

ಧಾರವಾಡ ಹಾಲು ಒಕ್ಕೂಟದಿಂದ ಉತ್ತರಕನ್ನಡ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಸುತ್ತಿರುವ ಎಲ್ಲ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೈಸರ್‍ಗಳನ್ನು ನೀಡಲಾಗಿದ್ದು ಅದನ್ನು ಸಿದ್ದಾಪುರದ ರಾಘವೇಂದ್ರ ಮಠದ ಸಭಾಂಗಣದಲ್ಲಿ ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ ಸೋಮವಾರ ವಿತರಿಸಿದರು. ವಿಸ್ತರಣಾಧಿಕಾರಿಗಳಾದ ಪ್ರಕಾಶ್ ಕೆ, ಚಂದನ ನಾಯ್ಕ ಇದ್ದರು.
ಪುರಾತನ ರಸ್ತೆಗೆ ದುರಸ್ತಿ ಭಾಗ್ಯ- ಸಿದ್ಧಾಪುರ: ಲೋಕೊಪಯೋಗಿ ರಸ್ತೆಯೆಂದು ಬ್ರಿಟಿಷ್ ಕಾಲದಿಂದಲೂ ದಾಖಲಿಸಲ್ಪಟ್ಟು, ಇತ್ತೀಚಿನ 2 ದಶಕಗಳಿಂದ ಸರಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಇತ್ತೀಚೆಗೆ ಸಾರ್ವಜನಿಕರ ಹೋರಾಟದ ಹಿನ್ನೆಲೆಯಲ್ಲಿ ಸಿದ್ಧಾಪುರ ತಾಲೂಕಿನ ನಿಲ್ಕುಂದ ಮಾರ್ಗವಾಗಿ ಕುಮಟ ತಾಲೂಕಿನ ಸಂತೆಗುಳಿ ಸಂಪರ್ಕ ರಸ್ತೆಯ ಕಾಮಗಾರಿ ಪ್ರಾರಂಭವಾಗಿರುವುದಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ರಸ್ತೆಗುಂಟ ಗಿಡಗುಂಟಿ ರಾಶಿ, ಕುಸಿದು ಬಿದ್ದ ಸೇತುವೆಗಳು, ಅಲ್ಲಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದಿರುವ ಮರಗಳು, ನಿರ್ವಹಣೆ ಇಲ್ಲದೇ ರಸ್ತೆ ಕೊರಕಲು ಆಗಿರುವ ದೃಶ್ಯ, ರಸ್ತೆಗುಂಟ ಲೋಕಪಯೋಗಿ ಇಲಾಖೆ ಹಾಕಿದ ಅನಾಥವಾಗಿ ನಿಂತಿರುವ ಮೈಲಿಗಲ್ಲುಗಳು, ಜೀರ್ಣಾವ್ಯವಸ್ಥೆಯಲ್ಲಿರುವ ಸೇತುವೆಗಳು, ಸಂಪೂರ್ಣ ನಿರ್ವಹಣೆ, ರಕ್ಷಣೆ ಹಾಗೂ ಅಭಿವೃದ್ಧಿ ಇಲ್ಲದೇ ಸಾರ್ವಜನಿಕರಿಗೆ ತೀವ್ರ ತೊಂದರೆಯಿಂದ ಸಂಪೂರ್ಣ ರಸ್ತೆಯ ಅವಶೇಷದ ಕುರುಹುಗಳಾಗಿ ಅರಣ್ಯ ಪ್ರದೇಶದಲ್ಲಿ ಗೀಡಮರಗಳಿಂದ ಮುಕ್ತಿಗೊಂಡು ರಸ್ತೆ ಕಾಮಗಾರಿಯಿಂದ ಸಾರ್ವಜನಿಕ ಸಂಚಾರಕ್ಕೆ ಅನುವಾಗುತ್ತಿರುವುದು ಹೋರಾಟಕ್ಕೆ ಸಿಕ್ಕ ಜಯ ಎಂದು ವಿಶ್ಲೇಷಿಸಲಾಗುತ್ತಿದೆ.
