

ದಿ ಆಲ್ಕೆಮಿಸ್ಟ್: ಕಂಡರಿಯದ ದಾರಿಯಲ್ಲಿ ಕನಸುಗಳ ಬೆನ್ನು ಹತ್ತಿ…..!
ಸ್ಪೇನ್ ದೇಶದ ದಕ್ಷಿಣ ಭಾಗವಾದ ಅಂಡಲ್ಯೂಸಿಯನ್ ಪ್ರಾಂತ್ಯದ ಒಬ್ಬ ಕುರಿ ಕಾಯುವ ಹುಡುಗ – ಸ್ಯಾಂಟಿಯಾಗೊ. ತಾನು ಸಾಕಿದ ಕುರಿಗಳನ್ನು ಮೇಯಿಸುತ್ತ, ಒಂದು ಪಾಳುಬಿದ್ದ ಚರ್ಚಿನ ಹತ್ತಿರ ವಿಶಾಲವಾಗಿ ಬೆಳೆದಿದ್ದ ಹಳೆಯ ಮರದ ಕೆಳಗೆ ಮಲಗುತಿದ್ದ. ಹೀಗೆ ಮಲಗಿದಾಗ ಆತನಿಗೆ, ಒಂದು ನಿಧಿಯ ಬಗ್ಗೆ ಆಗಾಗ ಕನಸು ಬೀಳುತಿತ್ತು. ಆ ನಿಧಿ ಎಲ್ಲಿದೆ ಎಂದು ತಿಳಿಯುವ ಮೊದಲೇ ಎಚ್ಚರವಾಗಿಬಿಡುತಿತ್ತು. ಈ ಕನಸಿನ ಜಾಡು ಹಿಡಿದು ನಿಧಿ ಹುಡುಕಿಕೊಂಡು ಇಜಿಪ್ಟ್ ದೇಶದ ಪಿರಮಿಡ್‌ಗಳ ಕಡೆಗೆ ಪ್ರಯಾಣಿಸುತ್ತಾನೆ ಸ್ಯಾಂಟಿಯಾಗೊ.
ಈ ಪ್ರಯಾಣದಲ್ಲಿ ಆತ ಕಂಡುಕೊಳ್ಳುವ ಜೀವನ ಸಾಕ್ಷಾತ್ಕಾರ ಈ ಕಾದಂಬರಿಯ ವಸ್ತು.
ನಿಧಿ ಹುಡುಕಿಕೊಂಡು ಇಜಿಫ್ತ್ ಗೆ ಹೋಗಲು, ತನ್ನ ಬಳಿ ಇರುವ ಕುರಿಗಳನ್ನು ಮಾರಲು ಸ್ಯಾಂಟಿಯಾಗೊಗೆ ಒಬ್ಬಾತ ಹೇಳುತ್ತಾನೆ. ಅಲ್ಲದೆ ಅದು (ನಿಧಿ ಹುಡುಕುವುದು – ಕನಸನ್ನು ಸಾಕ್ಷಾತ್ಕಾರಗೊಳಿಸುವುದು) ಸ್ಯಾಂಟಿಯಾಗೊ ಆಶಿಸುತ್ತಿರುವ ಜೀವನದ ಉದ್ದೇಶ ಕೂಡ ಎಂದು ತಿಳಿಸುತ್ತಾನೆ. ಅದನ್ನು ನಂಬಿ, ಹೊಟ್ಟೆಗಾಗಿ ಮತ್ತು ರಕ್ಷಣೆಗಾಗಿ ತನ್ನನ್ನೇ ನಂಬಿರುವ ಕುರಿಗಳನ್ನು ಮಾರಿ, ಆಫ್ರಿಕಾಕ್ಕೆ ಸ್ಯಾಂಟಿಯಾಗೊ ಹೊರಟುಬಿಡುತ್ತಾನೆ! ಕುರಿಕಾಯುವಾಗ, ಕುರಿ ಮತ್ತು ಉಣ್ಣೆ ಕೊಳ್ಳುತ್ತಿದ್ದ ಸಾಹುಕಾರನ ಮಗಳು ಆತನ ಆಕರ್ಷಣೆಯ ಕೇಂದ್ರವಾಗಿರುತ್ತಾಳೆ. ಸ್ವಲ್ಪ ಹಣ ಮಾಡಿಕೊಂಡು ಅವಳನ್ನೇ ಮದುವೆಯಾಗಬೇಕೆಂಬ ಕನಸನ್ನೂ ಕಾಣುತ್ತಿದ್ದ ಸ್ಯಾಂಟಿಯಾಗೊ! ಆದರೆ ಈಗ, ಅದನ್ನು ಮೀರಿದ ಇನ್ನೊಂದು ಕನಸಿನ ಹಿಂದೆ ಬಿದ್ದಿದ್ದಾನೆ!
