ಮನುಷ್ಯ ಎಷ್ಟೆಲ್ಲಾ ಹುಚ್ಚುಚ್ಚಾಗಿರಬಲ್ಲ ಗೊತ್ತಾ? ಸಾಮಾಜಿಕ ಜಾಲತಾಣಗಳಲ್ಲಿ ಕುಣಿಯುವ ಕೋಡಂಗಿಗಳನ್ನು ಬಿಡಿ ಅವರು ವಂಡರ್ ಹೆಡ್ ಥರದ ಜನ, ಮೊಬೈಲ್,ತಲೆ ನಡುವೆ ಒಂದು ಸುರಂಗ ಉಳಿದಂತೆ ಗೋಡಾ ಹೈ ಮೈದಾನ್ ಹೈ ವ್ಯವಸ್ಥೆ.ಆದರೂ ಮತ್ತೆ ಬರಬಾರದೆ ಬಾಲ್ಯ ಎಂದುಕೊಳ್ಳುವ ಹಳಹಳಿಕೆಗೆ ಇರುವ ಮೌಲ್ಯ ಬಹುಶ: ಕನಸು ಕಟ್ಟುವ ಭವಿಷ್ಯದ ಆಸೆ, ನಿರೀಕ್ಷೆಗಳಿಗಿರಲಿಕ್ಕಿಲ್ಲ.
ಅದೇನಾಯಿತೆಂದರೆ…… ಆಗ ನಮಗೆಲ್ಲಾ ಕನಸು ಕಟ್ಟುವ ದಿವ್ಯ ಪರಂಪರೆಯ ಹಿನ್ನೆಲೆ ಇದೆ ಎನ್ನುವ ಸತ್ಯ ತಿಳಿದಿರದ ಸಮಯ. ಊರಿನಲ್ಲಿ ಮೊದಮೊದಲು ಸೈಕಲ್ ತಂದ, ರೆಡಿಯೋಕೊಂಡ ಕುಟುಂಬ ನಮ್ಮದು. ನಮ್ಮಜ್ಜ ಆಕಾಲದಲ್ಲಿ ಮುಲ್ಕಿ ಓದಿ ಸರ್ಕಾರದ ಹುದ್ದೆ ತಿರಸ್ಕರಿಸಿ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂದುಕೊಂಡವರು. ಆಗಲೇ ಯಕ್ಷಗಾನ ಪ್ರಸಂಗ ಬರೆದಿದ್ದ ನಮ್ಮಜ್ಜ ಸಂಘಟಕ,ಸ್ವಾಭಿಮಾನಿ,ಸ್ನೇಹಮಯಿ, ಬಂಡಾಯಗಾರ ಕೂಡಾ ಆಗಿದ್ದಕ್ಕೆ ಅನೇಕ ದಂತ ಕತೆಗಳಿವೆ.
ಅಗೇನ್ ಇವೆಲ್ಲಾ ಅರಿಯದ ಕಾಲವದು ದುಡಿಮೆ ಜೊತೆಗೆ ಸಂತೃಪ್ಪ, ಸೊಗಸಾದ ಜೀವನ ಕಟ್ಟಿಕೊಳ್ಳುವ ಸಾಹಸದಲ್ಲಿದ್ದ ನಮ್ಮ ಜನಕ್ಕೆ ಸ್ವಾತಂತ್ರ್ಯ ಹೋರಾಟ, ಸಮಾನತೆ, ಸುಧಾರಣೆ,ಸಮಾಜವಾದ ಇವೆಲ್ಲಾ ಬೇಡದ ವಿಷಯವಾಗಿದ್ದಕ್ಕೆ ಅವರ ಸಹಜ ಜೀವನ,ಸರಳ ಬದುಕು ಜೊತೆಗೆ ಭೌದ್ಧಿಕತೆಯ ಕಾರಣಗಳೂ ಸೇರಿದ್ದಿರಬೇಕು.
