

ಕರ್ನಾಟಕದ ಮಾದರಿಯನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಆಸಕ್ತಿ ತೋರಿದೆ.

ಚಿತ್ರದುರ್ಗ: ಕರ್ನಾಟಕದ ಮಾದರಿಯನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಆಸಕ್ತಿ ತೋರಿದೆ. ಈ ಬಗ್ಗೆ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾಹಿತಿ ನೀಡಿದ್ದು, ಎಲ್ಲಾ ಜಿಲ್ಲೆಗಳಲ್ಲಿಯೂ ವಸತಿ ಶಾಲೆಗಳನ್ನು ಸ್ಥಾಪಿಸುವ ರಾಜ್ಯ ಸರ್ಕಾರದ ಮಾದರಿಯನ್ನು ಕೇಂದ್ರ ಸರ್ಕಾರ ಅಳವಡಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಹಾಗೂ ಎಸ್ ಸಿ, ಒಬಿಸಿಗಳ ಜೀವನ ಹಾಗೂ ಸಾಮಾಜಿಕವಾಗಿ ನಿರ್ಲಕ್ಷ್ಯಕ್ಕೊಳಗಾದ ವರ್ಗಗಳು, ತೃತೀಯ ಲಿಂಗಿಗಳು, ಹಿರಿಯ ನಾಗರಿಕರು, ವಿಶೇಷ ಚೇತನರ ಜೀವನದ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಸಚಿವರು ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದ್ದು ಅಭಿವೃದ್ಧಿಗೆ ಶಿಕ್ಷಣ ಪ್ರಮುಖವಾದ ಅಂಶವಾಗಿದೆ. ನಾನು ರಾಜ್ಯದಲ್ಲಿ ಸಮಾಜ ಕಲ್ಯಾಣ ಸಚಿವನಾಗಿದ್ದ ಅವಧಿಯಲ್ಲಿ ಎಸ್ ಸಿ ಹಾಗೂ ಒಬಿಸಿ ಸಮುದಾಯಗಳಿಗಾಗಿ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ಚೆನ್ನಮ್ಮ ವಸತಿ ಶಾಲೆಗಳನ್ನು ಸ್ಥಾಪಿಸುವುದಕ್ಕೆ ಕೈಗೊಂಡ ಕ್ರಮಗಳು ಎಲ್ಲರಿಗೂ ಶಿಕ್ಷಣ ನೀಡುವುದಕ್ಕೆ ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಈ ಮಾದರಿಯನ್ನು ದೇಶಾದ್ಯಂತ ಅಳವಡಿಸಿಕೊಳ್ಳಬೇಕಾಗುತ್ತದೆ. ಕೆಲವು ಜಿಲ್ಲೆಗಳಲ್ಲಿ ಆದ್ಯತೆಯ ಮೇರೆಗೆ ಜಾರಿಗೆ ತರಬೇಕಾಗುತ್ತದೆ ಹಾಗೂ ಪ್ರತಿಕ್ರಿಯೆ ಆಧಾರದಲ್ಲಿ ದೇಶಾದ್ಯಂತ ಈ ಮಾದರಿಯನ್ನು ವಿಸ್ತರಿಸಬೇಕಾಗುತ್ತದೆ. ಈ ಮೂಲಕ ಎಸ್ ಸಿ/ಎಸ್ ಟಿಗಳಿಗೆ ವಿದೇಶದಲ್ಲಿ ಶಿಕ್ಷಣ, ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವಂತಾಗಬೇಕು ಎಂದು ಹೇಳಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ನಿಜವಾದ ಅಭಿವೃದ್ಧಿ ಕಾಣುವಂತೆ ಮಾಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಆದರ್ಶ್ ಗ್ರಾಮ ಯೋಜನೆಯನ್ನು ಮನ್ರೇಗಾ ಯೋಜನೆಯೊಂದಿಗೆ ವಿಲೀನಗೊಳಿಸಲಾಗುತ್ತದೆ.
ಕೆಲವು ರಾಜ್ಯ ಸರ್ಕಾರಗಳು, ಕೇಂದ್ರದಿಂದ ಅನುದಾನ ಪಡೆದ ಬಳಿಕ, ಕೇಂದ್ರ ಸರ್ಕಾರವನ್ನು ಉಲ್ಲೇಖಿಸದೇ ಅದರ ಕೀರ್ತಿಯನ್ನು ತಾವೇ ಪಡೆಯುತ್ತಿವೆ. ಈ ಅಂಶವನ್ನು ಸಚಿವಾಲಯ ಗಮನಿಸುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. (kpc)
