

ಯಲ್ಲಾಪುರ: ‘ಮಕ್ಕಳ ಬಾಲ್ಯವನ್ನು ಪಾಲಕರು ಕಸಿದುಕೊಳ್ಳುತ್ತಿದ್ದಾರೆ. ಮಕ್ಕಳ ಬಾಲ್ಯವನ್ನು ಬಿಟ್ಟುಕೊಡುವ ಕೆಲಸವನ್ನು ಪಾಲಕರು ಮಾಡಬೇಕು. ಮಕ್ಕಳನ್ನು ಅಂಕಗಳ ಹಿಂದೆ ಓಡಿಸುವುದನ್ನು ಬಿಡಬೇಕು. ಇಲ್ಲದೆ ಹೋದರೆ ಮಕ್ಕಳು ಸೃಜನಶೀಲತೆಯನ್ನು ಕಳೆದುಕೊಂಡು ಪೇಲವವಾಗುತ್ತಾರೆ’ ಎಂದು ಮಕ್ಕಳ ಸಾಹಿತಿ ವೈ.ಜಿ. ಭಗವತಿ ಹೇಳಿದರು.
ಅವರು ಇಂದು ತಾಲೂಕಿನ ಆನಗೋಡ ಹಿ.ಪ್ರಾ. ಶಾಲೆಯಲ್ಲಿ ಬೆಂಗಳೂರಿನ ಇಂಡಿಯಾ ಫೌಂಡೇಷನ್ ಫಾರ್ ದಿ ಆರ್ಟ್ಸ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ ‘ಹಕ್ಕಿಗಳು ಹಾರುತಿವೆ ನೋಡಿದಿರಾ…’ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಶಾಲೆಯ ಮಕ್ಕಳು ಬರೆದ ಲೇಖನಗಳ ಪುಸ್ತಕ ‘ಹಕ್ಕಿಪುಕ್ಕ’ವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
‘ಇಂದು ಪಾಲಕರು ಮಕ್ಕಳು ಅಂಕಗಳ ಬೆನ್ನು ಹತ್ತುವಂತೆ ಮಾಡಿದ್ದಾರೆ. ಮಕ್ಕಳೆಲ್ಲ ಪಠ್ಯಪುಸ್ತಕದ ಕೀಟವಾಗಿದ್ದಾರೆ. ಮಕ್ಕಳಲ್ಲಿ ಅನೇಕ ಶೃಜನಶೀಲ ಕಲೆಗಳು ಅಡಗಿರುತ್ತವೆ. ಅವು ಹೊರಬರಬೇಕಾದರೆ ಪಾಲಕರು, ಶಿಕ್ಷಕರ ಸಹಕಾರ ಅವಶ್ಯವಾಗಿದೆ. ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಳ್ಳಲು ಅವಕಾಶ ನೀಡಬೇಕು. ಆ ಮೂಲಕ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅರಳಲು ಅವಕಾಶ ಮಾಡಿಕೊಡಬೇಕು’ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಗೋಳಿಗದ್ದೆ ಕಿ.ಪ್ರಾ.ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಎಸ್. ಎನ್ ಹೆಗಡೆಯವರು, ‘ಇಂದು ಪರಿಸರ ವಿನಾಶದಿಂದ ಭೂಮಿಯ ಕಾವು ಹೆಚ್ಚುತ್ತಿದೆ ಮತ್ತು ಅದರಿಂದ ಹವಾಮಾನದಲ್ಲಿ ವೈಪರಿತ್ಯ ಪರಿಣಾಮಗಳುಂಟಾಗುತ್ತಿವೆ ಎಂದು ಹೇಳಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಎಲ್ಲರೂ ಪರಿಸರ ಸಂರಕ್ಷಣೆಯ ಪ್ರಜ್ಞೆ ಬೆಳೆಸಿಕೊಳ್ಳಬೇಕಾಗಿದೆ. ನಾಳಿನ ನಾಗರಿಕರಾದ ಮಕ್ಕಳಿಗೆ ಪ್ರಾಣಿ ಪಕ್ಷಿ ಪರಿಸರದ ಬಗ್ಗೆ ತಿಳಿವಳಿಕೆ ಮೂಡುವಂಥ ಕಾರ್ಯಕ್ರಮ ಮಾಡಬೇಕು. ಈ ನಿಟ್ಟಿನಲ್ಲಿ ಹಕ್ಕಿಗಳು ಹಾರುತಿವೆ ನೋಡಿದಿರಾ ಕಾರ್ಯಕ್ರಮ ಯಶಸ್ವಿಯಾಗಿದೆ’ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಂಚನಳ್ಳಿ ಪದೋನ್ನತಿ ಮುಖ್ಯೋಪಾಧ್ಯಾ ಯ ಸುಧಾಕರ ನಾಯಕ ಅವರು ‘ಮಕ್ಕಳು ಬರೆದ ಹಕ್ಕಿ ಚಿತ್ರಗಳ ಪ್ರದರ್ಶನ’ವನ್ನು ಉದ್ಘಾಟಿಸಿ ಮಾತನಾಡಿದರು. ‘ಮಗು ನಿಸರ್ಗದಲ್ಲಿ ಬೆರೆತು ಅನುಭವದ ಮೂಲಕ ಬೆಳೆಯಬೇಕು. ತನ್ನಲ್ಲಿರುವ ಸೃಜನಶೀಲತೆಯನ್ನು ಬೆಳೆಸಿಕೊಳ್ಳಲು ಶಿಕ್ಷಕರು ಅವಕಾಶ ಒದಗಿಸಿಕೊಡಬೇಕು. ಹಕ್ಕಿಗಳು ಹಾರುತಿವೆ ನೋಡಿದಿರಾ ಯೋಜನೆಯಲ್ಲಿ ಮಕ್ಕಳು ತಮ್ಮ ಅನುಭವದ ಚಿಕ್ಕ ಚಿಕ್ಕ ಕಥೆಗಳನ್ನು ಬರೆಯುವುದು, ಚಿತ್ರ ಬಿಡಿಸುವುದು, ಪಕ್ಷಿಗಳನ್ನು ವೀಕ್ಷಿಸಿ ಗುರುತಿಸುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಇಂಥ ಚಟುವಟಿಕೆಗಳು ಮಕ್ಕಳು ಮೊಬೈಲ್ ಗೀಳಿನಿಂದ ಹೊರಬರಲು ಸಹಾಯ ಮಾಡುತ್ತವೆ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ನಾಗೇಂದ್ರ ಭಟ್ ವಹಿಸಿದ್ದರು. ವಿದ್ಯಾರ್ಥಿನಿ ಶ್ರೀಯಾ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಶಾಲೆಯ ಮುಖ್ಯಾಧ್ಯಾಪಕಿ ಕುಸುಮಾ ನಾಯಕ ಸ್ವಾಗತಿಸಿದರು. ಐಎಫ್‌ಎ ಸಂಸ್ಥೆಯ ಗ್ರಾö್ಯಂಟಿ ಗಣೇಶ ನಾಡೋರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಪ್ರತಿಭಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶಿಕ್ಷಕಿ ಸವಿತಾ ಹೆಗಡೆ ವಂದಿಸಿದರು.

