ಉತ್ತರ ಕನ್ನಡ ಜಿಲ್ಲೆ ವಿಶಾಲ ಜಿಲ್ಲೆಯಾಗಿರುವುದರಿಂದ ಇಲ್ಲಿಯ ರಾಜಕಾರಣವೆಂದರೆ ಜಾತಿ-ಪ್ರಾದೇಶಿಕತೆಗಳನ್ನು ಮೀರಿ ಹೊಸ ಸಾಧ್ಯತೆಯನ್ನು ಹುಟ್ಟುಹಾಕುವುದು ಕಡಿಮೆ. ಈಗ ರಾಜ್ಯ ವಿಧಾನಸಭಾ ಅಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಎ.ಬಿ.ವಿ.ಪಿ.ಯಿಂದ ಗುರುತಿಸಿಕೊಂಡು ಶಾಸಕರಾಗುವಾಗಲೂ ಅವರನ್ನು ಗೆಲ್ಲಿಸಿದ್ದು ಜಾತಿ ಎಂದರೆ ಸುಳ್ಳಲ್ಲ.
ಅಂ ಕೋಲಾ ಕ್ಷೇತ್ರ ದಲ್ಲಿ ಯಲ್ಲಾಪುರವನ್ನು ಸೇರಿಸಿ ಹವ್ಯಕರ ಮತ ಒಂ ದಾಗುವಂತೆ ಮಾಡಿ ಗೆದ್ದಿದ್ದ ಬಿ.ಜೆ.ಪಿ. ಕಳೆದ ದಶಕಕ್ಕಿಂತ ಮೊದಲು ಬನವಾಸಿಯನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಿ ದೀವರ ಮತಗಳನ್ನು ವಿಭಜಿಸಿ ಶಿರಸಿ ಕ್ಷೇತ್ರವನ್ನು ತನ್ನದಾಗಿಸಿಕೊಂಡಿತು. ಹೀಗೆ ಆರ್ಯರ ಚಾಣಕ್ಯ ತಂತ್ರದ ಪ್ರತಿಫಲವಾಗಿ ಹಳಿಯಾಳದಲ್ಲಿ ಆರ್.ವಿ.ದೇಶಪಾಂಡೆ, ಯಲ್ಲಾಪುರದಲ್ಲಿ ಶಿವರಾಮ ಹೆಬ್ಬಾರ್,ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲ್ಲುತ್ತಿರುವ ಯಾವ ಕ್ಷೇತ್ರದಲ್ಲೂ ಬ್ರಾಹ್ಮಣರಿಗೆ ಸಂಖ್ಯಾಬಾಹುಳ್ಯವಿಲ್ಲ. ಹೀಗೆ ಮಂತ್ರ-ತಂತ್ರಗಳ ಮೂಲಕ ಹಿಂದುಳಿದವರಿಗೆ ಚಿಪ್ಪು ನೀಡುತ್ತಿರುವ ಉತ್ತರ ಕನ್ನಡ ರಾಜಕಾರಣ ಘಟ್ಟದ ಕೆಳಗೆ ಇಳಿದಿದ್ದೇ ಇಲ್ಲ.ಘಟ್ಟದ ಮೇಲಿರಲಿ, ಕೆಳಗಿರಲಿ ತಂತ್ರ-ಮಂತ್ರಗಳ ಮೂಲಕ ಗೆಲ್ಲುವ ಕಲೆ ಕರತಲಾಮಲಕ ಮಾಡಿಕೊಂಡಿರುವ ಬ್ರಾಹ್ಮಣರು ಶಿರಸಿ ವಿಭಾಗಿಸಿ ಜಿಲ್ಲೆ ಮಾಡಿದರೆ ಅನಾಯಾಸ ತಮ್ಮ ಕೈಸೆರೆಯಾಗುವ ಕರಾವಳಿ ಕಳೆದುಕೊಳ್ಳುವ ಆತಂಕದಿಂದ ಉತ್ತರ ಕನ್ನಡ ವಿಭಾಗಿಸಿ ಎರಡು ಜಿಲ್ಲೆಗಳನ್ನಾಗಿಸಲು ಅಡ್ಡಿಯಾಗಿದ್ದಾರೆ.
