

ಪ್ರಗತಿಪರ ರೈತ, ಕಾಳುಮೆಣಸು,ಮಿಶ್ರಬೇಸಾಯದ ಮೂಲಕ ಮಾದರಿ ಕೃಷಿಕನಾದ ಡಿ.ಕೆ. ನಾಯ್ಕ ತೆಂಗಿನಮನೆಯವರಿಗೆ ಈ ವರೆಗೆ ಯಾರೂ ಸನ್ಮಾನಿಸಿ, ಗೌರವಿಸಿ, ಅಭಿನಂದಿಸದಿರುವುದು ಸೋಜಿಗದ ಸಂಗತಿ. ಶ್ರಮಿಕರಲ್ಲದ ಅನೇಕರು ದಾಖಲೆ ಒದಗಿಸಿ ಪ್ರಗತಿಪರ ರೈತರು, ಕೃಷಿ ಪ್ರಶಸ್ತಿ ಪುರಸ್ಕೃತರು. ಕೃಷಿ-ತೋಟಗಾರಿಕೆ ಪಂಡಿತರಾಗಿರುವಾಗ ಸರ್ಕಾರ, ಜನಪ್ರತಿನಿಧಿಗಳ ಕಣ್ಣಿಗೆ ಬೀಳದ ಡಿ.ಕೆ. ನಾಯ್ಕ ಅರ್ಹತೆ, ಯೋಗ್ಯತೆ ಇದ್ದೂ ಪ್ರಶಸ್ತಿ,ಅಭಿನಂದನೆಯ ಗೌರವಾದರಗಳಿಂದ ವಂಚಿತರಾಗಿರುವುದು ಉತ್ತರ ಕನ್ನಡ ಜಿಲ್ಲೆಯ ಉಳ್ಳವರ ಅಟ್ಟಹಾಸ, ರಾಜಕಾರಣಕ್ಕೊಂದು ತಾಜಾ ನಿದರ್ಶನ.
ಮಳೆ,ಪ್ರವಾಹದ ನೋವು ಉಂಡ ಮಲೆನಾಡಿನಲ್ಲಿ ನೀರೆಂದರೆ ಭಯ, ಆತಂಕದ ಸ್ಥಿತಿ ಈಗಿದೆ. ಆದರೆ ಬೇಸಿಗೆಯಲ್ಲಿ ಮಲೆನಾಡಿನಲ್ಲಿ ಕೂಡಾ ನೀರಿಗಾಗಿ ಹಾಹಾಕಾರ ಸಾಮಾನ್ಯ. ಬೇಸಿಗೆಯಲ್ಲಿ ನೀರಿನ ಕೊರತೆ ಅನುಭವಿಸುತಿದ್ದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ರೈತರೊಬ್ಬರು ಬೇಸಿಗೆಯ ನೀರಿನ ಕೊರತೆ ನೀಗಿಸಿಕೊಂಡ ಪ್ರಯೋಗಶೀಲತೆ ಈ ಸ್ಟೋರಿಯ ಕತೆ.
ಪಕ್ಕಾ ಮಲೆನಾಡಿನ ಸಿದ್ಧಾಪುರದ ತೆಂಗಿನಮನೆಯ ರೈತ ಡಿ.ಕೆ.ನಾಯ್ಕ ಕೆಲವು ವರ್ಷ ತಮ್ಮ ಅಡಿಕೆ ತೋಟಕ್ಕೆ ಬೇಸಿಗೆ ಕಾಲದಲ್ಲಿ ನೀರಿನ ತೊಂದರೆಯಿಂದ ಬೆಳೆ ನಾಶದ ಹಾನಿ ಅನುಭವಿಸಿದರು. ನಂತರ ಅವರು ತಮ್ಮ ಬೆಟ್ಟದಲ್ಲಿ ಒಂದಾದಮೇಲೆ ಒಂದರಂತೆ ಕಳೆದ ದಶಕದಲ್ಲಿ ನಾಲ್ಕು ಚಿಕ್ಕ ಕೆರೆಗಳನ್ನು ನಿರ್ಮಿಸಿದರು.
