

ಸ್ವಾತಂತ್ರ್ಯ ಹೋರಾಟದ ನೆಲ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಮನ್ಮನೆಯ ಸ್ವಾತಂತ್ರ್ಯ ಹೋರಾಟಗಾರ ಬಂಗಾರಪ್ಪ ನಾಯ್ಕ ಇಂದು ಮುಂಜಾನೆ ತಮ್ಮ 99 ನೇ ವಯಸ್ಸಿನಲ್ಲಿ ಕೊನೆ ಉಸಿರೆಳೆದರು.
ಉತ್ತರ ಕನ್ನಡ ಜಿಲ್ಲೆಯ ಬೆರಳೆಣಿಕೆಯ ಜೀವಂತ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದ ಬಂಗಾರಪ್ಪ ನಾಯ್ಕ ಸಿದ್ಧಾಪುರ ತಾಲೂಕಿನ ಕೊನೆಯಸ್ವಾತಂತ್ರ್ಯ ಯೋಧರಾಗಿದ್ದರು. ತಮ್ಮ ಹರೆಯದಲ್ಲಿ ಸ್ನೇಹಿತರೊಂದಿಗೆ ಬ್ರಟೀಷರ ವಿರುದ್ಧ ಹೋರಾಟದಲ್ಲಿ ಭಾಗವಹಿಸಿದ್ದ ಇವರು ಮಾವಿನಗುಂಡಿ, ಮನ್ಮನೆ ಪ್ರದೇಶಗಳಲ್ಲಿ ಸೇತುವೆ ಮುರಿಯುವುದು,ಪ್ರತಿರೋಧ,ಪ್ರತಿಭಟನಾ ಹೋರಾಟದ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದರು.
ಸ್ವಾತಂತ್ರ್ಯಾ ನಂತರ ಕಾಗೋಡು ಹೋರಾಟದಲ್ಲಿ ತೊಡಗಿಕೊಂಡಿದ್ದ ನಾಯ್ಕ ಸ್ವಾತಂತ್ರ್ಯ ಹೋರಾಟಗಾರ ಎಂದು ಹೆಸರಾಗುವುದಕ್ಕಿಂತ ಕಾಗೋಡು ಚಳವಳಿಕಾರ ಎಂದೇ ಗುರುತಿಸಿಕೊಂಡಿದ್ದರು. ತುಂಬು ಕುಟುಂಬದ ಮಕ್ಕಳು, ಮೊಮ್ಮಕ್ಕಳು ಬಂಧು ಮಿತ್ರರನ್ನು ಅಗಲಿರುವ ಬಂಗಾರಪ್ಪ ನಾಯ್ಕ ಕೆಲವು ವರ್ಷಗಳಿಂದ ವಯೋಸಹಜ ತೊಂದರೆಯಿಂದಾಗಿ ನೆನಪಿನ ಶಕ್ತಿ ಕಳೆದುಕೊಂಡಿದ್ದರು. ಮೂರ್ನಾಲ್ಕು ವರ್ಷದ ಕೆಳಗೆ ಸ್ವಾತಂತ್ರ್ಯ ಹೋರಾಟ ನಂತರದ ದಿನಗಳನ್ನು ನೆನಪಿಸಿಕೊಂಡು ಹೋರಾಟದ ಹಾಡು ಗುನುಗಿದ್ದ ನಾಯ್ಕ ಒಂದು ವರ್ಷದ ಈಚೆಗೆ ನೆನಪಿನ ಶಕ್ತಿ ಕಳೆದುಕೊಂಡಿದ್ದರೂ 99 ರ ತಮ್ಮ ತುಂಬು ಬದುಕಿನ ಜೀವಂತಿಕೆಗೆ ಸಾಕ್ಷಿ ಎಂಬಂತೆ ದೈಹಿಕವಾಗಿ ದೃಢವಾಗಿದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಕೋಲಾ ಮತ್ತು ಸಿದ್ಧಾಪುರ ತಾಲೂಕುಗಳು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ತಾಲೂಕುಗಳು. ಸಿದ್ಧಾಪುರದ ನೂರಾರು ಜನ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಕೊನೆಯವರಾಗಿ ಬದುಕಿ ಉಳಿದಿದ್ದ ಇವರನ್ನು ಅವರಿಗೆ ಬೇಡದ ವಯಸ್ಸಿನಲ್ಲಿ, ಜೀರ್ಣಿಸಿಕೊಳ್ಳದ ಸಮಯದಲ್ಲಿ ಸನ್ಮಾನಿಸಿ, ಗೌರವಿಸಿದ್ದೇ ಹೆಚ್ಚು. ಗೌರವಾದರಗಳು,ಅನುಕೂಲ,ಪ್ರಸಿದ್ಧಿಗಳಿಗೆ ನಿರ್ಲಿಪ್ತರಾಗಿ ಪ್ರತಿಕ್ರೀಯಿಸುತಿದ್ದ ಬಂಗಾರಪ್ಪ ನಾವೆಲ್ಲಾ ಸ್ವಾತಂತ್ರ್ಯ ಹೋರಾಟ ಮಾಡಿದ್ದು ಈ ಸೌಭಾಗ್ಯಕ್ಕಲ್ಲ ಎನ್ನುವ ನೋವು ಅವರಲ್ಲಡಗಿತ್ತು. ಸ್ವಾತಂತ್ರ್ಯ ಹೋರಾಟ, ಕಾಗೋಡು ಚಳವಳಿಗಳ ಕೇಂದ್ರ ಸ್ಥಳ ಸಿದ್ಧಾಪುರದ ಮನ್ಮನೆ ಇಂದು ತಮ್ಮೂರಿನ ಸ್ವಾತಂತ್ರ್ಯ ಹೋರಾಟಗಾರರ ಪರಂಪರೆ ಮತ್ತು ಕಾಗೋಡು ರೈತ ಚಳವಳಿಯ ಕೊನೆಯ ಕೊಂಡಿಯನ್ನು ಕಳಚಿಕೊಂಡಂತಾಗಿದೆ.