ನಿಧಿ ಹುಡುಕಿಕೊಂಡು ಆಫ್ರಿಕಾದಲ್ಲಿ ಕಾಲಿಟ್ಟ ಆತನಿಗೆ ಅಲ್ಲಿನ ಭಾಷೆಯ ಅರಿವಿಲ್ಲ; ಸಂಸ್ಕೃತಿಯ ತಿಳಿವಿಲ್ಲ; ಜನನಾಡಿಯ ಮಿಡಿತ ಗೊತ್ತಿಲ್ಲ; ಪರದೇಸಿ ಎನ್ನುವ ವಾತಾವರಣ. ಈ ಸಂದರ್ಭದಲ್ಲಿ ಕುರಿ ಮಾರಿ ಖರ್ಚಿಗಾಗಿ ಇಟ್ಟುಕೊಂಡಿದ್ದ ಹಣವನ್ನು ಅಲ್ಲಿನೊಬ್ಬ ಕಳ್ಳ ದೋಚಿ ಪರಾರಿಯಾಗುತ್ತಾನೆ. ಹೀಗಾಗಿ, ಗುರಿ ಮುಟ್ಟಲು ಬೇಕಾಗುವ ಹಣ ಹೊಂದಿಸಿಕೊಳ್ಳಲು ಸ್ಯಾಂಟಿಯಾಗೊ, ಒಬ್ಬ ಹರಳುಗಳ ವ್ಯಾಪಾರಿಯ ಹತ್ತಿರ ಕೆಲಸಕ್ಕೆ ಸೇರುತ್ತಾನೆ.
ಪಿರಮಿಡ್‌ಗಳು ಇರುವ ಜಾಗ ಮುಟ್ಟಲು ಸಾಕಾಗುವಷ್ಟು ಹಣ ಮಾಡಿಕೊಂಡು ಸ್ಯಾಂಟಿಯಾಗೊ ಮತ್ತೆ ಪ್ರಯಾಣ ಮುಂದುವರಿಸುತ್ತಾನೆ. ದಾರಿಯಲ್ಲಿ ಆತ ಫಾತಿಮಾ ಎಂಬ ಹುಡುಗಿಯನ್ನು ಬೇಟಿಯಾಗುತ್ತಾನೆ. ಅವಳ ಸೌಂಧರ್ಯ ಮತ್ತು ವ್ಯಕ್ತಿತ್ವಕ್ಕೆ ಮರುಳಾಗಿ – ತನ್ನ ಮುಖ್ಯ ಉದ್ಧೇಶವನ್ನು ಅರೆಕ್ಷಣ ಮರೆತು – ಮದುವೆಯಾಗಲು ಕೇಳುತ್ತಾನೆ. ನಿಧಿ ಹುಡುಕುವ ಮುಖ್ಯ ಗುರಿಯನ್ನು ತಲುಪಿ ಬಂದ ನಂತರ ಮದುವೆಯಾಗುವುದಾಗಿ ಫಾತಿಮಾ ಭರವಸೆ ಕೊಡುತ್ತಾಳೆ.