ಇಂಥ ಉತ್ತರ ಕನ್ನಡ ಜಿಲ್ಲೆಯ ಶಕ್ತಿ ರಾಜಕಾರಣದ ಕೇಂದ್ರ ಶಿರಸಿ, ಶಿರಸಿ ಕೇಂದ್ರೀಕರಿಸಿ ಮೇಲ್ಜಾತಿ ರಾಜಕಾರಣ ಮಾಡುವ ವೈದಿಕರಿಗೆ ಇದರಿಂದಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ, ಶಿರಸಿ-ಸಿದ್ಧಾಪುರ, ಯಲ್ಲಾಪುರ, ಹಳಿಯಾಳಗಳು ಬಂಧಿಯಾಗಿವೆ. ಹೀಗಿರುವ ಶಿರಸಿ ಕ್ಷೇತ್ರದಲ್ಲಿ ಕದರು ಕಳೆದುಕೊಳ್ಳುತ್ತಿರುವ ವಿಶ್ವೇಶ್ವರ ಹೆಗಡೆಯವರಿಗೆ ಕಾಂಗ್ರೆಸ್ ನ ಭೀಮಣ್ಣ ಮತ್ತು ಜೆ.ಡಿ.ಎಸ್.ನ ಶಶಿಭೂಷಣ ಹೆಗಡೆ ಬಿಟ್ಟರೆ ಸಧ್ಯಕ್ಕೆ ಯಾರೂ ಪ್ರತಿಸ್ಪರ್ಧಿಗಳಿಲ್ಲ. ಆದರೆ ಕಾಂಗ್ರೆಸ್ ನಲ್ಲಿ ಪ್ರತಿಚುನಾವಣೆಗೆ ಬರುವ ಹೊನ್ನಾವರ, ಉಡುಪಿ ಮೂಲದ ಇಬ್ಬರು ವಲಸಿಗರು ಭೀಮಣ್ಣ ಶಿರಸಿ ಕ್ಷೇತ್ರ ಗೆಲ್ಲಲು ಅಡ್ಡಿಯಾಗಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಒಮ್ಮೆ ಜಿ.ಪಂ. ಸದಸ್ಯರಾಗಿರುವುದು ಬಿಟ್ಟರೆ ಬೇರೆ ಯಾವ ಹಂತದಲ್ಲೂ ಜನಪ್ರತಿನಿಧಿಯಾಗದ ಭೀಮಣ್ಣರ ದೊಡ್ಡ ಶಕ್ತಿಯೆಂದರೆ ಅವರ ದೀವರ ಕುಲಮೂಲ. ಶಿರಸಿ ಕ್ಷೇತ್ರದಲ್ಲಿ ದೀವರಲ್ಲಿ ಈವರೆಗೆ ಒಬ್ಬರೂ ಶಾಸಕರಾಗದ ಕೊರತೆ ಹಿಂದೆ ಇಲ್ಲಿಯ ಪುರೋಹಿತಶಾಹಿ ಮತ್ತವರ ಗುಲಾಮಗುಂಪುಗಳ ಅನೈತಿಕ ಒಪ್ಪಂದ ಕಾರಣ. ಶಿರಸಿ ಕೇಂದ್ರಿತ ರಾಜಕಾರಣದ ಒಳ ಒಪ್ಪಂದವೆಂದರೆ… ಹಿಂದೆ ಬಹುಸಂಖ್ಯಾತರಿಗೆ ಬೋಳಿಗೆ ತಿಕ್ಕಿ ಅಧಿಕಾರ, ಯಜಮಾನಿಕೆ ಪ್ರತಿಷ್ಠಾಪಿಸಿದ ಇಲ್ಲಿಯ ಪುರೋಹಿತಶಾಹಿವ್ಯವಸ್ಥೆ ಈ ಕ್ಷೇತ್ರದ ಬಹುಸಂಖ್ಯಾತರಿಗೆ ವಿರೋಧವಾಗುವ ಕೆಲಸವನ್ನು ವಲಸಿಗರಿಂದ ಮಾಡಿಸುತ್ತದೆ. ಇಲ್ಲಿರುವ ಬಿ.ಜೆ.ಪಿ., ಒಂದುಕಾಲದ ಜನತಾದಳ ಪಕ್ಷಗಳು ಕಾಂಗ್ರೆಸ್ ರಾಜಕಾರಣವನ್ನು ಹತ್ತಿಕ್ಕಲು ಕಾಂಗ್ರೆಸ್ ಮೆದುಹಿಂದುತ್ವವಾದಿಗಳನ್ನು ಬಳಸಿಕೊಳ್ಳುತ್ತವೆ. ಬಂಗಾರಪ್ಪ ಜಮಾನ ಬಿಟ್ಟರೆ ಉಳಿದ ಅವಧಿಗಳಲ್ಲಿ ಶಿರಸಿ ಕ್ಷೇತ್ರದ ಕಾಂಗ್ರೆಸ್ ಸೋಲಿಗೆ ಪ್ರಮುಖ ಪ್ರಬಲ ಕಾರಣಗಳೆಂದರೆ ಅವು ಒಲಸಿಗರಿಗೆ ಮಣೆ,ಮೆದುಹಿಂದುತ್ವವಾದಿಗಳಿಗೆ ನೇತೃತ್ವ ಮತ್ತು ಕಾಂಗ್ರೆಸ್ ನ ಅಂದರ್ ಕಿ ಮಚ್ಚುವಾಳ್ಳಿಗಳು.
