ಕೃಷಿ ಉತ್ಫನ್ನಗಳ ಪೇಟೆಂಟ್ ಪಡೆದು ಲಾಭ,ಹೆಸರು ಗಳಿಸುವುದು ಸುಲಭದ ಕೆಲಸವಲ್ಲ ಹಾಗೆಂದು ಈ ಕಷ್ಟದ ಕೆಲಸ ಮಾಡಿದವರಿಗೇನೂ ಕೊರತೆಇಲ್ಲ. ಇಂಥ ವಿರಳ ಸಾಧಕರ ಪಟ್ಟಿಗೆ ಸೇರ್ಪಡೆಯಾದ ಹೊಸ ಹೆಸರು ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಕೃಷಿಕನದ್ದು.
ಸಿದ್ಧಾಪುರ ತಾಲೂಕಿನ ಕಾನಸೂರು ಸಮೀಪದ ಕೊಡ್ಸರ ಹುಣಸೆಕೊಪ್ಪದ ಗ್ರಾಮೀಣ ರೈತ ರಮಾಕಾಂತ ಹೆಗಡೆ ತಮ್ಮ ವೆನಿಲ್ಲಾ ಬೆಳೆ ಕೈಕೊಟ್ಟ ನಂತರ ಕೈಕಟ್ಟಿ ಕೂತುಕೊಳ್ಳಲಿಲ್ಲ. ತಮ್ಮ ತೋಟದಲ್ಲಿ ಎಲ್ಲಾ ತೊಂದರೆಗಳ ಮಧ್ಯೆ ಹುಲುಸಾಗಿ ಬೆಳೆದಿದ್ದ ಕರಿಮೆಣಸಿನ ಬಳ್ಳಿಯ ವೈಶಿಷ್ಟ್ಯ ತಿಳಿಯತೊಡಗಿದರು. ತಜ್ಞರು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಲಹೆ ಮಾರ್ಗದರ್ಶನ ಪಡೆದು ಕರಿಮೆಣಸಿನ ಕೃಷಿ ವಿಸ್ತರಣೆ ಮಾಡಿದರು.
ಬಳ್ಳಿಯ ಗಿಡಗಳ ನರ್ಸರಿ ಮಾಡಿದರು. ಹೆಚ್ಚಿನ ಮಳೆಗೆ ಹೆದರದ ರೋಗನಿರೋಧಕ ಶಕ್ತಿ ಇರುವ ಸ್ಥಳಿಯ ಕರಿಮೆಣಸಿನ ಪ್ರಬೇಧವನ್ನು ಬೆಳೆದು ಮಾರುಕಟ್ಟೆಗೆ ಕಳುಹಿಸಿದರು. ಸ್ಥಳಿಯ ಮಾರುಕಟ್ಟೆಯಲ್ಲಿ ರಮಾಕಾಂತ ಹೆಗಡೆಯವರ ಬಿಳಿ ಬೋಳುಕಾಳು,ಕರಿಮೆಣಸಿನ ಬೆಳೆಗೆ ಹೆಚ್ಚಿನ ಬೆಲೆಯೂ ದೊರೆಯಿತು. ಈ ಬಗ್ಗೆ ಕರಿಮೆಣಸು ತಜ್ಞ ಡಾ. ವೇಣುಗೋಪಾಲರ ಮಾರ್ಗದರ್ಶನ ಪಡೆದು ಪೇಟೆಂಟ್ ಗೆ ಪ್ರಯತ್ನಿಸಿದರು. ಈ ಪ್ರಯತ್ನ ಈಗ ಫಲ ಕೊಟ್ಟಿದ್ದು ಗ್ರಾಮೀಣ ರೈತ ರಮಾಕಾಂತ್ ಹೆಗಡೆಯವರಿಗೆ ತಮ್ಮ ಸಿಗಂದಿನಿ ಕರಿಮೆಣಸು ತಳಿಗೆ ಪೇಟೆಂಟ್ ಸಿಕ್ಕಿದೆ.
ಉತ್ತರ ಕನ್ನಡ ಜಿಲ್ಲೆಯ ನೂರಕ್ಕೂ ಹೆಚ್ಚು ಪ್ರಬೇಧಗಳಲ್ಲಿ ಶಿರಸಿ ಭಾಗದ 65 ರಲ್ಲಿ ಸಿದ್ಧಾಪುರ ತಾಲೂಕಿನಲ್ಲಿರುವ 28 ವಿಧಗಳಲ್ಲಿ ಸಿಗಂದಿನಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಮೂರನೇ ತಳಿಯಾಗಿ ರಾಜ್ಯದ ಪ್ರಮುಖ ತಳಿಯಾಗಿ ಗುರುತಿಸಲ್ಪಟ್ಟಿದೆ. ಈ ಬಗ್ಗೆ ಸಂಬಂಧಿಸಿದವರಿಂದ ಗುರುತು ಮತ್ತು ಅಭಿನಂದನೆಯ ಗೌರವ ಪಡೆದಿರುವ ಈ ಗ್ರಾಮೀಣ ರೈತನ ಪ್ರಯತ್ನ ರಾಜ್ಯಕ್ಕೂ ಹೆಸರು ತಂದುಕೊಟ್ಟಿದೆ. 15 ನೇ ಶತಮಾನದಲ್ಲಿ ಪ್ರಪಂಚಕ್ಕೆ ಕಾಳುಮೆಣಸು ಪರಿಚಯಿಸಿದ ಉತ್ತರ ಕನ್ನಡ ಜಿಲ್ಲೆಯ ರೈತರೊಬ್ಬರು ಈ ಸಾಂಬಾರಪದಾರ್ಥಕ್ಕೆ ಪೇಟೆಂಟ್ ಪಡೆದಿರುವುದು ಉತ್ತರ ಕನ್ನಡ ಜಿಲ್ಲೆಗೂ ವಿಶೇಶವೆನಿಸಿದೆ.
- ಭಾರೀ ಮಳೆಗೂ ಹೆದರದ ಸಿಗಂಧಿನಿ ಕಾಳುಮೆಣಸಿನ ಕದುರು ಉಳಿದ ಕೆಲವು ತಳಿಗಳಂತೆ ತುದಿಯಲ್ಲ ಸಣ್ಣ ಕಾಳುಗಳನ್ನು ಹೊಂದಿರುವುದಿಲ್ಲ
- * ಸಶಕ್ತತೆ, ಗುಣಮಟ್ಟ, ಪ್ರಮಾಣ ಎಲ್ಲದರಲ್ಲೂ ಸಿಗಂದಿನಿ ಅನನ್ಯ.
- ಪ್ರತಿಕೂಲ ಹವಾಮಾನದಲ್ಲಿ ಗುಣಮಟ್ಟದ ಕಾಳು ನೀಡುವ ಸಿಗಂದಿನಿ ಮಲೆನಾಡಿನ ಅನನ್ಯ ಪ್ರಬೇಧ