

ಸಿದ್ದಾಪುರ: ತಾಲೂಕಿನಲ್ಲಿ ಅತಿವೃಷ್ಟಿಯಿಂದ ಬಹಳಷ್ಟು ಹಾನಿಯಾಗಿದೆ ಹಾನಿಗೊಳಗಾದ ಕುಟುಂಬಗಳಿಗೆ ಸರ್ಕಾರದಿಂದ 998600 ರೂ ಗಳನ್ನು ನೀಡಲಾಗಿದೆ. ತಾಲೂಕಿನಲ್ಲಿ ಮಳೆಯ ಪ್ರಮಾಣ ವಾಡಿಕೆಗಿಂತ 400% ಜಾಸ್ತಿಯಾಗಿದ್ದರಿಂದ ವಿಪರೀತ ಹಾನಿ ಸಂಭವಿಸಿದೆ. ಎಂದು ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಮಂಗಳವಾರ ಮಿನಿವಿಧಾನಸೌಧದ ಸಭಾ ಭವನದಲ್ಲಿ ಕೋವಿಡ್ – 19 ಹಾಗೂ ಪ್ರವಾಹದಿಂದ ಹಾನಿಗೊಳಗಾದ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ಹಾಗೂ ಸುದ್ದಿಗೋಷ್ಠಿ ನಡೆಸಿ ತಾಲೂಕಿನಲ್ಲಿ 11 ಮನೆಗಳು ಸಂಪೂರ್ಣ ಹಾನಿಯಾಗಿರುತ್ತದೆ. ಇದರಲ್ಲಿ ಎಂಟು ಅಧಿಕೃತ ಮನೆಗಳಿಗೆ 95100 ಎಂಟು ರೂಪಾಯಿಗಳನ್ನು ನೀಡಲಾಗಿದೆ. ಮನೆಗೆ ನೀರು ಹೋಗಿ ಹಾನಿ ಸಂಭವಿಸಿದ ಮನೆಗಳಿಗೆ 3800 ರೂಪಾಯಿಗಳನ್ನು ನೀಡಲಾಗಿದೆ. ಗಾಳಿ-ಮಳೆಯಿಂದಾಗಿ 225 ವಿದ್ಯುತ್ ಕಂಬಗಳು ಹಾಗೂ 4 ಟ್ರಾನ್ಸ್ಮಿಟರ್ ಗಳು ಹಾನಿಯಾಗಿದ್ದು ಅವುಗಳನ್ನು ತಕ್ಷಣದಲ್ಲಿ ಸರಿಪಡಿಸಿ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಪಂಚಾಯತ್ 167 ಕಿಲೋಮೀಟರ್ 80 ರಸ್ತೆಗಳು ಹಾಗೂ 12 ಬ್ರಿಜ್ ಗಳು ಎರಡು ಶಾಲೆ ಹಾಗೂ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ಹಾನಿ ಉಂಟಾಗಿದೆ. ಪಿಡಬ್ಲ್ಯೂಡಿ 150 ಕಿಲೋಮೀಟರ್ ರಸ್ತೆ ಹಾಗೂ 24 ಬ್ರಿಜ್ ಗಳಿಗೆ ಹಾನಿಯಾಗಿರುತ್ತದೆ. ಬಾಳೂರ್, ಶಿರಗೋಡ್ಬೈಲ್, ಗೋರನಮನೆ ಬ್ರಿಜ್ ಗಳು ಸಂಪೂರ್ಣ ಹಾನಿಯಾಗಿದೆ. ತಾಲೂಕಿನಲ್ಲಿ 12 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು 784 ಜನ ಅಶ್ರಯ ಪಡೆದಿದ್ದರು. ಹಾಲಿ 6 ಕಾಳಜಿ ಕೇಂದ್ರಗಳಲ್ಲಿ 136 ಜನರು ಆಶ್ರಯ ಪಡೆದಿದ್ದಾರೆ. ಪ್ರಕೃತಿ ವಿಕೋಪ ದಿಂದ ಒಂದು ಸಾವು ಸಂಭವಿಸಿದ್ದು 24 ಗಂಟೆಯ ಒಳಗೆ ಪರಿಹಾರ ವಿತರಿಸಲಾಗಿದೆ.
ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದಾಗ ಜಿಲ್ಲೆಗೆ 200 ಕೋಟಿರೂ. ನೀಡುವ ಭರವಸೆ ನೀಡಿದ್ದಾರೆ. ಹಣ ಬಿಡುಗಡೆಯಾದ ತಕ್ಷಣ ಇವೆಲ್ಲವನ್ನು ಆದ್ಯತೆಯ ಮೇಲೆ ಸರಿಪಡಿಸಲಾಗುವುದು.
ಕೊವಿಡ್ ೩ನೇ ಅಲೆ ಪ್ರಾರಂಭವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು ಈಗಾಗಲೇ ನಾವು, ತಾಲೂಕಾಡಳಿತ ಸಿದ್ಧವಾಗಿದ್ದೇವೆ. ಕೋವಿಡ್ ಚಿಕಿತ್ಸೆ ಬೇಕಾಗುವ ಅಗತ್ಯತೆ ಕುರಿತು ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ತಿಳಿಸುವಂತೆ ತಹಸೀಲ್ದಾರರಿಗೆ ಹಾಗೂ ತಾಪಂ ಮುಖ್ಯಾಧಿಕಾರಿಗೆ ಸೂಚಿಸಿದ್ದೇನೆ ಎಂದರು.
ಅತಿಹೆಚ್ಚು ಮಳೆಯಾದ ಕಾರಣ ಜನರಿಗೆ ಸಾಕಷ್ಟು ತೊಂದರೆಯಾಯಿತು ಆದರೆ ಸ್ಥಳೀಯ ಆಡಳಿತ, ಸಂಘ-ಸಂಸ್ಥೆಗಳ ಸಹಾಯದಿಂದ ಸಮರ್ಥವಾಗಿ ಎದುರಿಸಿದ್ದೇವೆ.
ಅತಿಕ್ರಮಣದಲ್ಲಿದ್ದ ಮನೆಗಳಿಗೆ ಹಾನಿಯಾದರೆ ಪರಿಹಾರ ನೀಡುವ ಬಗ್ಗೆ ಹಾಗೂ ಮನೆಗೆ ನೀರು ನುಗ್ಗಿದ್ದಕ್ಕೆ ಹತ್ತುಸಾವಿರರೂ.ನೀಡುವ ಸರಕಾರದ ಆದೇಶದ ನಿರೀಕ್ಷೆಯಲ್ಲಿದ್ದೇವೆ.
25 ಹೆಕ್ಟೇರ್ ಭತ್ತದ ಪ್ರದೇಶ ಕೊಚ್ಚಿಕೊಂಡು ಹೋಗಿದ್ದರೆ 112 ಹೆ.ಪ್ರದೇಶ ಹಾನಿಯಾಗಿದೆ. 60 ಹೆಕ್ಟೇರ್ ಅಡಿಕೆ ತೋಟಕ್ಕೆ ಹಾನಿಯಾಗಿದೆ ಇನ್ನೂ ಸಮೀಕ್ಷೆ ನಡೆಯುತ್ತಿದೆ
ಈಗಾಗಲೇ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾ ಯೋಜನೆ ಮುಗಿದಿದ್ದು ಹೊಲ-ಗದ್ದೆ, ತೋಟಗಳ ದುರಸ್ತಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೊಸ ಕ್ರೀಯಾಯೋಜನೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ಸರಕಾರದಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು.
ವ್ಯಾಕ್ಸಿನೇಷನ್ ಕೊರತೆ ಇದೆ. ಬೇಡಿಕೆ ಹೆಚ್ಚಿರುವುದರಿಂದ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
ಅತಿಕ್ರಮಣ ದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದು ಮನೆ ಕರ ಕಟ್ಟುತ್ತಿರುವ ಹಾಗೂ ಮನೆ ನಂಬರ್ ಹೊಂದಿರುವ ಹೊಂದಿರುವವರಿಗೆ ಮನೆ ನಿರ್ಮಿಸಲು ಸರ್ಕಾರದಿಂದ ಆದೇಶವಾಗಿದೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ತಹಶಿಲ್ದಾರ ಪ್ರಸಾದ್ ಎಸ್.ಎ, ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಸಿಪಿಐ ಕುಮಾರ ಕೆ, ಪಿಡಬ್ಲ್ಯೂಡಿ , ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


