

ಸಿದ್ಧಾಪುರ ತಾಲೂಕಿನ ಕೈಗಾರಿಕಾ ವಸಾಹತು ಪ್ರದೇಶ ಮನ್ಮನೆ ಗ್ರಾಮಪಂಚಾಯತ್ ಮಳಲವಳ್ಳಿ ಯಲ್ಲಿ ಸ್ಥಾಪನೆಯಾಗುತಿದ್ದು ಈ ಪ್ರದೇಶದಲ್ಲಿ ಜಾಗೆ ಕಾಯ್ದಿರಿಸಿಕೊಳ್ಳುವ ಆಸಕ್ತರು ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ನಿಗಮ ಕೋರಿದೆ. ಈ ಬಗ್ಗೆ ಇತ್ತೀಚೆಗೆ ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಬಿ.ಜೆ.ಪಿ. ಪ್ರಮುಖರು ಈ ವಿಷಯ ತಿಳಿಸಿದರು.
ಬಹುವರ್ಷಗಳ ಬೇಡಿಕೆಯಾಗಿದ್ದ ಸಿದ್ಧಾಪುರದ ಕೈಗಾರಿಕಾ ವಸಾಹತು ಸ್ಥಾಪನೆ ಕನಸು ಈಗ ನನಸಾಗುತ್ತಿದೆ. ಸಣ್ಣ, ಅತಿಸಣ್ಣ ಉದ್ಯಮ ನಡೆಸುವ ಹಾಲಿ, ಭಾವಿ ಉದ್ಯಮಿಗಳು ಇಲ್ಲಿ ಸ್ಥಳ ಕಾಯ್ದಿರಿಸಿಕೊಂಡು ಅನುಕೂಲ ಪಡೆಯಬಹುದು ಎಂದರು.
ವಿಧಾನಸಭಾ ಅಧ್ಯಕ್ಷ ಕಾಗೇರಿ ವಿಶ್ವೇಶ್ವರ ಹೆಗಡೆಯವರ ದೂರದೃಷ್ಟಿಯಿಂದ ಸಿದ್ಧಾಪುರದ ಕೈಗಾರಿಕಾ ವಸಾಹತು ಕೋಡ್ಕಣಿ ಹೋಬಳಿ ಮಳಲವಳ್ಳಿಯಲ್ಲಿ ನಿರ್ಮಾಣವಾಗುತ್ತಿದೆ.ತಾಲೂಕಿನ ಜನತೆ ಇದರ ಪ್ರಯೋಜನ ಪಡೆಯಬೇಕು.- ಮಾರುತಿ ಟಿ ನಾಯ್ಕ, ಪ.ಪಂ. ಸದಸ್ಯ
ಹಿಂದಿನ ಯಡಿಯೂರಪ್ಪ ನೇತೃತ್ವದ ಸರ್ಕಾರದ ಅವಧಿಯಲ್ಲಿ ಮಳಲವಳ್ಳಿಯ ಈ ಪ್ರದೇಶ ವನ್ನು ಬಂಗಾರಮಕ್ಕಿ ದೇವಸ್ಥಾನಕ್ಕೆ ಹಸ್ತಾಂತರ ಮಾಡುವ ಪ್ರಯತ್ನ ನಡೆದಿತ್ತು. ಆಗ ವಿಶ್ವೇಶ್ವರ ಹೆಗಡೆ ಶಾಸಕರು, ಸಚಿವರು ಆಗಿದ್ದರು. ಆದರೆ ಅಂದಿನ ಮನ್ಮನೆ ಗ್ರಾ.ಪಂ. ಆಡಳಿತ, ಅಧ್ಯಕ್ಷರು, ಅಂದಿನ ತಾಲೂಕು ಪಂಚಾಯತ್ ಸದಸ್ಯ ವಸಂತ ನಾಯ್ಕ ಎಲ್ಲರೂ ಸೇರಿ ಈ ಸರ್ಕಾರಿ ಆಸ್ತಿಯನ್ನು ದೇವಸ್ಥಾನಕ್ಕೆ ಪರಬಾರೆ ಮಾಡುವುದನ್ನು ತಡೆದಿದ್ದೆವು. ಮಳಲವಳ್ಳಿಯ ಸರ್ಕಾರಿ ಭೂಮಿ ಉಳಿಸಿದ ಶ್ರೇಯಸ್ಸು ಸ್ಥಳಿಯ ಆಡಳಿತ ವ್ಯವಸ್ಥೆ,ಜನಪ್ರತಿನಿಧಿಗಳಿಗೆ ಸಲ್ಲುತ್ತದೆ. ಮತ್ತು ಈ ಪ್ರದೇಶವನ್ನು ಕೈಗಾರಿಕಾ ವಸಾಹತು ಮಾಡುವ ಪ್ರಸ್ಥಾವನೆ, ಪ್ರಯತ್ನ ಮಾಡಿದವರು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಈಗ ಇದರ ಕ್ರೆಡಿಟ್ ಪಡೆಯುವ ಶಾಸಕರು, ಅವರ ಅಭಿಮಾನಿ ಕಾರ್ಯಕರ್ತರು, ಪ.ಪಂ. ಸದಸ್ಯರು ಯಾರದೋ ಪ್ರಯತ್ನಕ್ಕೆ ತಮ್ಮ ಹೆಸರು ಅಂಟಿಸಿಕೊಂಡಂತಿದೆ.- ವೀರಭದ್ರ ನಾಯ್ಕ ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ
ಆಸಕ್ತರು ಸಂಪರ್ಕಿಸಬೇಕಾದ ಅಧಿಕಾರಿ-ವಿಳಾಸ- ಸಹಾಯಕ ಪ್ರಧಾನ ವ್ಯವಸ್ಥಾಪಕರು, (ಕೈವ) ಕರಾಸಕೈ ಅನಿನಿ,ಕೈಗಾರಿಕಾ ವಸಾಹತು ಹುಬ್ಬಳ್ಳಿ ದೂರವಾಣಿ ಸಂಖ್ಯೆ-0836-2332006 ಮೊಬೈಲ್-8884415796



