

ಉತ್ತರ ಕನ್ನಡ ಜಿಲ್ಲೆಯನ್ನು ಬುದ್ಧಿವಂತರ ಜಿಲ್ಲೆ ಎನ್ನಲಾಗುತ್ತದೆ. ಆದರೆ ಈ ಜಿಲ್ಲೆಯಲ್ಲಿ ಹಿಂದುಳಿದವರು, ದಲಿತರ ಸ್ಥಿತಿ ತೀರಾ ನಿಸ್ಕೃಷ್ಟವಾಗಿದೆ. ಇದಕ್ಕೊಂದು ಜ್ವಲಂತ ಸಾಕ್ಷಿ ಇಲ್ಲಿದೆ. ನೀವು ಈಗ ಓದುತ್ತಿರುವ ಈ ಹಳ್ಳಿಯ ಕತೆ ಆಲಳ್ಳಿಯದು . ಸಿದ್ಧಾಪುರ ತಾಲೂಕಿನ ಇಟಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ಹಳ್ಳಿಯಲ್ಲಿ ಇರುವ ಮನೆಗಳೆಲ್ಲಾ ದಲಿತ ಹಸ್ಲರ್ ಕುಟುಂಬಗಳು. ಈ ಕುಟುಂಬಗಳಿಗೆ ನೀಡಿರುವ ಜನತಾಕಾಲನಿಯಲ್ಲಿ ವಾಸಿಸುವ ಕೆಲವರಿಗೆ ಆಧಾರ್ ಕಾರ್ಡ್ ಗಳೇ ಇಲ್ಲ, ಕೆಲವು ಕುಟುಂಬಗಳಿಗೆ ಪಡಿತರ ಚೀಟಿಯೇ ಇಲ್ಲ. ಇಂಥ ದಾಖಲೆಗಳಿಲ್ಲದಿರುವುದರಿಂದ ಈ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯಗಳೂ ಸಿಗುತ್ತಿಲ್ಲ.
ದೇಶ-ರಾಜ್ಯದ ಒಬ್ಬ ವ್ಯಕ್ತಿಯೂ ಹಸಿವೆಯಿಂದ ಇರಬಾರದು ಎನ್ನುವ ಸರ್ಕಾರಗಳು ದಲಿತ ಹಿಂದುಳಿದ ಬಡವರಿಗೆ ದಾಖಲೆಗಳನ್ನೇ ನೀಡುವುದಿಲ್ಲ. ಈ ಬಡ ನತದೃಷ್ಟರ ದುರಾದೃಷ್ಟವೋ ಆಡಳಿತದ ಬೇಜವಾಬ್ಧಾರಿಯೋ ಒಟ್ಟೂ ಆಲಳ್ಳಿಯ ಕೆಲವು ಕುಟುಂಬಗಳಿಗೆ ಲಾಕ್ ಡೌನ್ ಅವಧಿ ಮಾತ್ರವಲ್ಲ ಯಾವ ಸಮಯದಲ್ಲೂ ಪಡಿತರ,ಫುಡ್ ಕಿಟ್ ಗಳೇ ದೊರೆತಿಲ್ಲ. ಇದು ಈ ಬೈಲಳ್ಳಿಯ ಕತೆಯಾದರೆ ಇದರ ಪಕ್ಕದ ಕ್ಯಾದಗಿ, ದೊಡ್ಮನೆ ಸೇರಿದಂತೆ ಸಿದ್ಧಾಪುರ ತಾಲೂಕಿನ ಬಹುತೇಕ ಗ್ರಾಮ ಪಂಚಾಯತ್ ಗಳ ದಲಿತ ಕಾಲನಿಗಳು, ಪರಿಶಿಷ್ಟರ ಗ್ರಾಮಗಳಲ್ಲಿ ಇದೇ ವಾಸ್ತವ.
