ಮನುಭಾರತ’ ಪುಸ್ತಕ ಬಿಡುಗಡೆ: ಮಾಧ್ಯಮಗಳಿಂದು ವ್ಯಾಪಾರೀಕರಣವಾಗಿ ಸಾಕುನಾಯಿಗಳಾಗಿವೆ – ಸಿದ್ದರಾಮಯ್ಯ
‘ಮನುಭಾರತ’ ಪುಸ್ತಕ ಬಿಡುಗಡೆ ಮಾಡಿದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಧ್ಯಮಗಳಿಂದು ವ್ಯಾಪಾರೀಕರಣವಾಗಿ ಸಾಕುನಾಯಿಗಳಾಗಿವೆ ಎಂದು ಹೇಳಿದ್ದಾರೆ.
ಬೆಂಗಳೂರು: ‘ಮನುಭಾರತ’ ಪುಸ್ತಕ ಬಿಡುಗಡೆ ಮಾಡಿದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಧ್ಯಮಗಳಿಂದು ವ್ಯಾಪಾರೀಕರಣವಾಗಿ ಸಾಕುನಾಯಿಗಳಾಗಿವೆ ಎಂದು ಹೇಳಿದ್ದಾರೆ.
ಪತ್ರಕರ್ತ ಎಂ.ಎಸ್ ಮಣಿ ವಿರಚಿತ ‘ಮನು ಭಾರತ’ ಪುಸ್ತಕವನ್ನು ಸಿದ್ದರಾಮಯ್ಯ ಶನಿವಾರ ಕುಮಾರಕೃಪದ ಸರ್ಕಾರಿ ನಿವಾಸದಲ್ಲಿ ಬಿಡುಗಡೆ ಮಾಡಿದರು.
ಬಳಿಕ ಸುದ್ದಿಗಾರರು ಮಾತನಾಡಿದ ಅವರು ಎಂ.ಎಸ್ ಮಣಿ ಬರೆದಿರುವ ಆರನೇ ಪುಸ್ತಕ ಇದಾಗಿದ್ದು, ಪ್ರಸಕ್ತ ಸನ್ನಿವೇಶಗಳನ್ನು ಆಧರಿಸಿ ಬರೆದಿದ್ದಾರೆ. ಟಿವಿ ಬಂದ ಮೇಲೆ ಪುಸ್ತಕ ಓದುವುದೇ ನಿಂತಿದೆ. ಎಲ್ಲರೂ ಇಂದು ಟಿವಿಗಳ ಕಡೆ ತಿರುಗಿದ್ದಾರೆ. ಇಂದು 1500 ಟಿವಿ ಚಾನಲ್ಸ್ ಗಳು ದೇಶದಲ್ಲಿವೆ. ನಾನು ನ್ಯೂಸ್ ಬಿಟ್ಟು ಬೇರೆ ನೋಡುವುದಿಲ್ಲ. ಆದರೆ ಎಲ್ಲಾ ಪತ್ರಿಕೆಗಳನ್ನು ಓದುತ್ತೇನೆ. ಎಲ್ಲಾ ಚಾನಲ್ ಸರಿ ಇಲ್ಲ ಎಂದು ಹೇಳುವುದಿಲ್ಲ. ಎಲ್ಲಾ ಪತ್ರಿಕೆಗಳು ಸರಿ ಇವೆ ಎಂದು ಹೇಳುವುದಿಲ್ಲ.
