ಹೊಸ ಶಿಕ್ಷಣ ನೀತಿ ಬಗ್ಗೆ ಮಾಮು ಸಿದ್ಧರಾಮಯ್ಯ ಲೇಖನ

ಹೊಸ ಶಿಕ್ಷಣ ನೀತಿಯ ಮೊದಲ ಬಲಿಪಶು ಕರ್ನಾಟಕ: –

“ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕ’ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ. ರಾಜ್ಯದ ವಿದ್ಯಾರ್ಥಿ ಮತ್ತು ಹೆತ್ತವರ ದೃಷ್ಟಿಯಿಂದ ಸಚಿವರ ಹೇಳಿಕೆಯನ್ನು ಅರ್ಥೈಸುವುದಾದರೆ ‘ಹೊಸ ಶಿಕ್ಷಣ ನೀತಿಯ ಮೊದಲ ಬಲಿಪಶು ಕರ್ನಾಟಕ’ ಎಂದಾಗುತ್ತದೆ. ನೂತನ ಶಿಕ್ಷಣ ನೀತಿಯ ಬಗ್ಗೆ ಮಾತ್ರವಲ್ಲ, ಈ ನೀತಿಯನ್ನು ಅನುಷ್ಠಾನಗೊಳಿಸಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಬಗ್ಗೆಯೂ ನನ್ನ ವಿರೋಧವಿದೆ.

ದೇಶದ ಭವಿಷ್ಯವಾಗಿರುವ ಮುಂದಿನ ಜನಾಂಗವನ್ನು ರೂಪಿಸಲಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುವ ಮೊದಲು ಇದರ ಸಾಧಕ-ಬಾಧಕಗಳನ್ನು ವಿರೋಧ ಪಕ್ಷಗಳ ಜೊತೆಯಲ್ಲಿ ಮಾತ್ರವಲ್ಲ ದೇಶದ ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಹೆತ್ತವರ ಜೊತೆಯಲ್ಲಿನ ವಿಸ್ತೃತವಾದ ಚರ್ಚೆ ನಡೆಸಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರ ಎಲ್ಲರನ್ನೂ ಧಿಕ್ಕರಿಸಿ ಸರ್ವಾಧಿಕಾರಿ ಧೋರಣೆಯಿಂದ ಹೊಸ ನೀತಿಯನ್ನು ಜಾರಿಗೊಳಿಸುತ್ತಿದೆ. ಅಧಿಕಾರದಲ್ಲಿ ಉಳಿಯಲು ಪಕ್ಷದ ಹೈಕಮಾಂಡನ್ನು ಓಲೈಸುವ ಅನಿವಾರ್ಯತೆಗೆ ಸಿಕ್ಕ ರಾಜ್ಯ ಸರ್ಕಾರ ತರಾತುರಿಯಲ್ಲಿ ಶಿಕ್ಷಣ ನೀತಿಯ ಜಾರಿಗೆ ಆದೇಶ ಹೊರಡಿಸಿರುವುದು ವಿಷಾದಕರ ಬೆಳವಣಿಗೆ.ಹೊಸ ಶಿಕ್ಷಣ ನೀತಿ ಒಕ್ಕೂಟ ವ್ಯವಸ್ಥೆಗೆ ಮಾರಕ ಮಾತ್ರವಲ್ಲ, ಮೂಲಭೂತವಾಗಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ನೀತಿ,ಕಾನೂನು, ಸುಧಾರಣಾ ಕ್ರಮಗಳು ರಾಜ್ಯಗಳ ಸಹಕಾರದಿಂದ ಜಾರಿಗೆ ತರಬೇಕು. ಭಿನ್ನಮತಗಳಿದ್ದರೆ ರಾಜ್ಯಗಳ ಜೊತೆ ಚರ್ಚಿಸಿ ಅವುಗಳನ್ನು ವಿಶ್ವಾಸಕ್ಕೆ ಪಡೆದು ಸಂಧಾನ,ಮನವರಿಕೆಯ ಮಾರ್ಗಗಳ ಮೂಲಕ ಅನುಷ್ಠಾನಕ್ಕೆ ತರಬೇಕು.

