್ತಿದೀನಿ ಮೊನ್ನೆಯಿಂದ. ಅಂತಂದ್ರೆ ಮೀಸಲಾತಿ ಸಭೆಗೆ ಹೋಗಿದ್ನಲ್ಲ, ಆವಾಗ್ಲಿಂದ.

ಅಲ್ಲ ಈಗ ಜಾತಿಗಳು ಉಪಜಾತಿಗಳು ಮಠದ ಹೆಸರಲ್ಲಿ ಒಂದಾಗ್ತ ಇದಾವಲ್ಲ, ಅವು ಇಡಿ ಸಮಾಜದ ಅಸಹಾಯಕರ ಬಗ್ಗೆ ಇರಲಿ, ತಂತಮ್ಮ ಜಾತಿಗಳ ಒಳಗಿರೊ ಬಡವರ ಅಸಹಾಯಕರ ಬಗ್ಗೇನಾದ್ರೂ ಕಾಳಜಿ ಮಾಡ್ತಿದಾವೆ ಅನ್ಸುತ್ತಾ?

ಇಲ್ಲಾ, ಒಂದಾಗುತ್ತೆ. ಒಂದ್ ಜಾತಿ ಅಂದ್ರೆ ಸ್ವಲ್ಪಕಾಲದವರೆಗೂ ಒಂದ್ ಫ್ಯಾಮಿಲಿ ಅನ್ನೋ ಭಾವನೆ ಬರುತ್ತೆ. ಅಸಹಾಯಕನಿಗೆ ಸಹಾಯ ಮಾಡಬೇಕಪ್ಪ ಅನ್ನೊ ಎಲಿಮೆಂಟ್ ಇರುತ್ತೆ. ಇದನ್ನು ನಾವು ನಮ್ಮ ಫಿಕ್ಸಡ್ ಐಡಿಯಾಲಜೀಲಿ ನೋಡೋದು ಬ್ಯಾಡ. ಇದರಲ್ಲೂ ನನಗೆ ಭಾಳ ಅನುಮಾನ ಇದೆ. ಒಂದಾಗುತ್ತೆ. ಒಬ್ಬ ಒಂದು ವ್ಯಕ್ತಿತ್ವದಲ್ಲಿ ಮಿತಿಮೀರಿ ಒಳ್ಳೇದು ಕೆಟ್ಟದ್ದು ನೋಡ್ತಾ ಇದ್ನಲ್ಲ, ಆ ಎಲಿಮೆಂಟ್ ಹೊರಟ್ಹೋಗಿ ಬಿಡಬಹುದಿತ್ತು. ನ್ಯಾಯಾನಿಷ್ಠೆ ಈ ಥರದ ವ್ಯಾಲ್ಯೂಸನ್ನ ಒಕ್ಕಲಿಗರಲ್ಲಿ ಜಾಸ್ತಿ ಕಾಣಬಹುದಿತ್ತು. ಈಗ ಮಠ ಅದ್ಮೇಲೆ ಕಮ್ಮಿ ಆಗಿದೆ. ಲಿಂಗಾಯತರಲ್ಲಿ ಸ್ವಲ್ಪ ಕಮ್ಮಿ ಇದು. ಒಂಥರ ವ್ಯಕ್ತಿ ಹೋಗಿ ಜಾತಿಥರ ಆಗಿಬಿಟ್ಟಿದೆ. ಈ ಥರದವೆಲ್ಲ ಸಮಸ್ಯೆಗಳಿದಾವೆ. ಹೆಂಗ್ ಬಗೆಹರಿಸ್ತೀರಿ ಇದನ್ನ? ಒಟ್ನಲ್ಲಿ ದಿಕ್ಕಾಣದ ಸ್ಥಿತೀನಪ್ಪ, ಅಷ್ಟೇನೆ.

