‘ಎಷ್ಟೂರು ಕೊಟ್ಟರೂ ಈಸೂರು ಕೊಡೆವು’: ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಕ್ತ ತೇಯ್ದ ಗ್ರಾಮಕ್ಕೆ ಸ್ಮಾರಕ ಕೊಟ್ಟಿಲ್ಲ ಎಂಬ ಕೊರಗು!
ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮದ ಹೆಸರು ಕಿವಿಗೆ ಬೀಳುತ್ತಲೇ ಹಲವರಲ್ಲಿ ದೇಶಪ್ರೇಮ ಜಾಗೃತಗೊಳ್ಳುತ್ತದೆ. ಅದೇಕೆಂದರೆ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈಸೂರಿನ ಪಾತ್ರ ಹಿರಿದು. ಈ ಗ್ರಾಮದ ನೂರಾರು ಮಂದಿ ಯುವಕ ಯುವತಿಯರು ದಾಸ್ಯದ ವಿರುದ್ಧ ಹೋರಾಡಿ ಜೈಲು ಸೇರಿದ್ದರು.
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮದ ಹೆಸರು ಕಿವಿಗೆ ಬೀಳುತ್ತಲೇ ಹಲವರಲ್ಲಿ ದೇಶಪ್ರೇಮ ಜಾಗೃತಗೊಳ್ಳುತ್ತದೆ. ಅದೇಕೆಂದರೆ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈಸೂರಿನ ಪಾತ್ರ ಹಿರಿದು. ಈ ಗ್ರಾಮದ ನೂರಾರು ಮಂದಿ ಯುವಕ ಯುವತಿಯರು ದಾಸ್ಯದ ವಿರುದ್ಧ ಹೋರಾಡಿ ಜೈಲು ಸೇರಿದ್ದರು. ಅಷ್ಟೇ ಏಕೆ ಈ ಗ್ರಾಮದ ಐವರು ಸ್ವಾತಂತ್ರ್ಯ ಹೋರಾಟಗಾರರನ್ನು 1942ರಲ್ಲಿ ಬ್ರಿಟಿಷರು ನೇಣಿಗೇರಿಸಿದ್ದರು.
ಒಂದು ಕಾಲದಲ್ಲಿ ಈ ಗ್ರಾಮ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿತ್ತು. ಅದಕ್ಕೆ ಕಾರಣ ಏನು ಗೊತ್ತಾ? ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರೆಯುವುದಕ್ಕೂ ಮುನ್ನವೇ ಈ ಗ್ರಾಮ ತನ್ನನ್ನು ತಾನು ಬ್ರಿಟಿಷರಿಂದ ಮುಕ್ತವಾದ ಗ್ರಾಮ ಎಂದು ಘೋಷಿಸಿಕೊಂಡಿತ್ತು. ಗ್ರಾಮಸ್ಥರು ಬ್ರಿಟಿಷ್ ಅಧಿಕಾರಿಗಳು ಮಾತ್ರವಲ್ಲದೆ ಅವರಡಿ ಕೆಲಸ ನಿರ್ವಹಿಸುತ್ತಿದ್ದ ಪೊಲೀಸರು ಗ್ರಾಮಕ್ಕೆ ಪ್ರವೇಶಿಸುವುದನ್ನು ತಡೆಯುತ್ತಿದ್ದರು.
ಗ್ರಾಮಸ್ಥರು ಮತ್ತು ಬ್ರಿಟಿಷರ ನಡುವಿನ ಸಂಘರ್ಷದ ಸಮಯದಲ್ಲಿ ಹುಟ್ಟಿಕೊಂಡ ಘೋಷಣೆ ಪ್ರಸಿದ್ಧಿಗೊಂಡಿತ್ತು. ‘ಎಷ್ಟೂರು ಕೊಟ್ಟರೂ ಈಸೂರು ಕೊಡೆವು’ ಎಂಬುದೇ ಆ ಘೋಷಣೆ. ಆದರೆ ಬ್ರಿಟಿಷರ ವಿರೋಧ ಕಟ್ಟಿಕೊಂಡ ಗ್ರಾಮಸ್ಥರ ಬದುಕು ಹೂವಿನ ಹಾಸಿಗೆಯಂತೂ ಆಗಿರಲಿಲ್ಲ. ಬ್ರಿಟಿಷರ ವಿರುದ್ಧ ಸಮರ ಸಾರಿದ ಗ್ರಾಮಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಕಿರುಕುಳ ನೀಡಲು ಬ್ರಿಟಿಷ್ ಅಧಿಕಾರಿಗಳು ಟೊಂಕ ಕಟ್ಟಿ ನಿಂತಿದ್ದರು.
ಗ್ರಾಮಸ್ಥರ ಮನೆಗಳ ಲೂಟಿ, ಗ್ರಾಮಸ್ಥರ ಮೇಲೆ ದಾಳಿ ಸೇರಿದಂತೆ ಹಲವು ಬಗೆಯ ದೌರ್ಜನ್ಯ ನಡೆಸಲಾಯಿತು. ಬ್ರಿಟಿಷರ ಕಿರುಕುಳ ತಾಳಲಾರದೆ ಹಲವು ಮಂದಿ ಹತ್ತಿರದ ಕಾಡಿಗೆ ಪಲಾಯನ ಮಾಡಿದ್ದಾಗಿ ಈಗಲೂ ಗ್ರಾಮದ ಹಿರಿಯರು ನೆನಪಿಸಿಕೊಳ್ಳುತ್ತಾರೆ.
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗ್ರಾಮದ ಪಾತ್ರವನ್ನು ಸದಾ ಕಾಲ ನೆನಪಿನಲ್ಲುಳಿಯುವಂತೆ ಮಾಡಬಲ್ಲ ಶಿವಪುರ ಮಾದರಿಯ ಸ್ಮಾರಕವೊಂದನ್ನು ಗ್ರಾಮದಲ್ಲಿ ಕಟ್ತಬೇಕೆಂಬುದು ಗ್ರಾಮಸ್ಥರ ಬಹುದಿನಗಳ ಕನಸು. ಅದಕ್ಕಾಗಿ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಆ ಕೆಲಸವಾಗಿಲ್ಲ ಎನ್ನುವ ಕೊರಗು ಉಳಿದಿದೆ.
ಕೆಲ ವರ್ಷಗಳ ಹಿಂದೆ ಸರ್ಕಾರ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆಂದು 12 ಕೋಟಿ ರೂ. ಬಿಡುಗಡೆಗೊಳಿಸಿತ್ತು. ಆದರೆ ಸ್ಮಾರಕ ನಿರ್ಮಾಣದ ಕುರಿತು ಇದುವರೆಗೂ ಮಾತು ನಡೆದಿಲ್ಲ. ಅದಕ್ಕಾಗಿ ಗ್ರಾಮಸ್ಥರ ಕಾಯುವಿಕೆ ಮುಂದುವರಿದಿದೆ. (kpc)