

ಚಂದನೆಯ ಚಿತ್ರಗಳ ಸ್ವಚ್ಛಂದ ಭಾವಗಳ
ಮನವ ಮಿಡಿಯುವ ಸಂಬಂಧಗಳ ತುಡಿತಕ್ಕೆ
ಬದುಕೆನ್ನಬಹುದೆ?
ಬದುಕೆನ್ನಬಹುದೆ?
ಬೆನ್ನಿಗೆ ಕಟ್ಟಿದ ಹಾರುವಾ ಪುಗ್ಗಿ
ಕಾಲಂಚಿಗೆ ಜಾರಿದಾ ಭಾರದ ಸರಪಳಿ
ಇವೆರಡಕ್ಕೂ ಚಿತ್ತವನಿತ್ತ ಮುಗುಳುನಗೆಯನ್ನು
ಬದುಕೆನ್ನಬಹುದೆ?
ಬದುಕೆನ್ನಬಹುದೆ?
ಬದುಕಿನ ಭಾರವನು ಹೊತ್ತ ನೊಗವನ್ನು
ನೊಗದ ಮೇಲಿರುವ ಪುಟ್ಟ ಮಗುವನ್ನು,
ಆ ಮಗುವ ನಗುವ ನೆನೆದು-ನೆನೆವ ಮನದ ಭಾವಕ್ಕೆ
ಬದುಕೆನ್ನಬಹುದೆ? ಬದುಕೆನ್ನಬಹುದೆ?
ಬಿಸಿಲಿಗೆ ಉರಿವ ದೇಹಕ್ಕೆ
ಉರಿವ ಧಗೆಗೆ ಮೈ ಬೆವರೇ
ಬಂದು ತಂಪಾಗಿಸುವ ಚಂದಕ್ಕೆ
ಮರುಕ್ಷಣದ ತಂಗಾಳಿಗೆ
ಬದುಕೆನ್ನಬಹುದೆ?
ಬದುಕೆನ್ನಬಹುದೆ?
ಹೆಚ್ಚು ಹುಚ್ಚುಗಳ ಹೆಚ್ಚೆಚ್ಚು ಹೊತ್ತು
ಹುಚ್ಚು ಹೆಚ್ಚುಗಳ ಕಿಚ್ಚಾಗಿ ಹಂಚಿ
ಹುಚ್ಚು ಕಿಚ್ಚಿನಿಂದ ಹುಟ್ಟುವ
ಸ್ವಚ್ಛಂದ ಭಾವಕ್ಕೆ
ಬದುಕೆನ್ನಬಹುದೆ?
ಬದುಕೆನ್ನಬಹುದೆ?
ಬೆಚ್ಚನೆಯ ಹಾಸಿಗೆಯ
ಮೆತ್ತನೆಯ ದಿಂಬುಗಳ
ಕನಸಿರದ ನಿದ್ರೆಗಳ
ಬದುಕೆನ್ನಬಹುದೆ?
ಬದುಕೆನ್ನಬಹುದೆ?
ನೋವು-ನಲಿವುಗಳ ಸರಿ-ತಪ್ಪುಗಳ
ಬೇಕು-ಬೇಡಗಳ ದೂರಕ್ಕೆ ದಬ್ಬಿ
ಹರಿದು ಬರುವಾ
ಒಂದಾಕಳಿಕೆಯನ್ನು ತೂಕಡಿಕೆಯನ್ನು
ಬದುಕೆನ್ನಬಹುದೆ?
ಬದುಕೆನ್ನಬಹುದೆ?
-ಪ್ರಥ್ವಿ ಪಾಟೀಲ್, ವಡಗೇರಿ
