

ಶಿಕ್ಷಕ ಗ್ರಾಮದ, ಒಂದು ಪೀಳಿಗೆಯ ಕಣ್ಣು ತೆರೆಸಬಲ್ಲ ಎನ್ನುವುದು ಸಾರ್ವತ್ರಿಕ ಸತ್ಯ. ಈ ಸತ್ಯಕ್ಕೆ ನಿದರ್ಶನ ಉತ್ತರ ಕನ್ನಡ ಜಿಲ್ಲೆಯ ಹುಲಕುತ್ರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ದರ್ಶನ್ ಹರಿಕಂತ್ರ. ಈ ಪ್ರಾಥಮಿಕ ಶಾಲೆಯ ಶಿಕ್ಷಕ ಹುಲಕುತ್ರಿಗೆ ಬರುವ ಮೊದಲು ಇಲ್ಲಿ ಶಿಕ್ಷಕರು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಚಿಂತಿತರಾಗಿದ್ದರೇ ಹೊರತು ಶಾಲೆಯ ಮಕ್ಕಳ ಪ್ರಮಾಣ ಹೆಚ್ಚಿಸುವ ಕ್ರಮಗಳ ಬಗ್ಗೆ ಯೋಚಿಸುತ್ತಿರಲಿಲ್ಲ.
ದರ್ಶನ ಹರಿಕಂತ್ರ ಸಿದ್ಧಾಪುರ ತಾಲೂಕಿನ ಕುಗ್ರಾಮ ಹುಲಕುತ್ರಿಯ ಶಾಲೆಗೆ ಬಂದಾಗ ಆಶಾದಾಯಕ ವಾತಾವರಣವಿರಲಿಲ್ಲ. ಶಿಕ್ಷಕರಿಗೆ ಈ ಗ್ರಾಮ ಬುಲುದೂರ ಎನ್ನುವ ಬೇಸರವಾದರೆ ಪಾಲಕರಿಗೆ ತಮ್ಮ ಮಕ್ಕಳನ್ನು ಪೇಟೆಶಾಲೆಗಳಿಗೆ ದಾಖಲಿಸುವ ಅನಿವಾರ್ಯತೆ ಎದುರಾಗಿತ್ತು. ಆಗ ಹೊಸ ಆಲೋಚನೆ ಚಿಂತನೆಗಳ ಮೂಲಕ ಹೊಸಹುರುಪಿನೊಂದಿಗೆ ಕಾಯಕ ಮುಂದುವರಿಸಿದ ಈ ಶಿಕ್ಷಕ ವಿಶಿಷ್ಟವಾಗಿ, ವಿಭಿನ್ನವಾಗಿ ಮಾರ್ಗದರ್ಶನ ಮಾಡತೊಡಗಿದಂತೆ ಮಕ್ಕಳು ಹುರುಪಾದರು.
ಸೃಜನಶೀಲ ಚಟುವಟಿಕೆಗಳಿಂದ ಶಾಲೆಯ ಸೊಬಗು,ಆಂತರಿಕ ವಾತಾವರಣ ಬದಲಾಗತೊಡಗಿತು. ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕ್ರೀಯಾಶೀಲತೆ ನೋಡುತ್ತಾ ಪಾಲಕರೂ ಶಾಲೆಯ ಕಡೆ ನೋಡತೊಡಗಿದರು.ಸರ್ಕಾರದ ಪಠ್ಯಕ್ರಮದ ಜೊತೆಗೆ ಪೂರಕ ಪಠ್ಯ-ಪಠ್ಯೇತರ ಚಟುವಟಿಕೆಗಳಿಗೆ ಪ್ರೇರೇಪಿಸಿದ ಶಿಕ್ಷಕರಿಂದ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚತೊಡಗಿತು.ನಲಿಕಲಿ ಕೊಠಡಿಯ ಸೌಂದರ್ಯ ಹೆಚ್ಚಿಸಿದ ಶಿಕ್ಷಕರು ಸ್ಮಾರ್ಟ್ ಕ್ಲಾಸ್ ಸಜ್ಜುಮಾಡಿದರು. ಕುಗ್ರಾಮದ ಶಾಲೆಗೆ ಕಾಟಾಚಾರಕ್ಕೆ ಬರುತಿದ್ದ ವಿದ್ಯಾರ್ಥಿಗಳಲ್ಲೂ ಉತ್ಸಾಹ ಕಾಣತೊಡಗಿತು.
ಮಕ್ಕಳಿಗೆ ಸ್ಥಳಿಯ ಪ್ರದೇಶಗಳ ಪರಿಚಯ ಪ್ರವಾಸ ಮಾಡಿಸುತ್ತಾ, ಚಾರಣಕ್ಕೆ ಕರೆದೊಯ್ಯುತ್ತಾ ಹೊಸತನದ ಕಲಿಕೆಗೆ ಪ್ರೋತ್ಸಾಹಿಸಿದರು. ಇದರ ಪರಿಣಾಮ ವಿದ್ಯಾರ್ಥಿಗಳ ಸಾಮರ್ಥ್ಯವೃದ್ಧಿಯಲ್ಲಿ ಪ್ರತಿಫಲಿಸಿತು. ದರ್ಶನ್ ಹರಿಕಂತ್ರರ ಹೊಸ ಪ್ರಯೋಗ ಯಶಸ್ವಿಯಾಗುತ್ತಾ ಶಾಲೆಯ ವೆಬ್ ಸೈಟ್ hulkutrischool.in ವರೆಗೆ ಮುಂದುವರಿಯಿತು. ಇದು ರಾಜ್ಯದ ಸರ್ಕಾರಿ ಶಾಲೆಗಳಲ್ಲೇ ಮೊದಲ ವೆಬ್ ಸೈಟ್ ಇದರಿಂದಾಗಿ ವಿದ್ಯಾರ್ಥಿಗಳು ಆನ್ಲೈನ್ ಆಫ್ ಲೈನ್ ಗಳಲ್ಲಿ ಕಲಿಯುವಂತಾಯಿತು.ಕರೋನಾ ಲಾಕ್ ಡೌನ್ ಅವಧಿಯಲ್ಲಂತೂ ಈ ಶಾಲೆಯ ವೆಬ್ ಸೈಟ್ ಕಲಿಕೆಗೆ ವರದಾನವಾಯಿತು.