ಹೊಸೂರಿನ ಗಣಪತಿಯಪ್ಪ ಸಿದ್ಧಾಪುರದ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ ನೇಮಕವಾದವರು ಸ್ವಾತಂತ್ರ್ಯ ಹೋರಾಟದ ಹುಚ್ಚಿಗೆ ನೌಕರಿ, ಮನೆ ಬಿಟ್ಟು ದೇಶಾಂತರಿಯಾದದ್ದಕ್ಕೆ ನಮ್ಮ ಜನ ಬೈದು ಅವರ ಮಾನನಷ್ಟ ಮಾಡಿದ್ದೇ ಸಾಕ್ಷಿ. ಆದರೆ ಈ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊಸೂರಿನ ಗಣಪತಿಯನ್ನು ಹಿರೆನೆಲ್ಲೂರಿನಲ್ಲಿ ಎಚ್. ಗಣಪತಿಯಪ್ಪನನ್ನಾಗಿ ಪ್ರಕಟಪಡಿಸಿತಲ್ಲಾ ಆ ಕಿಚ್ಚೇ ಸ್ವಾತಂತ್ರ್ಯ ಹೋರಾಟದಿಂದ ಬಂದದ್ದು.
ಈ ಎಚ್. ಗಣಪತಿಯಪ್ಪನವರ ಹತ್ತಿರದ ಸಂಬಂಧಿ ದ್ಯಾವಾ ಮಾಸ್ತರ್ ಆ ಕಾಲದ ಸಾಮಾಜಿಕ ಕಾರ್ಯಕರ್ತ. ಅವರ ಭಾವನಾಗಿದ್ದ ಕೋಲಶಿರ್ಸಿಯ ಕನ್ನಾ ನಾಯ್ಕ ಆ ಕಾಲದಲ್ಲೇ ದ್ಯಾವಾ ಮಾಸ್ತರ್ ಜೊತೆ ಸೇರಿ ಅರಣ್ಯ ಮಾಲಕಿ ಗುತ್ತಿಗೆ ಮಾಡುತಿದ್ದಾತ! ಪೇಟೆಯಲ್ಲಿ ಕಲಿತು,ಸಾರ್ವಜನಿಕ ವ್ಯಕ್ತಿಗಳ ನಿಕಟಸಂಪರ್ಕದಲ್ಲಿದ್ದ ನಮ್ಮಜ್ಜ ಕನ್ನ ನಾಯ್ಕ ಉತ್ತಮ ಕೃಷಿಕ,ಫಾರೆಸ್ಟ್ ಗುತ್ತಿಗೆದಾರ ಎನಿಸಿಕೊಳ್ಳುವುದಕ್ಕಿಂತ ಹೆಚ್ಚು ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಎಂದರೆ ಅವರ ಸಾಮಾಜಿಕ ಬದುಕಿಗೆ ಅದೇ ದೃಷ್ಟಾಂತ.
ಅಜ್ಜ ಕನ್ನಾ ನಾಯ್ಕ ಮೃತರಾಗಿ ಸರಿಯಾಗಿ ಒಂದು ವರ್ಷದ ನಂತರ ಅವತರಿಸಿದ ನನಗೆ ಅಜ್ಜನ ಹೆಸರನ್ನು ಉಳಿಸಿಕೊಂಡೇ ಈಶ್ವರನನ್ನಾಗಿಸಿದ್ದಕ್ಕೆ ಅದೇ ವರ್ಷವೋ ಆ ಕಾಲದಲ್ಲಿ ಬಂದ ಅನಂತನಾಗ್ ರ ಕನ್ನೇಶ್ವರ ರಾಮ ಸಿನೆಮಾ ಪ್ರೇರಣೆಯಾದರೂ ಆಗಿನ ನವೋದಯ ಕಾಲದ ಆಧುನಿಕತೆಯಕೊಡುಗೆಯೂ ಇರಬಹುದೆನ್ನಿ.