ಮೊದಲು ಬೇಸರವೆನಿಸಿದರೂ, ನಿಜವಾದ ಪ್ರೀತಿ, ಸಾಯುವುದಿಲ್ಲ ಮತ್ತು ತನ್ನ ಜೀವನದ ಉದ್ದೇಶವನ್ನು ಬಲಿ ಪಡೆಯಲು ಆಶಿಸುವುದಿಲ್ಲ ಎಂಬ ಅರಿವಿನೊಂದಿಗೆ ಸ್ಯಾಂಟಿಯಾಗೊ, ಮತ್ತೆ ಪ್ರಯಾಣ ಮುಂದುವರಿಸುತ್ತಾನೆ. ಈ ಮಧ್ಯೆ ದಾರಿಯಲ್ಲಿ ಸಿಕ್ಕ ಒಬ್ಬ ವಿವೇಕಿ ರಸಶಾಸ್ತ್ರಜ್ಞ, ನಿಜವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರಯತ್ನಿಸುವಂತೆ ಸ್ಯಾಂಟಿಯಾಗೊಗೆ ತಿಳಿಹೇಳುತ್ತಾನೆ. ಅವರಿಬ್ಬರೂ ಸೇರಿ ಪ್ರಯಾಣ ಮುಂದುವರಿಸುತ್ತಾರೆ. ದಾರಿಯಲ್ಲಿ ಅಲ್ಲಿನ ಬುಡಕಟ್ಟು ಜನಾಂಗಗಳು ಪರಸ್ಪರ ಯುದ್ಧ ಮಾಡುತ್ತಿರುವ ಪ್ರದೇಶದಲ್ಲಿ ಪ್ರಯಾಣಿಸುವ ಅಪಾಯದಲ್ಲಿ ಸಿಲುಕಿಕೊಳ್ಳುತ್ತಾರೆ. ಯುದ್ಧ ನಿರತ ಬುಡಕಟ್ಟು ಸೈನಿಕರು, ಇವರನ್ನು ತಡೆದು, ಇವರ ಪ್ರಯಾಣದ ಉದ್ದೇಶದ ಬಗ್ಗೆ ವಿವರಣೆ ಕೇಳಿ ಅನುಮಾನ ವ್ಯಕ್ತಪಡಿಸುತ್ತಾರೆ. ಅದಕ್ಕೆ ಹಿರಿಯ ರಸಶಾಸ್ತ್ರಜ್ಞ “ನಾನು ನಕ್ಷತ್ರಗಳ ಬಗ್ಗೆ ಅರಿತಿರುವ, ಮರಳುಗಾಡಿನಲ್ಲಿ ತಿರುಗಾಡುವ ಅಲೆಮಾರಿ” ಎಂದು – ಸ್ಯಾಂಟಿಯಾಗೊನನ್ನು ತೋರಿಸಿ – “ನನ್ನ ಸಂಗಡಿಗ, ಪ್ರಕೃತಿ ಶಕ್ತಿಗಳ ಬಗ್ಗೆ ತಿಳಿದಿರುವ ಒಬ್ಬ ರಸಶಾಸ್ತ್ರಜ್ಞ; ಅವನು ಈ ಅಸಾಮಾನ್ಯ ಶಕ್ತಿಯನ್ನು ತಮಗೆ ತೋರಿಸಲು ಬಯಸುತ್ತಾನೆ,” ಎಂದುಬಿಡುತ್ತಾನೆ. ಅಲ್ಲದೆ, ಪ್ರಯಾಣಕ್ಕೆಂದು ಸ್ಯಾಂಟಿಯಾಗೊ ಕೂಡಿಟ್ಟುಕೊಂಡಿದ್ದ ಹಣವನ್ನೆಲ್ಲಾ ಕೊಟ್ಟುಬಿಡುತ್ತಾನೆ. ಹಣ ಕಳೆದುಕೊಂಡ ಸ್ಯಾಂಟಿಯಾಗೊ ಅಸಹನೆ ತೋರಿದಾಗ, ಜೀವವೇ ಹೋಗುವ ಸಂದರ್ಭದಲ್ಲಿ ಹಣ-ಐಶ್ವರ್ಯಕ್ಕೆ ಏನು ಬೆಲೆ ಎನ್ನುತ್ತಾನೆ.