ಈಗ ಜಾತಿಗಳೆಲ್ಲ ತಂತಮ್ಮ ಜನಸಂಖ್ಯೆಗೆ ಅನುಸಾರವಾದ ಪಾಲು ಕೇಳ್ತಾ ಇವೆ. ಇವು ಆಯಾ ಜಾತಿಗಳ ಒಳಗಿನ ಕ್ರೀಮೀ ಲೇಯರ್ ಅಂತೀವಲ್ಲ, ಅದರ ಹಿತಾಸಕ್ತಿನೇ ಪ್ರತಿನಿಧಿಸ್ತಾ ಇವೆ ಅಲ್ವಾ?

ಈಗ ಇಂಜಿನಿಯರ್‌ಗಳದ್ದು, ಬಡ್ತಿ ವಿಷಯದಲ್ಲಿ ಗಲಾಟೆ ನಡೀತಾ ಇದೆ. ಹತ್ತೂವರೆ ಸಾವಿರ ಜನ ಜೂನಿಯರ್ ಮತ್ತು ಸಹಾಯಕ ಇಂಜಿನಿಯರ್‌ಗಳು ಇದಾರೆ. ಇದ್ರಲ್ಲಿ ೫೦೦ ಜನಾನೂವೆ ಶೆಡ್ಯೂಲ್ ಕ್ಯಾಸ್ಟಿನವರಿಲ್ಲ. ಆಯ್ತಪ್ಪಾ, ಕ್ರೀಮಿ ಲೇಯರ್ ಅಂತ ಹೇಳ್ತೀರಲ್ಲ, ಅವರಾದ್ರೂ ಇರಬೇಕಾ? ಇಲ್ಲ.

ಅಲ್ಲ ಮಹಾದೇವ, ಶಿಕ್ಷಣ, ನೌಕರಿ, ಬಡ್ತಿಗಳಲ್ಲಿ ಸರ್ಕಾರಗಳು ತಾಯಿಥರ ತನ್ನ ಮಕ್ಕಳಿಗೆ ಪಾಲನ್ನು ಹಂಚಿಕೊಡಬೇಕು. ನ್ಯಾಚುರಲ್ ಜಸ್ಟೀಸ್ ಕೊಡಬೇಕು ಅಂತ ನಿರೀಕ್ಷೆ ಮಾಡ್ತಾ ಇದ್ವಲ್ಲ, ಅಂಥ ನಿರೀಕ್ಷೇನೂ ಇಲ್ಲವಾಗಿಸೋ ಹಾಗೆ ಈ ಗ್ಲೋಬಲೈಜೇಶನ್ ಸರ್ಕಾರಗಳನ್ನು ತನ್ನ ತೊತ್ತುಗಳಾಗಿ ಮಾಡ್ತಾ ಇದೆ. ಇಂತಹ ಸಂದರ್ಭ ಇರುವಾಗ, ಸಾಮಾಜಿಕ ನ್ಯಾಯದ ಚಳುವಳಿಗಳು ತಮ್ಮ ಯುದ್ಧತಂತ್ರ ಬದಲಿಸಿಕೊಳ್ಳೋ ಅಗತ್ಯ ಇಲ್ವ?