ಕನ್ನಾ ನಾಯ್ಕ ದೊಡ್ಡೂರಿನ ನಡುವಿನಕೇರಿಯ ಹೊಂತಗಾರನಾಗಿ ಪ್ರಸಿದ್ಧನಾಗಲು ಅವರಪ್ಪ ಕೂರಾ ನಾಯ್ಕನ ಕೊಡುಗೆ ಎಷ್ಟಿದೆಯೋ? ಆದರೆ ಹುಬ್ಬಳ್ಳಿ-ಹೊನ್ನಾವರಗಳಿಗೆ ಎತ್ತಿನ ಚಕ್ಕಡಿ ಏರಿ ಸಂತೆಗೆ ಹೋಗುತಿದ್ದ ನಮ್ಮಜ್ಜ ಆ ಕಾಲದ ವೀರಧೀರರ ಪರಂಪರೆಯವರು. ಅಜ್ಜನ ಗಾಡಿಗೆ ಕಳ್ಳರು ಬಿದ್ದು ಹತ್ತಾರು ಕಿಲೋ ಮೀಟರ್ ಗಟ್ಟಲೆ ಓಡಿದ ಎತ್ತಿನ ಬಂಡಿಯ ಜೋಡೆತ್ತುಗಳು ಬಾಯಿಂದ ರಕ್ತ ಉಗುಳುತಿದ್ದವು ಎನ್ನುವ ಕತೆ, ಸುತ್ತಲಿನ ಹತ್ತೂರಲ್ಲಿ ಬಲಿಷ್ಟ ಎತ್ತಿನ ಜೋಡಿ ಎತ್ತಿನ ಬಂಡಿಯೆಂದರೆ ಅದು ಕೋಲಶಿರ್ಸಿಯ ಕನ್ನಾ ನಾಯ್ಕರ ಎತ್ತಿನ ಜೋಡಿ ಮತ್ತು ಬಂಡಿ ಎನ್ನುವ ಪ್ರತೀತಿಯಿದ್ದುದು ಹಳೆ ಕತೆ.
ಅದೆಂಥ ವಿಶೇಶವೆಂದವೆಂದರೆ ಅವರಪ್ಪನಂತೆ ಕೋಟಿವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂದುಕೊಂಡು ಹೈಸ್ಕೂಲು ಮೆಟ್ಟಿಲೇರದ ನಮ್ಮಪ್ಪ ಉತ್ತಮ ತಳಿಯ ಎತ್ತುಗಳನ್ನು ಸಾಕುವುದರಲ್ಲಿ ಖುಷಿಕಂಡುಕೊಂಡಿದ್ದ ಅಲ್ಪತೃಪ್ತ. ಹಾಸನ್ ಗಾಡಿ ಹಾರ್ನಳ್ಳಿ ಎತ್ತು ಎನ್ನುತಿದ್ದ ಆ ಕಾಲದಲಕ್ಸುರಿ ಎತ್ತು ಗಾಡಿಗಳ ಬಗ್ಗೆ ಮೋಗಿತನಾಗಿರುತಿದ್ದ ನಮ್ಮಪ್ಪ ನೆಂಟರು-ದಿಷ್ಟರ ಮನೆಗೆ ಹೋಗದವನು ಎತ್ತು- ಗಾಡಿ ತರಲು ಎರಡ್ಮೂರು ದಿವಸ ಊರು ಬಿಟ್ಟಿರುತಿದ್ದ. ಉತ್ತಮ ಕಗ್ಗ ಸೀಮೆ ಎತ್ತು ತಂದು ಸಾಕುತಿದ್ದ ಅಪ್ಪನ ಹೊಸ ಎತ್ತುಗಳು ಅಚ್ಚಬಿಳಿರೊಣೆ ಕಳೆದುಕೊಂಡು ಈ ಜಾಗಕ್ಕೆ ಹೊಂದಿಕೊಳ್ಳಲು ಒಂದು ಮೇವಿನ ಮಳೆಗಾಲವಾದರೂ ಕಳೆಯಬೇಕಿತ್ತು.
ದನ- ಎತ್ತುಗಳ ಬಗ್ಗೆ ಹಿಂದುತ್ವವಾದಿಗಳಂತೆ ಲಾಭದ ಲೆಕ್ಕಾಚಾರ, ರಾಜಕೀಯ ಫಲಾಪೇಕ್ಷೆ ಇಲ್ಲದ ಅಪ್ಪ ಅವನ ಮಗನಂತೆಯೇ ವ್ಯಾಪಾರಿಗಳಿಂದ ಮೋಸಹೋಗುತಿದ್ದ! ಆ ಕಾಲದಲ್ಲೂ ಅಪ್ಪ ಸಾವಿರ ಲೆಕ್ಕದಲ್ಲಿ ಟೋಪಿ ಹಾಕಿಸಿಕೊಂಡು ಎತ್ತು ತರುವ ಪರಮಾಸಕ್ತಿಯ ಖುಷಿ-ಸಂಬ್ರಮದ ನಡುವೆ ಅನ್ಯಮನಸ್ಕನಾಗುತಿದ್ದುದು ನಮ್ಮ ಗಮನಕ್ಕೆ ಬರುತಿತ್ತು. ಆದರೆ ಆ ನೋವನ್ನು ಮರೆಯಲು ಅಪ್ಪ ತಾನು ತಂದ ಎತ್ತು ಆ ಸಂತೆಯ ಕೆಲವೇ ಆಕರ್ಷಕ ಜೋಡಿಗಳಲ್ಲೊಂದು, ಈ ಕುರಿಗಳು ಇಷ್ಟು ಕಡಿಮೆ ರೇಟಿಗೆ ಯಾವಾಗಲೂ ಸಿಕ್ಕಿದ್ದಿಲ್ಲ ಎಂದು ನಗುತಿದ್ದ ಅವನ ನಗುವಿನಲ್ಲಿ ವ್ಯಾಪಾರಿಯಿಂದ ಮೋಸ ಹೋದ ಬೋಳೆತನದ ವಿಷಾದ ಅಸ್ಷಸ್ಟವಾಗೇ ಪ್ರತಿಬಿಂಬಿಸುತಿತ್ತು.
ಸದಾ ಕಪ್ಪು ನಾಯಿ, ಬಿಳಿಎತ್ತು ಸಾಕುತಿದ್ದ ಅಪ್ಪ ಒಂದು ಬಾರಿ ಮಾತ್ರ ಕಪ್ಪ ಜೋಡಿ ಎತ್ತು ತಂದು ಕಟ್ಟಿದ್ದ ಅದರಲ್ಲಿ ಅಗಲಕೊಂಬಿನ ಎತ್ತಿಗೆ ಜೋಡಿಯಾಗಿದ್ದ ಎತ್ತೊಂದು ಬಡಕಲಾಗಿ ಆ ಎತ್ತಿಗೆ ಮತ್ತೊಂದು ಮುಕ್ರಿ ಎತ್ತು ತಂದು ಜೋಡಿಮಾಡಲು ಹೆಣಗಾಡಿದ್ದ. ಹೊಸದಾಗಿ ದೊಡ್ಡೆತ್ತಿಗೆ ಜೋಡಿಯಾದ ಕರಿಮುಕ್ರಿ ಒಂಟೆತ್ತು ತುಸು ಸಿಟ್ಟಿನ ಪ್ರಾಣಿಯಾಗಿತ್ತು.ದೊಡ್ಡೆತ್ತಿನಂತೆ ಬಾಲ-ಕಾಲು, ಬೀಜ ಮುಟ್ಟಲು ಕೊಡದ ಮುಕ್ರಿ ಎತ್ತಿನ ಬಗ್ಗೆ ನಮಗೆ ವಿನಾಕಾರಣ ಅಸಮಾಧಾನ ಹುಟ್ಟಲು ಅದರ ಸಿಟ್ಟಿನ ಹಾಯುವ ಕೆಟ್ಟ ಸ್ವಭಾವದೊಂದಿಗೆ ಅದು ಹೊಸ ಎತ್ತು ಸಭ್ಯತನವಿಲ್ಲ ಎನ್ನುವ ನಮ್ಮ ಅನುಕೂಲಸಿಂಧು ವರ್ತನೆಯೂ ಕಾರಣಗಳಾಗಿದ್ದವು.
ಈ ಜೋಡಿಯ ದೊಡ್ಡ ಎತ್ತು ಹಿಮಾಲಯದ ಕಾಡುಕೋಣ ಬೋಧಿಸತ್ವನಂಥ ಸೌಮ್ಯ, ಸಹನೆಯ ಹೋರಿ. ಬಹುತೇಕ ಅಜಾನುಬಾಹು ಸೌಮ್ಯವಾದಿಗಳಂಥ ಈ ಎತ್ತಿನ ಗುಡಾಣದಂಥ ಹೊಟ್ಟೆಯನ್ನೇರಿ ಅದರ ಅಗಲವಾದ ಚೂಪನೆಯ ಕೊಂಬುಗಳನ್ನು ಹಿಡಿದೆಳೆದಾಗಲೂ ಅದು ಮುಂದೆ ಬಂದರೆ ಹಾಯದ ಹಿಂದೆ ಹೋದರೆ ಒದೆಯದ ಸಭ್ಯ.
ಎಲ್ಲಾ ಸಾವಯವ ಆಹಾರ ತಿಂದರೂ ಬುರ್ ಎಂದು ಹೂಸುತಿದ್ದ ದೊಡ್ಡೆತ್ತು ಒಮ್ಮೆ ಹುಳುಮುಟ್ಟಿದಾಗ ಮದಗಜದಂತೆ ಗೀಳಿಟ್ಟು ಕುಣಿದಾಡಿ ರಂಪ ಮಾಡಿದ್ದ ಈ ಸೌಮ್ಯಗೂಳಿಗೆ ಅಪ್ಪ ಬಿಳಿಹೂವಿನ ಎಲೆ ತಿನ್ನಿಸಿ ಪ್ರಥಮ ಚಿಕಿತ್ಸೆ ಮಾಡಿ ಬಚಾವು ಮಾಡಿದ್ದ. ಅದೊಂದೇ ಪ್ರಕರಣ ಆ ಎತ್ತು ಮತ್ತೆಂದೂ ಉಗ್ರವಾಗಿದ್ದೇ ಇಲ್ಲ. ಮಳೆಗಾಲದಲ್ಲಿ ಮೂಗಿನಲ್ಲಿ ಸಿಂಬಳ ಬಂದು ನಡುಗುತ್ತಾ ಕೆಸ್..ಕೆಸ್.. ಎಂದು ಕೆಮ್ಮುತಿದ್ದ ಈ ಎತ್ತುಗಳಿಗೆ ಅಪ್ಪ ಬಿಸಿಎಣ್ಣೆಯಲ್ಲಿ ಜೀವಂತ ಏಡಿಗಳನ್ನು ಬಿಟ್ಟು ಮಾಡುತಿದ್ದ ಔಷಧಿ ಈ ಎತ್ತುಗಳ ಅನಾರೋಗ್ಯ ಹೊಡೆದೋಡಿಸಿ ಅವುಗಳು ದಷ್ಟಪುಷ್ಟವಾಗಿ ಬೆಳೆಯಲು ಸಹಕರಿಸುತಿತ್ತು!
ನಾಲ್ಕಡಿಯ ನನಗೆ ತನ್ನ ಮೈಏರಿ ಹೊಟ್ಟೆಕೆಳಗೆ ನುಸುಳಿ ಸ್ನಾನ ಮಾಡಿಸಲು, ಮೈತಿಕ್ಕಲು ಕೊಡುತಿದ್ದ ಆ ಬೋಧಿಸತ್ವ ದೊಡ್ಡೆತ್ತು ಇನ್ನೊಂದು ಮುಕ್ರಿ ಎತ್ತಿನ ಜೊತೆಗೆ ಸಾಫ್ಟವೇರ್ ದಂಪತಿಗಳಂತೆ ಅನಿವಾರ್ಯ ಜೋಡಿಯಾಗಿತ್ತು!.
ಇಂಥ ಜೋಡಿ ಎತ್ತಿಗೆಐದಾರು ವರ್ಷ ನಮ್ಮ ಮನೆಯ ಅತಿಥಿ ಸ್ಥಾನ ಖಾಯಂ ಆಗಿದ್ದುದರಿಂದ ಒಂದು ಕೆಟ್ಟ ದಿನ ಈ ದೊಡ್ಡೆತ್ತಿನ ಜೋಡಿಯನ್ನು ಮಾರಿದ್ದೇನೆಂದು ಅಪ್ಪ ಪ್ರಕಟಿಸಿದಾಗ ಹೊಸ ಸರ್ಕಾರದಲ್ಲಿ ಮಂತ್ರಿಸ್ಥಾನ ಕಳೆದುಕೊಂಡ ಅಮಾಯಕ ಶಾಸಕನ ದುಸ್ಥಿತಿಯಂತಾಗಿತ್ತು ನನ್ನ ಪರಿಸ್ಥಿತಿ. ಕೊನೆಗೂ ಅದು ನಮ್ಮೂರಲ್ಲೇ ಬೇರೆಯವರ ಮನೆಯಲ್ಲಿ ಕಾಣಲಾದರೂ ಸಿಗುತ್ತದೆ ಎನ್ನುವ ಮಾಹಿತಿಯ ಖುಷಿಯ ಹೊಳಹು ನನ್ನಲ್ಲಿ ನಿಗಮ ಮಂಡಳಿ ಯಾದರೂ ಸಿಕ್ಕಿತಲ್ಲಾ ಎನ್ನುವಷ್ಟು ಸಮಾಧಾನ ತಂದಿತ್ತು.