ಸರ್ವಋತು ರಸ್ತೆಗೆ ಅಗ್ರಹಿಸಿ ಫೆಬ್ರವರಿ 18 ರಂದು ನಿಲ್ಕುಂದದಿಂದ ಕುಮಟ ತಾಲೂಕಿನ ಗಡಿಯವರೆಗೆ 7 ಕೀ.ಮೀ ಪಾದಯಾತ್ರೆ ಜರುಗಿಸಿ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಗೆ, ಸ್ಥಳದಲ್ಲಿ ಹಾಜರಾಗಿದ್ದ ಲೋಕಪಯೋಗಿ, ಕಂದಾಯ, ಪೊಲೀಸ್ ಹಾಗೂ ಅರಣ್ಯ ಇಲಾಖೆಯಿಂದ ಒಂದು ತಿಂಗಳಿನಲ್ಲಿ ಕಾಮಗಾರಿ ಕಾರ್ಯ ಪೂರ್ಣಗೊಳಿಸುವ ಆಶ್ವಾಸನೆಯನ್ನು ನೀಡಲಾಗಿತ್ತು.
ಸಿದ್ಧಾಪುರ ತಾಲೂಕಿನ ನಿಲ್ಕುಂದ, ತಂಡಾಗುಂಡಿ, ಹೆಗ್ಗರಣೆ, ಜಾನ್ಮನೆ ಕೆಲವು ಭಾಗದವರಿಗೆ ಕೇವಲ 26-28 ಕೀ.ಮಿ ಅಂತರದಲ್ಲಿ ಕುಮಟಕ್ಕೆ ತಲುಪಲು ಅವಕಾಶ ಅಸಮರ್ಪಕ ರಸ್ತೆ ನಿರ್ವಹಣೆಯಿಂದ ತಪ್ಪಿತ್ತು. ಈ ಭಾಗದವರು ಈಗ 55-60 ಕೀಮಿ ದೂರ ಪ್ರಯಾಣಿಸಿ ಕುಮಟಕ್ಕೆ ತಲುಪುವ ಪ್ರಯಾಸ ಮಾಡುತ್ತಿದ್ದರು. ಸಿದ್ಧಾಪುರ ತಾಲೂಕಿನ 7 ಕೀ.ಮಿ, ಕುಮಟ ತಾಲೂಕಿನ 7 ಕೀ.ಮಿ ದುರಸ್ತಿ ಮತ್ತು ಕಾಮಗಾರಿ ಕಾರ್ಯ ಪ್ರಾರಂಭವಾಗಿದೆ.
ಶತಮಾನದ ರಸ್ತೆಯ ಉಳಿವಿಗಾಗಿ ಮತ್ತು ಅಭಿವೃದ್ಧಿಗಾಗಿ ಹಮ್ಮಿಕೊಂಡ ಪಾದಯಾತ್ರೆಯ ಮೂಲಕದ ಹೋರಾಟಕ್ಕೆ ಸರಕಾರ ಮತ್ತು ಜನಪ್ರತಿನಿಧಿಗಳು ತಡವಾಗಿಯಾದರೂ ಸ್ಫಂದಿಸಿ ಮುಂದಿನ ಒಂದು ತಿಂಗಳಿನಲ್ಲಿ ಕೇಲವು ಕಾಮಗಾರಿ ಹೊರತಾಗಿ ರಸ್ತೆ ಕಾಮಗಾರಿ ಪೂರ್ಣಗೊಳ್ಳುವುದೆಂಬ ರಸ್ತೆಯ ಕಾಮಗಾರಿ ಪರಿಶೀಲಿಸಿದ ನಂತರ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಹರಿಹರ ನಾಯ್ಕ, ಸೀತಾರಾಮ ಗೌಡ ಹುಕ್ಕಳಿ, ರುದ್ರ ಗೌಡ ಹುಕ್ಕಳಿ, ಮಧುಕೇಶ್ವರ ನಾಯ್ಕ, ಪ್ರಕಾಶ ನಾಯ್ಕ, ಮಂಜುನಾಥ ನಾಯ್ಕ ಹೊಂಡಗದ್ದೆ, ಲಿಂಗ ಗೌಡ ನಿರಗಾನ, ಎಮ್ ಪಿ ಗೌಡ ಹುಕ್ಕಳಿ, ವಿನೋಧ ಗೌಡ ಮುಂತಾದವರು ಉಪಸ್ಥಿತರಿದ್ದರು.








