

ಯಲ್ಲಾಪುರದ ಹಿಂದೂ ಸಂಘಟನೆಯ ಪ್ರಮುಖ ಮಂಗೇಶ್ ಕೈಸರೆ ಕೊಲೆಯಾಗಿದ್ದು, ಲಾಕ್ ಡೌನ್ ಅವಧಿಯಲ್ಲಿ ಆದ ಈ ಸಾವು ಅಪಘಾತ ಎಂದು ತಿರುಚಿರುವ ವ್ಯವಸ್ಥೆಯ ಹಿಂದೆ ಈ ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳಿದ್ದಾರೆ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷ ಈ ಕೊಲೆಯ ಬಗ್ಗೆ ಹಿಂದುತ್ವವಾದಿಗಳೆಂದುಕೊಳ್ಳುವ ಸಂಸದರು,ವಿಧಾನಸಭಾ ಅಧ್ಯಕ್ಷರು,ಶಾಸಕರು ಮಾತನಾಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದೆ.
ಸಿದ್ಧಾಪುರದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಮಾಜವಾದಿ ಪಕ್ಷದ ಕಾರ್ಮಿಕ ಘಟಕದ ರಾಜ್ಯ ಅಧ್ಯಕ್ಷ ನಾಗರಾಜ್ ನಾಯ್ಕ ಹಿಂದೂ ಸಂಘಟನೆ, ಪಕ್ಷ ಯಾವ ಗುರುತೂ ಇಲ್ಲದ ಪರೇಶ್ ಮೇಸ್ತ ಪ್ರಕರಣವನ್ನು ರಾಜಕೀಯಗೊಳಿಸಿ ಲಾಭ ಮಾಡಿಕೊಂಡ ಬಿ.ಜೆ.ಪಿ. ಕಟ್ಟಾ ಹಿಂದುತ್ವವಾದಿ ಮಂಗೇಶ್ ಕೈಸರೆ ಕೊಲೆಯ ಬಗ್ಗೆ ದಿವ್ಯ ಮೌನವಹಿಸಿರುವುದೇಕೆ ಎಂದು ಪ್ರಶ್ನಿಸಿದರು. (ಈ ಬಗ್ಗೆ ಬೈಟ್ ಸಮಾಜಮುಖಿ ಪೇಸ್ ಬುಕ್ ಪೇಜ್ ನಲ್ಲಿದೆ)
ಪರೇಶ್ ಮೇಸ್ತ ಪ್ರಕರಣದಲ್ಲಿ ಹನಿ ರಕ್ತದ ಲೆಕ್ಕ ಕೇಳುವ ಸಂಸದ ಅನಂತಕುಮಾರ್ ಹೆಗಡೆ ಮತ್ತು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜೀವನಪರ್ಯಂತ ಹಿಂದುತ್ವಕ್ಕಾಗಿ ಹೋರಾಡಿ ಜೀವಕೊಟ್ಟ ಮಂಗೇಶ್ ಕೈಸರೆ ಕೊಲೆ ಬಗ್ಗೆ ಸುಮ್ಮನಿದ್ದು ಅದರ ಮಾಹಿತಿ ಕೇಳಿದ ಜನಸಾಮಾನ್ಯರನ್ನು ಸುಳ್ಳುಪ್ರಕರಣದಲ್ಲಿ ಬಂಧಿಸಿ ಹಿಂಸಿಸುತ್ತಿರುವುದೇಕೆ ಎನ್ನುವ ಪ್ರಶ್ನೆಗೆ ಉತ್ತರ ಕೊಡಬೇಕು ಎಂದರು.
ಮಂಗೇಶ್ ಕೈಸರೆ ಕೊಲೆ ಮತ್ತು ಆ ಬಗ್ಗೆ ಮಾಹಿತಿ ಕೇಳುವ ಜನರಿಗೆ ಸರ್ಕಾರಿ ಯಂತ್ರದಿಂದ ಕಿರುಕುಳ ಕೊಡುತ್ತಿರುವವರ ವಿರುದ್ಧ ಸಮಾಜವಾದಿ ಪಕ್ಷದಿಂದ ಪ್ರತಿಭಟನೆ ಮಾಡಲಿದ್ದೇವೆ ಎಂದು ಅವರು ವಿವರಿಸಿದರು. ಮಾಧ್ಯಮಗೋಷ್ಠಿಯಲ್ಲಿ ಸಮಾಜವಾದಿ ಪಕ್ಷದ ರಾಜ್ಯ ಅಧ್ಯಕ್ಷ ಮಂಜಪ್ಪ ಮತ್ತು ಮಹಾಪ್ರಧಾನ ಕಾರ್ಯದರ್ಶಿ ಬಿ. ನಾರಾಯಣ ಇದ್ದರು.