ಇದೊಂದು ಸಂಪ್ರದಾಯ ಮಾತ್ರವಲ್ಲ, ಸಂವಿಧಾನದತ್ತ ಕರ್ತವ್ಯ ಕೂಡಾ ಹೌದು.ಒಕ್ಕೂಟ ವ್ಯವಸ್ಥೆ ಕೇವಲ ಆಡಳಿತದ ಅನುಕೂಲಕ್ಕೆ ಮಾಡಿಕೊಂಡಿರುವ ಹೊಂದಾಣಿಕೆಯ ವ್ಯವಸ್ಥೆ ಅಲ್ಲ, ಅದು ದೇಶದ ವೈವಿಧ್ಯತೆ ಮತ್ತು ಬಹುತ್ವವನ್ನು ಪರಿಗಣಿಸಿ ರೂಪಿಸಲಾಗಿರುವ ಪ್ರಜಾಪ್ರಭುತ್ವದ ಸಿದ್ಧಾಂತ. ಹೊಸ ಶಿಕ್ಷಣ ನೀತಿಯ ಬಗ್ಗೆ ಸಂಸತ್ ನಲ್ಲಿಯೇ ವಿಸ್ತೃತವಾದ ಚರ್ಚೆ ನಡೆಯಲಿಲ್ಲ. ವಿರೋಧಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಕನಿಷ್ಠ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚೆ ನಡೆಸಬಹುದಿತ್ತು, ಅದನ್ನೂ ಮಾಡಲಿಲ್ಲ.ಬಹುಧರ್ಮ,ಬಹುಭಾಷೆ,ಬಹುಸಂಸ್ಕೃತಿ ಇರುವ ನಮ್ಮ ದೇಶಕ್ಕೆ ಏಕರೂಪದ ಶಿಕ್ಷಣ ಹೊಂದಿಕೊಳ್ಳುವುದಿಲ್ಲ. ಶಿಕ್ಷಣ ವ್ಯವಸ್ಥೆಯನ್ನು ಸ್ಥಳೀಯವಾದ ಸಾಮಾಜಿಕ,ಸಾಂಸ್ಕೃತಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ರೂಪಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ನೇರವಾಗಿ ದೆಹಲಿಯಿಂದ ಹೊಸ ಶಿಕ್ಷಣ ನೀತಿಯನ್ನು ರಾಜ್ಯಗಳ ತಲೆ ಮೇಲೆ ಹೇರಿದೆ.ಇತ್ತೀಚೆಗೆ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಿ, ಆಡಳಿತವನ್ನು ದೆಹಲಿ ಮಟ್ಟದಲ್ಲಿಯೇ ಕೇಂದ್ರಿಕರಿಸುವ ಹುನ್ನಾರ ನಡೆಯುತ್ತಿದೆ. ಎಲ್ಲವನ್ನೂ ದೆಹಲಿ ಮೂಲಕವೇ ನಿರ್ಧರಿಸುವ ಸರ್ವಾಧಿಕಾರ ಪ್ರಜಾಪ್ರಭುತ್ವಕ್ಕೆ ಮಾರಕವಾದುದು.ಮೂಲ ಸಂವಿಧಾನದಲ್ಲಿ ಶಿಕ್ಷಣ ರಾಜ್ಯಗಳ ಪಟ್ಟಿಯಲ್ಲಿತ್ತು, ಶಿಕ್ಷಣಕ್ಕೆ ಸಂಬಂಧಿಸಿದ ನೀತಿ-ನಿರ್ಧಾರಗಳ ಹೊಣೆ ರಾಜ್ಯಸರ್ಕಾರದ್ದಾಗಿತ್ತು. ಸಂವಿಧಾನಕ್ಕೆ 42ನೇ ತಿದ್ದುಪಡಿ ಮಾಡುವ ಮೂಲಕ ಶಿಕ್ಷಣವನ್ನು ಸಹವರ್ತಿ ಪಟ್ಟಿಗೆ ಸೇರಿಸಲಾಯಿತು. ಬಾಬಾಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಅದನ್ನು ರಾಜ್ಯಗಳ ಪಟ್ಟಿಯಲ್ಲಿ ಸೇರಿಸಿದ್ದರು.ಸಂವಿಧಾನಕ್ಕೆ 42ನೇ ತಿದ್ದುಪಡಿಯಾಗುವ ವರೆಗೆ ಶಿಕ್ಷಣ ಸಂಪೂರ್ಣವಾಗಿ ರಾಜ್ಯದ ಪಟ್ಟಿಯಲ್ಲಿತ್ತು. ಈ ತಿದ್ದುಪಡಿಯ ನಂತರ ಇದನ್ನು ಸಹವರ್ತಿ ಪಟ್ಟಿಗೆ ವರ್ಗಾಯಿಸಲಾಯಿತು.

