

ಉರಿಯುವ ಬಿರಿ ಬೇಸಿಗೆ ಮನೆಯಿಂದ ಹೊರಬರದ ಲಾಕ್ಡೌನ್ ನಿಯಮ ಇವುಗಳಿಂದ ಮನೆಯಲ್ಲೇ ಲಾಕ್ ಆಗಿದ್ದ ಜನರಿಗೆ ಈಗ ಪ್ರವಾಸದ ಖಯ್ಯಾಲಿ ಗರಿಗೆದರಿದೆ.ಇದರಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಬರುವವರ ಸಂಖ್ಯೆ ಹೆಚ್ಚಿದೆ. ಪ್ರವಾಸಿ ಸ್ಥಳಗಳಿಗೆ ಬರುವ ಜನರು ಮೋಜುಮಜಾ ಜೊತೆಗೆ ಮಸ್ತಿ ಮಾಡುತ್ತಾ ವಾಹನ ಸವಾರರು, ಸ್ಥಳಿಯರಿಗೆ ತೊಂದರೆ ಮಾಡುತ್ತಿರುವ ಬಗ್ಗೆ ದೂರುಗಳೂ ಬರುತ್ತಿವೆ.
ಸಮೀಪದ ಜೋಗ, ನೈಸರ್ಗಿಕ ಕಲ್ಲಿನ ಸಂಕ, ಜೊತೆಗೆ ಹುಸೂರು ಜಲಪಾತಕ್ಕೆ ಬರುವ ಹೊರಜಿಲ್ಲೆಗಳ ಜನ ಈಗ ಉತ್ತರ ಕನ್ನಡ ಜಿಲ್ಲೆಗೆ ಇಲ್ಲಿಯ ಪೋಲೀಸ್ ವ್ಯವಸ್ಥೆಗೆ ಕಂಟಕರಾಗಿದ್ದಾರೆ.
ಇದೇ ತಿಂಗಳ ಮೊದಲ ವಾರದಲ್ಲಿ ಹುಸೂರು ಜಲಪಾತದ ಬಳಿ ಅನುಚಿತವಾಗಿ ನಡೆದುಕೊಂಡ ಪ್ರವಾಸಿಗರಿಗೆ ಪೋಲೀಸರು ಏಟುಕೊಟ್ಟ ನಂತರ ಈಗ ರವಿವಾರ ದಿನ ಜೋಗ ಸಾಗರ ರಸ್ತೆಯಲ್ಲಿ ಶಿವಮೊಗ್ಗದ ಯುವಕರ ತಂಡವೊಂದು ಅನುಚಿತವಾಗಿ ನಡೆದುಕೊಂಡು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. (ಶಿವಮೊಗ್ಗ ನೋಂದಣಿಯ ಕೆಂಪು ಡಿಜಾಯರ್ ವಾಹನದಲ್ಲಿ ಬಂದಿದ್ದ ಖಾಸಗಿ ಕಂಪನಿಯ 5 ಜನ ಉದ್ಯೋಗಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತಿದ್ದಾರೆ.)
ಕಂಪನಿ.ಕಾಲೇಜಿನ ಸ್ನೇಹಿತರೆಂದು ಬರುವ ಪ್ರವಾಸಿಗಳು ಮಾಡುವ ಪುಂಡಾಟಕ್ಕೆ ಬ್ರೇಕ್ ಹಾಕಲು ಉತ್ತರ ಕನ್ನಡ ಪೊಲೀಸ್ ವ್ಯವಸ್ಥೆ ಪ್ರಯತ್ನಿಸುತ್ತಿದೆ. ಇದರ ಅಂಗವಾಗಿ ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗಗಳ ಗಡಿಭಾಗದ ಮನ್ಮನೆಯಲ್ಲಿ ತಪಾಸಣಾಚೌಕ ನಿರ್ಮಿಸಿರುವ ಪೊಲೀಸ್ ಇಲಾಖೆ ಮಳೆಯಲ್ಲಿ ಕುಡಿದು, ಕುಣಿದು ಸ್ಥಳಿಯರಿಗೆ ತೊಂದರೆಕೊಡುವ ಪ್ರವಾಸಿಗರ ಮೇಲೆ ಕಣ್ಣಿಟ್ಟಿದೆ.
ಕರೋನಾ ಲಾಕ್ಡೌನ್ ಅವಧಿಯಲ್ಲಿ ಲಾಕ್ ಆಗಿದ್ದ ಜನರು ಈಗ ಅನ್ ಲಾಕ್ ಲಾಭ ಪಡೆದು ಪ್ರವಾಸಕ್ಕೆ ಬರುವುದು ಹೆಚ್ಚಿದೆ. ಈ ಕಾರಣದಿಂದಾಗಿ ದಿನವಿಡೀ ಓಡಾಡುವ ವಾಹನಗಳಿಂದಲೂ ಸ್ಥಳಿಯರಿಗೆ ತೊಂದರೆ ಆಗಿದೆ. ಈ ತೊಂದರೆ ಬಗೆಹರಿಸಲು ಪ್ರಯತ್ನಿಸುತ್ತಿರುವ ಪೊಲೀಸರು 112,ಪೊಲೀಸ್ ತಪಾಸಣಾ ನಾಕೆಗಳ ಮೂಲಕ ಪ್ರಯತ್ನಿಸುತಿದ್ದಾರೆ. ಅನುಚಿತವಾಗಿ ವರ್ತಿಸಿ ಪೊಲೀಸ್ ಇಲಾಖೆಯಿಂದ ತೊಂದರೆಗೆ ಒಳಗಾಗುವುದಕ್ಕಿಂತ ಶಿಸ್ತಿನಿಂದ ಪ್ರವಾಸ ಮಾಡಿ ಸುರಕ್ಷಿತವಾಗಿ ಮರಳಲು ಈ ವರದಿ ಸಹಾಯಕವಾಗಲಿ ಎನ್ನುವುದು ನಮ್ಮ ಮುನ್ನೆಚ್ಚರಿಕೆಯ ಸಂದೇಶ.