ಅಂತಿಮವಾಗಿ ಸ್ಯಾಂಟಿಯಾಗೊ ಮತ್ತು ಹಿರಿಯ ರಸಶಾಸ್ತ್ರಜ್ಞ ಪಗೋಡಾಗಳಿರುವ ಸ್ಥಳವನ್ನು ತಲುಪುತ್ತಾರೆ. ಆ ಜಾಗೆಯಲ್ಲಿ ನಿಧಿಗಾಗಿ ಅಗೆಯುತ್ತಿದ್ದಾಗ ಮತ್ತೊಮ್ಮೆ ಸ್ಯಾಂಟಿಯಾಗೊನನ್ನು ಕಳ್ಳರು ದೋಚುತ್ತಾರೆ. ಆದರೆ, ಸ್ಯಾಂಟಿಯಾಗೊ ಹುಡುಕುತ್ತಿರುವ ನಿಧಿ, ಆತ ಕುರಿ ಕಾಯುವ ಜಾಗದಲ್ಲಿರುವ ಸಿಥಿಲಗೊಂಡ ಚರ್ಚಿನ ಬಳಿಯೇ ಇದೆಯೆಂದು, ದೋಚಲು ಬಂದ ಕಳ್ಳರ ಮುಖ್ಯಸ್ಥ ಹೇಳುತ್ತಾನೆೆ. ವಿಚಿತ್ರವೆಂದರೆ, ಕುರಿ ಕಾಯುವಾಗ ಸ್ಯಾಂಟಿಯಾಗೊ, ಇದೇ ಚರ್ಚಿನ ಬಳಿಯ ಮರದ ಬುಡದಲ್ಲಿ ವಿಶ್ರಮಿಸುತ್ತ ನಿದ್ದೆ ಮಾಡುತ್ತಿದ್ದ ಮತ್ತು ನಿಧಿಯ ಕನಸನ್ನು ಪದೇ ಪದೇ ಕಾಣುತ್ತಿದ್ದ!
ಇದು, ಬ್ರಿಜಿಲ್ ದೇಶದ ಪ್ರಸಿದ್ಧ ಲೇಖಕ ಮತ್ತು ಕವಿ ಪಾವ್ಲೊ ಕೊಯ್ಲೊ, ೧೯೮೮ರಲ್ಲಿ ಪೋರ್ಚುಗೀಸ್ ಭಾಷೆಯಲ್ಲಿ ಬರೆದ ಕಾದಂಬರಿ. ೧೯೯೩ ರಲ್ಲಿ ಇಂಗ್ಲಿಷ್‌ಗೆ ಭಾಷಾಂತರಿಸಲ್ಪಟ್ಟ ಈ ಕಾದಂಬರಿ ನೀಡುವ ಅರ್ಥ ತೀರಾ ದೊಡ್ಡದು.
ಪಾವ್ಲೊ ಕೊಯ್ಲೊ ೨೪, ಆಗಸ್ಟ್ ೧೯೪೭ ರಲ್ಲಿ ರಿಯೋ ಡಿ ಜನೆರೊ ದಲ್ಲಿ ಹುಟ್ಟಿದ. ಎಳೆಯದರಲ್ಲಿ ರೋಮನ್ ಕ್ಯಾತೊಲಿಕ್ ಸಂಪ್ರದಾಯಗಳ ವಿರುದ್ಧ ಪ್ರತಿಭಟಿಸುತ್ತಿದ್ದ ಅವನಿಗೆ ಮತಿಬ್ರ ಮಣೆ ಎಂದು ತಿಳಿದು ಪೋಷಕರು ಅವನನ್ನು ಮನೋವೈದ್ಯ ಕೀಯ ಚಿಕಿತ್ಸೆಗೆ ಒಳಪಡಿಸಿದ್ದರು. ತಾನೊಬ್ಬ ಲೇಖಕನಾಗಬೇಕೆಂಬ ಹಂಬಲವಿದ್ದರೂ, ತಂದೆತಾಯಿಯರ ಇಷ್ಟದಂತೆ ಕಾನೂನು ವ್ಯಾಸಾಂಗಕ್ಕೆ ಸೇರಿದ ಕೊಯ್ಲೊ. ಒಂದು ವರ್ಷದೊಳಗೆ ಓದು ನೀರಸವೆನಿಸಿ ದಿಕ್ಕುದೆಸೆಯಿಲ್ಲದೆ ಊರೂರು ಅಲೆಯತೊಡಗಿದ. ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ, ಮೆಕ್ಸಿಕೊ ಮತ್ತು ಯುರೋಪನ್ನೆಲ್ಲಾ ಹಿಪ್ಪಿಯಂತೆ ಸುತ್ತಾಡುತ್ತಾ ಮಾದಕ ವ್ಯಸನಿಯಾದ. ಬ್ರಿಜಿಲ್‌ಗೆ ವಾಪಸ್ಸು ಬಂದ ನಂತರ, ಪಾಪ್ ಮತ್ತು ಜಾಜ್ ಸಂಗೀತಕ್ಕೆ ಹಾಡು ಬರೆಯತೊಡಗಿದ. ಕೊಯ್ಲೊನ ಬರವಣಿಗೆ, ಎಡಪಂಥೀ ಯ ಮತ್ತು ಅಪಾಯಕಾರಿ ಎಂದು ಆರೋಪಿಸಿ ಅಂದಿನ ಮಿಲಿಟರಿ ಆಡಳಿತ, ವಿಧ್ವಂಸಕ ಕ್ರಿಯೆಯಲ್ಲಿ ತೊಡಗಿದ್ದಾನೆಂದು ಹೇಳಿ ಬಂಧಿಸಿತ್ತು.