ಕಾಂಗ್ರೆಸ್ ಅಲೆಯ ಅವಧಿಯಲ್ಲಿ ಉಪಾಯದಿಂದ ಸ್ಥಳಿಯ ದೀವರಿಗೆ ಪ್ರಮುಖ ಪಕ್ಷಗಳ ಟಿಕೇಟ್ ತಪ್ಪಿಸುವ ಮೇಲ್ಜಾತಿ ರಾಜಕಾರಣ ತಮ್ಮವರ ಪರವಾಗಿ ಜನಾಭಿಪ್ರಾಯ ರೂಪಿಸುವ ತಂತ್ರ ಹೂಡುತ್ತದೆ. ಈ ತಂತ್ರದ ಬಲಿಪಶುಗಳಾದ ಚಿಕ್ಕಜಾತಿಗಳುದೀಪಕ್ಕೆ ಬಲಿಯಾಗುವ ಪತಂಗಗಳಂತೆ ಮತ್ತೆ ಮತ್ತೆ ಮೇಲ್ವರ್ಗದ ನಯವಂಚನೆಗೆ ಬಲಿಯಾಗುತ್ತಿವೆ. ಈ ಕುಟಿಲ ಆರ್ಯ ತಂತ್ರ ಬಾಲಬಿಚ್ಚದಂತೆ ತಡೆದಿದ್ದವರು ಬಂಗಾರಪ್ಪ ಮಾತ್ರ. ಆ ಕಾಲದಲ್ಲಿ ರಾಜಕೀಯದಿಂದ ದೂರವಿದ್ದ ಕೆಲವರು ಈಗಲೂ ಮುಖ್ಯವಾಹಿನಿಯ ಜೊತೆಗೆ ಬರಲು ಸಾಧ್ಯವಾಗಿಲ್ಲ.
ಈ ಕ್ಷೇತ್ರದಲ್ಲೇ ಹಿಂದೆ ರಾಮಕೃಷ್ಣ ಹೆಗಡೆ ಸೋತಿದ್ದರು.ರಾಮಕೃಷ್ಣ ಹೆಗಡೆ ಕುಟುಂಬದ ಶಶಿಭೂಷಣ ಹೆಗಡೆ ಸೋತರು, ರವೀಂದ್ರ ನಾಯ್ಕ, ಭೀಮಣ್ಣ ನಾಯ್ಕ ಹೀಗೆ ಮೇಲ್ವರ್ಗದ ಉಪಾಯದ ರಾಜಕಾರಣದಿಂದಾಗಿ ಈ ಕ್ಷೇತ್ರದಲ್ಲಿ ಈವರೆಗೂ ಹಿಂದುಳಿದ ವರ್ಗಗಳು ಗೆದ್ದ ಉದಾಹರಣೆ ಕೂಡಾ ಇಲ್ಲ.