ಆ ಕಾಲದ ಅನುಕೂಲತೆಗೆ ತಕ್ಕಂತೆ ಈ ಬದಲಾವಣೆ ಮಾಡಿದರೂ ಈಗ ಈ ಬದಲಾವಣೆಯನ್ನು ರಾಜ್ಯಗಳ ಅಸ್ತಿತ್ವವನ್ನೇ ದುರ್ಬಲಗೊಳಿಸುವ ರೀತಿಯಲ್ಲಿ ದುರುಪಯೋಗವಾಗುತ್ತಿದೆ.ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಪನ್ಮೂಲ ಹಂಚಿಕೆಯನ್ನು ಸಂವಿಧಾನದ ಏಳನೇ ಶೆಡ್ಯೂಲ್ ವ್ಯಾಖ್ಯಾನಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಂಪನ್ಮೂಲವನ್ನು ಯಾವ ರೀತಿ ಹಂಚಿಕೆ ಮಾಡಬೇಕೆನ್ನುವ ಸ್ಪಷ್ಟವಾದ ವಿವರಣೆ ಹೊಸ ಶಿಕ್ಷಣ ನೀತಿಯಲ್ಲಿ ಇಲ್ಲ. ಈಗಿನ ಕೇಂದ್ರ ಸರ್ಕಾರ ತೆರಿಗೆ ಹಂಚಿಕೆ, ಜಿಎಸ್ ಟಿ ಪರಿಹಾರ, ಅತಿವೃಷ್ಟಿ ಅನಾವೃಷ್ಟಿ ಪರಿಹಾರ, ಕೇಂದ್ರ ಪ್ರಾಯೋಜಿತ ಯೋಜನೆಯ ಹಣ- ಮೊದಲಾದವುಗಳಿಗೆ ಸಂಬಂಧಿಸಿದಂತೆ ಈಗಿನ ಕೇಂದ್ರ ಸರ್ಕಾರ ಹೇಗೆ ರಾಜ್ಯ ಸರ್ಕಾರಕ್ಕೆ ವಂಚನೆ ಮಾಡಿದೆ ಎನ್ನುವ ಸ್ಪಷ್ಟ ಚಿತ್ರ ನಮ್ಮ ಮುಂದಿದೆ. ರಾಜ್ಯದಲ್ಲಿ ತೆರಿಗೆ,ಸುಂಕಗಳ ರೂಪದಲ್ಲಿ ಸಂಗ್ರಹಮಾಡುವ ನೂರು ರೂಪಾಯಿಯಲ್ಲಿ 36 ರೂಪಾಯಿಗಳನ್ನಷ್ಟೇ ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ಕೇಂದ್ರ ಸರ್ಕಾರ ಜಿಡಿಪಿಯ ಶೇಕಡಾ ಆರರಷ್ಟನ್ನು ಮೀಸಲಿಟ್ಟರೂ ಅದರಿಂದ ರಾಜ್ಯಗಳಿಗೆ ಲಾಭವಾಗುತ್ತದೆ ಎಂಬ ಭರವಸೆ ಯಾರಿಗೂ ಇಲ್ಲ. ಕೇಂದ್ರ ನಿಯಂತ್ರಣ ಪ್ರಾಧಿಕಾರ ರಚಿಸಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅದರ ವ್ಯಾಪ್ತಿಗೆ ತರಬೇಕೆಂದು ಹೊಸ ಶಿಕ್ಷಣ ನೀತಿ ಶಿಫಾರಸು ಮಾಡಿದೆ. ಈ ಶಿಫಾರಸು ಸ್ಪಷ್ಟವಾಗಿ ಸಂವಿಧಾನದ 246(3)ಕ್ಕೆ ವಿರುದ್ದವಾಗಿದೆ.ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಶಿಕ್ಷಣವನ್ನು ನೀಡಬಾರದೆಂದು ಸಂವಿಧಾನದ 28 (1) ಶೆಡ್ಯೂಲ್ ನಲ್ಲಿ ಸ್ಪಷ್ಟವಾಗಿದೆ. ಆದರೆ ಹೊಸ ಶಿಕ್ಷಣ ನೀತಿ ಶಾಲಾ ಪಠ್ಯಪುಸ್ತಕಗಳಲ್ಲಿ “ ತಥಾಕಥಿತ ಭಾರತೀಯ ಸಂಸ್ಕೃತಿ, ಪರಂಪರೆಗಳ ಪರಿಚಯ ಇರಬೇಕು ಎಂದು ಹೇಳಿದೆ.

