

ಅರಣ್ಯ ಸಾಗುವಳಿ ಹಕ್ಕು ಕೇಳುತ್ತಿರುವ ರೈತರನ್ನು ಕಡೆಗಣಿಸಿರುವ ಜನಪ್ರತಿನಿಧಿಗಳು ಸತ್ತಂತಿದ್ದಾರೆ, ಹುಚ್ಚು ಅಧಿಕಾರಿಗಳು ಆಡಳಿತದ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ.
ಅರಣ್ಯ ಅತಿಕ್ರಮಣ ಮಾಡಿ ಬದುಕುತ್ತಿರುವ ರೈತರಿಗೆ ಸಾಗುವಳಿ ಹಕ್ಕು ಕೊಡಿಸುವ ಸಮಸ್ಯೆ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳದು ಒಂದೇ ನೀತಿ. ಅದು ನಿರ್ಲಕ್ಷ ನೀತಿ. ಅತಿಕ್ರಮಣದಾರರಿಗೆ ಸ್ಪಂದಿಸಲಾಗದ ಜನಪ್ರತಿನಿಧಿಗಳು ಸತ್ತಂತಿದ್ದಾರೆ. ಅತಿಕ್ರಮಣದಾರರ ಸ್ಥಿತಿ ಕಣ್ಣೀರು ತರಿಸುತ್ತಿದೆ ಎಂದು ಹಿರಿಯ ರಾಜಕಾರಣಿ, ಕಾಗೋಡು ಚಳುವಳಿಯ ನೇತಾರ ಕಾಗೋಡು ತಿಮ್ಮಪ್ಪ ಆಕ್ರೋಶ- ನೋವಿನಿಂದ ಹೇಳಿದ್ದಾರೆ.
ಶಿರಸಿಯಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, ಅರಣ್ಯ ಸಾಗುವಳಿದಾರರು ಕಾಡು ನಾಶಮಾಡಿ ಕೃಷಿ ಮಾಡುತ್ತಿಲ್ಲ. ಈಗ ನಗರಗಳು ನಿರ್ಮಾಣವಾಗಿರುವ ಪ್ರದೇಶದಲ್ಲಿ ಹಿಂದೆ ಅರಣ್ಯವಿತ್ತು. ಬಡವರಿಗೊಂದು- ಶ್ರೀಮಂತರಿಗೊಂದು ನಿಯಮ ಸರ್ಕಾರಗಳು ಮಾಡುತ್ತಿವೆ. ಈ ತಾರತಮ್ಯ ಪರಿಹಾರಕ್ಕೆ ಹೋರಾಟ ಒಂದೇ ದಾರಿ ಎಂದರು.
1972ರಲ್ಲಿ ಗೇಣಿ ಹೋರಾಟ ಆರಂಭಿಸಿ ಲಕ್ಷಾಂತರ ಬಡವರಿಗೆ ಗೇಣಿ ಭೂಮಿ ಕೊಡಿಸಿದ್ದೆವು. ಇಂದು ಅರಣ್ಯ ಅತಿಕ್ರಮಣದಾರರ ಹೋರಾಟಕ್ಕೆ ಪೂರ್ಣ ಬೆಂಬಲ ನೀಡುತಿದ್ದೇನೆ. ಸರ್ಕಾರ ಇಷ್ಟರಲ್ಲೆ ಸಾಗುವಳಿದಾರರಿಗೆ ನ್ಯಾಯ ಒದಗಿಸಬೇಕಿತ್ತು. ಶಿರಸಿಯ ರವಿ ನಾಯ್ಕ್ರ ಮುಂದಾಳತ್ವದಲ್ಲಿ ಈಗ ನಡೆಯುತ್ತಿರುವ ಹೋರಾಟ ಸಮಸ್ಯೆಗೆ ತಾರ್ಕಿಕ ಅಂತ್ಯ ಕಂಡುಕೊಳ್ಳಲಿದೆಯೆಂಬ ವಿಶ್ವಾಸವಿದೆ. ನಾನಂತೂ ಕೊನೆಯ ಉಸಿರಿರುವ ತನಕ ಅತಿಕ್ರಮಣದಾರರ ಪರವಿರುತ್ತೇನೆ ಎಂದು ಕಾಗೋಡು ಹೇಳಿದರು.
ಅಧಿಕಾರಿಗಳು ಅನಗತ್ಯ ಗೊಂದಲ, ದೌರ್ಜನ್ಯ ಮಾಡುತ್ತಿದ್ದಾರೆ. ಅರಣ್ಯದ ನಡುವೆ ಬದುಕಿರುವ ಮಂದಿಯ ಕಷ್ಟ ಇವರಿಗೆ ಅರ್ಥಮಾಡಿಕೊಳ್ಳುವ ವ್ಯವದಾನವಿಲ್ಲ. ಕಂದಾಯ ಮಂತ್ರಿಯಾಗಿದ್ದಾಗ ಬಗರ್ ಹುಕುಮ್‌ದಾರರಿಗೆ ಹಕ್ಕು ಪತ್ರ ಕೊಡಿಸಲು ಸಾಕಷ್ಟು ಪ್ರಯತ್ನ ಮಾಡಿ ಯಶಸ್ವಿಯಾದೆ. ಅರಣ್ಯ ಅತಿಕ್ರಮಣದಾರರ ಸಂಕಷ್ಟದ ಅರಿವು ಶಿರಸಿ ಶಾಸಕ (ಸ್ಪೀಕರ್ ಕಾಗೇರಿ) ಸೇರಿದಂತೆ ಹಲವು ಎಮ್ಮೆಲ್ಲೆ, ಮಂತ್ರಿಗಳಿಗೆ ಗೊತ್ತಿದೆ. ಆದರೆ ಸಮಸ್ಯೆ ಪರಿಹರಿಸುವ ಇಚ್ಚಾ ಶಕ್ತಿ ಇಲ್ಲದಾಗಿದೆ ಎಂದವರು ವಿಷಾದ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 2,95,018 ಅತಿಕ್ರಮಣದಾರರು ಸಾಗುವಳಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಕೇವಲ 15,798 ಮಂದಿಗೆ ಮಾತ್ರ ಹಕ್ಕು ಪತ್ರ ನೀಡಲಾಗಿದೆ. 1,84,358 ಅರ್ಜಿಗಳು ತಿರಸ್ಕೃತವಾಗಿವೆ. ಅಂದರೆ ಮಂಜೂರಿ ಪ್ರಮಾಣ ಶೇ.5.35ರಷ್ಟು ಅಷ್ಟೆ. ಹಾಗಾಗಿ ಹೋರಾಟವಿಲ್ಲದೆ ಮಂಜೂರಿ ಸಾಧ್ಯವೇ ಇಲ್ಲ. ಅಗತ್ಯ ಇದ್ದರೆ ನಾನೂ ಹೋರಾಟಕ್ಕೆ ಇಳಿಯುತ್ತೇನೆ. ಸಧ್ಯಕ್ಕೆ ಸರ್ಚೋಚ್ಛ ನ್ಯಾಯಾಲಯ ಕೂಡ ಅತಿಕ್ರಮಣದಾರರ ತೆರವಿನ ತನ್ನ ಆದೇಶ ತಡೆಹಿಡಿದಿದೆ. ತಿರಸ್ಕೃತ ಅರ್ಜಿ ಮರುಪರಿಶೀಲನೆಗೆ ಸೂಚಿಸಿದೆ ಎಂದು ಕಾಗೋಡು ಹೇಳಿದರು. (gouri.com)
