
ಬೆಳಗಾವಿ ಮುಸ್ಲಿಂ -ಮೃತನ ತಾಯಿ ನಜೀಮ ಶೇಖ್ ಮೃತ ದೇಹವನ್ನು ಗುರುತಿಸಿದ ನಂತರ ಹುಡುಗಿಯ ತಂದೆ ಸೇರಿ ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆಯ ಯುವಕರ ಮೇಲೆ ಕೊಲೆ ದೂರು ದಾಖಲಿಸಿದ್ದಾರೆ. -By ನಾನು ಗೌರಿ

ಮುಸ್ಲಿಂ ಯುವಕನನ್ನು ಬರ್ಬರವಾಗಿ ಕೊಲೆಗೈದು, ತಲೆ ಮತ್ತು ಕಾಲುಗಳನ್ನು ಕತ್ತರಿಸಿ ಬೆಳಗಾವಿ ಜಿಲ್ಲೆಯ ಖಾನಪುರದ ರೈಲ್ವೆ ಹಳಿ ಮೇಲೆ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಪಂಥೀಯ ಹಿಂದುತ್ವ ಸಂಘಟನೆಗಳಿಗೆ ಸೇರಿದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಸೆಪ್ಟಂಬರ್ 29 ರಂದು ಮುಸ್ಲಿಂ ಯುವಕನ ಛಿದ್ರವಾದ ಶವ ಪತ್ತೆಯಾಗಿತ್ತು. ಸೆಪ್ಟಂಬರ್ 28 ರಂದು ಕೊಲೆ ನಡೆದಿರುವ ಸಂಭವವಿದ್ದು, ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಆತನ ಕೊಲೆಗೈಯಲಾಗಿದೆ ಎಂದು ಶಂಕಿಸಲಾಗಿತ್ತು.
ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ನಿವಾಸಿ ಅರ್ಬಾಜ್ ಅಫ್ತಾಬ್ ಮುಲ್ಲಾ (24) ಸೆಪ್ಟಂಬರ್ 28 ರಿಂದ ಕಾಣೆಯಾಗಿದ್ದನು ಎಂದು ಅವನ ಪೋಷಕರು ದೂರಿದ್ದರು. ಆತನ ತಾಯಿ ನಜೀಮ ಶೇಖ್ ‘ಶ್ರೀರಾಮಸೇನೆ ಹಿಂದೂಸ್ತಾನ್’ ಎನ್ನುವ ಸಂಘಟನೆಯ ಯುವಕರು ನನ್ನ ಮಗನಿಗೆ ಬೆದರಿಕೆ ಹಾಕಿದ್ದರು. ಹುಡುಗಿಯೊಂದಿಗೆ ಸೇರಿ ಹಣ ವಸೂಲಿ ಮಾಡಿದ್ದರು ಎಂದು ದೂರಿದ್ದರು.
ಅಲ್ಲದೇ ಪೊಲೀಸರು ಮೃತ ದೇಹ ವಶಪಡಿಸಿಕೊಂಡ ನಂತರ ಅಲ್ಲಿದ್ದ ಆಂಬುಲೆನ್ಸ್ ಮೇಲೆ ‘ಶ್ರೀರಾಮಸೇನೆ ಹಿಂದೂಸ್ತಾನ್’ ಎಂದು ಬರೆದಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ದಿ ಟೆಲಿಗ್ರಾಫ್ ವರದಿ ಮಾಡಿದೆ.
ಅರ್ಬಾಜ್ ಮುಲ್ಲಾ ಅನ್ಯ ಸಮುದಾಯದ ಯುವತಿಯನ್ನು ಪ್ರೀತಿಸುತ್ತಿದ್ದನು. ಇದಕ್ಕೆ ಹುಡುಗಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಕೆಲ ಬಲಪಂಥೀಯ ಸಂಘಟನೆಯ ಸದಸ್ಯರು ಲವ್ ಜಿಹಾದ್ ಎಂದು ಅರ್ಬಾಜ್‌ನೊಂದಿಗೆ ಜಗಳ ಮಾಡಿದ್ದರು. ಸೆಪ್ಟೆಂಬರ್ 28ರಂದು ಯುವತಿಯನ್ನು ಮದುವೆಯಾಗಲು ಮುಂದಾಗಿದ್ದ ಅರ್ಬಾಜ್ ನನ್ನು ಖಾನಾಪುರ ಹೊರವಲಯದ ರೈಲ್ವೆ ಹಳಿ ಮೇಲೆ ಬರ್ಬರವಾಗಿ ಕೊಲೆಗೈಯಲಾಗಿದೆ ಎಂದು ಆತನ ಕುಟುಂಬಸ್ಥರು ದೂರಿದ್ದಾರೆ.
ಆದರೆ ಪೊಲೀಸರು ಹುಡುಗಿಯ ತಂದೆ ಸೇರಿದಂತೆ ಇದುವರೆಗೂ 8 ಜನರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದರೆ ಆರೋಪಿಗಳು ಯಾವ ಸಂಘಟನೆಗೆ ಸೇರಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ ಮತ್ತು ಮೃತದೇಹದ ಮರಣೋತ್ತರ ವರದಿಯನ್ನು ಬಹಿರಂಗಗೊಳಿಸಿಲ್ಲ ಎನ್ನಲಾಗಿದೆ.
