

ರೈತರು, ಬಗುರ್ ಹುಕುಂ ಫಲಾನುಭವಿಗಳ ಪರವಾಗಿ ಮತ್ತು ನೀರಾವರಿ ಯೋಜನೆಗಳಿಗಾಗಿ ಮಧು ಬಂಗಾರಪ್ಪ ಕೆಲಸ ಮಾಡಿದ್ದಾರೆ ಅವರ ಕೈ ಬಲಪಡಿಸಲು ನಾವು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತೇವೆ ಎಂದು ಬಿ.ಜೆ.ಪಿ. ತೊರೆದ ಜಿ.ಪಂ.ಸದಸ್ಯ ಮತ್ತು ಅವರ ತಂಡ ಹೇಳಿದೆ.

ಶಿವಮೊಗ್ಗ : ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಅವರ ನಡವಳಿಕೆ ಹಾಗೂ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದಾಗಿ ಜಿಪಂ ಮಾಜಿ ಸದಸ್ಯ, ಹಿರಿಯ ರಾಜಕಾರಣಿ ತಬಲಿ ಬಂಗಾರಪ್ಪ ತಿಳಿಸಿದರು.


ಸೊರಬ ಪಟ್ಟಣದ ಅನ್ನಪೂರ್ಣ ಸಮುದಾಯ ಭವನದಲ್ಲಿ ಸಮಾನ ಮನಸ್ಕ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು 52 ವರ್ಷಗಳ ರಾಜಕೀಯ ಅನುಭವ ಇರುವ ತಮ್ಮನ್ನು ಶಾಸಕರು ನಡೆಸಿಕೊಂಡ ರೀತಿ ಮನಸ್ಸಿಗೆ ನೋವು ತಂದಿತು. ಕಾರ್ಯಕರ್ತರನ್ನು ಕನಿಷ್ಟ ಪಕ್ಷ ಸೌಜನ್ಯದಿಂದ ಕಾಣುವ ಮನಸ್ಥಿತಿಯೂ ಶಾಸಕರಲ್ಲಿ ಇಲ್ಲ ಎಂದು ಆರೋಪಿಸಿದರು.
ಸಮಾಜವಾದದ ಸಿದ್ಧಾಂತವನ್ನು ಒಪ್ಪಿದ ನಾವುಗಳು ಈ ಹಿಂದೆ ಕುಮಾರ್ ಅವರನ್ನು ಶಾಸಕರನ್ನಾಗಿಸಬೇಕು ಎನ್ನುವ ಏಕೈಕ ಕಾರಣದಿಂದ ಬಿಜೆಪಿ ಸೇರ್ಪಡೆಗೊಂಡೆವು. ಕುಮಾರ್ ಅವರ ಗೆಲುವಿಗೆ ಕಾರಣೀಕರ್ತರೂ ಆಗಿದ್ದೆವು.
ಚುನಾವಣೆಯಲ್ಲಿ ಗೆದ್ದ ತರುವಾಯ ಕ್ಷೇತ್ರದ ಶಾಸಕರ ರಾಜಕೀಯ ಮತ್ತು ಆಡಳಿತ ಕಾರ್ಯವೈಖರಿ ಸಾಮಾನ್ಯ ಜನರಲ್ಲೂ ಸಹ ನೋವುಂಟು ಮಾಡಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿಯೂ ಬಿಜೆಪಿ ಕಾರ್ಯಕರ್ತರೊಂದಿಗಿನ ಗೊಂದಲಗಳನ್ನು ಸರಿಪಡಿಸಿಕೊಂಡು ನಮ್ಮ ಅಭ್ಯರ್ಥಿಗಳು ಗೆಲುವು ಕಾಣವಲ್ಲಿಯೂ ಯಶಸ್ಸು ಕಂಡಿದ್ದೇವೆ ಎಂದರು.
ರಾಜಕೀಯದ ಪರಿವೇ ಇಲ್ಲದ ಕೆಲವರನ್ನು ಜೊತೆಗಿಟ್ಟುಕೊಂಡು ಶಾಸಕರು ತಾಲೂಕಿನ ಇಡೀ ರಾಜಕೀಯ ವ್ಯವಸ್ಥೆ ಹಾಳುಗೆಡವಿದ್ದಾರೆ. ನಾವು ಕುಮಾರ್ ಬಂಗಾರಪ್ಪ ಅವರು 1996ರಲ್ಲಿ ಕ್ಷೇತ್ರದ ರಾಜಕಾರಣಕ್ಕೆ ಪ್ರವೇಶ ನೀಡಿದಾಗಿನಿಂದಲೂ ಜೊತೆಗಿದ್ದೆವು ಎಂಬುದನ್ನು ಗಮನಿಸದೇ ನಮ್ಮ ಸಲಹೆ-ಸಹಕಾರಗಳನ್ನು ಪರಿಗಣಿಸದೇ ಜನ ವಿರೋಧಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯೇ ಕಾಂಗ್ರೆಸ್ ಸೇರ್ಪಡೆಯಾಗಬೇಕೆಂದು ಸಮಾನ ಮನಸ್ಕ ರು ತೀರ್ಮಾನಿಸಿದ್ದೆವು.
ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆ ತೀರ್ಮಾನ : ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಕಾಂಗ್ರೆಸ್‍ಗೆ ಮತ್ತಷ್ಟು ಶಕ್ತಿ ಬಂದಿದೆ. ಮುಂದಿನ ದಿನಗಳಲ್ಲಿ ರಾಜ್ಯ ಮುಖಂಡರು ಮತ್ತು ಮಧು ಬಂಗಾರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿ, ಅಧಿಕೃತವಾಗಿ ಪಕ್ಷ ಸೇರ್ಪಡೆಗೊಳ್ಳಲಿದ್ದೇವೆ. ಇಂದಿನಿಂದಲೇ ಸಾಮಾನ್ಯ ಕಾರ್ಯಕರ್ತರಾಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಕುಮಾರ್ ಹೈಟೆಕ್ ರಾಜಕಾರಣಿ : ಮುಖಂಡ ವೈ ಜಿ ಪುಟ್ಟಸ್ವಾಮಿ ಮಾತನಾಡಿ, ಯಾವುದೇ ಹೋರಾಟದ ಹಿನ್ನೆಲೆ ಇಲ್ಲದ ಕುಮಾರ್ ಬಂಗಾರಪ್ಪ ಹೈಟೆಕ್ ರಾಜಕಾರಣಿ ಎಂದು ಕುಟುಕಿದ ಅವರು, ಕ್ಷೇತ್ರದಲ್ಲಿ ರೈತರ ಪರ ಕನಿಷ್ಟ ಧ್ವನಿ ಎತ್ತುವುದಿಲ್ಲ. ಮಧು ಬಂಗಾರಪ್ಪ ಅವರು ಬಗರ್ ಹುಕುಂ ಹಕ್ಕುಪತ್ರ ಹಾಗೂ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಪಾದಯಾತ್ರೆ ಮಾಡಿರುವುದನ್ನು ರಾಜ್ಯದ ಜನತೆ ಗಮನಿಸಿದೆ.
ಎಸ್. ಬಂಗಾರಪ್ಪ ಅವರ ಹೋರಾಟದ ಗುಣಗಳನ್ನು ಮಧು ಬಂಗಾರಪ್ಪ ಅವರಲ್ಲಿ ಕಾಣಬಹುದು. ಕ್ಷೇತ್ರದ ಶಾಸಕರು ಪಟ್ಟಣದ ಸರ್ವೆ ನಂ. 113ರಲ್ಲಿನ ಬಡ ನಿವಾಸಿಗಳಿಗೆ ಅನಗತ್ಯ ಕಿರುಕುಳ ನೀಡುತ್ತಿರುವುದು ಹಾಗೂ ಬಗರ್ ಹುಕುಂ ರೈತರ ಹಕ್ಕುಪತ್ರಗಳನ್ನು ವಜಾಗೊಳಿಸುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಕುಮಾರ್ ಬಂಗಾರಪ್ಪ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕೆ ಸೀಮಿತವಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಭೆಯಲ್ಲಿ ತಾಪಂ ಸದಸ್ಯ ನಾಗರಾಜ ಚಿಕ್ಕಸವಿ, ಸಂತೋಷ ಕೊಡಕಣಿ, ವಾಸು ಬಿಳಾಗಿ, ಮುಡುವಪ್ಪ ಜಡೆ, ಗಣಪತಿಯಪ್ಪ ಕುಳುಗದ, ಎಂ. ಉಮೇಶ್ ಹೆಸರಿ, ರಾಜು ಮಳಲಗದ್ದೆ, ಸಂದೇಶ ತಬಲಿ ಬಂಗಾರಪ್ಪ, ಆದಿ ನಾಗರಾಜ, ಕೃಷ್ಣಮೂರ್ತಿ, ಅರುಣ್ ವಕೀಲ, ಮಹೇಂದ್ರ ಚಂದ್ರಗುತ್ತಿ, ನಾಗರಾಜ ಕುಮ್ಮೂರು, ರಾಘು, ರಾಮು, ಬಸವಣ್ಯಪ್ಪ ಇತರರಿದ್ದರು.
(etvb)


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
