ಸಿದ್ಧಾಪುರದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲು ಕಾಂಗ್ರೆಸ್ ನಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಎದುರು ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಲು ಕಾಲೇಜು ವಿದ್ಯಾರ್ಥಿಗಳು ತಹಸಿಲ್ಧಾರ ಕಛೇರಿ ಎದುರು ಧರಣಿ ನಡೆಸಿ ಪ್ರತಿಭಟನೆ ನಡೆಸಿದರು.
ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆ ಕೈ ಬಿಡಬೇಕು, ಶೀಘ್ರ ತರಗತಿಗಳನ್ನು ಪ್ರಾರಂಭಿಸಬೇಕು ಮತ್ತು ಪರೀಕ್ಷೆ, ತರಗತಿ ನಡೆಸುವ ಗೊಂದಲಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸುವ ಜೊತೆಗೆ ಕೆಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುವ ಮನವಿಯನ್ನು ತಹಸಿಲ್ಧಾರರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ನೀಡಿದರು.
ಈ ವೇಳೆ ಸೇರಿದ್ದ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೆಲವು ಕಾಲ ತಹಸಿಲ್ಧಾರ ಕಛೇರಿ ಎದುರು ಸಮಾವೇಶಗೊಂಡು ತಹಸಿಲ್ಧಾರರ ಅನುಪಸ್ಥಿತಿಯಲ್ಲಿ ಲಭ್ಯ ಅಧಿಕಾರಿಗಳಿಗೆ ಮನವಿ ನೀಡದೆ, ತಹಸಿಲ್ಧಾರರ ಮೂಲಕವೇ ಮನವಿ ಅರ್ಪಿಸಿದರು. ಈ ವೇಳೆ ಶಶಾಂಕ ಗೌಡರ್, ಹೃತಿಕ ಜೊಗಳೇಕರ್, ಅಭಿಶೇಕ ನಾಯ್ಕ ಸೇರಿದ ಕೆಲವು ವಿದ್ಯಾರ್ಥಿಮುಖಂಡರು ನೇತೃತ್ವವಹಿಸಿದ್ದರು.
ಕಾಂಗ್ರೆಸ್ ಘಟಕದ ಆಯೋಜನೆ ಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ನೂರಾರು ಕಾರ್ಯಕರ್ತರು ಸರ್ಕಾರ, ಶಾಸಕ ವಿಧಾನಸಭಾ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಬೆಳಿಗ್ಗೆ 11 ರಿಂದ ಪ್ರಾರಂಭವಾದ ಧರಣಿ ಸತ್ಯಾಗ್ರಹದ ಜಾಗಕ್ಕೆ ಶಿರಸಿ ಉಪವಿಭಾಗಾಧಿಕಾರಿಗಳೇ ಬಂದು ಮನವಿ ಸ್ವೀಕರಿಸಬೇಕೆಂದು ಮಾಡಿದ ಆಗ್ರಹಕ್ಕೆ
ಜಿಲ್ಲಾಡಳಿತ ಸ್ಫಂದಿಸಿಲ್ಲ ಈ ಹಿನ್ನೆಲೆಯಲ್ಲಿ ಮಧ್ಯಾಹ್ನದ ವರೆಗೂ ನಡೆದ ಪ್ರತಿಭಟನೆಯ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರು ದೇಶ, ರಾಜ್ಯದಲ್ಲಿ ಅರಾಜಕತೆ ಉಂಟಾಗಿದೆ. ಬಿ.ಜೆ.ಪಿ. ಅಧಿಕಾರದಿಂದ ಮುಕ್ತವಾಗುವವರೆಗೆ ದೇಶಕ್ಕೆ ಅನುಕೂಲಕರ ವಾತಾವರಣವಿಲ್ಲ. ಬಿ.ಜೆ.ಪಿ. ಮುಕ್ತ ಆಡಳಿತ ಮಾಡುವವರೆಗೆ ತಮ್ಮ ಹೋರಾಟ ಮುಂದುವರಿಯಲಿದೆ ಎಂದರು. ನಂತರ ಜಿಲ್ಲಾಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ತಹಸಿಲ್ಧಾರ್ ಪ್ರಸಾದ್ ಮನವಿ ಸ್ವೀಕರಿಸಿದ ನಂತರ ಪ್ರತಿಭಟನೆ ಮುಕ್ತಾಯವಾಯಿತು.
ಪರೇಶ್ ಮೇಸ್ತ ಸಾವಿನ ಲಾಭಪಡೆದ ಬಿ.ಜೆ.ಪಿ. ಜನಪ್ರತಿನಿಧಿಗಳು ಅವರ ಕುಟುಂಬ ಜಿಲ್ಲೆಯ ಜನರ ಆಶಯಕ್ಕೆ ಸ್ಫಂದಿಸಿಲ್ಲ ತಳಮಟ್ಟದಿಂದ ಪ್ರಧಾನಿ ಮೋದಿಯವರೆಗೆ ಸುಳ್ಳಿನಿಂದಲೇ ಜನರನ್ನು ವಂಚಿಸುವ ಕಲೆ ಬಿ.ಜೆ.ಪಿ. ಗೆ ಸಿದ್ಧಿಸಿದೆ. ಸುಳ್ಳು, ಮತಾಂಧತೆ, ಅರಾಜಕತೆಯ ಬಿ.ಜೆ.ಪಿ. ಆಡಳಿತ ಕಿತ್ತೆಸೆಯವವರೆಗೆ ನಮ್ಮ ಹೋರಾಟ ನಿರಂತರವಾಗಿರಲಿದೆ. ಅಧಿಕಾರಿಗಳು, ಆಡಳಿತದ ಮೇಲೆ ಹಿಡಿತವಿಲ್ಲದ ಬಿ.ಜೆ.ಪಿ. ಜನಪ್ರತಿನಿಧಿಗಳು ಬೇಜವಾಬ್ಧಾರಿಯಿಂದ ವರ್ತಿಸುತ್ತಿರುವ ಲಾಭ ಪಡೆಯುತ್ತಿರುವ ಅಧಿಕಾರ ಶಾಹಿ ಜನರಿಗೆ ಅನ್ಯಾಯ ಮಾಡುತ್ತಿದೆ.- ವಸಂತ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