ಆರ್ ಎಸ್ ಎಸ್ ಸಿದ್ದಾಂತವನ್ನು ಅಡಿಯಿಂದ ಮುಡಿವರೆಗೆ ತುಂಬಿಕೊಂಡಿರುವ ಬಿಜೆಪಿ ಆಡಳಿತದಲ್ಲಿ ಈ ಸಂಸ್ಕೃತಿ ಮತ್ತು ಪರಂಪರೆಯ ವ್ಯಾಖ್ಯಾನ ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬ ಅನುಭವ ನಮಗೆ ಅರಿವಾಗಿದೆ. ಇವರಿಗೆ ಸಂಸ್ಕೃತಿ ಎಂದರೆ ಏಕಸಂಸ್ಕೃತಿ, ಇವರ ಸಿದ್ದಾಂತದಲ್ಲಿ ಬಹುಧರ್ಮ, ಬಹುಭಾಷೆ,ಬಹುಸಂಸ್ಕೃತಿಗಳಿಗೆ ಸ್ಥಾನ ಇಲ್ಲ. ಆದ್ದರಿಂದ ಭಾರತೀಯ ಸಂಸ್ಕೃತಿಯನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸುವುದೆಂದರೆ ಅದು ಕೇಸರಿಕರಣ ಮಾಡುವುದು ಅಷ್ಟೇ ಎನ್ನುವುದು ಸ್ಪಷ್ಟ. ಬಹುತ್ವವನ್ನು ಒಳಗೊಂಡ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಬಗ್ಗೆ ನನ್ನ ಸಂಪೂರ್ಣ ಸಹಮತ ಇದೆ ಎನ್ನುವುದನ್ನೂ ನಾನು ಹೇಳಬೇಕಾಗುತ್ತದೆ.ಹೊಸ ಶಿಕ್ಷಣ ನೀತಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿಯುವಿಕೆಯನ್ನು ಸಾಮಾಜಿಕ ಹಿಂದುಳಿಯುವಿಕೆಯಿಂದ ಪ್ರತ್ಯೇಕಗೊಳಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದವರೆಲ್ಲರನ್ನೂ ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಾಮಾಜಿಕ ಹಿಂದುಳಿಯುವಿಕೆಯನ್ನು ಅಪ್ರಸ್ತುತ ಗೊಳಿಸುವ ಹುನ್ನಾರ ಈ ಸರ್ಕಾರ ನಡೆಸುತ್ತಿದೆ. ಇದು ಸಂವಿಧಾನದ ಆಶಯವಾದ ಸಾಮಾಜಿಕ ನ್ಯಾಯಕ್ಕೆ ವಿರುದ್ದವಾಗಿದೆ.