ಮುಖ್ಯವಾಹಿನಿಯ ರಾಜಕೀಯ ನೇತಾರರಲ್ಲಿ ಬಿ.ಜೆ.ಪಿ. ಮತ್ತು ಇಲ್ಲಿಯ ಶಾಸಕ ವಿಶ್ವೇಶ್ವರ ಹೆಗಡೆಯವರ ಬಗ್ಗೆ ಈಗ ಕ್ಷೇತ್ರದಲ್ಲಿ ಉತ್ತಮ ಹೆಸರಿಲ್ಲ. ಕೆಲವು ಗುತ್ತಿಗೆದಾರ ಮುಖಂಡರು,ಮೂಲಸಂಂಘಿಗಳನ್ನು ಬಿಟ್ಟರೆ ವಿಶ್ವೇಶ್ವರ ಹೆಗಡೆಯವರನ್ನು ಗದ್ದುಗೆಗೇರಿಸಿದ್ದ ಬಹುತೇಕರು ಈಗ ಕಾಗೇರಿಯವರ ಬಗ್ಗೆ ಸದಾಭಿಪ್ರಾಯ ಹೊಂದಿಲ್ಲ. ನಾಮಧಾರಿ ಸಂಘದ ಕೆಲವು ಪ್ರಮುಖರು ಹಾಗೂ ಕೆಲವು ಗ್ರಾ.ಪಂ. ಮಟ್ಟದ ಪುಡಾರಿಗಳು ಬಿಟ್ಟರೆ ಈಗ ಶಿರಸಿ ಕ್ಷೇತ್ರದಲ್ಲಿ ಕಾಗೇರಿ ಮತ್ತು ಬಿ.ಜೆ.ಪಿ. ಸಮರ್ಥಕರ ಸಂಖ್ಯೆ ಕ್ಷೀಣಿಸುತ್ತಿದೆ. ಒಂದೆಡೆ ಕಾಗೇರಿ ವಿಶ್ವೇಶ್ವರ ಹೆಗಡೆ ಇಮೇಜ್ ಕರಗುತಿದ್ದರೆ ಕಾಂಗ್ರೆಸ್ ಗೆ ನಿಧಾನವಾಗಿ ಜನಬೆಂಬಲ ಹೆಚ್ಚುತ್ತಿದೆ.
ಡಿ.ಸಿ.ಸಿ. ಅಧ್ಯಕ್ಷರ ನೇತೃತ್ವದ ದೇಶಪಾಂಡೆ ಬಣ, ಸಿದ್ಧಾಪುರದ ವಸಂತನಾಯ್ಕ ಬಳಗದಿಂದ ಸಿದ್ಧಾಪುರದಲ್ಲಿ ಕಾಂಗ್ರೆಸ್ ಹೆಚ್ಚಿನ ಗ್ರಾಪಂ ವಾರ್ಡ್ಗಳನ್ನು ಗೆದ್ದಿದೆ ಆದರೆ ಈ ಸ್ಥಿತಿ ಶಿರಸಿಯಲ್ಲಿಲ್ಲ. ಶಿರಸಿಯ ಯುವಕಾಂಗ್ರೆಸ್ ಬೆಂಗಳೂರಿನ ಸುಷ್ಮಾರೆಡ್ಡಿ ಬೆಂಬಲದಿಂದ ಸಾಮಾಜಿಕ ಜಾಲತಾಣದಲ್ಲಿ ಚುರುಕಾಗಿದ್ದರೆ, ಇನ್ನೊಂದು ಬಣ ನಿವೇದಿತ್ ಆಳ್ವ ಜೊತೆಗಿದೆ. ಈ ಇಬ್ಬರು ವಲಸೆ ಮುಖಂಡರ ಲೇಟ್ ಎಂಟ್ರಿ ಕಾಂಗ್ರೆಸ್ ಗೆ ಪೂರಕವಾಗುವುದರ ಬದಲು ಮಾರಕವಾಗುತ್ತಿರುವುದು ಈ ದಶಕದ ದೋಷ. ಈ ಸ್ಥಿತಿಯಲ್ಲಿ ದೇಶಪಾಂಡೆಯವರ ಕೈ ಮಧುಬಂಗಾರಪ್ಪನವರ ಸಹಕಾರ ನಂಬಿಕೊಂಡಿರುವ ಭೀಮಣ್ಣ ಕಳೆದ10-12 ವರ್ಷಗಳಿಂದ ಪುರೋಹಿತಶಾಹಿ ಎದುರು ಸೆಣಸುತಿದ್ದಾರೆ.
ಕಾಂಗ್ರೆಸ್ ನಲ್ಲಿ ಭೀಮಣ್ಣ ವಿ.ಪ.ಚುನಾವಣೆಯಿರಲಿ, ವಿಧಾನಸಭೆ ಚುನಾವಣೆ ಇರಲಿ ಕೊನೆಗೆ ಲೋಕಸಭೆ ಚುನಾವಣೆಗೂ ಸಿದ್ಧ.ಹಿಂದಿನ ಯಲ್ಲಾಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಅನಿವಾರ್ಯ ಆಯ್ಕೆಯಾಗಿದ್ದ ಭೀಮಣ್ಣ ಆಗ ಅಭ್ಯರ್ಥಿಯಾಗುವ ಮೂಲಕ ಈ ಅವಧಿಯ ವಿಧಾನಸಭೆ, ಲೋಕಸಭೆ, ವಿಧಾನಪರಿಷತ್ ನ ಪ್ರಮುಖ ಹುರಿಯಾಳುವಾದರು ಎನ್ನಲಾಗುತ್ತಿದೆ. ಆದರೆ ಮಾಡಬೇಕಾದ ಮಾಡುವ ಕೆಲಸ ಮಾಡದೆ ಭೀಮಣ್ಣ ಸಜ್ಜನಿಕೆಯಿಂದ ಸೋಲುತ್ತಾರೆ ಎನ್ನುವ ಗುರುತ ಆರೋಪಕ್ಕೆ ಕೂಡಾ ತುತ್ತಾಗುತಿದ್ದಾರೆ.