ಸರ್ಕಾರದ ನಿರ್ಧೇಶನಗಳ ಜಾರಿಯೊಂದಿಗೆ ಹೆಚ್ಚಿನ ಪ್ರಯೋಗಕ್ಕೆ ವೇದಿಕೆ ಕಲ್ಪಿಸಿದ ಶಿಕ್ಷಕರಿಂದಾಗಿ ಈಗ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ತಮ್ಮೂರಿನ ಶಾಲೆಯ ಬಗ್ಗೆ ಮೂಗುಮುರಿಯುತಿದ್ದ ಸ್ಥಳಿಯರು ಈಗ ಶಾಲೆಯ ಅಭಿವೃದ್ಧಿ ವಿದ್ಯಾರ್ಥಿಗಳ ಪ್ರಗತಿ ಕಂಡು ಸಂಬ್ರಮಪಡುವಂತಾಗಿದೆ. ಬೇರೆ ಶಾಲೆಗಳಿಗೂ ತಮ್ಮ ಶಾಲೆಗೂ ಇರುವ ವ್ಯತ್ಯಾಸದಿಂದ ಹುಲಕುತ್ರಿಯ ಶಾಲೆ ಹೆಸರುಮಾಡಿರುವುದಕ್ಕೆ ಶಿಕ್ಷಕ ವರ್ಗದವರಲ್ಲಿಯೂ ಸಂಬ್ರಮ ಮನೆಮಾಡಿದೆ. ರಂಜನಾ ಭಂಡಾರಿ ಮತ್ತು ಮೈತ್ರಿ ಹೆಗಡೆ ಎನ್ನುವ ಇಲ್ಲಿಯ ಶಿಕ್ಷಕಿಯರು ತಮ್ಮ ಮುಖ್ಯೋಧ್ಯಾಪಕರ ಬದ್ಧತೆ,ಕ್ರೀಯಾಶೀಲತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹುಲಕುತ್ರಿಯ ಪ್ರಾಥಮಿಕ ಶಾಲೆಯ ಮಕ್ಕಳು ದೊಡ್ಡನಗರಗಳ ಪ್ರಸಿದ್ಧ ಶಾಲೆಗಳ ತಾಂತ್ರಿಕತೆ,ಶಿಕ್ಷಣವನ್ನು ಪಡೆಯುವಂತಾಗಲು ಶಿಕ್ಷಕರ ಪ್ರಯತ್ನ ಸ್ಥಳಿಯರ ಸಹಕಾರ ಕಾರಣ ಎನ್ನುತ್ತಾರೆ. ವೆಬ್ಸೈಟ್ ನಿಂದಾಗಿ ತಮ್ಮ ಶಾಲೆಯ ಮಕ್ಕಳು ಮನೆಯಲ್ಲೇ ಕುಳಿತು ಕಲಿಯುವ ಅವಕಾಶ ದೊರೆಯಿತು ಎಂದು ಖುಷಿ ಹಂಚಿಕೊಳ್ಳುತ್ತಾರೆ.
ಸೋವಿನಕೊಪ್ಪ ಗ್ರಾಮ ಪಂಚಾಯತ್ ನ ಕುಗ್ರಾಮ ಹುಲಕುತ್ರಿ ಗ್ರಾಮ ಹಾಗೂ ಇಲ್ಲಿಯ ಶಾಲೆ ಎಲ್ಲಿದೆ ಎನ್ನುವುದೇ ಅರಿಯದ ಸಮಯದಲ್ಲಿ ಶಾಲೆಯ ವಿಶಿಷ್ಟ ಶಿಕ್ಷಣ, ತಾಂತ್ರಿಕತೆಯ ಪ್ರಯೋಗದಿಂದ ಈಗ ಈ ಶಾಲೆ ರಾಜ್ಯದ ಗಮನ ಸೆಳೆದಿದೆ. ಶಿಕ್ಷಕನೊಬ್ಬ ಮನಸ್ಸು ಮಾಡಿದರೆ ಒಂದು ಪೀಳಿಗೆಯನ್ನು ಪ್ರಭಾವಿಸಬಹುದು ಶಾಲೆಯಿಂದ ವಿದ್ಯಾರ್ಥಿಗಳು,ಗ್ರಾಮದ ಪ್ರಸಿದ್ಧಿಯನ್ನು ಹೆಚ್ಚಿಸಬಹುದು ಎನ್ನುವುದಕ್ಕೆ ದರ್ಶನ್ ಹರಿಕಂತ್ರ ದೃಷ್ಟಾಂತವಾಗಿದ್ದಾರೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಈ ಸಾಧಕ ಶಿಕ್ಷಕರಿಗೊಂದು ಸಲಾಂ. ಈ ಮೂಲಕ ಪ್ರಯೋಗಶೀಲ ಶಿಕ್ಷಕ-ಶಿಕ್ಷಕಿಯರಿಗೂ ಸಮಾಜಮುಖಿ ಲಾಲ್ ಸಲಾಂ.