ಹೊಸ ಶಿಕ್ಷಣ ನೀತಿ ಪೂರ್ಣಪ್ರಮಾಣದಲ್ಲಿ ಜಾರಿಗೆ ಬರಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಿನ ಹಲವಾರು ಕಾನೂನುಗಳಿಗೆ ತಿದ್ದುಪಡಿ ಮಾಡಬೇಕಾಗುತ್ತದೆ. ಲೋಕಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ ಸರ್ಕಾರ ರಾಜ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕೇಂದ್ರದ ಮಟ್ಟದಲ್ಲಿಯೇ ತಿದ್ದುಪಡಿಗಳನ್ನು ಮಾಡಿ ರಾಜ್ಯಗಳ ಮೇಲೆ ಹೇರುವ ಸಾಧ್ಯತೆ ಇದೆ.ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿನ ಪ್ರಮುಖ ಸಮಸ್ಯೆಗಳನ್ನು ಗುರುತಿಸುವುದಾದರೆ ಮೊದಲನೆಯದಾಗಿ, ಕನ್ನಡ ಭಾಷಾ ವಿಷಯವನ್ನು ಕೇವಲ ಎರಡು ಸೆಮಿಸ್ಟರುಗಳಿಗೆ ಅಂದರೆ ಒಂದು ವರ್ಷಕ್ಕೆ ಮಾತ್ರ ಕಲಿಸುವುದಾಗಿ ಹಿಂದೆ ಹೇಳಿದ್ದರು. ರಾಜ್ಯದ ವಿವಿಧ ವಲಯಗಳಿಂದ ಪ್ರಬಲ ಪ್ರತಿರೋಧ ಬಂದ ಮೇಲೆ ಶಿಕ್ಷಣ ಸಚಿವರಾದ ಡಾ. ಅಶ್ವತ್ಥ ನಾರಾಯಣ ಅವರು ಈ ಸಮಸ್ಯೆಯನ್ನು ಸರಿಪಡಿಸುವುದಾಗಿ ಹೇಳಿಕೆ ಕೊಟ್ಟಿದ್ದರು. ಆದರೆ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಅದರ ಕುರಿತು ಸ್ಪಷ್ಟತೆ ಇಲ್ಲ. ಎರಡನೆಯದಾಗಿ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿ ಶೇ. 40 ರಷ್ಟು ಅಂಕಗಳನ್ನು ಆನ್ ಲೈನ್ ಮೂಲಕ ಪಡೆಯಬಹುದಾಗಿದೆ. ಇದರಿಂದಾಗಿ ಪ್ರಾಕ್ಟಿಕಲ್ ತರಗತಿಗಳನ್ನು ಹೊರತುಪಡಿಸಿ ಇನ್ನುಳಿದಂತೆ ತರಗತಿಗಳಿಗೆ ಹಾಜರಾಗುವ ಅಗತ್ಯವಿಲ್ಲ. ಈ ನೀತಿಯ ಪ್ರಕಾರ ವಿಶ್ವ ವಿದ್ಯಾಲಯಗಳನ್ನು ದೂರ ಶಿಕ್ಷಣ ಕೇಂದ್ರಗಳಂತೆ ಮಾಡಲಾಗುತ್ತಿದೆ, ಆ ಮೂಲಕ ಅನೇಕ ಸರ್ಟಿಫಿಕೇಟ್ ಕೋರ್ಸ ಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ, ನಿಧಾನಕ್ಕೆ ಸರ್ಕಾರಿ ವಿವಿಗಳನ್ನು ಮುಚ್ಚಿ ಖಾಸಗಿ ವಿವಿಗಳಿಗೆ ಉನ್ನತ ಶಿಕ್ಷಣವನ್ನು ಒಪ್ಪಿಸುವ ಹುನ್ನಾರ ಸ್ಪಷ್ಟವಾಗಿ ಕಾಣುತ್ತಿದೆ.