

ನಿರಂತರ ಮೂರು ಅವಧಿಯ ನಂತರ ಈಗಿನ ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ ಮಳಲಗಾಂವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆ ಬಿಡುವುದು ಪಕ್ಕಾ ಆಗಿದ್ದು ಭೀಮಣ್ಣ ನಿರ್ಗಮನದಿಂದ ತೆರವಾಗುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಗೆ ಕಾರವಾರದ ಮಾಜಿ ಶಾಸಕ ಸತೀಶ್ ಶೈಲ್ ಅಧ್ಯಕ್ಷರಾಗುವುದು ಬಹುತೇಕ ಪಕ್ಕಾ ಆಗಿದೆ.ಜಿಲ್ಲಾ ಕಾಂಗ್ರೆಸ್ ಗೆ ಹೆಚ್ಚುವರಿ ಕಾರ್ಯಾಧ್ಯಕ್ಷರ ಆಯ್ಕೆ ನಡೆಯಲಿದ್ದು ಕುಮಟಾದ ಮಂಜುನಾಥ ಎಲ್. ನಾಯ್ಕ ಕಾರ್ಯಾಧ್ಯಕ್ಷರಾಗುವುದು ಕೂಡಾ ಬಹುತೇಕ ತೀರ್ಮಾನವಾಗಿದೆ ಎನ್ನಲಾಗಿದೆ.
ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಭೀಮಣ್ಣ ನಾಯ್ಕ ದೇಶಪಾಂಡೆಯವರ ಆಪ್ತರಾಗಿದ್ದು ದೇಶಪಾಂಡೆಯವರ ಒತ್ತಾಯದಿಂದ ಭೀಮಣ್ಣ ಮೂರು ಅವಧಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಒಮ್ಮೆ ಮಾತ್ರ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಭೀಮಣ್ಣ ನಾಯ್ಕ ಪಕ್ಷದ ಸಂಘಟನೆಯಲ್ಲಿದ್ದುದು ಬಿಟ್ಟರೆ ಅಧಿಕಾರ, ಜನಪ್ರತಿನಿಧಿತ್ವದ ಜವಾಬ್ಧಾರಿ, ಅನುಕೂಲ ಅನುಭವಿಸಿದವರಲ್ಲ. ದೇಶಪಾಂಡೆಯವರ ಪಾಳೆಯದಲ್ಲಿದ್ದು ಶಿರಸಿ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಪಡೆದಿದ್ದ ಭೀಮಣ್ಣ ಬಿ.ಜೆ.ಪಿ.ಯ ಅಲೆ, ತಂತ್ರ-ಮಂತ್ರಗಳ ನಡುವೆ 53 ಸಾವಿರ ಮತ ಪಡೆದು ವಿರೋಚಿತ ಸೋಲು ಕಂಡಿದ್ದರು. ಈಗಲೂ ಶಿರಸಿ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ನ ಪ್ರಬಲ ಆಕಾಂಕ್ಷಿಯಾಗಿರುವ ಭೀಮಣ್ಣ ಜಿಲ್ಲಾ ಕಾಂಗ್ರೆಸ್ ಸಂಘಟನೆಯೊಂದಿಗೆ ಶಿರಸಿ ಕ್ಷೇತ್ರದಲ್ಲಿ ಸಕ್ರೀಯವಾಗಿದ್ದಾರೆ. ಮಧು ಬಂಗಾರಪ್ಪ ಕಾಂಗ್ರೆಸ್ಗೆಮ ರಳಿರುವುದು ಶಿರಸಿ ಕ್ಷೇತ್ರದಲ್ಲಿ ಆಡಳಿತ ಪಕ್ಷದ ಪ್ರಮುಖರು, ಜನಪ್ರತಿನಿಧಿಗಳಿಗಿಂತ ಭೀಮಣ್ಣ ನಾಯ್ಕ ಹೆಚ್ಚು ಜನಪರವಾಗಿ ಜನಪ್ರೀಯವಾಗುತ್ತಿರುವುದು ಸೇರಿದಂತೆ ಮುಂದಿನ ಬಾರಿ ಶಿರಸಿ ಕ್ಷೇತ್ರ ಗೆಲ್ಲಲು ಅವಶ್ಯ ತಾಲೀಮು ಮಾಡುತ್ತಿರುವ ಭೀಮಣ್ಣ ಜಿಲ್ಲಾ ಕಾಂಗ್ರೆಸ್ ಜವಾಬ್ಧಾರಿಯಿಂದ ಮುಕ್ತವಾಗುತ್ತಿರುವುದು ಅವರ ವೈಯಕ್ತಿಕ ಏಳ್ಗೆಯ ದೃಷ್ಟಿಯಿಂದ ಉತ್ತಮ ಎನ್ನುವ ಅಭಿಪ್ರಾಯವಿದೆ.
ಸಾಯಿ ಗಾಂವಕರ್, ಶಿವಾನಂದ ಹೆಗಡೆ ಬದಲು ಸತೀಶ್ ಶೈಲ್- ಕಾರವಾರದ ಮಾಜಿ ಶಾಸಕ ಸತೀಶ್ ಶೈಲ್ ಜೊತೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗುವ ಪಟ್ಟಿಯಲ್ಲಿ ಸಿದ್ಧಾಪುರದ ಕೆ.ಜಿ.ನಾಗರಾಜ್, ವಿ.ಎನ್. ನಾಯ್ಕ, ಭಟ್ಕಳದ ಮಂಕಾಳು ವೈದ್ಯ, ಜೆ.ಡಿ.ನಾಯ್ಕ, ಹೊನ್ನಾವರದ ಶಿವಾನಂದ ಹೆಗಡೆ,ಕುಮಟಾದ ಸಾಯಿ ಗಾಂವಕರ್ ಸ್ಫರ್ಧೆಯಲ್ಲಿದ್ದರು ಇಷ್ಟು ಜನರ ನಡುವೆ ಸತೀಶ್ ಶೈಲ್ ಒಮ್ಮತದ ಆಯ್ಕೆಯಾಗಿದ್ದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಮತ್ತು ವಿ.ಪ. ಸದಸ್ಯ ಕಾಂಗ್ರೆಸ್ ನ ಪ್ರಮುಖ ನಾಯಕ ಬಿ.ಕೆ. ಹರಿಪ್ರಸಾದ್ ಈ ಆಯ್ಕೆಯ ಹಿಂದಿದ್ದಾರೆ ಎನ್ನಲಾಗಿದೆ.




