

ಸಿದ್ದಾಪುರ
ಕೋವಿಡ್-೧೯ಗೆ ಸಂಬಂಧಿಸಿ ತಾಲೂಕಿನಲ್ಲಿ ವಾರಾಂತ್ಯದ ಕರ್ಫೂ ಇದ್ದರೂ ನಿಯಮ ಉಲ್ಲಂಘಿಸಿ ಸರಕಾರಿ ಅಧಿಕಾರಿಗಳು ಮತ್ತು ನೌಕರರು ಭೋಜನಕೂಟದಲ್ಲಿ ಪಾಲ್ಗೊಂಡ ಕುರಿತಂತೆ ಅಧಿಕೃತವಾಗಿ ತಿಳಿದುಬಂದಿದ್ದು ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ತಾಲೂಕ ಪ್ರಾಥಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳಿಬ್ಬರು ಅಧ್ಯಾಪಕ ವೃತ್ತಿಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಶಿಕ್ಷಕರ ಸಂಘದಿಂದ ಪಟ್ಟಣದ ಮಧ್ಯವರ್ತಿ ಸ್ಥಳವಾದ ಹೊನ್ನೆಗುಂಡಿ ರಸ್ತೆಯಲ್ಲಿನ ಸರಕಾರಿ ನೌಕರರ ಭವನದಲ್ಲಿ ಶನಿವಾರ ಮಧ್ಯಾಹ್ನ ಭೋಜನಕೂಟ ಆಯೋಜಿಸಲಾಗಿತ್ತು. ಪಟ್ಟಣದ ಎಲ್ಲ ಅಂಗಡಿ,ಹೊಟೇಲ್‌ಗಳು ಮುಚ್ಚಿದ್ದರೂ ಮಧ್ಯಾಹ್ನದ ವೇಳೆಯಲ್ಲಿ ಸರಕಾರಿ ನೌಕರರ ಭವನದಲ್ಲಿ ಜನಸಂದಣಿ ಕಂಡುಬಂದಿತ್ತು. ಅಲ್ಲದೇ ಅದೇ ವೇಳೆಯಲ್ಲಿ ತಹಸೀಲದಾರರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸರಕಾರಿ ವಾಹನ ಭವನದ ಸಮೀಪ ನಿಂತಿರುವುದನ್ನು ಕಂಡ ಸಾರ್ವಜನಿಕರು ಈ ಬಗ್ಗೆ ಕುತೂಹಲದಿಂದ ವೀಕ್ಷಿಸಿದಾಗ ಭವನದ ಒಳಗಡೆ ಭೋಜನಕೂಟ ನಡೆಯುತ್ತಿರುವದು, ಅಲ್ಲಿ ಕಂದಾಯ, ಶಿಕ್ಷಣ ಇಲಾಖೆಗಳ ಹಿರಿ,ಕಿರಿಯ ಅಧಿಕಾರಿಗಳು, ಸಿಬ್ಬಂದಿಗಳು,ಶಿಕ್ಷಕರು ಕೋವಿಡ್-೧೯ರ ನಿಯಮ ಮರೆತು ಪಾಲ್ಗೊಂಡಿದ್ದು , ತಾಲೂಕ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಇನ್ನಿತರ ಪದಾಧಿಕಾರಿಗಳು ನಿಯಮ ಅನುಸರಿಸದಿರುವುದು ಕಂಡುಬಂದಿದೆ.
ಸರಕಾರಿ ನಿಯಮಗಳು ಜನತೆಗೆ ಒಂದು ರೀತಿ, ಸರಕಾರಿ ನೌಕರರಿಗೆ ಒಂದು ರೀತಿಯೇ? ಎಂದು ಪ್ರಶ್ನಿಸಿರುವ ಸಾರ್ವಜನಿಕರು ಖಾಸಗಿಯಾಗಿ ನಡೆಸುವ ಕಾರ್ಯಕ್ರಮಗಳಿಗೆ ಸರಕಾರಿ ನಿಯಮ ಎಂದು ಅಡಚಣೆ ಮಾಡುವ ಅಧಿಕಾರಿಗಳು,ಸಿಬ್ಬಂದಿಗಳೇ ಕಾನೂನು ಉಲ್ಲಂಘಿಸಿದ್ದಾರೆ. ತಮ್ಮಿಂದ ಅನುಮತಿ ಪಡೆಯದಿರುವ ಕೂಟದಲ್ಲಿ ತಾವೇ ಪಾಲ್ಗೊಂಡಿದ್ದಾರೆ.ಅವರ ಬಗ್ಗೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಮಾಜಕ್ಕೆ ಮಾದರಿಯಾಗಿರಬೇಕಾದ ಶಿಕ್ಷಕ ಸಮುದಾಯಕ್ಕೆ ಕಪ್ಪು ಚುಕ್ಕೆ ಹಚ್ಚುವ ಕೃತ್ಯವನ್ನು ಸಂಘದ ಪದಾಧಿಕಾರಿಗಳು ಮಾಡಿದ್ದಾರೆ. ಶಿಕ್ಷಕ ವೃತ್ತಿಗಿಂತ ರಾಜಕಾರಣ,ಓಲೈಸುವಿಕೆಯೇ ಮುಖ್ಯವಾದ ಕೆಲವು ಪದಾಧಿಕಾರಿಗಳು ಶಿಕ್ಷಕರಸಂಘವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.ಒಂದು ಮೂಲದ ಪ್ರಕಾರ ತಾಲೂಕ ಸರಕಾರಿ ನೌಕರರ ಸಂಘದ ಅಧ್ಯಕ್ಷರಿಗೂ ಮುಂಚಿತವಾಗಿ ತಿಳಿಸದೇ ಭವನವನ್ನು ಭೋಜನಕೂಟಕ್ಕೆ ಬಳಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.