ಬಿ.ಜೆ.ಪಿ. ಒಡೆದ ಮನೆಯಂತಾಗಿ,ಕಾಂಗ್ರೆಸ್ ಬಣಗಳು, ವಲಸೆ ಆಕಾಂಕ್ಷಿಗಳ ಆಡೊಂಬಲದ ತಾಣವಾಗುತ್ತಿರುವುದರಿಂದ ಶಿರಸಿಯ ದೀಪಕ್ ಹೆಗಡೆ ದೊಡ್ಡೂರು, ವೆಂಕಟೇಶ್ ಹೆಗಡೆ ಹೊಸಬಾಳೆ, ಅಥವಾ ಜೆ.ಡಿ.ಎಸ್. ನ ಶಶಿಭೂಷಣ ಹೆಗಡೆಯವರಿಗೆ ಶಿರಸಿ ಕಾಂಗ್ರೆಸ್ ಟಿಕೇಟ್ ನೀಡಿದರೆ ಬಿ.ಜೆ.ಪಿ. ಹಿಮ್ಮೆಟ್ಟಿ ಸುವುದು ಸುಲಭ ಎನ್ನುವ ಲೆಕ್ಕಾಚಾರವಿದೆ. ಆದರೆ ಕಾಂಗ್ರೆಸ್ ಭೀಮಣ್ಣರಿಗೆ ವಂಚಿಸಿದರೆ ದೀವರು ಕಾಂಗ್ರೆಸ್, ಬಿ.ಜೆ.ಪಿ. ಪಕ್ಷ ಗಳಿಗೆ ಕೈ ಕೊಟ್ಟು ಬೇರೆ ದಾರಿ ನೋಡಿಕೊಳ್ಳುವುದು ನಿಶ್ಚಿತ ಹಾಗಾಗಿ ಜೆ.ಡಿ.ಎಸ್. ನಿಂದ ವಿಧಾನಸಭಾ ಚುನಾವಣೆ ಎದುರಿಸಲು ಸಿದ್ಧರಿಲ್ಲದ ಶಶಿಭೂಷಣ ಹೆಗಡೆ ಭೀಮಣ್ಣ, ಕೆ.ಜಿ.ನಾಯ್ಕ ಅಥವಾ ಉಪೇಂದ್ರ ಪೈ ಸೇರಿದಂತೆ ಅನ್ಯರಿಗೆ ಅವಕಾಶ ಮಾಡಿಕೊಡುತ್ತಾರೆ ಎನ್ನುವ ಲೆಕ್ಕಾಚಾರಗಳಿವೆ.
ಈ ಸ್ಥಿತಿಯಲ್ಲಿ ಬಿ.ಜೆ.ಪಿ. ಯಿಂದ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಅಭ್ಯರ್ಥಿಯಾಗುವುದು ಪಕ್ಕಾ, ಕಾಂಗ್ರೆಸ್ ನಿಂದ ಭೀಮಣ್ಣ ಅಭ್ಯರ್ಥಿಯಾಗುವ ಸಾಧ್ಯತೆ ನಿಚ್ಚಳ ಜೆ.ಡಿ.ಎಸ್. ನಿಂದ ಉಪೇಂದ್ರ, ಪೈ,ಕೆ.ಜಿ.ನಾಯ್ಕ ಅಥವಾ ಬೇರೆ ಯಾರಾದರೂ ಅಭ್ಯರ್ಥಿಯಾಗಬಹುದು ಒಟ್ಟಾರೆ ಆರೇಳು ಜನ ಆಕಾಂಕ್ಷಿಗಳ ನಡುವೆ ಜನ ತೀರಾ ಹೊಸಮುಖಕ್ಕೆ ಅವಕಾಶ ನೀಡುವ ಸಾಧ್ಯತೆ ಕಡಿಮೆ. ಕಾಂಗ್ರೆಸ್ ವಲಸಿಗರಿಗೆ ಮಣೆ ಹಾಕಿದರೆ ಕಾಂಗ್ರೆಸ್ ಕನಸುತ್ತಿರುವ ಗೆಲುವು ಗಗನಕುಸಮವೆ.