ಮುಂದೆ ಯಾರಿಗೂ ಉದ್ಯೋಗಾನೇ ಸಿಗದ ಪರಿಸ್ಥಿತಿ ಬರಬಹುದು. ಅದು ಬೇರೆ ವಿಚಾರ. ಇಲ್ಲಿ ವಾಸ್ತವಕ್ಕೆ ಬರೋಣ. ಹಿಂದೆ ಮೇಲುಕೀಳು ಒಪ್ಪಿಕೊಂಡ ನಮ್ಮ ಶ್ರೇಣೀಕರಣದ ಸಮಾಜದಲ್ಲಿ ಇಂತಿಂಥ ಜಾತೀಗೆ ಇಂತಿಂಥದು ಅಂತ ಇತ್ತು. ಯಾರೋ ಒಬ್ಬ ರಾಜ ಆಳ್ತಾ ಇದ್ದ. ಪ್ರತಿಭಟನೆ ಇಲ್ಲದ ಸಮಾಜದಲ್ಲಿ ಆಳ್ವಿಕೆ ನಡೆಸುವುದು ಸಮಸ್ಯೆ ಅಲ್ಲ. ಇಲ್ಲಿ ಆಳ್ಬೇಕು ಅಂತಂದ್ರೆ ತಮ್ಮ ಜಾತಿ ತಮ್ಮ ಪ್ರದೇಶ ಇವುಗಳನ್ನ ಮೀರಿ ಆಳಬೇಕಾಯ್ತದೆ. ಸಮಾನತೆ, ನ್ಯಾಯವಂತಿಕೆ ಬೇಕು. ಅದಿಲ್ಲ. ಚರ್ಚಿಲ್ ಸರಿಯಾಗಿ ಹೇಳಿದ ಅನ್ಸುತ್ತೆ. ‘ಇನ್ನೂ ಪಕ್ವತೆ ಇಲ್ಲ ಇವರಿಗೆ, ಆಳೋಕೆ’ ಅಂತ. ಬೇರೆ ದೇಶದಲ್ಲಿ ಮೀಸಲಾತಿ ಇದ್ರೆ, ಆಯಾ ಕ್ಯಾಂಡಿಡೇಟ್ ಹುಡಕಕ್ಕಾಗಿ ಸಾವಿರಾರು ಡಾಲರ್ ಖರ್ಚು ಮಾಡ್ತಾರಂತೆ -ಗಿರಿಯವರು (‘ಗತಿಸ್ಥಿತಿ’ ಕಾದಂಬರಿ ಬರೆದ ಲೇಖಕ-ಸಂ) ಹೇಳ್ತಾ ಇದ್ರು ಮೊನ್ನೆ. ಇಲ್ಲಿ ಮೀಸಲಾತಿ ತಪ್ನ್ಸೋದು ಹೆಂಗೆ ಅಂತ, ಅದಕ್ಕಾಗಿ ಸ್ವಂತ ದುಡ್ಡು ಖರ್ಚು ಮಾಡೋದಕ್ಕೂ ರೆಡಿ. ಮತ್ತೆ ಅದನ್ನ ಬುದ್ಧಿವಂತಿಕೆ ಪ್ರತಿಭೆ ಅಂತಾರೆ. ಇದನ್ನೇ ಮಾತಾಡ್ದೆ ಅಲ್ಲಿ, ಮೀಸಲಾತಿ ರ್‍ಯಾಲೀಲಿ. ಆಮೇಲೆ ೮೨ ಪರ್ಸಂಟ್ ಅಂತ ಮಾಡಿದ್ರು. ಅಂದ್ರೆ ದಲಿತರನ್ನ ಇನ್ನೂ ಪ್ರತ್ಯೇಕ ಮಾಡ್ಸದು. ಇನ್ನೊಂದು ೨೩ ಕೊಡಬೇಕು. ಅದನ್ನ ಮರಸೋದು. ಆಮೇಲೆ ೫೦ ಭಾಗ ಇದಾರೆ -ಹಿಂದುಳಿದವರು ಅಲ್ಪಸಂಖ್ಯಾತರು. ಅವರಿರೋದು ಉದ್ಯೋಗದಲ್ಲಿ ಹತ್ತೇ ಭಾಗ. ಅದುನ್ನ ಮರಸೋದು. ಈ ಥರದ ಪರಿಸ್ಥಿತೀನಲ್ಲಿ ಏನ್ ಮಾತಾಡದು?

ಪ್ರಭುತ್ವ ಇದೆಯಲ್ಲ, ಅದು ಈ ವಿಷಯದಲ್ಲಿ ಹೆಂಗ್ ಯೋಚ್ನೆ ಮಾಡ್ತಿದೆ?

ಚುನಾವಣೆ ಒತ್ತಡ.

ಕೊನೇ ಪಕ್ಷ ಕೆಲವು ವರ್ಷ ಹಿಂದೆ ಪ್ರಭುತ್ವ, ಮೀಸಲಾತಿ ಒದಗಿಸೋದು ತನ್ನ ಹೊಣೆಗಾರಿಕೆ ಅಂತ ಫೀಲ್ ಮಾಡ್ತಿತ್ತು. ಈಗ…

