ಶೀಘ್ರದಲ್ಲಿ ರಾಜ್ಯದ ಸರ್ಕಾರಿ ಆಸ್ಫತ್ರೆಗಳ ಡಯಾಲಿಸಿಸ್ ಸ್ಥಿತಿ ಸುಧಾರಣೆಯಾಗಲಿದೆ ಎಂದು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ತಿಳಿಸಿದ್ದಾರೆ.
ಕೋವಿಡ್ ಅವಧಿಯಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮುತುವರ್ಜಿ ವಹಿಸಿದ್ದರೂ ರಾಜ್ಯದ ಸರ್ಕಾರಿ ಆಸ್ಫತ್ರೆಗಳ ಸ್ಥಿತಿ ಸುಧಾರಿಸಿಲ್ಲ. ಜನಸಾಮಾನ್ಯರಿಗೆ ಅವಶ್ಯವಿರುವ ಡಯಾಲಿಸಿಸ್ ವ್ಯವಸ್ಥೆ ಈಗ ಸಮರ್ಪಕವಾಗಿ ನಡೆಯುತ್ತಿಲ್ಲ. ಕೆಲವು ತಾಲೂಕುಗಳಲ್ಲಿ ತಾಲೂಕಾ ಆರೋಗ್ಯ ಸಮೀತಿ ಡಯಾಲಿಸಿಸ್ ವ್ಯವಸ್ಥೆಯ ಜವಾಬ್ಧಾರಿ ನಿರ್ವಹಿಸುತ್ತಿದೆಯಾದರೂ ಡಯಾಲಿಸಿಸ್ ಅವಲಂಬಿಸಿರುವವರ ಅಗತ್ಯಕ್ಕೆ ತಕ್ಕಂತೆ ಅನುಕೂಲ ದೊರೆಯುತ್ತಿಲ್ಲ. ಡಯಾಲಿಸಿಸ್ ವ್ಯವಸ್ಥೆ ನಿರ್ವಹಿಸುತ್ತಿರುವ ಎರಡು ಸಂಸ್ಥೆಗಳಲ್ಲಿ ಒಂದು ಸಂಸ್ಥೆ ಹಾನಿಯಲ್ಲಿದ್ದು ಅದು ನಿರ್ವಹಿಸುತಿದ್ದ ರಾಜ್ಯದ ಬಹುತೇಕ ಆಸ್ಫತ್ರೆಗಳಲ್ಲಿ ಈಗ ಡಯಾಲಿಸಿಸ್ ಸಿಬ್ಬಂದಿಗಳಿಗೆ ವೇತನ ಕೂಡಾ ದೊರೆಯುತ್ತಿಲ್ಲ.
ಡಯಾಲಿಸಿಸ್ ನಿರ್ವಹಣೆಯ ಬಿ.ಆರ್.ಎಸ್. ಸಂಸ್ಥೆಯ ಸಿಬ್ಬಂದಿಗಳಿಗೆ ವೇತನ ದೊರೆಯದಿರುವುದರಿಂದ ಕೆಲವೆಡೆ ಡಯಾಲಿಸಿಸ್ ಗೂ ತೊಂದರೆಯಾಗಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದು ಶೀಘ್ರ ಈ ತೊಂದರೆ ಬಗೆಹರಿಸಲು ಸರ್ಕಾರ ಭರವಸೆ ನೀಡಿದೆ. ಈ ಬಗ್ಗೆ ಇಂದು ಸಿದ್ಧಾಪುರ ಆಸ್ಫತ್ರೆಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಡಯಾಲಿಸಿಸ್ ನಂಥ ಅನಿವಾರ್ಯ ವ್ಯವಸ್ಥೆಗೆ ತೊಂದರೆಯಾಗದಂತೆ ಸರ್ಕಾರಕ್ಕೆ ತಿಳಿಸಲಾಗಿದೆ. ಆರೋಗ್ಯ ಸಚಿವ ಡಾ. ಸುಧಾಕರ್ ಈ ತೊಂದರೆ ಬಗೆಹರಿಸುವ ಭರವಸೆ ನೀಡಿದ್ದಾರೆ ರಾಜ್ಯದಾದ್ಯಂತ ಈ ಸಮಸ್ಯೆ ಶೀಘ್ರದಲ್ಲಿ ಬಗೆಹರಿಯಲಿದೆ ಎಂದರು. ಇದರಿಂದಾಗಿ ರಾಜ್ಯಾದ್ಯಂತ ಬಿ.ಆರ್.ಎಸ್. ಸಂಸ್ಥೆ ನಿರ್ವಹಿಸುತ್ತಿರುವ ಆಸ್ಫತ್ರೆಗಳ ಡಯಾಲಿಸಿಸ್ ವ್ಯವಸ್ಥೆ ಸುಧಾರಿಸುವ ಭರವಸೆ ಮೂಡಿದೆ.