ಪೂರ್ಣಪ್ರಮಾಣದಲ್ಲಿ ಲೇಖಕನಾಗಿ ತೊಡಗಿಸಿಕೊಳ್ಳುವ ಮೊದಲು ಕೊಯ್ಲೊ ನಟ, ನಿರ್ದೇಶಕ ಮತ್ತು ಪತ್ರಕರ್ತನಾಗಿ ಕೆಲಸ ಮಾಡಿದ. ೧೯೮೦ರಲ್ಲಿ ಕ್ರಿಸ್ಟಿನಾ ಒಟಿಸಿಕಾ ಎಂಬುವವರನ್ನು ಮದುವಾಗಿ ಸ್ವಿಡ್ಜರ್ ಲ್ಯಾಂಡಿನ ಜಿನೆವಾದಲ್ಲಿ ನೆಲೆಸಿದ. ವಿಕ್ಷಿಪ್ತ ಮನಸ್ಸಿನ ಆತ, ೧೯೮೬ರಲ್ಲಿ ೫೦೦ ಕಿಲೊಮೀಟರ್ ದೂರದ ಸ್ಪೇ ನಿನ ಸ್ಯಾಟಿಯಾಗೊ ಡಿ ಕಾಂಪೋಸ್ಟೆಲಾ ಎಂಬ ಪ್ರಮುಖ ತೀರ್ಥಯಾತ್ರಾ ಸ್ಥಳವನ್ನು ಕಾಲ್ನಡಿಗೆಯಲ್ಲಿಯೇ ತಲುಪಿದ್ದ. ಈ ಸಂದರ್ಭದಲ್ಲಿ ತನಗೆ ಜ್ಞಾನೋದಯವಾಯಿತು ಎಂದು ತನ್ನ ಆತ್ಮಚರಿತ್ರೆ – ಪಿಲ್ಗ್ರಮೇಜ್ – ಯಲ್ಲಿ ಹೇಳಿಕೊಂಡ. ಕ್ಯಾಥೊಲಿಕ್ ಧರ್ಮವನ್ನು ಒಪ್ಪಿಕೊಂಡರೂ, ಅದರಲ್ಲಿ ಪರಿಪೂರ್ಣತೆಯ ಕೊರತೆಯಿದೆ ಎನ್ನುತ್ತಾನೆ ಕೊಯ್ಲೊ.

ಆಲ್ಕೆಮಿಸ್ಟ್ ಕೊಡುವ ಸಂದೇಶ ಏನು?
