ಕರೋನಾ ಹೆಸರಲ್ಲಿ ಅಂಧಾದರ್ಬಾರ್ ನಡೆಯುತ್ತಿದೆ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷದ ರಾಜ್ಯ ಘಟಕ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಲ್ಲಿ ಮುಂಜಾಗ್ರತೆ ವಹಿಸಿ ಸಾರ್ವಜನಿಕ ಸಾರಿಗೆ, ಸಂತೆಗಳಲ್ಲಿ ಶಿಸ್ತುಪಾಲಿಸದಿದ್ದರೂ ಕರೋನಾ ಬಾಧಿಸುವುದಿಲ್ಲವೆ ಎಂದು ಪ್ರಶ್ನಿಸಿದೆ.
ಈ ಬಗ್ಗೆ samajamukhi.net ನೊಂದಿಗೆ ಮಾತನಾಡಿದ ಸಮಾಜವಾದಿ ಪಕ್ಷದ ರಾಜ್ಯಘಟಕದ ಕಾರ್ಮಿಕ ವಿಭಾಗದ ಅಧ್ಯಕ್ಷ ನಾಗರಾಜ್ ನಾಯ್ಕ ರಾಜ್ಯದಲ್ಲಿ ಕಾರ್ಮಿಕ ಇಲಾಖೆಯ ಕಿಟ್ ವಿತರಣೆಯಲ್ಲಿ ಪಕ್ಷಪಾತ ಎಸಗಲಾಗಿದೆ. ಕರೋನಾ ಆಪತ್ತು ಬಿ.ಜೆ.ಪಿ. ಪಕ್ಷದವರಿಗೆ ಮಾತ್ರ ಬಾಧಿಸಿದಿಯೆ? ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕಾರ್ಮಿಕ ಇಲಾಖೆಯ ಕಿಟ್ ಗಳನ್ನು ಆಡಳಿತ ಪಕ್ಷದ ಕಾರ್ಯಕರ್ತರಿಗೆ ನೀಡಿ ಅವ್ಯವಹಾರ ನಡೆಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಕಠಿಣ ನಿಯಮ ಹೇರಿ ಸಾರ್ವಜನಿಕ ಸಾರಿಗೆ, ಸಂತೆಗಳಲ್ಲಿ ನಿಯಮ ಪಾಲಿಸದಿದ್ದರೆ ವಿದ್ಯಾರ್ಥಿಗಳ ರಕ್ಷಣೆ ಸಾಧ್ಯವೆ? ಸರ್ಕಾರ ಕರೋನಾ ಹೆಸರಲ್ಲಿ ಅಕ್ರಮವನ್ನು ಸಕ್ರಮ ಮಾಡುತ್ತಿದೆ. ಕಾರ್ಮಿಕ ಇಲಾಖೆಯ ಕಿಟ್ ಅವ್ಯವಹಾರ, ವಿದ್ಯಾರ್ಥಿಗಳ ಆರೋಗ್ಯ ನಿಷ್ಕಾಳಜಿ ಇವು ಈ ಸರ್ಕಾರದ ವಿಫಲತೆ, ಕೋವಿಡ್ ಹೆಸರಿನಲ್ಲಿ ಮಾಡುತ್ತಿರುವ ಅಂಧಾದರ್ಬಾರ್ ಗೆ ದೃಷ್ಟಾಂತ ಎಂದರು.
ಶಿರಸಿಯಲ್ಲಿ ಆ.30 ರಂದು ಸಮಾಜವಾದಿ ಪಕ್ಷದ ನೂತನ ರಾಜ್ಯಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಮಧುವನ ಆರಾಧನಾ ಸಭಾಭವನದಲ್ಲಿ ನಡೆಯುವ ಈ ಸಮಾರಂಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ, ಈ ಸಮಾರಂಭದಲ್ಲಿ ಸಮಾಜವಾದಿ ಪಕ್ಷದ ರಾಜ್ಯ ಘಟಕದ ಪ್ರಮುಖರು ಭಾಗವಹಿಸಲಿದ್ದು ಬರಲಿರುವ ಜಿ.ಪಂ. ತಾ.ಪಂ. ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ವಿವರಿಸಿದರು..