ಸಿದ್ಧಾಪುರದಿಂದ ಮಹಾರಾಷ್ಟ್ರ ಕ್ಕೆ ಅಕ್ರಮವಾಗಿ ಸಾಗಾಟ ಮಾಡುತಿದ್ದ ಅಕ್ಕಿ ಯೊಂದಿಗೆ ಲಾರಿಯನ್ನು ವಶಪಡಿಸಿಕೊಂಡಿರುವ ಸಿದ್ಧಾಪುರ ಕಂದಾಯ ಇಲಾಖೆ ಅಧಿಕಾರಿಗಳು ಮೈಸೂರಿನ ಶ್ರೀನಿವಾಸ ಗೌಡ ಎನ್ನುವ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಸಿದ್ಧಾಪುರ ಅಮೀನಾ ವೃತ್ತದ ಬಳಿಯ ಬಾವ ಪಕೀರ್ ಸಾಬ್ ರ ಕಿರಾಣಿ ಅಂಗಡಿ ಬಳಿ ನಿಂತಿದ್ದ ಲಾರಿಯಲ್ಲಿದ್ದ ಅಕ್ಕಿ ಬಗ್ಗೆ ಖಚಿತ ಮಾಹಿತಿಯೊಂದಿಗೆ ತೆರಳಿದ ಕಂದಾಯ ನಿರೀಕ್ಷಕ ರವಿಶಂಕರ್ ಗೌಡ ಮತ್ತು ಗ್ರಾಮ ಲೆಕ್ಕಿಗ ಗಣೇಶ್ ತಪಾಸಣೆ ನಡೆಸಿದಾಗ ಸಾಗಾಟಕ್ಕೆ ಅವಶ್ಯವಿದ್ದ ದಾಖಲೆಗಳಿರಲಿಲ್ಲ. ಚಾಲಕನನ್ನು ವಿಚಾರಿಸಿದಾಗ ದಾಖಲೆ ಪೂರೈಸುವ ಭರವಸೆ ನೀಡಿದ ನಂತರ ಕಾಲಾವಕಾಶ ನೀಡಿ ದಾಖಲೆ ಪೂರೈಸದಿದ್ದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಲಾಗಿದೆ.
ಕೆ.ಎ.14,ಎ6167 ಸಂಖ್ಯೆಯ ಲಾರಿ ಮತ್ತು ಚಾಲಕ ಈಗ ಕಂದಾಯ ಇಲಾಖೆಯ ವಶದಲ್ಲಿದ್ದು ಲಾರಿಯಲ್ಲಿ 50ಕೇಜಿಗಳ 120 ಚೀಲ ಅಕ್ಕಿ ಇದ್ದಿರುವುದಾಗಿ ತಿಳಿದುಬಂದಿದೆ.
ಪಡಿತರ ಚೀಟಿದಾರರಿಗೆ ನೀಡುವ ಈ ಅಕ್ಕಿ ಕಳ್ಳಸಾಗಾಣಿಕೆಯಾಗುತಿತ್ತು ಎನ್ನುವ ಗುಲ್ಲೆದ್ದಿದ್ದು ದಾಖಲೆ ಒದಗಿಸದಿದ್ದರೆ ಪರಿಶೀಲನೆ ನಡೆಸಿ ತನಿಖೆ ನಡೆಸುವುದಾಗಿ ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.