ಜೀವನದಲ್ಲಿ ಹೃದಯ ಇಷ್ಟಪಡುವ ಕನಸನ್ನು ಬೆನ್ನು ಹತ್ತಬೇಕು; ಜೀವನ ಪಯಣದ ಈ ದಾರಿಗುಂಟ ಎದುರಾಗುವ ಪ್ರತಿಯೋದು ಅಡ್ಡಿ-ಆತಂಕಗಳಿದಂದಲೂ ಪಾಠ ಕಲಿತು ಪಕ್ವಗೊಳ್ಳುವುದೇ ಜೀವನ ಎಂಬುದು ಈ ಕತೆಯ ಮುಖ್ಯ ಅಂಶ. ಗುರಿ ತಲುಪುವ ಧಾವಂತದಲ್ಲಿರುವ ಪ್ರತಿಯೊಬ್ಬನೂ, ತೆರೆದ ದಾರಿಯ ಅಂಕುಡೊಂಕುಗಳನ್ನು, ಏರುಪೇರುಗಳನ್ನು, ಮುಖ್ಯ ಗುರಿಯ ಅವಿಭಾಜ್ಯ ಅಂಗ ಎಂದು ತಿಳಿದು ದಾಟಬೇಕು. ಮತ್ತು, ನಾವು ಆಶೆ ಪಡುವ ಜೀವನ ಪರಿಪೂರ್ಣತೆ ನಾವಿರುವ ಪರಿಸರ-ಪರಿಸ್ಥಿತಿಯಲ್ಲಿಯೇ ಇರುತ್ತದೆ ಎಂಬುದು ಅಂತಿಮ ಸಂದೇಶ! ಆದ್ದರಿಂದ, ನಮ್ಮ ಜೀವನವನ್ನು ನಾವೇ ರೂಪಿಸಿಕೊಂಡು ಬದುಕಲು ಸೂಕ್ಷ್ಮ ವಾಗಿ ನಮ್ಮನ್ನು ಪ್ರೇರೇಪಿಸುತ್ತದೆ ಎಂಬುದು ನನ್ನ ಅನ್ನಿಸಿಕೆ.
ನಾವು ಬಯಸಿದ್ದನ್ನು ಪಡೆಯುವ ನಮ್ಮ ಪ್ರಯತ್ನದ ಪರ ಇಡೀ ವಿಶ್ವ ಸಂಚು ಮಾಡುತ್ತದೆ. ಕನಸು ನನಸಾಗುವ ಸಾಧ್ಯತೆಯೇ ಬದುಕುವುದನ್ನು ಆಸಕ್ತಿದಾಯಕ ಮಾಡುತ್ತದೆ. ಸೋಲಿಗಿಂತ, ಅದರ ಬಗೆಗಿನ ಹೆದರಿಕೆಯೇ ಹೆಚ್ಚು ಕೆಟ್ಟದ್ದು. “ಗುರಿ ಸಾಧನೆ ಅಸಾಧ್ಯ ಎನಿಸಲು ಒಂದೇ ಒಂದು ಮುಖ್ಯ ಕಾರಣ ಸೋಲಿನ ಭಯ.”ಜೀವನವು ವಿಭಿನ್ನ ಆಯಾಮಗಳಲ್ಲಿ ಹೇಗಿರಬಹುದು ಎಂಬ ಒಳನೋಟವನ್ನು ಇದು ಕೊಡುತ್ತದೆ.
ಕೆಲವೊಮ್ಮೆ ನಮಗೇನಾಗುತ್ತಿದೆ ಎಂಬುದರ ಮೇಲೆ ನಿಗಾ ವಹಿಸದೆ, ನಮ್ಮ ನಿಯಂತ್ರಣ ಕಳೆದುಕೊಂಡು, ವಿಧಿಯಾಟ ಎನ್ನುತ್ತೇವೆ. ಆದರೆ, ವಿಧಿ ನಮ್ಮ ಜೀವನವನ್ನು ನಿಯಂತ್ರಿಸುತ್ತದೆ ಎಂಬುದೇ ಪ್ರಪಂಚದ ಅತ್ಯಂತ ದೊಡ್ಡ ಸುಳ್ಳು. ಜೀವನದ ಗುರಿ ಮುಟ್ಟಲು ಬರುವ ಅಡೆತಡೆಗಳು, ಕೇವಲ ಅಡೆತಡೆಗಳಷ್ಟೇ ಹೊರತು ದಿಗ್ಬಂಧನಗಳಲ್ಲ; ಅವು, ಜೀವನ ಸಾಕ್ಷಾತ್ಕಾರದ ಮೂಲ ಗುರಿಯ ಬಗೆಗಿನ ನಮ್ಮ ಅಚಲತೆಯನ್ನು ಪರೀಕ್ಷಿಸುತ್ತವೆ. ಇದು ಈ ಕಾದಂಬರಿ ಬಗೆಗಿನ ನನ್ನ ಮಿತಿ ಎನ್ನಬಹುದಾದ ನಮ್ರ ತಿಳುವಳಿಕೆ.
– ಡಿ ರಾಮಪ್ಪ ಸಿರಿವಂತೆ (ಅಂಕೋಲಾ)
