ಸಿದ್ಧಾಪುರ ನಾಮಧಾರಿ ಸಮಾಜದ ಸಭಾಭವನ ಕಟ್ಟಡ ನಿರ್ಮಾಣ ಕಾಮಗಾರಿ ಪುನರಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ಸ್ಥಗಿತಗೊಂಡಿದ್ದ ಈ ಕಾಮಗಾರಿಯನ್ನು ಇದೇ ವಾರದಿಂದ ಮುಂದುವರಿಸಲು ತೀರ್ಮಾನಿಸಿದ್ದು ಅದಕ್ಕೆ ಅವಶ್ಯವಿರುವ ಹಣಕಾಸನ್ನು ಸಂಗ್ರಹಿಸಲು ಇಂದು ಬಾಲಭವನದಲ್ಲಿ ಸೇರಿದ ಸಭೆ ನಿರ್ಧರಿಸಿತು.
ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜಿಬೈಲ್ ಈಗಾಗಲೇ ಸಭೆ ಸೇರಿ ನಿರ್ಣಯಿಸಿದಂತೆ ಸಭಾಭವನದ ಕಾಮಗಾರಿಯನ್ನು ಇದೇ ವಾರ ಪ್ರಾರಂಭಿಸುತ್ತೇವೆ. ಕಾಮಗಾರಿಗೆ ಬೇಕಾದ ಸಂಪನ್ಮೂಲವನ್ನು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ನೀಡಬೇಕೆಂದು ಕೋರಿದರು.
ಸಂಘದ ಹಿಂದಿನ ಸಭೆಗಳಲ್ಲಿ ಪದಾಧಿಕಾರಿಗಳು ಸ್ವತ: ಅಥವಾ ತಾವು ಸಂಗ್ರಹಿಸಿದ 2 ಲಕ್ಷರೂಪಾಯಿಗಳನ್ನು ಸಮಯಮಿತಿಯಲ್ಲಿ ನೀಡಬೇಕೆಂದು ಸೂಚಿಸಲಾಗಿತ್ತು.ಆದರೆ ಬಹುತೇಕ ಪದಾಧಿಕಾರಿಗಳೇ ಈ ತೀರ್ಮಾನದಂತೆ ನಡೆದುಕೊಳ್ಳದಿರುವುದರಿಂದ ಈ ಸಭೆಯಲ್ಲಿ ಕೂಡಾ ಪದಾಧಿಕಾರಿಗಳ ಜವಾಬ್ಧಾರಿಯನ್ನು ನೆನಪಿಸಲಾಯಿತು. ಕಾರ್ಯದರ್ಶಿಗಳು ಸೇರಿದಂತೆ ಕೆಲವು ಪದಾಧಿಕಾರಿಗಳು ಮುಂದಿನ ವಾರದ ಮೊದಲು ಭಾಗಶ: ಅಥವಾ ಸಂಪೂರ್ಣ ಹಣ ನೀಡುವ ಭರವಸೆ ನೀಡಿದರು.
ಪದಾಧಿಕಾರಿಗಳು ತಮ್ಮ ಜೊತೆಗೆ ಬಂದರೆ ತಾವು ಹತ್ತುಲಕ್ಷರೂಪಾಯಿ ದೇಣಿಗೆ ಸಂಗ್ರಹಿಸಿಕೊಡುವುದಾಗಿ ಬಿ.ಎಸ್.ಎನ್.ಡಿ.ಪಿ. ತಾಲೂಕಾಧ್ಯಕ್ಷ ವಿನಾಯಕ ನಾಯ್ಕ ಕಡಕೇರಿ ಭರವಸೆ ನೀಡಿದರು.