ಮೂರನೆಯದಾಗಿ, ಈಗಿನ ಪದವಿಯಲ್ಲಿ ಮೂರು ಮೇಜರ್ ವಿಷಯಗಳ ಬದಲಾಗಿ ಕೇವಲ ಎರಡು ವಿಷಯಗಳನ್ನು ಕಲಿಸುವಂತೆ ಹಾಗೂ ಮೂರನೆ ವರ್ಷ ಅಥವಾ 5 & 6 ನೇ ಸೆಮಿಸ್ಟರುಗಳಾಚೆಗೆ ಕೇವಲ ಒಂದು ವಿಷಯವನ್ನು ಮೇಜರ್ ಆಗಿ ಇನ್ನೊಂದನ್ನು ಮೈನರ್ ಆಗಿ ಅಥವಾ ಎರಡನ್ನೂ ಮೇಜರ್ ಆಗಿ ಕಲಿಸಲು ಆದೇಶಿಸಲಾಗಿದೆ. ಇದರಿಂದಾಗಿ ಸಾವಿರಾರು ಉಪನ್ಯಾಸಕರು ಉದ್ಯೋಗ ಕಳೆದುಕೊಳ್ಳುತ್ತಾರೆ .

ಮುಂದೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಉದ್ಯೋಗಗಳೇ ಸೃಷ್ಟಿಯಾಗುವುದಿಲ್ಲ. ನಾಲ್ಕನೆಯದಾಗಿ, ಪಿ ಯು ಸಿ ಮಟ್ಟದಲ್ಲಿ ವಿಜ್ಞಾನ ಕಲಿತವರು ಇದುವರೆಗೆ ಬಿಎಸ್ಸಿ ಹೋಗಲು ಮನಸ್ಸಾಗದಿದ್ದರೆ ಬಿ.ಕಾಂ ಅಥವಾ ಬಿ ಎ ಗೆ ಸೇರಬಹುದಿತ್ತು. ಈ ಆಯ್ಕೆಗಳು ರದ್ದಾಗುತ್ತವೆ ಎಂಬಂತೆ ಆದೇಶ ಹೊರಡಿಸಲಾಗಿದೆ. ಒಕ್ಕೂಟ ಧರ್ಮವನ್ನು ಪಾಲಿಸದೆ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ರಾಜ್ಯದ ಜನತೆಯ ಆಶೋತ್ತರಗಳಿಗೆ ಮಾರಕವಾಗಿರುವ ಹೊಸ ಶಿಕ್ಷಣ ನೀತಿಯನ್ನು ವಿರೋಧಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಕೇವಲ ದೆಹಲಿ ಆದೇಶಕ್ಕೆ ತಲೆಬಾಗಿ ಹೊಸ ಶಿಕ್ಷಣ ನೀತಿಯನ್ನು ತರಾತುರಿಯಾಗಿ ಜಾರಿಗೆ ತರಲು ಹೋಗದೆ, ಈ ಬಗ್ಗೆ ಪರಿಶೀಲನೆಗೆ ಶಿಕ್ಷಣ ತಜ್ಞರು ಮತ್ತು ಸರ್ವಪಕ್ಷಗಳ ನಾಯಕರು ಮತ್ತು ಶಿಕ್ಷಣ ತಜ್ಞರ ಸಮಿತಿಯನ್ನು ರಚಿಸಬೇಕು. ಇದರ ಬಗ್ಗೆ ವಿಸ್ತೃತವಾಗಿ ಸಾರ್ವಜನಿಕ ಚರ್ಚೆ ನಡೆಯಬೇಕು. (-ಸಿದ್ಧರಾಮಯ್ಯ-ಕೃಪೆ-ವಿ.ಕ.)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *