

ಯಾವ ಪ್ರತಿಭೆಗಳಿಗೆ ಎಲ್ಲಿ ಅವಕಾಶ ಸಿಗಬೇಕೋ ಅಲ್ಲಿ ಅವಕಾಶ ಸಿಗದೇ ಇದ್ದಾಗ ಪ್ರತಿಭೆಗಳ ಪ್ರಭೆ ಅಳಿದು ಹೋಗುತ್ತವೆ. ಅದರಲ್ಲೂ ಅಡವಿಯ ಹಾಗೂ ಗ್ರಾಮೀಣ ಪ್ರದೇಶದ ಅದೆಷ್ಟೋ ಪ್ರತಿಭೆಗಳಿಗೆ ಅವರ ಹಂಬಲಕ್ಕೆ ಸೂಕ್ತ ಬೆಂಬಲ ಸಿಗದೇ ಹೋದಾಗ ಬೆಳೆಯಬೇಕಾದ ಚಿಗುರು ಕರಗಿ ಹೋಗುತ್ತವೆ. ಇಂದು ಅಡವಿಯ ಬುಡಕಟ್ಟು ಸಮುದಾಯದ ಮನೆಗಳ ಕತ್ತಲೆಯಲ್ಲಿ ಅದೆಷ್ಟೋ ಹಣತೆ ದೀಪಗಳು ಉರಿಯುತ್ತಿವೆ, ಈ ಹಣತೆ ದೀಪಗಳನ್ನು ಗುರುತಿಸಿ ದೀವಟಿಗೆ ದೀಪವಾಗಿ ಬೆಳಗಿಸಬೇಕಾದ ಅನಿವಾರ್ಯತೆ ಇದೆ.


‘ಸಲಗ ‘ ಕನ್ನಡ ಚಲನ ಚಿತ್ರದ ‘ ತಿಣಿಂಗ ಮಿನಿಂಗಾ ಟಿಷ್ಯಾ ‘ ಹಾಡು ಇದೀಗ ತುಂಬಾ ಜನಪ್ರಿಯ ಆಗುತ್ತಿದೆ. ಹಾಡಿನ ವಿಶೇಷ ಏನಪ್ಪಾ ಅಂದ್ರೆ ಈ ಹಾಡನ್ನು ಹಾಡಿದವರು ಯಲ್ಲಾಪುರದ ಸಿದ್ಧಿ ಸಮುದಾಯದ ಹಾಡುಗಾರರು. ಯಲ್ಲಾಪುರದ ಮಂಚಿಕೆರೆ, ಅರಲೆಸರದ ಬಾಬು ಸಿದ್ಧಿಯ ಮಕ್ಕಳಾದ ಗಿರಿಜಾ ಸಿದ್ಧಿ ಮತ್ತು ಗೀತಾ ಸಿದ್ಧಿ ಈ ಹಾಡನ್ನು ಸಿದ್ಧಿ ಹಾಡಿನ ಶೈಲಿಯಲ್ಲಿ ಹಾಡಿ ವಿಭಿನ್ನತೆಯನ್ನು ಸಾರಿದ್ದಾರೆ. ಮಂಚಿಕೇರೆ ಬಾಬು ಸಿದ್ಧಿಯವರು ಓರ್ವ ಉತ್ತಮ ಹಾಡುಗಾರ, ರಂಗಭೂಮಿ ನಿರ್ದೇಶಕರಾಗಿದ್ದು ತನ್ನದೇ ಶೈಲಿಯ ಹಾಡುಗಳ ಮೂಲಕ ಒಂದಿಷ್ಟು ತಂಡವನ್ನು ಕಟ್ಟಿಕೊಂಡಿದ್ದಾರೆ. ಸಿದ್ಧಿ ಸಮುದಾಯದ ಯುವ ಜನಾಂಗಕ್ಕೆ ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶ ನೀಡಿದರೆ ಇಂದು ನಮ್ಮ ದೇಶಕ್ಕೆ ಕ್ರೀಡೆಯಲ್ಲಿ ಅಂತರ್ ರಾಷ್ಟ್ರೀಯ ಮನ್ನಣೆ ಸಿಗಬಹುದಿತ್ತು, ಆದರೆ ನಮ್ಮ ರಾಜಕೀಯ ವ್ಯವಸ್ಥೆ ಇವರನ್ನು ಕೇವಲ ವೋಟು ಗಳಿಗೆ ಮಾತ್ರ ಬಳಸಿಕೊಂಡು ಅರಳಬೇಕಾದ ಸಿದ್ಧಿ ಕ್ರೀಡಾ ಪ್ರತಿಭೆಗಳಿಗೆ ಬೆಂಬಲ ನೀಡದೇ ಇರುವ ಕಾರಣ ಅದೆಷ್ಟೋ ಅಡವಿ ಪ್ರತಿಭೆಗಳು ಸದ್ದಿಲ್ಲದೆ ಕೂಲಿ ಆಳು ಗಳಾಗಿ ಅಡವಿಯೊಳಗೆ ಮರೆಯಾಗಿ ಹೋಗುತ್ತಿವೆ.
ಜೈ ಸಿದ್ಧಿ…dinesh holla