ಮೃತನ ತಾಯಿ ನಜೀಮ ಶೇಖ್ ಮೃತ ದೇಹವನ್ನು ಗುರುತಿಸಿದ ನಂತರ ಹುಡುಗಿಯ ತಂದೆ ಸೇರಿ ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆಯ ಯುವಕರ ಮೇಲೆ ಕೊಲೆ ದೂರು ದಾಖಲಿಸಿದ್ದಾರೆ.
ದಿ ಟೆಲಿಗ್ರಾಫ್‌ನೊಂದಿಗೆ ಮಾತನಾಡಿರುವ ಉರ್ದು ಶಾಲೆಯ ಶಿಕ್ಷಕಿಯಾಗಿರುವ ನಜೀಮ ಶೇಖ್ “ನನ್ನ ಮಗ ಅರ್ಬಾಜ್, ಕುಂಬಾರ್ ಎಂಬುವವರ ಮಗಳನ್ನು ಪ್ರೀತಿಸುತ್ತಿರುವುದು ತಿಳಿದುಬಂದಿತ್ತು. ಆಗ ನಾನು ಅದನ್ನು ತಪ್ಪಿಸಲು ನಮ್ಮ ಮನೆಯನ್ನು ಖಾನಪುರದಿಂದ ಬೆಳಗಾವಿಗೆ ಬದಲಿಸಿದ್ದೆ. ಇದೆಲ್ಲ ಸರಿ ಬರುವುದಿಲ್ಲವೆಂದು ಬುದ್ದಿವಾದ ಹೇಳಿದ್ದೆ. ಆದರೆ ಒಂದು ದಿನ ಕುಂಬಾರ್‌ನೊಂದಿಗೆ ಶ್ರೀರಾಮ ಸೇನೆಯ ಪುಂಡಲಿಕ್ ಮಹಾರಾಜ್, ಬಿರ್ಜೆ ಎಂಬುವವರ ಬಂದು ನಮಗೆ ಧಮಕಿ ಹಾಕಿದರು. ಕೊಲೆ ಬೆದರಿಕೆ ಹಾಕಿದರು. ನನ್ನ ಮಗನ ಫೋನ್ ಕಿತ್ತುಕೊಂಡು ಎಲ್ಲಾ ನಂಬರ್ ಗಳನ್ನು ಡಿಲೀಟ್ ಮಾಡಿದ್ದರು” ಎಂದಿದ್ದಾರೆ.
ಆಗ ನನ್ನ ಮಗ ಆ ಹುಡುಗಿಯನ್ನು ಮರೆತಿದ್ದ. ಆದರೆ ಸೆಪ್ಟಂಬರ್ 26 ರಂದು ಪುಂಡಲಿಕ್ ಮಹಾರಾಜ್ ಬಂದು ನಮ್ಮಲ್ಲಿ ಮತ್ತೆ ಜಗಳ ಮಾಡಿದೆ. ಈಗಾಗಲೇ ನನ್ನ ಮೇಲೆ 40 ಪ್ರಕರಣಗಳಿವೆ. ಇನ್ನೊಂದು ಆದರೆ ದೊಡ್ಡದೇನಲ್ಲ ಎಂದು ಬೆದರಿಸಿದ್ದ. ಅದೇ ಸಮಯಕ್ಕೆ ಆ ಹುಡುಗಿ ಫೋನ್ ಮಾಡಿ 7,000 ಹಣದ ಬೇಡಿಕೆ ಇಟ್ಟಿದ್ದಳು. ನಾವದನ್ನು ಪಾವತಿಸಿದೆವು. ನಂತರ ಮತ್ತೆ 90,000 ಬೇಡಿಕೆ ಇಟ್ಟಿದ್ದಳು. ಆಗ ನನ್ನ ಮಗ ತನ್ನ ಕಾರನ್ನು 70,000 ರೂಗೆ ಮಾರಿದ್ದ. ಆ ಹಣ ಎಲ್ಲಿಗೆ ಹೋಯಿತು ಎಂದು ತಿಳಿದಿಲ್ಲ, ನನ್ನ ಮಗನನ್ನೂ ಕಳೆದುಕೊಂಡೆ ಎಂದು ಅವರು ಕಣ್ಣೀರು ಹಾಕಿದ್ದಾರೆ.
ನಜೀಮ ಎರಡು ವರ್ಷದ ಹಿಂದೆ ತನ್ನ ಗಂಡನನ್ನು ಕಳೆದುಕೊಂಡಿದ್ದರು. ಈಗ ಮಗನನ್ನು ಕಳೆದುಕೊಂಡಿದ್ದಾರೆ. ಮಗಳು ಬ್ರಿಟನ್‌ನಲ್ಲಿರುವುದರಿಂದ ಸದ್ಯಕ್ಕೆ ಒಂಟಿಯಾಗಿದ್ದಾಳೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.