ನಮ್ಮೂರಿನ ಒಂದು ಮನೆಯ ಹೊಸ ಅತಿಥಿಗಳಾಗಿದ್ದ ನಮ್ಮ ಪ್ರೀತಿಯ ಎತ್ತುಗಳನ್ನು ನೋಡಿ, ಮಳೆಗಾಲದಲ್ಲೂ ಬಿಳಿ ಒಣಹುಲ್ಲು ತಿನ್ನುವ ಅವುಗಳ ಸ್ಥಿತಿ ನೋಡಿ ಈ ಎತ್ತುಗಳು ನಮ್ಮೂರಿನಲ್ಲಿ ಇಷ್ಟು ಹೀನಾಯವಾಗಿ ನಮ್ಮೆದುರೇ ಬದುಕುವ ಬದಲು ನಾವು ಕಾಣದ ಯಾವುದೋ ಊರಿನಲ್ಲಿ ಸುಖವಾಗಿರುವುದೇ ಒಳ್ಳೆಯದೆಂದು ನಮಗನಿಸಿ ವ್ಯಥೆಯಾಗುವ ಕೆಲವು ದಿನಗಳಲ್ಲೇ ಆ ಎತ್ತಿನ ಜೋಡಿ ಇನ್ನೊಬ್ಬರ್ಯಾರದೋ ಮನೆಯ ಅತಿಥಿ ಯಾಗಿದ್ದು ನನ್ನ ಸಮಾಧಾನ ಮರಳಿಸಿತ್ತು. ಈ ಎತ್ತುಗಳ ಸ್ನೇಹ ಸಾಂಗತ್ಯದ ನಂತರ ಮುನುಷ್ಯ ಸಂಬಂಧಗಳಷ್ಟೇ ಈ ಪ್ರಾಣಿಗಳ ಸಂಬಂಧ ನೋವುಕೊಡುವ ಅನುಭವ ದೊರೆತದ್ದು.
ದೊಡ್ಡೆತ್ತಿನ ಜೋಡಿಯ ಮಾಸದ ನೆನಪಿನ ನಂತರ ಒಂದೆರಡು ಜೋಡಿ ಎತ್ತುಗಳು ಹಳೆಹುಡುಗಿ ನಮ್ಮೂರಲ್ಲೇ ಓಡಾಡಿಕೊಂಡಿದ್ದಂತೆ ಬಂದು ಇದ್ದು ಹೋದದ್ದರ ಬಗ್ಗೆ ನನಗೆ ಒಂದು ದಿವ್ಯ ತಾತ್ಸಾರ ಬೆಳೆದುಹೋಗಿತ್ತು. ಇದಾದ ಕೆಲವು ಸಮಯಗಳ ನಂತರ ಅಪ್ಪ ತಂದ ಒಂದು ಜೋಡಿ ಬಿಳಿ ಎತ್ತು ನನಗೆ ಹಳೆಯ ಚಿತ್ರಗಳಂತೆ ಕಣ್ಣಲ್ಲೇ ಪ್ರತಿಮೆಗಳಾಗಿ ಮನೆ ಮಾಡಿವೆ……. ಅಂದಹಾಗೆ ಅನ್ಯರ ಮನೆಯಲ್ಲಿರುತಿದ್ದ ನಮ್ಮ ಮಾಜಿ ಎತ್ತು ಅವರ ಮನೆಯ ಕೊಟ್ಟಿಗೆಯಲ್ಲಿ ಕಣ್ಣೀರು ಸುರಿಸುತ್ತಾ ನಮ್ಮನ್ನು ಕೆಂಗಣ್ಣಿನಿಂದ ನೋಡಿದ್ದು ಹತ್ತಿರ ಹೋಗಲೂ ಕೊಡದಂತೆ ಹೆದರಿಸಿದ್ದು ಅದನ್ನು ನಾವು ಬೇರೆಯವರಿಗೆ ಮಾರಿದ ಪ್ರಮಾದಕ್ಕೋ ಎನ್ನುವ ಅನುಮಾನ ಈಗಲೂ ನನಗೆ ಕೊರೆಯುವ ವಸ್ತುವೆ….!