ತೋಟದಲ್ಲಿದ್ದ ಮೊದಲ ಕೆರೆ ಮಳೆಗಾಲದಲ್ಲಿ ಉಕ್ಕಿ ಹರಿದು ಬೆಳೆಗಳಿಗೆ ಹಾನಿ ಮಾಡಿದರೆ ಬೇಸಿಗೆಯಲ್ಲಿ ನೀರಿಲ್ಲದೆ ಬರಿದಾಗುತಿತ್ತು. ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಹೋದ ನಾಯ್ಕರಿಗೆ ಬೆಟ್ಟದಿಂದ ಇಳಿದು ಬರುವ ಮಳೆ ನೀರನ್ನು ಹಂತ ಹಂತವಾಗಿ ನಿಲ್ಲಿಸಿದರೆ ಆ ಮಳೆನೀರು ಭೂಮಿಗೆ ಇಂಗಿ ಬೇಸಿಗೆಯಲ್ಲಿ ಬೆಳೆಗಳಿಗೆ ಜೀವಜಲವಾಗುವ ಯೋಚನೆಯಂತೆ. ತಮ್ಮ ಬೆಟ್ಟದಲ್ಲಿ ಮೂರು ಕೆರೆಗಳನ್ನು ನಿರ್ಮಿಸಿ ಪ್ರಯೋಗ ಮಾಡಿದರು.
ಹೀಗೆ ಎರಡ್ಮೂರು ಚಿಕ್ಕ ಕೆರೆ ನಿರ್ಮಿಸಿದ ಪರಿಣಾಮ ಒಂದೆರಡು ವರ್ಷಗಳಲ್ಲೇ ಫಲನೀಡತೊಡಗಿತು. ಮಳೆಗಾಲದಲ್ಲಿ ಮಳೆ ನೀರಿನ ತೊಂದರೆ ತಪ್ಪಿದರೆ ಬೇಸಿಗೆಯಲ್ಲಿ ನೀರಿನ ತುಟಾಗ್ರತೆಯ ರಗಳೆ ಕಡಿಮೆಯಾಯಿತು.
ಬೇಸಿಗೆಯಲ್ಲಿ ನೀರಿನ ಕೊರತೆ ಅನುಭವಿಸುತ್ತಿದ್ದ ಡಿ.ಕೆ.ನಾಯ್ಕರ ತೋಟ, ತೋಟದ ಕೆರೆಗಳು ಮೈತುಂಬಿಕೊಳ್ಳತೊಡಗಿದವು. ಮೂರು ಎಕರೆಗೆ ನೀರು ಪೂರೈಕೆ ಮಾಡಲಾಗದೆ ಗೋಳಾಡುತಿದ್ದ ನಾಯ್ಕರ ತೋಟ ಈಗ ಐದಾರು ಎಕರೆಗೆ ವಿಸ್ತರಿಸಿದೆ. ಆದರೆ ಮಳೆಕೊಯ್ಲು ಮಾಡಿದ ಸಾಹಸದಿಂದಾಗಿ ಈಗ ನಾಯ್ಕರ ತೋಟಕ್ಕೆ ಇಡೀವರ್ಷ, ಎಲ್ಲಾ ಋತುಗಳಲ್ಲಿ ಜಲಭಾಗ್ಯ ಸಿಕ್ಕಂತಾಗಿದೆ.
ಮಲೆನಾಡಿನಲ್ಲಿ ಹೀಗೆ ಮಳೆಕೊಯ್ಲು, ನೀರಿಂಗಿಸುವ ವಿಧಾನದಿಂದ ಲಾಭ ಪಡೆಯಲು ಸರ್ಕಾರದಲ್ಲೂ ಯೋಜನೆಗಳಿವೆ. ಆದರೆ ಆಸಕ್ತಿ, ಪ್ರಯತ್ನದಿಂದ ತಮಗೆ ಪರಿಸರಕ್ಕೆ ಅನುಕೂಲ ಮಾಡಿಕೊಂಡವರ ಪ್ರಮಾಣ ಕಡಿಮೆ. ಈ ಕೊರತೆಯ ನಡುವೆ ಡಿ.ಕೆ. ನಾಯ್ಕ ತೆಂಗಿನಮನೆ ಮಲೆನಾಡಿನ ಪ್ರಯೋಗಶೀಲ ರೈತನಾಗಿ ಯಶ ಸ್ಸು ಕಂಡಿದ್ದಾರೆ. ಅಡಿಕೆ, ತೆಂಗು, ಬಾಳೆ, ಕಾಳುಮೆಣಸು ಸೇರಿದ ಮಿಶ್ರ ಬೇಸಾಯಕ್ಕೆ ಈ ಮಳೆಕೊಯ್ಲಿನ ಕೆರೆಗಳು ನೆರವಾಗಿವೆ ಎನ್ನುವುದು ಡಿ.ಕೆ. ನಾಯ್ಕರ ಸಮಾಧಾನದ ಮಾತು.