ಮಾಧ್ಯಮ ವ್ಯಾಪಾರೀಕರಣವಾಗಿದೆ. ಜನರ ಅಭಿರುಚಿ, ಅವರ ಸಮಸ್ಯೆ ಬಿಂಬಿಸಬೇಕು. ಮಾಧ್ಯಮಗಳು ಮಾಜದ ಅಂಕುಡೊಂಕುಗಳನ್ನ ತಿದ್ದಬೇಕು. ಸಂವಿಧಾನ ಕಾಯುವ ನಾಯಿಗಳಾಗಬೇಕು. ಆದರೆ ಇವತ್ತು ಮಾಧ್ಯಮಗಳು ಸಾಕುನಾಯಿಗಳಾಗಿವೆ. ಸ್ವಾತಂತ್ರ ಪೂರ್ವದಲ್ಲಿ ಬಹಳ ಪರಿಣಾಮಕಾರಿಯಾಗಿದ್ದ ಪತ್ರಿಕೋದ್ಯಮ ಆದರೀಗ ವ್ಯಾಪಾರೀಕರಣವಾಗಿವೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ದರ್ಶನ್ ಸುದ್ದಿ ನೋಡಿ ನೋಡಿ ಬೇಸರವಾಯಿತು. ಸುಮಲತಾ ಸುದ್ದಿ ಹಾಕಿದ್ದೇ ಹಾಕಿದ್ದು, ಅವರ ವೈಯುಕ್ತಿಕ ವಿಚಾರ ದಿನವೆಲ್ಲ ಹಾಕಿದರೆ ಅದರಿಂದ ಜನಸಾಮಾನ್ಯರಿಗೆ ಏನು ಪ್ರಯೋಜನ? ಯಾವಾಗ ಟಿವಿ ಸ್ವಿಚ್ ಹಾಕಿದ್ರೂ ಅದೇ ಬರುತ್ತಿರುತ್ತೆ ಎಂದು ವ್ಯಂಗ್ಯವಾಡಿದರು. ಮೀಸಲಾತಿ ಬಗ್ಗೆ ಇವತ್ತು ಮಾತನಾಡುತ್ತಿಲ್ಲ. ಮಾತನಾಡಬೇಕಾದವರೇ ಇಂದು ಮಾತನಾಡುತ್ತಿಲ್ಲ.
ಮಂಡಲ್ ವರದಿ ವಿರೋಧಿಸಿದವರು ಸುಮ್ಮನಾಗಿದ್ದಾರೆ. ಮೀಸಲಾತಿ ಬಗ್ಗೆ ಮಾತನಾಡುವುದು ನಮಗೂ ಕಷ್ಟವೇ. ಸಿದ್ದರಾಮಯ್ಯ ದಾರಿ ತಪ್ಪಿಸಿದ ಎನ್ನುತ್ತಾರೆ. ಬಸವಣ್ಣನವರ ವಿಚಾರಧಾರೆ ಇಂದು ಪ್ರಸ್ತುತವಾಗಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಪೌರತ್ವ ಕಾಯ್ದೆಯನ್ನು ಎರಡನೇ ದಿನದಲ್ಲಿ ಜಾರಿಗೆ ತಂದರು. ಒಂದು ಸಮುದಾಯವನ್ನೇ ಗುರಿಯಾಗಿಟ್ಟುಕೊಂಡು ಇದನ್ನು ತಂದರು. ಇದಕ್ಕೆ ಸಾಕಷ್ಟು ವಿರೋಧ ಎದುರಾಯಿತು. ದೇಶದಲ್ಲಿ ಇದಕ್ಕೆ ಮಾತ್ರ ಎಲ್ಲ ಕಡೆ ವಿರೋಧವಿದೆ. ಏನಾದರು ಮಾತನಾಡಿದರೆ ಬಿಜೆಪಿಗರು ತಿರುಗಿಬೀಳುತ್ತಾರೆ.
ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಬಿಂಬಿಸುತ್ತಾರೆ. ಮನುವಾದಿಗಳು ಸಂವಿಧಾನಕ್ಕೆ ವಿರುದ್ಧವಾದವರು. ಅದಕ್ಕೆ ಬಿಜೆಪಿಗರು ವಿಧಾನ ಬದಲಾವಣೆಗೆ ಒತ್ತಾಯಿಸುತ್ತಿದ್ದಾರೆ. ಬಿಜೆಪಿ ಸಂಸದ, ಶಾಸಕರು ಸಂವಿಧಾನ ಬದಲಾವೆಣೆಗೆ ಮಾತನಾಡುತ್ತಲೇ ಇದ್ದಾರೆ. ಇಂತಹವರು ಜನಪ್ರತಿನಿಧಿಗಳಾಗಲು ಲಾಯಕ್ಕಿಲ್ಲ. ಕೇಂದ್ರದಲ್ಲಿ ಮಂತ್ರಿಯಾಗಿದ್ದ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಾಲವಣೆ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದರೂ ಅಂತವರನ್ನು ಪ್ರಧಾನಿ ಸಚಿವಸ್ಥಾನದಲ್ಲಿ ಮುಂದುವರೆಸುತ್ತಾರೆ. ಆದರೆ ಒಂದು ವೇಳೆ ನಾನೇ ಪ್ರಧಾನಿಯಾಗಿದ್ದರೆ ಸುಮ್ಮನಿರುತ್ತಿರಲಿಲ್ಲ ಆ ಕ್ಷಣದಲ್ಲಿಯೇ ಅವನನ್ನು ಡಿಸ್ಮಿಸ್ ಮಾಡುತ್ತಿದ್ದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ದೇಶದ ಆರ್ಥಿಕ ಪರಿಸ್ಥಿತಿ ಏನಾಗಿದೆ? ಏಳು ವರ್ಷದಲ್ಲಿ ಜಿಡಿಪಿ ಏನಾಗಿದೆ? ಬಡತನದ ರೇಖೆಯಲ್ಲಿರುವವರು ಮೇಲೆ ಬಂದಿದ್ದಾರೆಯೇ? ಏಳು ವರ್ಷದಲ್ಲಿ ಮೋದಿ ಏನು ಮಾಡಿದ್ದಾರೆ ಹೇಳಲಿ? ಬಡತನ ಕಡಿಮೆ ಮಾಡಿದ್ದಾರೆಯೇ? ಮೇಲಿದ್ದ ಕುಟುಂಬ ಬಡತನಕ್ಕೆ ಇಳಿದಿದ್ದಾರೆ.
ಪೆಟ್ರೋಲ್ ಬೆಲೆ 105 ರೂ. ಡಿಸೇಲ್ ಬೆಲೆ 95 ರೂ.ಗೆ ಏರಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲವೂ ಹಾಳಾಗಿದೆ. ಪೆಟ್ರೋಲ್ ಬೆಲೆ ಏರಿಕೆಗೆ ರಾಜ್ಯಗಳ ಸೆಸ್ ಎಂದು ಹೇಳುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆಯಮ್ಮನಿಗೆ ಸೆಸ್ ಬಗ್ಗೆ ಏನಾದರೂ ಗೊತ್ತಿದೆಯೇ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬೆಂವಿವಿ ಸಂವಹನ ವಿಭಾಗದ ಮುಖ್ಯಸ್ಥ ಡಾ.ಬಿ.ಕೆ. ರವಿ ಮಾತನಾಡಿ, ಸಿದ್ದರಾಮಯ್ಯ ಇತ್ತೀಚೆಗಷ್ಟೇ ಕ್ಲಬ್ ಹೌಸ್ ಸೇರಿದ್ದಾರೆ. ಕಳೆದ ಭಾನುವಾರ 4 ತಾಸು ಮಾತನಾಡಿದ್ದಾರೆ. ಅವರ ರಾಜಕೀಯ ಜೀವನದ ಬಗ್ಗೆ ಮಾತನಾಡಿದ್ದಾರೆ. ಅಂದು ಒಂದೇ ದಿನ 14 ಸಾವಿರ ಜನ ಭಾಗವಹಿಸಿದ್ದರು. ಸಿದ್ದರಾಮಯ್ಯ ಜೊತೆ ನೂರಾರು ಜನ ಮಾತನಾಡಿದ್ದಾರೆ. ಇಂದು ಅವರೇ ಈ ಗ್ರಂಥ ಬಿಡುಗಡೆ ಮಾಡಿದ್ದಾರೆ. ಇಂದಿನ ಮಾಧ್ಯಮಗಳ ಮೇಲೆ ಬೆಳಕು ಚೆಲ್ಲುವ ಗ್ರಂಥ ಇದು ಎಂದರು. (kpc)