ಉತ್ತರಕನ್ನಡ: ಬಂದ್ ಆಗಿದ್ದ ಜಲ ಸಾಹಸ ಕ್ರೀಡೆ ಆರಂಭಿಸಲು ಜಿಲ್ಲಾಡಳಿತದ ಗ್ರೀನ್ ಸಿಗ್ನಲ್
ಕೊರೊನಾ ಸೋಂಕಿನ ಹಿನ್ನೆಲೆ ಉತ್ತರ ಕನ್ನಡಕ್ಕೆ ಬರುವ ಪ್ರವಾಸಿಗರ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಸದ್ಯ ಜಿಲ್ಲೆಯಲ್ಲಿ ಕೊವಿಡ್ ಪಾಸಿಟಿವಿಟಿ ದರ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಹಲವು ಸಾರ್ವಜನಿಕ ಚಟುವಟಿಕೆಗಳ ಮೇಲಿನ ನಿರ್ಬಂಧ ತೆರವು ಮಾಡಲಾಗಿದ್ದು, ಜಲಸಾಹಸ ಕ್ರೀಡೆ ಆರಂಭಿಸಲು ಅನುಮತಿ ನೀಡಲಾಗಿದೆ.
ಕಾರವಾರ: ಜಿಲ್ಲೆಯ ಪ್ರವಾಸಿ ಸ್ಥಳಗಳು ಮತ್ತೆ ತೆರೆದುಕೊಳ್ಳುತ್ತಿದ್ದು, ಕಾರವಾರ ಕಡಲತೀರ ಸೇರಿದಂತೆ ಜಲಸಾಹಸ ಕ್ರೀಡೆ ಆರಂಭಿಸಲು ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿದೆ. ಕೋವಿಡ್ ಅನ್‌ಲಾಕ್ ಬಳಿಕ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ತೆರೆದುಕೊಂಡಿದ್ದರೂ ಜಲಸಾಹಸ ಕ್ರೀಡೆಯಂತಹ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಿರಲಿಲ್ಲ. ಆದರೆ, ಇದೀಗ ಜಿಲ್ಲಾಡಳಿತ ಪ್ರವಾಸಿತಾಣಗಳಲ್ಲಿ ಜಲ ಕ್ರೀಡೆ ನಡೆಸಲು ಅನುಮತಿ ನೀಡಿದ್ದು, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತೆ ಕಳೆ ಬಂದಂತಾಗಿದೆ.
ರಾಜ್ಯದಲ್ಲೇ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಜಿಲ್ಲೆಗಳಲ್ಲಿ ಉತ್ತರಕನ್ನಡ ಸಹ ಒಂದು. ಪ್ರವಾಸಿಗರ ಫೇವರೇಟ್ ಆಗಿರುವ ಜಿಲ್ಲೆಯ ಕಡಲ ತೀರಕ್ಕೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ.
ಆದರೆ, ಕೋವಿಡ್ ಅನ್‌ಲಾಕ್ ಬಳಿಕ ಸಹ ಯಾವುದೇ ರೀತಿಯ ಜಲಸಾಹಸ ಕ್ರೀಡೆಗಳಿಗೆ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರವಾಸಿಗರು ಬಾರದೇ ಪ್ರವಾಸೋದ್ಯಮ ಮಂಕಾಗಿತ್ತು. ಆದರೆ ಇದೀಗ ಜಿಲ್ಲಾಡಳಿತ ಇಂದಿನಿಂದ ನದಿ ಹಾಗೂ ಸಮುದ್ರ ತೀರಗಳಲ್ಲಿ ಕೊರೊನಾ ಮಾರ್ಗಸೂಚಿಗಳ ಪಾಲನೆಯೊಂದಿಗೆ ವಾಟರ್ ಸ್ಪೋರ್ಟ್ಸ್ ನಡೆಸಲು ಅವಕಾಶ ನೀಡಿದೆ.ಜಲ ಸಾಹಸ ಕ್ರೀಡೆ ಆರಂಭಿಸಲು ಅನುಮತಿ ನೀಡಿದೆ.
ಜಿಲ್ಲೆಯಲ್ಲಿ ಕಾರವಾರ, ಗೋಕರ್ಣ, ಹೊನ್ನಾವರ ಹಾಗೂ ಮುರುಡೇಶ್ವರ ಸೇರಿದಂತೆ ಹತ್ತಾರು ಕಡಲ ತೀರಗಳಿವೆ. ಇಲ್ಲಿನ ಬೀಚ್‌ಗಳಲ್ಲಿ ಎಂಜಾಯ್ ಮಾಡೋದಕ್ಕೆ ಅಂತಾನೇ ರಾಜ್ಯ, ಹೊರರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲದೇ ಬೋಟ್ ರೈಡ್, ಜೆಟ್ ಸ್ಕೀ ಸೇರಿದಂತೆ ದಾಂಡೇಲಿ, ಜೋಯಿಡಾ ಭಾಗಗಳಿಗೆ ಕಾಳಿ ನದಿಯಲ್ಲಿ ವಿವಿಧ ಜಲಸಾಹಸ ಕ್ರೀಡೆಗಳನ್ನ ಆಯೋಜಿಸಲಾಗುತ್ತದೆ.
ಜೊತೆಗೆ ಕಾರವಾರ ರವೀಂದ್ರನಾಥ ಠಾಗೋರ್ ಕಡಲತೀರ, ಗೋಕರ್ಣದ ಓಂ ಬೀಚ್, ಕುಡ್ಲೇ ಬೀಚ್ ಹಾಗೂ ಮುರುಡೇಶ್ವರ ಕಡಲತೀರಗಳಲ್ಲಿ ಹಿಂದಿನಿಂದಲೂ ಜಲಸಾಹಸ ಕ್ರೀಡೆಗಳನ್ನ ನಡೆಸಲಾಗುತ್ತಿತ್ತು. ಇದೀಗ ಮತ್ತೆ ಜಲ ಕ್ರೀಡೆಗೆ ಅನುಮತಿ ನೀಡಿರುವುದಕ್ಕೆ ಆಯೋಜಕರು ಸಂತಸಗೊಂಡಿದ್ದು, ಈಗಾಗಲೇ ಕ್ರೀಡೆಗಳನ್ನು ಪ್ರಾರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. (etbk)