ಇಲ್ಲ. ಈಗ ಒಂಥರ ಹಂಚಿಕೊಳ್ಳೋ ಪ್ರವೃತ್ತಿ ಇಲ್ಲ. ದೋಚಿಕೊಳ್ಳೋ ಪ್ರವೃತ್ತಿ ಆಗಿಬಿಟ್ಟಿದೆ. ಇದು ಗ್ಲೋಬಲೈಜೇಶನ್ ಪ್ರವೃತ್ತಿ ಇರಬಹುದು. ಈ ಜಾನಪದ ಕತೆಗಳಲ್ಲಿ ಒಬ್ಬ ಕುಂಟ ಗೆದ್ದುಬಿಡ್ತಾನೆ. ಅವನ ತಂಗೀನ ಯಾರೋ ರಾಕ್ಷಸ ತಗೊಂಡ್ ಹೋಗಿರತಾನೆ. ಅಣ್ತಮ್‌ದೀರೆಲ್ಲ ಏಳ್ ಜನ ಇರತಾರೆ. ಇವು ‘ನಾನು ಬರ್ತೀನ್ ಕಣಣ್ಣ’ ಅಂತಾನೆ. ‘ಬ್ಯಾಡಬ್ಯಾಡ ಹೋಗು. ನೀನು ಕುಂಟ’ ಅಂತಿರ್ತಾರೆ. ಅವರೆಲ್ಲ ಹೋಗಿ ಸೋತ್ ಬಂದ್ರೆ, ಇವನೊಬ್ಬ ಹೋಗಿ ಗೆದ್ ಬಂದ್ಬಿಡ್ತಾನೆ. ಆಯ್ತಾ? ಅಥವಾ ಒಬ್ಬ ಪೆದ್ದ. ಅವನೂ ಉಳೀಬೇಕು. ಆಥರ ಮನಸ್ಥಿತಿ ಇತ್ತು. ಮತ್ತೆ ಅಸಹಾಯಕರನ್ನ ಒಂದ್ ಸ್ವಲ್ಪ ಚೆನ್ನಾಗಿ ನೋಡ್ಕಬೇಕು ಅನ್ನೋ ಮನಸ್ಥಿತಿ, ಜಾನಪದ ಕತೆಗಳಲ್ಲಿ ಸಿಕ್ಕಾಬಟ್ಟೆ ಸಿಕ್ತದೆ. ಯಾರೋ ಒಬ್ಬ ಬಡವಿ. ಅವಳನ್ನ ಸಾಯಕ್ ಬಿಡ್ತಿರಲಿಲ್ಲ. ಇಲ್ಲೇನಾಗ್ತಿದೆ? ಅದಿಲ್ಲ. ಅದು ಹೊರಟು ಹೋಗ್ ಬಿಟ್ಟಿದೆ. ನಾವು ಏನ್ಮಾಡಕಾಯ್ತದೆ? ಈಗ ಇದು ಬಗೆಹರಿಯತ್ತೊ ಇಲ್ಲವೊ. ‘ರಾಜಕೀಯದಾಗೇ ಬಗೆಹರಿಸ್ಕೋ ಬೇಕಪ್ಪ. ಹೋರಾಟ ಸಂಘಟನೆಯಿಂದ ಸಾಧ್ಯವಿಲ್ಲ’ ಅನ್ನೋ ಅಸಹಾಯಕತೆ ಬರ್ತದೆ. ಈಗ ಪಟೇಲರು. ತುಂಬ ಇಷ್ಟ ಅವರು ನನಗೆ. ಸಮಾಜವಾದಿ. ವೈಯಕ್ತಿಕವಾಗಿ ಜಾತಿ ಇಲ್ಲ ಅವರಿಗೆ. ಆಯ್ತಾ? ಸಿಕ್ಕಾಬಟ್ಟೆ ಒಳ್ಳೆಯವರು. ಇಷ್ಟಿದ್ರೂನೂ ಏನೂ ಮಾಡಕ್ಕಾಗ್ಲಿಲ್ಲ ಅಂತಂದ್ರೆ ನನಗೆ ಗಾಬರಿ ಆಗೋಯ್ತದೆ. ಬುದ್ಧಿ, ಒಳ್ಳೆತನ, ಜಾತ್ಯತೀತತೆ, ಪ್ರತಿಭೆ ಎಲ್ಲಾ ಇದ್ದೂ ಪ್ರಯೋಜನ ಇಲ್ಲ ಅಂತಾದರೆ ಎಂಥಾ ದುರಂತ? ಬ್ಯಾಡಪ್ಪ. ಇವೆಲ್ಲ ಬ್ಯಾಡವೇ ಬ್ಯಾಡ. ಪಾರ್ಲಿಮೆಂಟಲ್ಲಿ ಕನ್ನಡದಲ್ಲಿ ಮೊದಲು ಮಾತಾಡಿದವರು ಅವರು. ಹೌದಾ? ಅಂಥವರೇ ಇಲ್ಲಿ ಕನಿಷ್ಠ ಎಸ್ಸೆಸ್ಸೆಲ್ಸಿವರೆಗೆ ಮಾತೃಭಾಷೇಲಿ ಶಿಕ್ಷಣ ಮಾಧ್ಯಮ ಮಾಡಲಿಲ್ಲ ಅಂತಂದ್ರೆ ಏನ್ಹೇಳದು? ಇವತ್ತು ಏನಾಗಿದೆ ಅಂತಂದ್ರೆ, ಎಲ್ರೂ ಸಣ್ಣವರಾಗಿ ಬಿಟ್ಟಿದೀವಿ.

ಈಗ ಕನ್ನಡದ ಪ್ರಶ್ನೇನೊ, ಮೀಸಲಾತಿ ಪ್ರಶ್ನೇನೊ ತಗಳ್ಳಿ. ಇದನ್ನೆಲ್ಲ ಸರಿ ಮಾಡೋದು ಯಾವುದೋ ಒಬ್ಬ ವ್ಯಕ್ತಿಯ ವಿಲ್ ಪವರ್‌ನಲ್ಲಿದೆ ಅಂತ ಅನ್ಸುತ್ತಾ?

ಅಲ್ಲಾರಿ. ಈ ರಾಜಕಾರಣಿಗಳು ತಮ್ ತಮ್ಮೊಳಗೆ ಎಷ್ಟ್ ಜಗಳ ಮಾಡ್ತಾರೆ? ಈ ಇಶ್ಯೂಗಳ ಒಟ್ಟಿಗೆ ಜಗಳ ಮಾಡ್ಲಿ. ಲ್ಯಾಂಡ್ ಸೀಲಿಂಗ್ ಆಕ್ಟ್ ತಂದು ನಿಷ್ಠುರ ಕಟ್ಕೊಳ್ಳಿ. ಎಸ್ಸೆಸ್ಸೆಲ್ಸಿವರೆಗೆ ಮಾತೃಭಾಷೇಲಿ ಶಿಕ್ಷಣ ಅಂತ ಮಾಡಿ ನಿಷ್ಠುರ ಕಟ್ಕೊಳ್ಳಿ. ಈ ಕಾರಣಗಳಿಗಾಗಿ ಬಿದ್ರೂ ಸಂತೋಷ ಅಂತ ಯಾಕೆ ಅನ್ಕೋಳಲ್ಲ?

ಮಾತೃಭಾಷೆ ಅಥವಾ ಮೀಸಲಾತಿ ವಿಷಯ ಇರಬಹುದು. ಸಮುದಾಯಗಳ ಹಕ್ಕಿನ ವಿಷಯದಲ್ಲಿ ಜವಾಬ್ದಾರಿ ಸರ್ಕಾರಗಳು ಬೇಜವಾಬ್ದಾರಿಗಳಾಗಿವೆ ಅಂತ ಆಯ್ತಲ್ಲ. ಈ ಬಿಕ್ಕಟ್ಟನ ಮೀರೋಕೆ ಯಾವುದು ಹಾದಿ?

ತಿಳೀದು. ಸಾವಿರಾರು ಪ್ರಯೋಗಗಳು ಆಗಬೇಕಾಗುತ್ತೆ. ಅಥವಾ ರೂಢಿ ಬಿಟ್ಟು ಸುತ್ತಲನ್ನು ಹೊಸತು ಎಂಬಂತೆ ನೋಡಬೇಕೇನೊ?

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *