
ಜಿಲ್ಲೆಯ ಕೋವಿಡ್ ನಿರ್ವಹಣೆ ಅದಕ್ಕೆ ಅವಶ್ಯವಿರುವ ಸಹಕಾರ ನೀಡುವ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ಪರಿಶೀಲನೆ ನಡೆಸಿದ್ದು ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತಕ್ಕೆ ಈ ಬಗ್ಗೆ ಮಾಹಿತಿ ನೀಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಹೇಳಿದ್ದಾರೆ. ಸಿದ್ದಾಪುರದಲ್ಲಿ ಸರ್ಕಾರಿ ಆಸ್ಫತ್ರೆ ಭೇಟಿ ಮಾಡಿದ ಅವರು ವೈದ್ಯರು, ತಾಲೂಕಾ ಆಡಳಿತದ ಜೊತೆಗೆ ಚರ್ಚೆ ನಡೆಸಿದ ನಂತರ ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ಈ ವಿಷಯ ತಿಳಿಸಿದರು.
ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೋವಿಡ್ ನಿಯಂತ್ರಣ ಸಾಧ್ಯವಾಗಿಲ್ಲ, ಪೊಲೀಸರು ಸೇರಿದಂತೆ ಕರೋನಾ ಸೇನಾನಿಗಳಾಗಿ ಕೆಲಸ ಮಾಡುತ್ತಿದ್ದವರಿಗೇ ಕೋವಿಡ್ ಸೋಂಕು ತಗುಲಿದೆ. ಪೊಲೀಸರಲ್ಲಿ 38 ಜನರಿಗೆ ಕೋವಿಡ್ ದೃಢವಾಗಿತ್ತು ಅವರಲ್ಲಿ ಬಹುತೇಕರು ಗುಣಮುಖರಾಗಿದ್ದಾರೆ. ಜಿಲ್ಲಾಡಳಿತ ಪ್ರತಿ ತಾಲೂಕುಗಳ ಕೋವಿಡ್ ನಿರ್ವಹಣೆ, ನಿಯಂತ್ರಣದ ಮಾಹಿತಿ ಸಂಗ್ರಹಿಸುತ್ತಿದೆ. ತಾನು ಕೂಡಾ ಶಿರಸಿ, ಸಿದ್ಧಾಪುರದ ಆಸ್ಫತ್ರೆಗಳ ಕೋವಿಡ್ ನಿರ್ವಹಣೆಯ ಸ್ಥಿತಿ, ನಿರ್ವಹಣೆಗಳ ವಾಸ್ತವ ಪರಿಶೀಲಿಸಿದ್ದೇನೆ. ಹೊನ್ನಾವರ ಕುಮಟಾಗಳಲ್ಲೂ ಪರಿಶೀಲನೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಒಪ್ಪಿಸಲಿದ್ದೇನೆ. ಕೋವಿಡ್ ನಿಯಂತ್ರಣಕ್ಕೆ ಸಂಪೂರ್ಣ ಕಟ್ಟುನಿಟ್ಟಿನ ಲಾಕ್ ಡೌನ್ ಅಗತ್ಯವಿದೆಯೆ ಎನ್ನುವ ಬಗ್ಗೆ ಜಿಲ್ಲಾಡಳಿತ ಪರಿಶೀಲಿಸಲಿದೆ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರು ಮತ್ತು ಸಾಮಾನ್ಯ ಇತರ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗುತ್ತಿದೆಯೆ ಎನ್ನುವ ಬಗ್ಗೆ ಸಂಬಂಧಿಸಿದವರೊಂದಿಗೆ ಚರ್ಚಿಸಿದ್ದೇನೆ ಎಂದರು. ಈ ಸಂದರ್ಭದಲ್ಲಿ ಶಿರಸಿ ಉಪ ಪೊಲೀಸ್ ವರಿಷ್ಠ ರವಿ ನಾಯ್ಕ, ಸಿದ್ದಾಪುರ ಪಿ.ಎಸ್.ಐ. ಹನುಮಂತಪ್ಪ ಕುಂಬಾರ ಜೊತೆಗಿದ್ದರು.


