

ಕರಾವಳಿ, ಮಲೆನಾಡಿನ ನದಿಗಳನ್ನು ಬಯಲುನಾಡಿನ ನದಿಗಳಿಗೆ ಜೋಡಿಸುವ ನದಿ ಜೋಡನೆ ಯೋಜನೆ ಅವೈಜ್ಞಾನಿಕ ಎಂದು ಪ್ರತಿಪಾದಿಸಿರುವ ಶಿರಸಿ ಸೋಂದಾದ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಈ ನದಿ ಜೋಡನೆ ಯೋಜನೆಯಿಂದ ಜೀವವೈವಿಧ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ.
ಪರಿಸರ ಕೆಲಸದ ಮೂಲಕ ಹಸಿರುಸ್ವಾಮಿ ಎಂದೇ ಖ್ಯಾತರಾಗಿರುವ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನದಿ ತಿರುವು ಯೋಜನೆಯನ್ನು ವಿರೋಧಿಸುತ್ತಾ ಬಂದವರು. ಈಗ ನದಿ ಜೋಡನೆ ಯೋಜನೆ ಕೂಡಾ ಪರಿಸರಕ್ಕೆ ಪೂರಕ ಅಲ್ಲ ಎಂದಿರುವ ಅವರು ನದಿ ಜೋಡನೆ ಯೋಜನೆ ಕೈ ಬಿಡುವಂತೆ ಸರ್ಕಾರವನ್ನು ಆಗ್ರಹಿಸುವ ಅವರ ಆಗ್ರಹವನ್ನು ಪುನರುಚ್ಚರಿಸಿದ್ದಾರೆ.
ಸಿದ್ಧಾಪುರದ ಹೇರೂರಿನಲ್ಲಿ ಜಿಲ್ಲಾ ಜೀವವೈವಿಧ್ಯತಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು ಈ ಆಗ್ರಹ ಮಾಡಿದರು. ಈ ಸಮಾರಂಭವನ್ನು ರಾಜ್ಯ ಜೀವವೈವಿಧ್ಯತಾ ಮಂಡಳಿ ಸ್ಥಳಿಯ ಆಡಳಿತಗಳ ಸಹಕಾರದಿಂದ ಆಯೋಜಿಸಿತ್ತು. ಇದೇ ಸಮಾರಂಭದಲ್ಲಿ ಸ್ಥಳಿಯ ಸಾಧಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಪರಿಸರ ರಕ್ಷಣೆ, ಜೀವವೈವಿಧ್ಯತೆ ರಕ್ಷಣೆ ಈ ಕಾಲದ ಅನಿವಾರ್ಯತೆಯಾಗಿದ್ದು ಸರ್ಕಾರದಿಂದ ರಾಜ್ಯದಾದ್ಯಂತ ಈ ಕೆಲಸಗಳಿಗೆ ಆದ್ಯತೆ ನೀಡಲು ನಿರ್ಧೇಶನ ನೀಡುವುದಾಗಿ ತಿಳಿಸಿದರು.