ಆಲಳ್ಳಿಯ ಈ ತೊಂದರೆ ಬಗ್ಗೆ ಇಟಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪಾರ್ವತಿ ನಾಯ್ಕ ಮತ್ತು ಈ ಭಾಗದ ಸಾಮಾಜಿಕ ಕಾರ್ಯಕರ್ತ ಪಾಂಡು ವಾಟಗಾರ್ ಗಮನಸೆಳೆಯದಿದ್ದರೆ ಈ ಸಮಸ್ಯೆ ಇತರ ಗ್ರಾಮಗಳ ತೊಂದರೆಯಂತೆ ಯಾರೂ ಕೇಳದ ಸಮಸ್ಯೆಯಾಗೇ ಉಳಿಯುತಿತ್ತು.ದೇಶ ಅಭಿವೃದ್ಧಿ ಸಾಧಿಸಿದೆ ಎನ್ನುವವರು ಉತ್ತರ ಕನ್ನಡ ಜಿಲ್ಲೆಯ ದಲಿತ ಹಿಂದುಳಿದ ವರ್ಗಗಳ ಸ್ಥಿತಿ ನೋಡಬೇಕು. ಆಗ ಬುದ್ಧಿವಂತರ ಜಿಲ್ಲೆಯ ವಾಸ್ತವ ಚಿತ್ರಣ ಕಣ್ಣಿಗೆ ರಾಚುತ್ತದೆ. ದಾಖಲೆ ಇಲ್ಲದೆ ಪಡಿತರ ಚೀಟಿ ಇಲ್ಲದೆ ಸಂಕಷ್ಟದ ಜೀವನ ಸಾಗಿಸುತ್ತಿರುವ ಈ ದಲಿತ ಕುಟುಂಬಗಳ ತೊಂದರೆ ಸರ್ಕಾರ,ರಾಜ್ಯಮಟ್ಟದ ಜನಪ್ರತಿನಿಧಿಗಳ ಗಮನಕ್ಕೆ ಬಾರದಿರುವುದು ಆಡಳಿತ ವ್ಯವಸ್ಥೆಯ ವಾಸ್ತವಕ್ಕೆ ಹಿಡಿದ ಕನ್ನಡಿ.
ಸಿದ್ದಾಪುರ ತಾಲೂಕು ಸೇರಿದಂತೆ ರಾಜ್ಯದಲ್ಲಿ ವಿಶೇಶವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲವು ದಲಿತ ಹಿಂದುಳಿದ ಕುಟುಂಬಗಳಿಗೆ ಭೂಮಿಯೇ ಇಲ್ಲ, ಭೂಮಿ, ಮನೆ, ವಿಳಾಸ ಇಲ್ಲದ ವ್ಯಕ್ತಿ ಕುಟುಂಬಗಳಿಗೆ ಆಧಾರ್ ಕಾರ್ಡ್, ಪಡಿತರ ಚೀಟಿಗಳೇ ಇಲ್ಲ. ಈ ದಾಖಲೆಗಳನ್ನು ಪೂರೈಸಲಾಗದ ಜನರು ಮನೆ-ದಾಖಲೆ, ವಿಳಾಸಗಳಿಲ್ಲದೆ ಪರದಾಡುತಿದ್ದಾರೆ. ಎನ್.ಆರ್.ಸಿ., ಸಿ.ಎ.ಎ. ಒಂದೇ ರಾಷ್ಟ್ರ ಒಂದೇ ಚುನಾವಣೆ ಎನ್ನುವ ಆಡಳಿತಗಾರರು ಜನಪ್ರತಿನಿಧಿಗಳು ಈ ದಾಖಲೆ ಇಲ್ಲದ ಮೂಲನಿವಾಸಿಗಳ ಬಗ್ಗೆ ಎಲ್ಲೂ ಮಾತನಾಡುವುದೇ ಇಲ್ಲ. ಉಳ್ಳವರಿಗೊಂದು ಇಲ್ಲದವರಿಗೊಂದು ನೀತಿ ಅನುಸರಿಸುವ ರಾಜಕೀಯ ಪ್ರೇರಿತ ರಾಷ್ಟ್ರೀಯವಾದಿಗಳು, ದೇಶಪ್ರೇಮಿಗಳ ಕ್ಷೇತ್ರದ ಕತೆ ಇದಾದರೆ ಈ ದೇಶ ಅಸಮಾನತೆಯ ಕೂಪ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೆ?

