

ಕಾರವಾರ : ಕುಮಟಾ ತಾಲೂಕಿನ ನಾಗೂರು ಗ್ರಾಮದಲ್ಲಿ ಸುಮಾರು 20 ಎಕರೆ ಸರ್ಕಾರಿ ಪಡಾ ಜಮೀನು ಅತಿಕ್ರಮಣ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರವೇ ಸ್ವಾಭಿಮಾನಿ ಬಣದ ನೇತೃತ್ವದಲ್ಲಿ ಮಿರ್ಜಾನ್ ಗ್ರಾ.ಪಂ.ಜನಪ್ರತಿನಿಧಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಮಿರ್ಜಾನ ಹೋಬಳಿಯ ಖಂಡಗಾರ ಮಜರೆಯಲ್ಲಿ ಸುಮಾರು 20 ಎಕರೆ
ಸರ್ಕಾರಿ ಪಡಾ ಜಮೀನು ಅತಿಕ್ರಮಣವಾಗಿದ್ದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ.ಅತಿಕ್ರಮಣ ಜಾಗದಲ್ಲಿದ್ದ ಸಾಗವಾನಿ,ಬೀಟೆ,ಮತ್ತಿ ಇತರೆ ಬೆಲೆ ಬಾಳುವ ಸುಮಾರು ಸಾವಿರಕ್ಕೂ ಅಧಿಕ ಮರಗಳನ್ನು ಕಡಿದು ಸಾಗಿಸಲಾಗಿದೆ.ಇಂದಿಗೂ ಆ ಜಾಗದಲ್ಲಿ ಕಡಿದ ಮರಗಳ ಬುಡಗಳು ಹಾಗೆಯೇ ಇದೆ.ಜನ ಸಾಮಾನ್ಯರು ಉರುವಲು ಕಟ್ಟಿಗೆಗಾಗಿ ಒಣಗಿದ ಸಣ್ಣ ಮರವನ್ನು ಕಡಿದರೂ ಅವರ ಮೇಲೆ ದರ್ಪ
ತೋರಿ,ಪ್ರಕರಣ ದಾಖಲಿಸುವ ಅರಣ್ಯ ಇಲಾಖೆಯ ಅಧಿಕಾರಿಗಳು ಈ ವಿಷಯದಲ್ಲಿ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದನ್ನು ಗಮನಿಸಿದರೆ, ಇಲಾಖೆಯ ಅಧಿಕಾರಿಗಳ ಮೇಲೆ ಶಂಕೆ ಮೂಡುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಮಿರ್ಜಾನ್ ಕಂದಾಯ ಅಧಿಕಾರಿಯು ಸ್ಥಳ ಪರಿಶೀಲನೆ ಮಾಡಿ,
ಅತಿಕ್ರಮಣವನ್ನು ತೆರವು ಮಾಡಿ,ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.ಈ ಕಾರಣಕ್ಕೆ ಅವರನ್ನು ವರ್ಗಾವಣೆಗೊಳಿಸಲು ಕೆಲ ಕಾಣದ ಕೈಗಳು ಪ್ರಬಲ ಹುನ್ನಾರ ನಡೆಸಿರುವ ಮಾಹಿತಿ ಕೂಡ ಲಭಿಸಿದೆ.ಹೀಗಾಗಿ ದಕ್ಷ ಅಧಿಕಾರಿಯನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಮನವಿಯಲ್ಲಿ
ಒತ್ತಾಯಿಸಲಾಗಿದೆ.
ಮನವಿಯನ್ನು ಕುಮಟಾ ತಹಸೀಲ್ದಾರ್ ವಿವೇಕ ಶೇಣ್ವಿ ಅವರು ಸ್ವೀಕರಿಸಿ,ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಮನವಿ ಸಲ್ಲಿಕೆಯ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ, ತಾಲೂಕು ಅಧ್ಯಕ್ಷ ಮಂಜುನಾಥ ಮರಾಠಿ,ಮಿರ್ಜಾನ್ ಗ್ರಾಪಂ.ಅಧ್ಯಕ್ಷ ಪರಮೇಶ್ವರ ಪಟಗಾರ,ಗ್ರಾ.ಪಂ.ಸದಸ್ಯರಾದ ಮಂಜುನಾಥ ಹರಿಕಾಂತ,ಪರಶು ಸಾವೇರಾ ಫರ್ನಾಂಡೀಸ್,ವಕೀಲ ನಾಗರಾಜ ಹೆಗಡೆ,ಕರವೇ ಸ್ವಾಭಿಮಾನಿ ಬಣದ ಈಶ್ವರ
ಉಪ್ಪಾರ,ರಿತೇಶ ಉಪ್ಪಾರ,ಮಾರುತಿ ಆನೆಗುಂದಿ,ಕೆ.ಎನ್. ಮಂಜು,ಶಿವಶಂಕರ ಮುಕ್ರಿ,ರಾಜೀವ ಗೌಡ,ಮೋಹನ ಪಟಗಾರ ಇತರರು ಇದ್ದರು.

