ಸೋಮುವಾರದ ಸಾಯಂಕಾಲ ಸಾಗರ ತಾಳಗುಪ್ಪಾ ರೈಲು ನಿಲ್ಧಾಣದಲ್ಲಿ ಆಕಸ್ಮಿಕವಾಗಿ ಬಿದ್ದು ಕಾಲು ತುಂಡಾದ ಸಿದ್ಧಾಪುರ ಕಾವಂಚೂರಿನ ವ್ಯಕ್ತಿ ಆರೋಗ್ಯವಾಗಿದ್ದು ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಸೋಮುವಾರದ ಸಾಯಂಕಾಲದ ತಾಳಗುಪ್ಪಾ-ಬೆಂಗಳೂರು, ಮೈಸೂರು ರೈಲು ತಾಳಗುಪ್ಪ ರೈಲು ನಿಲ್ಧಾಣ ಬಿಡುವ ಮೊದಲು ಕಾಲುತುಂಡರಿಸಿಕೊಂಡ ನವೀನ್ ಹರಿಜನ ಮತ್ತು ಆತನ ಸ್ನೇಹಿತನೊಬ್ಬ ಈ ರೈಲು ಮೇಲೆ ಕೂತಿದ್ದರು. ರೈಲು ಹೊರಡುತ್ತಲೇ ರೈಲಿನಿಂದ ಹೊರಜಿಗಿದ ಒಬ್ಬ ವ್ಯಕ್ತಿ ಪಾರಾದರೆ ನವೀನ ರೈಲು ಹಳಿಗೆ ಬಿದ್ದು ಒಂದು ಕಾಲು ತುಂಡಾಗಿತ್ತು.
ಕಾಲುತುಂಡಾಗಿ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಈ ಯುವಕನನ್ನು ಸಾಗರದಲ್ಲಿ ಪ್ರಥಮ ಚಿಕಿತ್ಸೆ ಮಾಡಿ ಮಂಗಳೂರಿನ ವೆನ್ಲಾಕ್ ಆಸ್ಫತ್ರೆಗೆ ರವಾನಿಸಲಾಗಿದೆ. ಗಾಯಗೊಂಡಿರುವ ಯುವಕ ಅನಾಥನಾಗಿದ್ದು ಅವರ ದೂರದ ಸಂಬಂಧಿಗಳು ಚಿಕಿತ್ಸೆಗೆ ನೆರವಾಗುತಿದ್ದಾರೆ. ಈ ಪ್ರಕರಣ ನಡೆದ ನಂತರ ವಿಷಯ ತಿಳಿದ ಮಾಜಿ ತಾ.ಪಂ. ಸದಸ್ಯ ನಾಶಿರ್ ಖಾನ್, ಸಿದ್ಧಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ನೆರವಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಈ ಯುವಕನ ಚಿಕಿತ್ಸೆ, ಮುಂದಿನ ಅನುಕೂಲತೆಗಳಿಗೆ ಬೇಕಾಗುವ ಹಣಕಾಸಿನ ತೊಂದರೆ ಇದ್ದು ಇವನ ದೇಕರಿಕೆ ನೋಡಿಕೊಳ್ಳಲೂ ಆಸಕ್ತರ ಅಗತ್ಯವಿದೆ. ದಾನಿಗಳು, ಆಸಕ್ತರು ಕಾಂವಚೂರಿನ ಜವಾಬ್ಧಾರಿ ವ್ಯಕ್ತಿಗಳ ಜೊತೆ ವ್ಯವಹರಿಸಿ ಈ ನತದೃಷ್ಟನ ನೆರವಿಗೆ ಬರಬೇಕಾದ ಅಗತ್ಯವಿದೆ.