

- ಮುಖ್ಯಮಂತ್ರಿಗಳು ರಬ್ಬರ್ ಸ್ಟಾಂಪ್- ಇಂಟರೆಸ್ಟಿಂಗ್ ಹೇಳಿಕೆ ಕೊಟ್ಟ ದೇಶಪಾಂಡೆ
* ಕರೋನಾ, ಪ್ರವಾಹ ಸರ್ಕಾರದ ವಿಫಲತೆಗೆ ಸಾಕ್ಷಿ, ವೈಯಕ್ತಿಕ ಆರೋಪ, ಟೀಕೆ ಬೇಡ ಪ್ರಚಾರದಿಂದ ಜನರನ್ನು ಮರಳುಮಾಡಲು ಸಾಧ್ಯವಿಲ್ಲ ಎಂದ ಹಿರಿಯ ನಾಯಕ
* ಕಾಂಗ್ರೆಸ್ ರಚನಾತ್ಮಕವಾಗಿ ಕೆಲಸ ಮಾಡುತ್ತಿದೆ, ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಕೆ.ಪಿ.ಸಿ.ಸಿ. ಅಧ್ಯಕ್ಷ ಶಿವಕುಮಾರ ಬಗ್ಗೆ ದೇಶಪಾಂಡೆ ಪ್ರಶಂಸೆ
- ಘೊಟ್ನೇಕರ್ ಹಳಿಯಾಳದಲ್ಲಿ ಅವಕಾಶ ಕೇಳುವುದರಲ್ಲಿ ತಪ್ಪಿಲ್ಲ, ಅವರಿಗೂ ಹಕ್ಕು, ಅವಕಾಶವಿದೆ. ಹೈಕಮಾಂಡ್ ಯಾರಿಗೆ ಅವಕಾಶ ನೀಡಬೇಕೆಂಬುದನ್ನು ನಿರ್ಣಯಿಸುತ್ತದೆ.
ಕೋವಿಡ್, ಪ್ರವಾಹ ಪರಿಸ್ಥಿತಿ, ಜನಸಾಮಾನ್ಯರ ಬವಣೆ ಇವುಗಳಿಗೆ ಸ್ಫಂದಿಸದ ಸರ್ಕಾರ ಮಾಧ್ಯಮಗಳಲ್ಲಿ ದೊಡ್ಡ ಜಾಹೀರಾತಿನಿಂದ ವಿಜೃಂಬಿಸಬಹುದೆನ್ನುವ ಭ್ರಮೆಯಿಂದ ಹೊರ ಬರಬೇಕೆಂದು ಮಾಜಿ ಸಚಿವ,ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಅವಲೋಕಿಸಿ, ಸಂತೃಸ್ತರ ಅಹವಾಲು ಕೇಳಿದ ನಂತರ ಮಾತನಾಡಿದ ಅವರು ಕೋವಿಡ್ ಸಾವುಗಳ ನಿಖರ ಸಂಖ್ಯೆ ಕೇಂದ್ರ ಸರ್ಕಾರಕ್ಕೆ ತಿಳಿದಿಲ್ಲ, ಪ್ರವಾಹ, ಮಳೆ ಹಾನಿ ಬಗ್ಗೆ ಗಮನಹರಿಸಬೇಕಿದ್ದ ರಾಜ್ಯ ಸರ್ಕಾರ ಇನ್ನೂ ಕಾರ್ಯಪ್ರವೃತ್ತವಾಗಿಲ್ಲ. ಬಹಳಷ್ಟು ಕಡೆ ಜನಪ್ರತಿನಿಧಿಗಳು, ಶಾಸಕರು,ಸಂಸದರು ಬಂದಿಲ್ಲ ಎಂದು ಜನರು ತಮ್ಮ ಅಹವಾಲು ತೋಡಿಕೊಳ್ಳುತಿದ್ದಾರೆ. ಜನರ ಬವಣೆಗೆ ಸ್ಫಂದಿಸದ ಸರ್ಕಾರದಿಂದ ಏನು ಉಪಯೋಗ ಎಂದು ಪ್ರಶ್ನಿಸಿದ ಅವರು ಮುಖ್ಯಮಂತ್ರಿಗಳು, ಶಾಸಕರು, ವಿಧಾನಸಭಾ ಅಧ್ಯಕ್ಷರು ಯಾರ ವಿರುದ್ಧವೂ ವೈಯಕ್ತಿಕ ಹೇಳಿಕೆ, ದಾಳಿ ಮಾಡುವ ಜಾಯಮಾನ ನಮ್ಮದಲ್ಲ. ವಿಷಯಾಧಾರಿತವಾಗಿ ಟೀಕಿಸುವುದು, ಅಭಿವೃದ್ಧಿ, ಜನತೆಯ ಒಳಿತಿನ ಬಗ್ಗೆ ಮಾತನಾಡುವುದು ನಮ್ಮ ರೀತಿ ಎಂದರು.
ಕಾಂಗ್ರೆಸ್ ನ ಪ್ರವಾಹ ಪರಿಸ್ಥಿತಿ ಅವಲೋಕನ ಸಮೀತಿಯ ಅಧ್ಯಕ್ಷನನ್ನಾಗಿ ಪಕ್ಷ ನನ್ನನ್ನು ನೇಮಕಮಾಡಿದೆ. ರಾಜ್ಯದಾದ್ಯಂತ ಮಳೆಹಾನಿ, ಪ್ರವಾಹ ಪರಿಸ್ಥಿತಿ ಅವಲೋಕನ ಮಾಡುತ್ತಾ ಪ್ರಾಮಾಣಿಕವಾಗಿ ನಮಗನಿಸಿದ್ದೇನೆಂದರೆ..ರಾಜ್ಯಸರ್ಕಾರ ಪ್ರವಾಹ ಪೀಡಿತರ ಕಣ್ಣೀರು ಒರೆಸುವ ಕೆಲಸ ಬಿಟ್ಟು ಬೇರೆ ವ್ಯವಹಾರಗಳಲ್ಲಿ ಮಗ್ನವಾಗಿದೆ. ಕಳೆದ ವರ್ಷದ ಪ್ರವಾಹ ಪೀಡಿತರ ಪರಿಹಾರಧನವೇ ಫಲಾನುಭವಿಗಳಿಗೆ ದೊರೆತಿಲ್ಲ. ಕೇಂದ್ರ ರಾಜ್ಯ ಸರ್ಕಾರಗಳು ಪ್ರವಾಹದಿಂದ ಮನೆ ಕಳೆದುಕೊಂಡಿರುವ ಎಷ್ಟು ಜನರಿಗೆ 5 ಲಕ್ಷ ಪರಿಹಾರ ನೀಡಿದ್ದಾರೆ. ಕೋವಿಡ್ ನಿಂದ ಮೃತರಾದವರಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗಿದೆಯೆ? ಬರೀ ಘೋಷಣೆಗಳ ಮೂಲಕ ಸರ್ಕಾರ ನಡೆಸಲು ಸಾಧ್ಯವಿಲ್ಲ. ಕೋವಿಡ್,ಪ್ರವಾಹ ಪರಿಸ್ಥಿಯ ಸಂಪೂರ್ಣ ವಿವರಗಳನ್ನು ಜನರ ಮುಂದಿಡಬೇಕು. ಸಾರ್ವಜನಿಕರಿಗೆ ನೀಡಿದ ಪರಿಹಾರ, ಜನರಿಗೆ ಸ್ಫಂದಿಸಿದ ವಿವರಗಳನ್ನು ಬಹಿರಂಗಪಡಿಸಬೇಕು ಎಂದರು.
ಮುಖ್ಯಮಂತ್ರಿ ಬೊಮ್ಮಾಯಿ ನಮ್ಮ ಜೊತೆಗಿದ್ದವರಲ್ಲ ನಾವು ಅವರ ತಂದೆ ಎಸ್.ಆರ್. ಬೊಮ್ಮಾಯಿ ಜೊತೆಗಿದ್ದವರು. ಯಡಿಯೂರಪ್ಪನವರ ಆದೇಶ ಪಾಲನೆ ಮಾಡುವ ಮುಖ್ಯಮಂತ್ರಿ ಎನ್ನುವ ಆರೋಪ ಹುರುಳಿಲ್ಲದ್ದೋ ಸತ್ಯವೋ? ಎನ್ನುವುದಕ್ಕೆ ಸಮಯ ಬೇಕು. ಯಡಿಯೂರಪ್ಪ ನೆರವಿನಿಂದ ಮುಖ್ಯಮಂತ್ರಿಯಾದ ಕಾರಣಕ್ಕೆ ಅವರ ರಬ್ಬರ್ ಸ್ಟಾಂಪ್ ಎನ್ನಲಾಗುವುದಿಲ್ಲ ಕೆಲವು ಸಮಯ ನೋಡಿ ಇಂಥ ತೀರ್ಮಾನಕ್ಕೆ ಬರಬೇಕಾಗುತ್ತದೆ ಎಂದರು.
ಯಡಿಯೂರಪ್ಪ ಒಂದು ಸರ್ಕಾರವನ್ನು ಬೀಳಿಸಿ ಯಾವ ಮಾರ್ಗದ ಮೂಲಕ ಸರ್ಕಾರ ರಚಿಸಿದ್ದರು ಎನ್ನುವುದನ್ನು ರಾಜ್ಯದ ಜನತೆ ನೋಡಿದ್ದಾರೆ. ಒಂದು ಸರ್ಕಾರವನ್ನು ಬೀಳಿಸಿ ಯಾವ ಪುರುಷಾರ್ಥಕ್ಕೆ ಅವರ ಸರ್ಕಾರ ರಚನೆ ಯಾಗಿತ್ತು. ಇಷ್ಟು ಬೇಸರದಿಂದ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟ ಯಡಿಯೂರಪ್ಪ ಸರ್ಕಾರ ಬೀಳಿಸಿದ ಉದ್ದೇಶ, ಗುರಿ ಸಾಧನೆ ಮಾಡಿದ್ದಾರಾ? ಎಂದು ಪ್ರಶ್ನಿಸಿದ ದೇಶಪಾಂಡೆ ಅಭಿವೃದ್ಧಿ ಚಟುವಟಿಕೆ, ಜನಕಲ್ಯಾಣ ಕೆಲಸಗಳು ಯಾರ ಅವಧಿಯಲ್ಲಿ ಯಾವ ಸರ್ಕಾರದ ಕಾಲದಲ್ಲಿ ಆಗಿವೆ ಎನ್ನುವ ಬಗ್ಗೆ ಸಂಪೂರ್ಣ ಅಂಕಿಸಂಖ್ಯೆಗಳಿವೆ. ಪ್ರಧಾನಿ ಮೋದಿಯವರಾಗಲಿ,ಯಡಿಯೂರಪ್ಪನವರಾಗಲಿ ಯಾರೂ ಎಲ್ಲಾ ಕಾಲದಲ್ಲಿ ಎಲ್ಲರನ್ನೂ ಮೋಸಗೊಳಿಸಲು ಸಾಧ್ಯವಿಲ್ಲ ಎಂದರು.



